ADVERTISEMENT

ವಿಶ್ವ ಡೌನ್ ಸಿಂಡ್ರೋಮ್‌ ದಿನ | ಡೌನ್ ಸಿಂಡ್ರೋಮ್‌ಗೆ ಚಿಕಿತ್ಸೆ ಇಲ್ಲ: ಡಾ.ಜ್ಯೋತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 0:45 IST
Last Updated 21 ಮಾರ್ಚ್ 2022, 0:45 IST
ವಿಜಯಪುರ ನಗರದ ಡಾ.ಕೋರಬು ವುಮೆನ್ಸ್‌ ಕೇರ್‌ ಹಾಸ್ಪಟಲ್‌ ನ ಸ್ತ್ರೀ ರೋಗ ತಜ್ಞೆ ಡಾ.ಜ್ಯೋತಿ ಕೋರಬು ಮಾತನಾಡಿದರು.ಮನಶಾಸ್ತ್ರಜ್ಞೆ ಪಲ್ಲವಿ ಅಡಿಗ ಇದ್ದಾರೆ
ವಿಜಯಪುರ ನಗರದ ಡಾ.ಕೋರಬು ವುಮೆನ್ಸ್‌ ಕೇರ್‌ ಹಾಸ್ಪಟಲ್‌ ನ ಸ್ತ್ರೀ ರೋಗ ತಜ್ಞೆ ಡಾ.ಜ್ಯೋತಿ ಕೋರಬು ಮಾತನಾಡಿದರು.ಮನಶಾಸ್ತ್ರಜ್ಞೆ ಪಲ್ಲವಿ ಅಡಿಗ ಇದ್ದಾರೆ   

ವಿಜಯಪುರ: ಡೌನ್ ಸಿಂಡ್ರೋಮ್ (ಟ್ರೈಸೊಮಿ21) ಆನುವಂಶಿಕ ಕಾಯಿಲೆಯಾಗಿದ್ದು, ವರ್ಣತಂತು 21ರ ಅಸಹಜತೆಯಿಂದ ಉಂಟಾಗುತ್ತದೆ.ಡೌನ್ ಸಿಂಡ್ರೋಮ್‌ಗೆ ಯಾವುದೇ ಚಿಕಿತ್ಸೆ ಇಲ್ಲ ಎಂದು ಡಾ.ಕೋರಬು ವುಮೆನ್ಸ್‌ ಕೇರ್‌ ಹಾಸ್ಪಟಲ್‌ನ ಸ್ತ್ರೀ ರೋಗ ತಜ್ಞೆ ಡಾ.ಜ್ಯೋತಿ ಕೋರಬು ತಿಳಿಸಿದರು.

ಇದು ಸಾಮಾನ್ಯವಾಗಿ ದೈಹಿಕ ಬೆಳವಣಿಗೆಯ ವಿಳಂಬ, ಬೌದ್ಧಿಕ ಅಂಗವೈಕಲ್ಯ ಮತ್ತು ಮುಖದ ವಿಶಿಷ್ಟ ಲಕ್ಷಣಗಳೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡೌನ್ ಸಿಂಡ್ರೋಮ್ ಹೊಂದಿರುವ ಯುವ ವಯಸ್ಕರ ಸರಾಸರಿ ಬುದ್ಧಿಮತ್ತೆಯ ಪ್ರಮಾಣ ಶೇ 50 ಆಗಿದೆ. ಇದು 8 ಅಥವಾ 9 ವರ್ಷದ ಮಗುವಿನ ಮಾನಸಿಕ ಸಾಮರ್ಥ್ಯಕ್ಕೆ ಸಮನಾಗಿರುತ್ತದೆ ಎಂದರು.

ADVERTISEMENT

ಗರ್ಭಾವಸ್ಥೆಯಲ್ಲಿ ಸ್ಕ್ಯಾನಿಂಗ್‌ ಮಾಡುವ ಮೂಲಕ ಡೌನ್‌ ಸಿಂಡ್ರೋಮ್‌ ಪತ್ತೆ ಹಚ್ಚಬಹುದಾಗಿದೆ ಮತ್ತು ಆನುವಂಶಿಕ ಪರೀಕ್ಷೆಯ ಮೂಲಕ ಗುರುತಿಸಬಹುದು ಎಂದು ಹೇಳಿದರು.

ಡೌನ್ ಸಿಂಡ್ರೋಮ್ ಇರುವ ಜನರು ಸಣ್ಣ ಗಲ್ಲ, ಓರೆಯಾದ ಕಣ್ಣುಗಳು, ಚಪ್ಪಟೆ ಮೂಗು, ಸಣ್ಣ ಬಾಯಿ, ಚಾಚಿಕೊಂಡಿರುವ ನಾಲಿಗೆ ಕಂಡುಬರುತ್ತದೆ, ಇವರಲ್ಲಿ ಭಾಷೆಯ ಸಮಸ್ಯೆಯೂ ಇರುತ್ತದೆ ಎಂದು ತಿಳಿಸಿದರು.

ಹೃದ್ರೋಗ, ಮೂರ್ಚೆ, ಕ್ಯಾನ್ಸರ್, ಥೈರಾಯ್ಡ್ ಕಾಯಿಲೆಗಳು ಮತ್ತು ಮಾನಸಿಕ ಅಸ್ವಸ್ಥತೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಇವರನ್ನು ಬಾಧಿಸುತ್ತದೆ ಎಂದು ತಿಳಿಸಿದರು.

ಹತ್ತಿರದ ಸಂಬಂಧಿಗಳ ನಡುವೆ ವಿವಾಹವಾಗುವುದರಿಂದಲೂ ಡೌನ್‌ ಸಿಂಡ್ರೋಮ್‌ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದರು.

ಆರೈಕೆ, ಪುನರ್ವಸತಿ:

ಮನಶಾಸ್ತ್ರಜ್ಞೆ ಪಲ್ಲವಿ ಅಡಿಗ ಮಾತನಾಡಿ, ವಿಜಯಪುರ ನಗರದಲ್ಲಿರುವ ರಾಜ್‌ಪಾಲ್‌ ಹೆಲ್ತ್‌ಕೇರ್‌ ಸೆಂಟರ್‌ನಲ್ಲಿ ಡೌನ್‌ ಸಿಂಡ್ರೋಮ್‌ ಮಕ್ಕಳ ಆರೈಕೆ, ಪುನರ್ವಸತಿ, ತರಬೇತಿ ಸೌಲಭ್ಯವಿದೆ ಎಂದು ಹೇಳಿದರು.

ಮಾರ್ಚ್‌ 21ರಿಂದ 10 ದಿನಗಳ ಕಾಲ ಡೌನ್‌ ಸಿಂಡ್ರೋಮ್‌ ಮಕ್ಕಳಿಗೆ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಗತ್ಯ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ಪ್ರತಿ ವರ್ಷ ಮಾರ್ಚ್‌ 21ರಂದು ಡೌನ್‌ ಸಿಂಡ್ರೋಮ್‌ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.