ADVERTISEMENT

ವಾಯುಯಾನ ಕನಸಿಗೆ ಟೇಕಾಫ್: ಗುಮ್ಮಟನಗರಿಯಲ್ಲಿ ವಿಮಾನ ನಿಲ್ದಾಣ

ಗುಮ್ಮಟನಗರಿಯಲ್ಲಿ ನಿರ್ಮಾಣವಾಗಲಿದೆ ವಿಮಾನ ನಿಲ್ದಾಣ

ಬಸವರಾಜ ಸಂಪಳ್ಳಿ
Published 14 ಫೆಬ್ರುವರಿ 2021, 12:11 IST
Last Updated 14 ಫೆಬ್ರುವರಿ 2021, 12:11 IST
ವಿಜಯಪುರ ನಗರ ಸಮೀಪದ ಭೂರಣಾಪುರ ಮತ್ತು ಮದಭಾವಿ ನಡುವೆ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿರುವ ಜಾಗ
ವಿಜಯಪುರ ನಗರ ಸಮೀಪದ ಭೂರಣಾಪುರ ಮತ್ತು ಮದಭಾವಿ ನಡುವೆ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿರುವ ಜಾಗ   

ವಿಜಯಪುರ: ಐತಿಹಾಸಿಕ ಗುಮ್ಮಟನಗರಿಯನ್ನು ದೇಶದ ಪ್ರಮುಖ ನಗರಗಳೊಂದಿಗೆ ವಾಯುಯಾನದ ಮೂಲಕ ಬೆಸೆಯಬೇಕೆಂಬ ದಶಕಗಳಕನಸು ಕೊನೆಗೂ ನನಸಾಗುವ ಸಮಯ ಕೂಡಿ ಬಂದಿದೆ.

ಉದ್ದೇಶಿತ ವಿಮಾನ ನಿಲ್ದಾಣ ಕಾಮಗಾರಿಗೆ ಫೆ.15 ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗದಿಂದ ವರ್ಚುವಲ್‌ ಮೂಲಕ ಚಾಲನೆ ನೀಡಲಿದ್ದಾರೆ.

ಯೋಜನೆಯ ರೂವಾರಿ, ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಲೋಕೋಪಯೋಗಿ ಇಲಾಖೆ ಮೂಲಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಿದ್ದಾರೆ.

ADVERTISEMENT

ನಿರೀಕ್ಷೆಯಂತೆ ಎಲ್ಲವೂ ನಡೆದರೆ ಇನ್ನೊಂದು ವರ್ಷದಲ್ಲಿ ಬಸವ ನಾಡಿನಿಂದ ಲೋಹದ ಹಕ್ಕಿಗಳ ಹಾರಾಟ ಆರಂಭವಾಗಲಿದೆ. ಈ ಮೂಲಕ ಜಿಲ್ಲೆಯು ಪ್ರವಾಸೋದ್ಯಮ, ತೋಟಗಾರಿಕೆ, ಕೈಗಾರಿಕಾ ಕ್ಷೇತ್ರದಲ್ಲಿ ಮತ್ತಷ್ಟು ವೇಗವಾಗಿ ಬೆಳೆಯಲು ನೆರವಾಗಲಿದ್ದು, ಉದ್ಯೋಗ ಸೃಷ್ಟಿಯಾಗಲಿದೆ.

ವಿಜಯಪುರ ನಗರದಿಂದ ಕೇವಲ 10 ಕಿ.ಮೀ.ದೂರದಲ್ಲಿರುವ ಮದಭಾವಿ ಮತ್ತು ಬುರಣಾಪುರ ಗ್ರಾಮಗಳ ಮಧ್ಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಈಗಾಗಲೇ 727 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

₹ 220 ಕೋಟಿ ವೆಚ್ಚದಲ್ಲಿ ಗ್ರೀನ್‌ ಫೀಲ್ಡ್‌ ದೇಶಿಯ ಪ್ರಯಾಣದ ವಿಮಾನ ನಿಲ್ದಾಣವನ್ನು ಎರಡು ಹಂತದಲ್ಲಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮೊದಲ ಹಂತದಲ್ಲಿ ರನ್‌ ವೇ, ಟ್ಯಾಕ್ಸಿ ವೇ, ಪಾರ್ಕಿಂಗ್‌, ಟರ್ಮಿನಲ್‌ ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ₹95 ಕೋಟಿ ಮೊತ್ತದಲ್ಲಿ ನಿರ್ಮಿಸಲು ಚಾಲನೆ ನೀಡಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲು 11 ತಿಂಗಳ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ. ಬಳಿಕ ಎರಡನೇ ಹಂತದಲ್ಲಿ ಸಿಟಿಸೈಡ್‌ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

‘ಈ ವಿಮಾನ ನಿಲ್ದಾಣವನ್ನು ಉಡಾನ್‌ ಯೋಜನೆ ವ್ಯಾಪ್ತಿಗೊಳಪಡಿಸಿ 72 ಆಸನಗಳುಳ್ಳ ಎ.ಟಿ.ಆರ್‌. ವಿಮಾನಗಳ ಕಾರ್ಯಾಚರಣೆಗಾಗಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಿಮಾನ ನಿಲ್ದಾಣವನ್ನು ಭವಿಷ್ಯದಲ್ಲಿ ಹಂತಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು. ಎರಡನೇ ಹಂತದ ಬಾಕಿ ಉಳಿದ ಕಾಮಗಾರಿಗಳಾದ ಎ.ಟಿ.ಸಿ. ಮತ್ತು ಪೂರಕ ಕಟ್ಟಡಗಳು, ಇತರ ಏರ್‌ಸೈಡ್‌ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಐಡೆಕ್‌ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರನನ್ನಾಗಿ ನೇಮಿಸಲಾಗಿದೆ.ಕಾಮಗಾರಿಯ ಮೇಲ್ವಿಚಾರಣೆಗಾಗಿ ಕೆ.ಎಸ್‌.ಐ.ಐ.ಡಿ.ಸಿ. ಸಂಸ್ಥೆಯನ್ನು ನೋಡಲ್‌ ಸಂಸ್ಥೆಯಾಗಿ ನೇಮಕ ಮಾಡಲಾಗಿದೆ. ವಿಮಾನ ನಿಲ್ದಾಣದ ಕಾಮಗಾರಿಯ ವಿನ್ಯಾಸವನ್ನು ಗುರುಗಾವ್‌ನ ಎಂ/ಎಸ್‌.ರಿಟೈಸ್‌ಗೆ ವಹಿಸಲಾಗಿದೆ.

ದಶಕದ ಹಿಂದಿನ ಕನಸು:

2010 ರಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲೇ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿ ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಅಲ್ಲದೇ, ನಿಲ್ದಾಣದ ಅಭಿವೃದ್ಧಿಗಾಗಿ ಮಾರ್ಗ್‌ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಕಾರಣಾಂತರದಿಂದ ಮಾರ್ಗ್‌ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು 2014 ಅಕ್ಟೋಬರ್‌ನಲ್ಲಿ ರದ್ದುಪಡಿಸಿತ್ತು. ಪರಿಣಾಮ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯು ನನೆಗುದಿಗೆ ಬಿದ್ದಿತ್ತು. ಇದೀಗ ಲೋಹದ ಹಕ್ಕಿಗಳ ಹಾರಾಟಕ್ಕೆ ನಿಲ್ದಾಣ ಸಿದ್ಧಗೊಳ್ಳತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.