ಬಸವನಬಾಗೇವಾಡಿ: ಯಾವುದೇ ದೇಶ, ನಾಗರಿಕರು ಯುದ್ಧ ಬಯಸುವುದಿಲ್ಲ. ಯಾವುದೇ ದೇಶಕ್ಕೆ ಯುದ್ಧ ಅನಿವಾರ್ಯ ಎಂದಾಗಬಾರದು, ಆಕಸ್ಮಿಕವಾಗಿ ಯುದ್ಧ ನಡೆಯುತ್ತವೆ. ಯುದ್ಧಗಳು ದೇಶಗಳ ಪ್ರಗತಿಗೆ ಮಾರಕ ಎಂದು ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.
ಉಕ್ಕಲಿ ಗ್ರಾಮದಲ್ಲಿ ಶನಿವಾರ ಹುತಾತ್ಮ ವೀರಯೋಧ ಸಿ.ಆರ್.ಪಿ.ಎಫ್ ಎಸ್ಐ ಶ್ರೀಶೈಲ ಯಮನಪ್ಪ ಹಿರೋಡಗಿ ಅವರ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತಿದೆ. ಎಂಥ ಭಯಾನಕ ಪರಿಸ್ಥಿತಿ ಎದುರಾದರೂ ಭಾರತೀಯ ಯೋಧರು ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ಹೋರಾಡಿ ದೇಶದ ನಾಗರಿಕರು ನೆಮ್ಮದಿಯ ಜೀವಿಸುವಂತೆ ಮಾಡುತ್ತಿದ್ದಾರೆ ಎಂದರು.
ವೀರಯೋಧರ ದೇಶಭಕ್ತಿಯ ಬದ್ದತೆ ಸದಾ ಸ್ಮರಣೀಯ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯರನ್ನು ಎರಡು ಜಾಗತಿಕ ಯುದ್ಧದಲ್ಲಿ ತೊಡಗಿಸಿತ್ತು. ಆಗಲೇ ಭಾರತೀಯ ಯೋಧರ ಪರಾಕ್ರಮ ವಿಶ್ವಕ್ಕೆ ಮನವರಿಕೆ ಆಗಿದೆ ಎಂದರು.
ಸ್ವಾತಂತ್ರ್ಯ ನಂತರವೂ ಭಾರತವು ಯೋಧರು ಚೀನಾ, ಪಾಕಿಸ್ತಾನ ವಿರುದ್ಧ ನಡೆದ ಯುದ್ಧಗಳಲ್ಲಿ ಪರಾಕ್ರಮ ಮೆರೆದಿದ್ದಾರೆ. ನೆರೆಯ ದೇಶ ಅನಗತ್ಯವಾಗಿ ಯುದ್ಧದ ಪರಿಸ್ಥಿತಿ ನಿರ್ಮಿಸುತ್ತಿದೆ. ಇದಕ್ಕೆ ನಮ್ಮ ವೀರ ಯೋಧರೂ ತಕ್ಕ ಉತ್ತರ ನೀಡುತ್ತಲೇ ಬಂದಿದ್ದಾರೆ ಎಂದರು.
ದೇಶದ 140 ಕೋಟಿ ನಾಗರಿಕರ ರಕ್ಷಣೆಗಾಗಿ ಭಾರತೀಯ ಸುಮಾರು 15-20 ಲಕ್ಷ ಸೇನಾ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 14 ಲಕ್ಷ ಸೈನಿಕರು ಭೂದಳದಲ್ಲೂ, 1.5 ಲಕ್ಷದಷ್ಟು ಯೋಧರು ವಾಯುದಳದಲ್ಲೂ ಹಾಗೂ 1.5 ಲಕ್ಷ ಸೈನಿಕರು ನೌಕಾದಳದಲ್ಲೂ ಕರ್ತವ್ಯದ ನಿರ್ವಹಿಸುತ್ತಿದ್ದಾರೆ ಎಂದರು.
ಭಾರತಾಂಬೆಯ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ವೀರಯೋಧರನ್ನು ಪಡೆದಿರುವ ಉಕ್ಕಲಿ ಗ್ರಾಮಸ್ಥರೆ ಧನ್ಯರು, ಪುಣ್ಯವಂತರು. ದೇಶದ ಸೈನಿಕರೆಂದರೆ ದೇವರ ಸಮಾನರು. ಶ್ರೀಶೈಲ ಹಿರೋಡಗಿ ಅವರಂಥ ಅಮರವೀರ ಯೋಧರನ್ನು ಪಡೆದಿರುವ ನಿವೇ ಧನ್ಯರು ಎಂದರು.
ಗ್ರಾಮದ ಹಿರಿಯರಾದ ಅಣ್ಣಾಸಾಹೇಬ ಎಂ.ಪಾಟೀಲ, ಪಂಡಿತ ಓಜಿ, ತಾ.ಪಂ.ಮಾಜಿ ಸದಸ್ಯ ಸುಭಾಶ ಕಲ್ಯಾಣಿ, ಉಕ್ಕಲಿ ಗ್ರಾ.ಪಂ. ಅಧ್ಯಕ್ಷ ಮುದಕಪ್ಪ ಸಿಂದಗಿ, ಗ್ರಾಮ ಪಂಚಾಯಿತಿ ಸದಸ್ಯರು, ಯೋಧನ ಕುಟುಂಬ ಸದಸ್ಯರ ರಾವುತ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಮುತ್ತಪ್ಪ ನಂದಿ, ಯಲ್ಲಪ್ಪ ಈಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.