ADVERTISEMENT

ವಿಜಯಪುರ| ಬದಲಾಗದ ‘ಬಯಲು ಬಹಿರ್ದೆಸೆ’ ಮನಸ್ಥಿತಿ

2018ರಲ್ಲೇ ಬಯಲು ಬರ್ಹಿದೆಸೆ ಮುಕ್ತ ವಿಜಯಪುರ ಜಿಲ್ಲೆ ಘೋಷಣೆ!

ಪ್ರಜಾವಾಣಿ ವಿಶೇಷ
Published 21 ಆಗಸ್ಟ್ 2022, 19:30 IST
Last Updated 21 ಆಗಸ್ಟ್ 2022, 19:30 IST
ಸಿಂದಗಿ ಪಟ್ಟಣದ ಬಂದಾಳ ರಸ್ತೆಯಲ್ಲಿ ಚಂಬು ಹಿಡಿದುಕೊಂಡು ಬಯಲು ಬಹಿರ್ದೆಸೆ ಗೆ ಹೋಗುವ ಪುರುಷರು 
ಸಿಂದಗಿ ಪಟ್ಟಣದ ಬಂದಾಳ ರಸ್ತೆಯಲ್ಲಿ ಚಂಬು ಹಿಡಿದುಕೊಂಡು ಬಯಲು ಬಹಿರ್ದೆಸೆ ಗೆ ಹೋಗುವ ಪುರುಷರು    

ವಿಜಯಪುರ: 2018 ನವೆಂಬರ್‌ 19ರಂದೇ ವಿಜಯಪುರವನ್ನು ‘ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ’ ಎಂದು ಸರ್ಕಾರ ಘೋಷಣೆ ಮಾಡಿದೆ. ಹಾಗಂತ ನಿಜವೆಂದು ತಿಳಿದು ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಒಮ್ಮೆ ಮುಂಜಾನೆ ಹಾದು ಬಂದರೆ ಕಾಣುವ ಚಿತ್ರಣವೇ ಬೇರೆ.

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂಬ ಘೋಷಣೆ ಎಷ್ಟೊಂದು ಕ್ಲೀಷೆ, ಎಷ್ಟೊಂದು ಅಪಹಾಸ್ಯ,ಎಂಷ್ಟೊಂದು ಸುಳ್ಳಿನ ಕಂತೆಯಿಂದ ಕೂಡಿದೆ ಎಂಬುದು ಬಯಲಾಗುತ್ತದೆ.

ಹಾಗಂತ, ಇದಕ್ಕೆ ಯಾರು ಕಾರಣ ಎಂದು ಹುಡುಕುತ್ತಾ ಹೋದರೆ ರಸ್ತೆ ಮೇಲೆ ಕೂರುವವರಿಂದ ಹಿಡಿದು, ಯೋಜನೆ ಜಾರಿ ಮಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಎಂಬುದು ಬಟಾಬಯಲಾಗುತ್ತದೆ.

ADVERTISEMENT

ವಿಜಯಪುರ ಮಹಾನಗರ ಸೇರಿದಂತೆ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಒಟ್ಟು 1,49,856 ಕುಟುಂಬಗಳಿದ್ದು, ಇವುಗಳ ಪೈಕಿ 1,16,256 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಇನ್ನೂ 33,600 ಕುಟುಂಬಗಳು ಶೌಚಾಲಯ ಹೊಂದಿಲ್ಲ ಎನ್ನುತ್ತಾರೆ ವಿಜಯಪುರ ಜಿಲ್ಲಾ ನಗರ ಯೋಜನಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ.

2012ರ ಬೇಸ್‌ ಲೈನ್ ಸಮೀಕ್ಷೆ ಅನ್ವಯ ಜಿಲ್ಲೆಯಲ್ಲಿ ಒಟ್ಟು 2,49,817 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ನಂತರದ ದಿನಗಳಲ್ಲಿ ಬೇಸ್ ಲೈನ್ ಸಮೀಕ್ಷೆಯಿಂದ ಹೊರಗುಳಿದ 32,063 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸ್ವಚ್ಛ ಭಾರತ ಮಿಷನ್ (ಗ್ರಾ) ಹಂತ-2ರಲ್ಲಿ 2,884 ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇದುವರೆಗೆ 2,84,764 ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ ಇನ್ನೂ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶೇ 60ರಷ್ಟು ಮಾತ್ರ ಮನೆಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಇನ್ನೂ ಶೇ 40ರಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿಲ್ಲ ಎಂಬುದು ಅಂಕಿ–ಅಂಶಗಳಿಂದ ತಿಳಿಯುತ್ತದೆ. ಹೀಗಿದ್ದೂ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿದ್ದು ಹೇಗೆ ಎಂಬ ಯಕ್ಷ ಪ್ರಶ್ನೆ ಕಾಡುತ್ತದೆ.

ಬಯಲು ಬಹಿರ್ದೆಸೆ ಎಂಬುದು ಜಿಲ್ಲೆಗೆ ಶಾಪವಾಗಿ ಕಾಡುತ್ತಿದೆ. ನಗರ, ಪಟ್ಟಣದಲ್ಲಿ ಬಯಲು ಬಹಿರ್ದೆಸೆ ಕಡಿಮೆಯಾಗಿದೆಯೇ ವಿನಃ ನಿಂತಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿದ್ದರೂ ಅರ್ಧದಷ್ಟು ಮಾತ್ರ ಬಳಕೆಯಾಗುತ್ತಿವೆ. ಇನ್ನುಳಿದ ಶೌಚಾಲಯಗಳ ಸ್ಥಳಗಳಲ್ಲಿ ಕುಳ್ಳು, ಕಟ್ಟಿಗೆ ಇಡುವುದಕ್ಕೆ ಬಳಸಲಾಗುತ್ತಿದೆ. ಕೆಲವಕ್ಕೆ ಬಾಗಿಲಿಗೆ ಕೀಲಿ ಹಾಕಿ ಇಡಲಾಗಿದೆ. ಇನ್ನು ನಾಲ್ಕೈದು ಜನ ಇದ್ದ ಮನೆಗಳಲ್ಲಿ ಇಬ್ಬರು ಶೌಚಾಲಯ ಬಳಸುತ್ತಿದ್ದರೆ, ಇನ್ನುಳಿದವರು ಬಯಲು ಶೌಚಾಲಕ್ಕೆ ಹೋಗುತ್ತಿದ್ದಾರೆ.ಸ್ಥಳ ಲಭ್ಯವಿಲ್ಲದ ಕುಟುಂಬಗಳಿಗೆ ಸಮುದಾಯ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದ್ದರೂ ನಿರ್ವಹಣೆ ಇಲ್ಲದೇ ಹಾಗೂ ಅವಕ್ಕೆ ಹಣ ಕೊಟ್ಟು ಹೋಗಬೇಕಾದ ಕಾರಣ ಬಳಕೆಯಾಗುತ್ತಿಲ್ಲ.

ಶೌಚಾಲಯಗಳಿದ್ದರೂ ಅದನ್ನು ಬಳಸದ ಮನೋಸ್ಥಿತಿಯವರು ಇನ್ನೂ ಇದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇದು ಇನ್ನೂ ಹೆಚ್ಚು. ಗ್ರಾಮೀಣ ಭಾಗದಲ್ಲಿ ಊರ ಮುಂದಿನ ರಸ್ತೆಗಳಲ್ಲಿ ನಸುಕಿನ ಜಾವ ಬಳಕೆ ಹೆಚ್ಚು.ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗುವುದು ಅತೀ ಕಷ್ಟವಾಗಿದೆ.

ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದ ಅನುಮತಿ ಇಲ್ಲವೆಂದು ಗ್ರಾಮ ಪಂಚಾಯಿತಿಗಳಲ್ಲಿ ಅವುಗಳ ನಿರ್ಮಾಣ ನಿಂತುಹೋಗಿದೆ. ಸ್ವಚ್ಚ ಭಾರತ ಯೋಜನೆಯ ಅಡಿಯಲ್ಲಿ ನಿರ್ಮಿಸಿದ ಶೌಚಾಲಯಗಳು ಸುಸ್ಥಿತಿಯಲ್ಲಿಲ್ಲ, ಜನಸಾಮಾನ್ಯರಿಗೆ ಉಪಯೋಗವಿಲ್ಲ. ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ.

ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವಾಗಬೇಕಾದರೆ ಕೇವಲ ಅಧಿಕಾರಿಗಳಿಂದ ಅಥವಾ ಜನರಿಂದ ಸಾಧ್ಯವಿಲ್ಲ.ಜನರ ಮನಸ್ಥಿತಿ ಬದಲಾಗದ ಹೊರತು ಹಾಗೂ ಎಲ್ಲರೂ ಕೈಜೋಡಿಸಿದರೆ ಹೊರತು ಸಾಧ್ಯವಿಲ್ಲ.

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಎ.ಸಿ.ಪಾಟೀಲ, ಶಾಂತೂ ಹಿರೇಮಠ, ಶರಣಬಸವಪ್ಪ ಗಡೇದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.