
ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವು 75 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹೋರಾಟಕ್ಕೆ ಸರ್ಕಾರ ಸ್ಪಂದಿಸದೇ ಇರುವುದನ್ನು ಖಂಡಿಸಿ ಜಿಲ್ಲೆಯ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಡಿ. 1ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ಆಯೋಜಿಸಲಾಗಿದೆ ಎಂದು ಹೋರಾಟ ಸಮಿತಿ ಸದಸ್ಯ ಅನಿಲ ಹೊಸಮನಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11ಕ್ಕೆ ಶಿವಾಜಿ ವೃತ್ತದಿಂದ ಆರಂಭವಾಗುವ ಪ್ರತಿಭಟನಾ ಜಾಥಾ ಗಾಂಧಿ ಚೌಕಿ, ಸರಾಫ್ ಬಜಾರ್, ಅಮೀರ್ ಥೇಟರ್, ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕಿ, ಬಸವೇಶ್ವರ ಚೌಕಿ ಮೂಲಕ ಸಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ ಎಂದರು.
ಜಿಲ್ಲೆಯ ಎಲ್ಲ ವಿದ್ಯಾರ್ಥಿ, ಕಾರ್ಮಿಕ, ಮಹಿಳಾ, ದಲಿತ, ರೈತ, ವ್ಯಾಪರಸ್ಥರ ಸಂಘಟನೆಗಳು, ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದರು.
ರಾಹುಲ್ ಗಾಂಧಿ ಭೇಟಿ:
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗುವರೆಗೂ ಹೋರಾಟ ನಿಲ್ಲುವುದಿಲ್ಲ. ಶೀಘ್ರದಲ್ಲೇ ರಾಷ್ಟ್ರೀಯ ಜನ ಸ್ವಾಸ್ಥ್ಯ ಹೋರಾಟ ಸಂಘಟನೆ ಮುಖಂಡ ಅಮೂಲ್ಯ ನಿಧಿ ಅವರ ನೇತೃತ್ವದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ತಿಳಿಸುತ್ತೇವೆ ಎಂದರು.
ನಿಯೋಗಕ್ಕೆ ಸ್ಪಂದಿಸದ ಸಿಎಂ:
ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಬೆಂಗಳೂರಿಗೆ ಹೋದ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾಗಿ ಸ್ಪಂದಿಸಲಿಲ್ಲ, ಮುಖ್ಯಮಂತ್ರಿ ಎದುರು ಸಚಿವರು ವಿಷಯವನ್ನು ಪ್ರಸ್ತಾಪಿಸದೇ ಕಾಟಾಚಾರಕ್ಕೆ ಎಂಬಂತೆ ಭೇಟಿ ಮಾಡಿಸಿರುವುದು ಹೋರಾಟಗಾರರಿಗೆ ಬೇಸರಕ್ಕೆ ಕಾರಣವಾಗಿದೆ ಎಂದರು.
ಯಾರ ಹಿತಾಶಕ್ತಿ?:
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡದಂತೆ ಅಡ್ಡಗಾಲು ಹಾಕುತ್ತಿರುವವರು ಯಾರು? ಇದರ ಹಿಂದೆ ಯಾರ ಹಿತಾಶಕ್ತಿ ಅಡಗಿದೆ ಎಂಬುದು ತಿಳಿಯದಾಗಿದೆ ಎಂದು ಹೋರಾಟ ಸಮಿತಿ ಸದಸ್ಯ ಬಿ.ಭಗವಾನ್ ರೆಡ್ಡಿ ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಸರ್ಕಾರಿ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಇಲ್ಲ, ಪಾಲಿಟೆಕ್ನಿಕ್ ಕಾಲೇಜು ಮುಚ್ಚುವ ಹಂತ ತಲುಪಿದೆ. ಪದವಿ ಕಾಲೇಜು ಮೂಲ ಸೌಲಭ್ಯ ವಂಚಿತವಾಗಿವೆ. ಖಾಸಗಿ ಸಂಸ್ಥೆಗಳು ವಿಜ್ರಂಭಿಸುತ್ತಿವೆ ಎಂದು ಆರೋಪಿಸಿದರು.
ವಿಜಯಪುರ ಏಮ್ಸ್ ಆರಂಭಿಸಲು ಸೂಕ್ತವಾಗಿದೆ. ನಮ್ಮ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಜಿಲ್ಲೆ ವಂಚಿತವಾಗಿದೆ. ಜಿಲ್ಲೆಯ ಸಚಿವರು, ಶಾಸಕರು ತಮ್ಮ ಸ್ವಹಿತಾಸಕ್ತಿ ಬಿಟ್ಟು ಜನ ಹಿತಕ್ಕೆ ಆದ್ಯತೆ ನೀಡಬೇಕು, ಜಿಲ್ಲೆಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು, ಇಲ್ಲವಾದರೆ ಧರಣಿ, ಅಮರಣ ಉಪವಾಸ, ವಿಜಯಪುರ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿ ಪ್ರಮುಖರಾದ ಅಕ್ರಮ್ ಮಾಶ್ಯಾಳಕರ, ಭರತ್ ಕುಮಾರ್ ಎಚ್.ಟಿ., ಶ್ರೀನಾಥ ಪೂಜಾರಿ, ಲಲಿತಾ ಬಿಜ್ಜರಗಿ, ಸಿದ್ದಲಿಂಗ ಬಾಗೇವಾಡಿ, ಸುರೇಶ ಜೇಬಿ, ಜಗದೇವ ಸೂರ್ಯವಂಶಿ, ಸುರೇಶ ಬಿಜಾಪುರ ಜೆ.ಬಿ.ಪಾಟೀಲ, ಕಾವೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಚಳಿಗಾಲದ ಅಧಿವೇಶನದಲ್ಲಿ ಜಿಲ್ಲೆಯ ಶಾಸಕರು ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಧ್ವನಿ ಎತ್ತಬೇಕು ಇಲ್ಲವಾದರೆ ಅವರ ಮನೆ ಎದುರು ಧರಣಿ ನಡೆಸುತ್ತೇವೆ ತಕ್ಕ ಪಾಠ ಕಲಿಸುತ್ತೇವೆಅನಿಲ ಹೊಸಮನಿ ಸದಸ್ಯ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ವಿಜಯಪುರ
ಸಚಿವರಾದ ಎಂ.ಬಿ.ಪಾಟೀಲ ಶಿವಾನಂದ ಪಾಟೀಲ ಅವರು ಸರಿಯಾಗಿ ತಮ್ಮ ಪಾತ್ರ ನಿರ್ವಹಿಸುತ್ತಿಲ್ಲ ಸಚಿವರು ತಮ್ಮ ಮಾತು ಉಳಿಸಿಕೊಳ್ಳಬೇಕು ಸಚಿವ ಸಂಪುಟದಲ್ಲಿ ಗಮನ ಸೆಳೆಯಬೇಕುಬಿ.ಭಗವಾನ್ ರೆಡ್ಡಿ ಸದಸ್ಯ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.