ADVERTISEMENT

‘ಬೇಡವೇ ಬೇಡ ಆರ್‌ಸಿಇಪಿ, ಅದು ಬಂದ್ರೆ ಕಾಫಿ ಬೆಳೆಗಾರರ ಗಾಯಕ್ಕೆ ಬರೆ’

ಯು.ಎಂ.ತೀರ್ಥಮಲ್ಲೇಶ್
Published 29 ಅಕ್ಟೋಬರ್ 2019, 5:14 IST
Last Updated 29 ಅಕ್ಟೋಬರ್ 2019, 5:14 IST
   

ಭಾರತ ಸರ್ಕಾರವು ಯಾವುದೇ ಕಾರಣಕ್ಕೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿಹಾಕಬಾರದು ಎನ್ನುವುದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್ ಅವರ ನಿಲುವು.ತಮ್ಮ ವಿಚಾರವನ್ನು ಅವರು ಪ್ರಸ್ತುತಪಡಿಸುವುದು ಹೀಗೆ...

---

ಭಾರತ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಆರ್‌ಸಿಇಪಿ) ಸಹಿ ಹಾಕಬಾರದು. ಅದರಿಂದಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಾರರಿಗೆ ಕಂಟಕವಾಗಲಿದೆ. ವಿದೇಶಗಳೊಂದಿಗೆ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಬೆಳೆಗಾರರ ಹಿತ ಬಲಿಕೊಡಲು ಮುಂದಾಗಿದೆ.

ADVERTISEMENT

ಈ ಒಪ್ಪಂದಕ್ಕೆ ಸಹಿ ಹಾಕಿದರೆ ವಿದೇಶಿ ಸರಕುಗಳು ಮುಕ್ತವಾಗಿ ನಮ್ಮ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಕಡಿಮೆ ಬೆಲೆಗೆ ಸಿಗುತ್ತವೆ. ಇದರಿಂದ ದೇಶಿ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಈಗ ವಿದೇಶಿ ಕಾಳುಮೆಣಸನ್ನು ಕೆ.ಜಿ.ಗೆ ₹ 500ಕ್ಕಿಂತ ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುವಂತಿಲ್ಲ ಎಂಬ ನಿರ್ಬಂಧ ಇದೆ. ಆರ್‌ಸಿಇಪಿ ಜಾರಿಯಾದರೆ ವಿಯೆಟ್ನಾಂ ಕಾಳುಮೆಣಸು ₹ 250ಕ್ಕೆ ನಮ್ಮ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಈಗಾಗಲೇ ಕಾಳು ಮೆಣಸು ಬೆಲೆ (ಕೆ.ಜಿ.ಗೆ 300) ಪಾತಾಳಕ್ಕಿಳಿದು ಬೆಳೆಗಾರರು ನಲುಗಿದ್ದಾರೆ. ಆರ್‌ಸಿಇಪಿ ತಂದರೆಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ಬ್ರೆಜಿಲ್‌ನಲ್ಲಿ ಎರಡು ವರ್ಷಗಳ ಕಾಫಿ ಮಿಗತೆ (ಉಳಿಕೆ) ಇದೆ. ಮುಕ್ತ ಮಾರುಕಟ್ಟೆ ಕಲ್ಪಿಸಿದರೆ ಅದನ್ನೆಲ್ಲ ಇಲ್ಲಿಗೆ ತಂದು ಮಾರಲು ದಾರಿ ಮಾಡಿಕೊಟ್ಟಂತಾಗುತ್ತದೆ. ವಿದೇಶಿ ಕಾಫಿ ನಮ್ಮ ಮಾರುಕಟ್ಟೆ ಪ್ರವೇಶಿಸಿದರೆ ಇಲ್ಲಿ ಕಾಫಿ ದರ ಇನ್ನೂ ಕುಸಿಯುತ್ತದೆ. ಅತಿವೃಷ್ಟಿಯಿಂದ ಕಾಫಿ ಬೆಳೆ, ತೋಟ ನಾಶವಾಗಿ ಬೆಳೆಗಾರರು ಕಣ್ಣೀರಿಟ್ಟಿದ್ದಾರೆ. ಕಾಫಿ ಬೆಲೆ ತೀವ್ರ ಕುಸಿದು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದಾರೆ. ಬ್ರಿಜಿಲ್ ಕಾಫಿಯನ್ನು ಇಲ್ಲಿ ಕಡಿಮೆ ದರಕ್ಕೆ ಮಾರಲು ಅವಕಾಶ ಕಲ್ಪಿಸಿಕೊಟ್ಟರೆ ಅವರ ಕಷ್ಟಗಳು ಇನ್ನಷ್ಟು ಹೆಚ್ಚುತ್ತವೆ.

ಅಡಿಕೆ ಬೆಳೆ (ರೋಗಬಾಧೆ, ಆರೋಗ್ಯಕ್ಕೆ ಹಾನಿಕರ ಉತ್ಪನ್ನ, ದರ ಸಮಸ್ಯೆ) ಕ್ಷೇತ್ರವು ಆತಂಕದಲ್ಲಿದೆ. ಮುಕ್ತ ಮಾರುಕಟ್ಟೆ ಜಾರಿಯಾದರೆ ಈ ಕ್ಷೇತ್ರವನ್ನು ಇನ್ನಷ್ಟು ಸಂಕಷ್ಟದ ದವಡೆಗೆ ದೂಡಲಿದೆ.

ಆರ್‌ಸಿಇಪಿ ಒಪ್ಪಂದ ಜಾರಿಗೆ ಮೊದಲು ಕೇಂದ್ರ ಸರ್ಕಾರವು ಎಂ.ಎಸ್‌.ಸ್ವಾಮಿನಾಥನ್‌ ವರದಿಯನ್ನು ಅನುಷ್ಠಾನಗೊಳಿಸಲಿ.ಅದರಂತೆ ಬೆಳೆಗಳ ಬೆಲೆ ನಿಗದಿಪಡಿಸಲಿ. ಇದು ಸಾಧ್ಯವಾದರೆಆರ್‌ಸಿಇಪಿ ಒಪ್ಪಂದಕ್ಕೆ ನಮ್ಮ ತಕರಾರು ಇಲ್ಲ. ಇಲ್ಲದಿದ್ದರೆ ಆರ್‌ಸಿಇಪಿ ವಿರುದ್ಧ ಉಗ್ರ ಹೋರಾಟ ಅನಿವಾರ್ಯವಾಗಲಿದೆ.

(ನಿರೂಪಣೆ: ಬಿ.ಜೆ.ಧನ್ಯಪ್ರಸಾದ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.