ಸಾಂದರ್ಭಿಕ ಚಿತ್ರ
–ಗೆಟ್ಟಿ ಚಿತ್ರ
ಕೋಲಾರ: ಗಡಿ ಜಿಲ್ಲೆ ಕೋಲಾರದಲ್ಲಿ ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕ ತಂದೊಡ್ಡಿದೆ. ನಿಯಂತ್ರಣಕ್ಕೆ ಇಡೀ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಲವಾರು ಪ್ರಯತ್ನ ನಡೆಸಿ ಹಣ ಖರ್ಚು ಮಾಡುತ್ತಿದ್ದರೂ ನಿಯಂತ್ರಣಕ್ಕೆ ಬಾರದಿರುವುದು ಕಳವಳಕಾರಿ ಸಂಗತಿಯಾಗಿದೆ.
ಈ ಕ್ಯಾಲೆಂಡರ್ ವರ್ಷದಲ್ಲಿ ಅಕ್ಟೋಬರ್ ಅಂತ್ಯಕ್ಕೆ 122 ಬಾಲ್ಯವಿವಾಹ ದೂರುಗಳು ಬಂದಿವೆ. ಇದು ಕಳೆದ ಎರಡು ಮೂರು ವರ್ಷಗಳಲ್ಲಿಯೇ ಗರಿಷ್ಠ ಎನ್ನಬಹುದು. ಸಮಾಜದಲ್ಲಿ ಜ್ಞಾನ, ಅಕ್ಷರತೆ, ಆಧುನಿಕತೆ, ತಂತ್ರಜ್ಞಾನ ಹೆಚ್ಚುತ್ತಿದ್ದರೂ ಬಾಲ್ಯವಿವಾಹದಂಥ ಬೇತಾಳ ಮಾತ್ರ ಬೆನ್ನುಬಿಡುತ್ತಿಲ್ಲ. ಅರಳುವ ಹೂವುಗಳನ್ನು ಚಿವುಟಿ ಹಾಕುವ ಪ್ರಯತ್ನಗಳು ನಡೆಯುತ್ತಲೇ ಇವೆ. ಬಾಲ್ಯದಲ್ಲೇ ಕೈಗೆ ಮಗು ಕೊಟ್ಟು ಕನಸುಗಳನ್ನು ನಾಶ ಮಾಡಲಾಗುತ್ತಿದೆ. ಬಾಲಕಿಗೆ ಎಳೆ ವಯಸ್ಸಿನಲ್ಲೇ ಜನಿಸುವ ಮಕ್ಕಳಿಗೆ ಆಗುವ ಸಮಸ್ಯೆಗಳ ಜೊತೆಗೆ ಮುಂದಿನ ಬದುಕನ್ನು ನರಕವಾಗಿಸುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಸುಮಾರು 244 ಬಾಲ್ಯವಿವಾಹ ದೂರುಗಳು ಬಂದಿವೆ. ಅದರಲ್ಲಿ 104 ಬಾಲಕಿಯರನ್ನು ಪಾರು ಮಾಡಲಾಗಿದೆ. ಆದರೆ, 140 ಪ್ರಕರಣಗಳಲ್ಲಿ ಬಾಲ್ಯವಿವಾಹ ನಡೆದುಹೋಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಇದೇ ಅವಧಿಯಲ್ಲಿ ಇಡೀ ರಾಜ್ಯದ ಲೆಕ್ಕಾಚಾರ ತೆಗೆದುಕೊಂಡರೆ 2,198 ಬಾಲ್ಯವಿವಾಹಗಳು ನಡೆದಿವೆ.
ಕೋಲಾರ ಹಾಗೂ ಮಾಲೂರು ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಪೋಷಕರು, ಪತಿ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.
ಪತ್ತೆಯಾಗಿರುವ ಬಹುತೇಕ ಪ್ರಕರಣಗಳು ಸಾರ್ವಜನಿಕರಿಂದ ಮಕ್ಕಳ (1098) ಸಹಾಯವಾಣಿಗೆ ಮಾಹಿತಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸರಿಗೆ ಗೊತ್ತಾಗಿರುವವು. ಕೆಲವೆಡೆ ರಾಜಿ ಮಾಡಿಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ಆರೋಪಗಳು ಕೇಳಿಬಂದಿವೆ.
ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2023ರಲ್ಲಿಯೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಜಿಲ್ಲೆಗೆ ಭೇಟಿ ನೀಡಿ ಕೆಡಿಪಿ ಸಭೆ ನಡೆದಿದ್ದ ಅವರು ಬಾಲ್ಯವಿವಾಹ, ಬಾಲಗರ್ಭಿಣಿಯರನ್ನು ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರು ಹೆಚ್ಚಿನ ನಿಗಾ ಇಡಬೇಕೆಂದು ನಿರ್ದೇಶಿಸಿದ್ದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾ ಮಕ್ಕಳ ಸಹಾಯವಾಣಿ ಸಿಬ್ಬಂದಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ.
‘ದೂರು ಬಂದಾಗ ಅಥವಾ ಬೇರೆ ಮೂಲಗಳಿಂದ ತಮ್ಮ ಗಮನಕ್ಕೆ ಬಂದಾಗ ಬಾಲ್ಯವಿವಾಹ ನಿಷೇಧಾಧಿಕಾರಿಗಳು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಬಾಲ್ಯವಿವಾಹ ನಿಲ್ಲಿಸಲು ಪ್ರಯತ್ನ ನಡೆಸಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಶಾಲೆಗಳ ಮುಖ್ಯಶಿಕ್ಷಕರು, ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು, ವೈದ್ಯಾಧಿಕಾರಿಗಳು, ಪೊಲೀಸರು ಮೊದಲಾದವರು ಬಾಲ್ಯವಿವಾಹ ನಿಷೇಧಾಧಿಕಾರಿಗಳ ಪಟ್ಟಿಯಲ್ಲಿದ್ದಾರೆ.
‘ಬಾಲ್ಯವಿವಾಹ ಮಾಡಿದರೆ ಅವರಿಗೆ ಹುಟ್ಟುವಂತಹ ಮಕ್ಕಳು ಸರಿಯಾಗಿ ಬೆಳವಣಿಗೆ ಆಗಿರುವುದಿಲ್ಲ. ಅಪೌಷ್ಠಿಕತೆ ಹೊಂದಿರುತ್ತಾರೆ. ಜೊತೆಗೆ ಸಮಾಜಕ್ಕೂ ಹೊರೆಯಾಗುತ್ತಾರೆ. ಅದರಿಂದ ಇವುಗಳನ್ನು ತಡೆಯಬೇಕು’ ಎಂದು ಅರಿವು ಉಂಟು ಮಾಡಲಾಗುತ್ತಿದೆ.
ಒಂದು ವೇಳೆ ಸಾರ್ವಜನಿಕರು ಕಣ್ಣುತಪ್ಪಿಸಿ ಬಾಲ್ಯವಿವಾಹ ಮಾಡಿದಲ್ಲಿ ಬಾಲಕಿಯ ಪತಿ, ಬಾಲಕಿ ಹಾಗೂ ಬಾಲಕನ ಪೋಷಕರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸುತ್ತಿದ್ದಾರೆ.
ಈಗಾಗಲೇ ಬಾಲ್ಯವಿವಾಹದಿಂದ ರಕ್ಷಣೆ ಮಾಡಲಾಗಿರುವ ಹಲವು ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಶಾಲೆಗೆ ಹೋಗದೆ ಹೊರಗುಳಿದಿದ್ದಾರೆ. ಇನ್ನು ಕೆಲವರು ಬಾಲಮಂದಿರದಲ್ಲಿರುವುದು ಗೊತ್ತಾಗಿದೆ. ಮತ್ತೆ ಬಾಲ್ಯವಿವಾಹ ಮಾಡುವುದಿಲ್ಲವೆಂದು ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ.
‘ಕೆಲವರು ಶಾಲೆ, ಮನೆ ಬಿಟ್ಟು ಜೋಡಿಯಾಗಿ ಬಂದಿರುತ್ತಾರೆ. ಕಟ್ಟಡ, ಇತರ ಕೂಲಿ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ವಯಸ್ಸಿನ ಪುರಾವೆ ಇರಲ್ಲ. ಪುರಾವೆ ಕೊರತೆಯಿಂದಾಗಿ ಕೆಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬಾಲ್ಯವಿವಾಹ ತಡೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ನೇತೃತ್ವದಲ್ಲಿ ತಾಲ್ಲೂಕುಮಟ್ಟದಲ್ಲಿ ಕನಿಷ್ಠ 2 ತಿಂಗಳಿಗೊಮ್ಮೆ ಸಮನ್ವಯ ಸಭೆ ನಡೆಸಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ ಮಕ್ಕಳ ದೌರ್ಜನ್ಯ ನಿಯಂತ್ರಣ ಸಂಬಂಧ ಜಾಗೃತಿ ಮೂಡಿಸಬೇಕು. ಆದರೆ, ಎಲ್ಲಾ ಕಡೆ ಇಂಥ ಕೆಲಸ ನಡೆಯುತ್ತಿಲ್ಲ.
| ವರ್ಷ | ಪ್ರಕರಣಗಳು | ಎಫ್‌ಐಆರ್ | ತಡೆಗಟ್ಟಿದವು |
|---|---|---|---|
| 2023 | 66 | 61 | 5 |
| 2024 | 56 | 17 | 39 |
| 2025 | 122 | 60 | 62 |
| ಒಟ್ಟು | 244 | 140 | 104 |
ಈಚೆಗೆ ಬಾಲ್ಯವಿವಾಹಗಳು ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ ಮಾಡಲು ಪ್ರಯತ್ನಿಸಿದರೆ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ. ಬಾಲ್ಯವಿವಾಹ ಮುಕ್ತ ಕೋಲಾರ ಜಿಲ್ಲೆ ಆಗಬೇಕು. ಬಾಲ್ಯವಿವಾಹವು ಮಕ್ಕಳ ಶಿಕ್ಷಣ ಹಕ್ಕಿನ ಉಲ್ಲಂಘನೆ ಆಗುತ್ತದೆ. 18 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡುವವರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆಯ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.ಆರ್.ನಟೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಬಾಲ್ಯವಿವಾಹ ಮತ್ತು ಬಾಲಗರ್ಭಿಣಿಯರ ಪ್ರಮಾಣವನ್ನು ಕಡಿಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಒತ್ತು ನೀಡಬೇಕು. ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು. ಕೋಲಾರವನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಭಿಯಾನ, ಚಳವಳಿ ರೀತಿ ಕೆಲಸ ನಡೆಯಬೇಕು. ತಮ್ಮ ವ್ಯಾಪ್ತಿಯಲ್ಲಿ ಪ್ರಕರಣ ನಡೆದರೆ ಬಾಲ್ಯವಿವಾಹ ನಿಷೇಧಾಧಿಕಾರಿಗಳೇ ಜವಾಬ್ದಾರರುಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ
ಬಾಲ್ಯವಿವಾಹ ತಡೆಯಲು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಕಾರ್ಯಾಗಾರ ನಡೆಸಿ ಇಲಾಖೆ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆನಾರಾಯಣಸ್ವಾಮಿ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಬಾಲ್ಯವಿವಾಹ ಮಾಡುವ ಉದ್ದೇಶದಿಂದ ನಿಶ್ಚಿತಾರ್ಥ ಮಾಡುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ‘ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ–2025’ ತಂದಿದೆ. ಅಧಿವೇಶನದಲ್ಲಿ ಇದಕ್ಕೆ ಅಂಗೀಕಾರ ಪಡೆಯಲಾಗಿದೆ. ಇದರಡಿ ಚಿಕ್ಕ ವಯಸ್ಸಿನವರಿಗೆ ನಿಶ್ಚಿತಾರ್ಥ ಮಾಡಿದ್ದು ಸಾಬೀತಾದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಅಪರಾಧ ಸಾಬೀತಾದರೆ ಗರಿಷ್ಠ 2 ವರ್ಷದವರೆಗೆ ಕಠಿಣ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲು ಅವಕಾಶ ಇದೆ.
ಬಾಲ್ಯ ವಿವಾಹಕ್ಕೆ ಸಹಕರಿಸಿದ ಆರೋಪದ ಮೇಲೆ ಆ ಮದುವೆಯಲ್ಲಿ ಊಟ ಮಾಡಿದವರ ಮೇಲೂ ಪ್ರಕರಣ ದಾಖಲಾದ ಘಟನೆಗಳಿವೆ. ಏಕೆಂದರೆ ಪರೋಕ್ಷವಾಗಿ ಅವರು ಇಂಥ ಮದುವೆ ಬೆಂಬಲಿಸಿದ್ದಾರೆ ಎಂಬ ಅರ್ಥ ಬರುತ್ತದೆ. ಗೊತ್ತಿದ್ದೂ ಏಕೆ ಮಾಹಿತಿ ನೀಡಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಕಲ್ಯಾಣ ಮಂಟಪದವರ ಮೇಲೂ ಪ್ರಕರಣ ದಾಖಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.