
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಸುತ್ತಿರುವ 53ನೇ ದಿನದ ಹೋರಾಟದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡು, ಬೆಂಬಲ ಸೂಚಿಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಉದ್ದೇಶ ಒಳ್ಳೆದಿದೆ, ಜನರ ಹಿತವಿದೆ, ಅದಕ್ಕೆ ಜನ ಹೋರಾಟವನ್ನು ಪ್ರಾರಂಭ ಮಾಡಿದ್ದೀರಾ. ಶಿಕ್ಷಣ ಹಾಗೂ ಆರೋಗ್ಯ ಸರ್ಕಾರದ ಕೈಯಲ್ಲಿ ಇರಬೇಕು. ಖಾಸಗಿ ಅವರ ಕೈಯಲ್ಲಿ ಹೋಗಿ ಇವತ್ತಿನ ಶಿಕ್ಷಣ ಹದಗೆಟ್ಟಿದೆ, ಆರೋಗ್ಯ ಕ್ಷೇತ್ರ ಕೂಡ ಹದಗೆಟ್ಟಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಜಿಲ್ಲೆಯಲ್ಲಿ ಸಾಕಷ್ಟು ಮೂಲಸೌಲಭ್ಯಗಳಿವೆ. ಮಂಜೂರು ಆದ ಜಿಲ್ಲೆಗಳಲ್ಲಿ ಜಾಗ ಇಲ್ಲದೇ ನೆಲಗುದಿಗೆ ಬಿದ್ದಿದೆ. ಇಲ್ಲಿ 153 ಎಕರೆ ಜಾಗ ಇದೆ, ಆಸ್ಪತ್ರೆ ಇದೆ ಇನ್ನೂ ವಿಸ್ತರಣೆ ಮಾಡಿ ಸಂಪೂರ್ಣ ಸರ್ಕಾರಿ ಆಸ್ಪತ್ರೆ ಮಾಡಬೇಕು ಎಂದು ಒತ್ತಾಯಿಸಿದರು.
ವಿಜಯಪುರದಲ್ಲಿ ಪಿಪಿಪಿ ಮಾದರಿ ಮಾಡ್ತೀವಿ ಅಂದ್ರೆ ಇಲ್ಲಿಯ ರಾಜಕಾರಣಿಗಳ ಹಿತಾಸಕ್ತಿ ಇದ್ದೆ ಇರುತ್ತೆ. ಬಂಡವಾಳಶಾಹಿಗಳು ರಾಜಕಾರಣಿಗಳಲ್ಲಿ ಇರ್ತಾರೆ, ಅದಕ್ಕೆ ಅವರು ಖಾಸಗಿಗೆ ಪ್ರೋತ್ಸಾಹ ಕೊಡ್ತಾರೆ. ಆದರೆ, ದಿಟ್ಟತನದಿಂದ ನೀವು ಮಾಡ್ತಾ ಇರೋ ಹೋರಾಟ ಸರಿ ಇದೆ, ಯಾಕಂದ್ರೆ ಎಲ್ಲ ಕ್ಷೇತ್ರದಲ್ಲಿ ಖಾಸಗೀಕರಣ ಆಗ್ತಾ ಇದೆ. ಎಲ್ಲವೂ ಖಾಸಗೀಕರಣ ಆದರೆ ನಮಗೆ ಪ್ರಜಾಪ್ರಭುತ್ವ ಸರ್ಕಾರ ಯಾಕೆ ಬೇಕು. ವಿಧಾನಸೌಧವೂ ಕೂಡ ಖಾಸಗೀಕರಣ ಮಾಡಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿ, ವಿಜಯಪುರದಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ ಅಂದ್ರೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು ಏನು ಮಾಡ್ತಾ ಇದಾರೆ ಎಂದು ಪ್ರಶ್ನಿಸಿದರು.
ರೈತ ಮುಖಂಡರಾದ ಪಂಚಪ್ಪ ಕಲ್ಬುರ್ಗಿ, ಸದಸ್ಯರಾದ ಶಿವನಗೌಡ ಪಾಟೀಲ್, ಶಿವನಂದ ಕೊಂಡಗುಳಿ, ರಾಜೇಂದ್ರ, ಭೀಮರಾಯ ಪೂಜಾರಿ, ರವಿಕುಮಾರ, ಗಂಗಪ್ಪ ಮೈತ್ರಿ, ಬಸನಗೌಡ, ಶಬ್ಬೀರ್ ಪಟೇಲ್ ಬಿರಾದಾರ, ಮಹದೇವಪ್ಪ ತೇಲಿ, ಬಸವರಾಜ ರೆಡ್ಡಿ, ಜಯಸಿಂಗ್ ರಜಪೂತ, ರಾಜೇಸಾಬ್ ನದಾಫ್, ಅಮ್ಮೋಗಿ ಉಕ್ಕಲಿ, ಡಿ.ಎಂ.ನದಾಫ್, ಲಾಯಪ್ಪ ಇಂಗಳೇ, ಪ್ರಭುಲಿಂಗ ಕಾರಜೋಳ, ಸಂತೋಷ್ ಚವ್ಹಾಣ್, ಹನುಮಂತ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Quote - ಎರಡು ದಿನಗಳಲ್ಲಿ ರೈತ ಸಂಘದಿಂದ ಮುಖ್ಯಮಂತ್ರಿ ಅವರಿಗೆ ಭೇಟಿ ಮಾಡಿ ನಿಮ್ಮ ಹೋರಾಟದ ಉದ್ದೇಶ ಹಾಗೂ ಸರ್ಕಾರಿ ಕಾಲೇಜಿನ ಅವಶ್ಯಕತೆ ಹಾಗೂ ಇಲ್ಲಿರುವ ಅನುಕೂಲತೆ ಬಗ್ಗೆ ಪತ್ರವನ್ನು ಬರೆಯುತ್ತೇನೆ ಬಡಗಲಪುರ ನಾಗೇಂದ್ರ ಅಧ್ಯಕ್ಷರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.