
ಚಿಕ್ಕಮಗಳೂರು: ನೆತ್ತಿಯ ಮೇಲೆ ಸುಡು ಬಿಸಿಲು, ಇದರ ಝಳಕ್ಕೆ ಕಾದಿರುವ ಡಾಂಬರ್ ರಸ್ತೆ, ಉತ್ಸಾಹ ಕುಗ್ಗದೆ ಸಾಗುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳು ಅಪಘಾತದ ಭಯದಲ್ಲೇ ಹೆಚ್ಚೆ ಹಾಕುತ್ತಿದ್ದಾರೆ.
ಶಿವರಾತ್ರಿ ವೇಳೆಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುವುದು ಪ್ರತಿವರ್ಷ ಸಾಮಾನ್ಯವಾಗಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರ್ಷ ಫೆ. 15ರಂದು(ಭಾನುವಾರ) ಶಿವರಾತ್ರಿ ಇರುವುದರಿಂದ ಒಂದೆರಡು ದಿನ ಮೊದಲೇ ಅಲ್ಲಿಗೆ ಸೇರಬೇಕು ಎಂಬ ಆಸೆಯಿಂದ ಭಕ್ತರು ಕಾಲ್ನಡಿಗೆಯಲ್ಲಿ ಸಾಗಲು ಆರಂಭಿಸಿದ್ದಾರೆ. ಹಾಸನ, ಮಂಡ್ಯ, ಮೈಸೂರು, ಬಳ್ಳಾರಿ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಹೊಸಕೋಟೆ, ಗಂಗಾವತಿ, ಶಿವಮೊಗ್ಗ, ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆಯಿಂದ ಭಕ್ತರ ದಂಡು ಧರ್ಮಸ್ಥಳದತ್ತ ಸಾಗುತ್ತಿದೆ. ಯುವಕರು, ವೃದ್ಧರು, ಅಂಗವಿಕಲರೂ ಉತ್ಸಾಹದಿಂದ ಹೊರಟಿದ್ದಾರೆ. ಕೆಲವರು ಮಕ್ಕಳನ್ನು ಹೊತ್ತು ಸಾಗುತ್ತಿದ್ದರೆ, ಬಹುತೇಕರು ತಮ್ಮ ಬಟ್ಟೆಯ ಬ್ಯಾಗ್‌ಗಳನ್ನು ತಲೆಯ ಮೇಲೆ ಹೊತ್ತು ತೆರಳುವುದು ಸಾಮಾನ್ಯ ದೃಶ್ಯ.
ಯಾವುದೇ ರಸ್ತೆಯಲ್ಲಿ ಬಂದರೂ ಅಂತಿಮವಾಗಿ ಮೂಡಿಗೆರೆ ಬಳಿ ಎಲ್ಲಾ ರಸ್ತೆಗಳು ಕೂಡುತ್ತವೆ. ಅಲ್ಲಿಂದ ಚಾರ್ಮಾಡಿ ಘಾಟಿಯಲ್ಲಿ ಎಲ್ಲರೂ ಒಟ್ಟಾಗಿ ಸಾಗುತ್ತಾರೆ. ಭಕ್ತರು ತಂಡೋಪ ತಂಡವಾಗಿ ಬರುತ್ತಿದ್ದು, ಒಂದು ವಾರಗಳ ಕಾಲ ಚಾರ್ಮಾಡಿ ರಸ್ತೆಯಲ್ಲಿ ಈಗ ಎತ್ತ ನೋಡಿದರೂ ಕೇಸರಿ ಶಾಲು ಹೊದ್ದಿರುವ ಭಕ್ತರ ದಂಡೇ ಕಾಣಿಸುತ್ತದೆ. ಕೊನೆಯ ಮೂರು ದಿನಗಳಲ್ಲಿ ದಿನಕ್ಕೆ ಕನಿಷ್ಠ 50 ಸಾವಿರ ಜನ ಕೊಟ್ಟಿಗೆಹಾರ ದಾಟಲಿದ್ದಾರೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
ಹೀಗೆ ಭಕ್ತರಿಯಲ್ಲಿ ಮಿಂದು ಸಾಗುವ ಭಕ್ತರು ರಸ್ತೆಯ ಎಡ ಬದಿಯಲ್ಲಿ ಸಾಗುತ್ತಿದ್ದರೂ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ವಾಹನಗಳು ವೇಗವಾಗಿ ಬರುವುದು ಸಾಮಾನ್ಯ. ಪ್ರತಿವರ್ಷ ಅಪಘಾತಗಳು ಸಂಭವಿಸುತ್ತಿದ್ದು, ಹಿಂದಿನ ವರ್ಷಗಳಲ್ಲಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಹಾಸನ ಮತ್ತು ಚಿಕ್ಕಮಗಳೂರು ಕಡೆಯಿಂದ ಬರುವ ಪಾದಯಾತ್ರಿಗಳು ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಕೂಡಿಕೊಳ್ಳುತ್ತಾರೆ. ಅಲ್ಲಿಂದ ಮುಂದಕ್ಕೆ ಧರ್ಮಸ್ಥಳ ತನಕ ಭಕ್ತರು ದಂಡು ಒಟ್ಟಾಗಿ ಸಾಗುತ್ತದೆ. ಇಡೀ ರಸ್ತೆಯಲ್ಲಿ ಎಲ್ಲರಿಯೂ ಭಕ್ತರಿಗೆ ಸುರಕ್ಷಿತ ನಡಿಗೆ ಬಗ್ಗೆ ಎಚ್ಚರ ಮೂಡಿಸುವ ಕೆಲಸವನ್ನು ಸರ್ಕಾರ ಈ ಹಿಂದಿನ ವರ್ಷಗಳಲ್ಲಿ ಮಾಡಿಲ್ಲ. ಈ ವರ್ಷವೂ ಯಾವುದೇ ಸುರಕ್ಷತೆ ಕಾಣಿಸುತ್ತಿಲ್ಲ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿಯಿಂದ ಚಾರ್ಮಾಡಿ ಘಾಟಿ ಇಳಿಯುವ ತನಕ ರಸ್ತೆ ಬದಿಯಲ್ಲಿ ಪಾದಯಾತ್ರಿಗಳಿಗೆ ಒಂದು ಕಡೆ ಅವಕಾಶ ಮಾಡಿಕೊಡುವ ಅಗತ್ಯವಿದೆ. ಇಲ್ಲದಿದ್ದರೆ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ.
ಪ್ರತಿವರ್ಷ ಶಿವರಾತ್ರಿಗೆ ಮುನ್ನ ಒಂದು ವಾರ ಲಕ್ಷಾಂತರ ಭಕ್ತರು ಸಾಗುತ್ತಾರೆ. ಅವರಿಗೆ ದಾನಿಗಳು ಊಟ, ಉಪಚಾರ ಮಾಡುವುದನ್ನು ಬಿಟ್ಟರೆ ಸರ್ಕಾರದಿಂದ ಕನಿಷ್ಠ ಮೂಲಸೌಕರ್ಯ ಅಥವಾ ಸುರಕ್ಷತಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾದಯಾತ್ರಿಗಳೂ ಬೇಸರ ವ್ಯಕ್ತಪಡಿಸುತ್ತಾರೆ.
ಡಾಂಬರ್ ರಸ್ತೆಯಲ್ಲೇ ನಡೆದು ಸಾಗಬೇಕಿದ್ದು, ರಸ್ತೆಯ ಬದಿಯ ಹುಲ್ಲಿನ ಮೇಲೆ ನಡೆಯುವ ಅವಕಾಶವೂ ಇಲ್ಲ. ಬೆಳೆದಿರುವ ಕುರುಚಲು ಗಿಡಗಳನ್ನು ಸ್ವಚ್ಛ ಮಾಡಿ ಆಗಾಗ ನೀರು ಸಿಂಪರಣೆ ಮಾಡಿಸಿದ್ದರೆ ಭಕ್ತರು ಡಾಂಬರ್ ರಸ್ತೆಯಿಂದ ಕೆಳಗಿಳಿದು ಎಷ್ಟೋ ಸುರಕ್ಷಿತವಾಗಿ ಸಾಗಬಹುದಿತ್ತು. ಅದನ್ನೂ ಮಾಡುವುದಿಲ್ಲ ಎಂಬುದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಚಾರ್ಮಾಡಿ ಘಾಟಿಯಲ್ಲಿ ಕಿರಿದಾದ ರಸ್ತೆಯಲ್ಲಿ ಲಾರಿ, ಬಸ್‌ಗಳು ಎಂದಿನ ವೇಗದಲ್ಲೇ ಚಲಿಸುತ್ತಿವೆ. ಅಲ್ಲಲ್ಲಿ ಫಲಕ ಅಳವಡಿಸಿ, ಪೊಲೀಸರನ್ನು ನಿಯೋಜಿಸಿ ಎಚ್ಚರಿಕೆ ನೀಡುವ ಕೆಲಸವನ್ನದರೂ ಮಾಡಬೇಕು ಎಂಬುದು ಅವರ ಅಭಿಪ್ರಾಯ.
‘ಈ ರಸ್ತೆಯಲ್ಲಿ 46 ವರ್ಷಗಳಿಂದ ಭಕ್ತರು ಪಾದಯಾತ್ರೆ ನಡೆಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ, ಜಿಲ್ಲಾಡಳಿತವಾಗಲಿ, ಸರ್ಕಾರವಾಗಲೀ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪಾದಯಾತ್ರಿಗಳ ನಡಿಗೆಗಾಗಿ ಒಂದು ಭಾಗದಲ್ಲಿ ಅವಕಾಶ ಮಾಡಿಕೊಡುವ ಕೆಲಸ ಆಗಬೇಕು. ಆಗ ಅಪಘಾತ ತಪ್ಪಿಸಬಹುದು. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೊಟ್ಟಿಗೆಹಾರದ ಸಾಮಾಜಿಕ ಕಾರ್ಯಕರ್ತ ಸಂಜಯ್‌ಗೌಡ ಆಗ್ರಹಿಸುತ್ತಾರೆ.
ಪಾದಯಾತ್ರಿಗಳ ಕಾಲಿಗೆ ಮಸಾಜ್‌ನಿಂದ ಆದಿಯಾಗಿ ಊಟ, ಉಪಾಹಾರ, ಹಣ್ಣು, ಎಳನೀರು, ಕುಡಿಯುವ ನೀರು ಎಲ್ಲವನ್ನೂ ದಾನಿಗಳು ಹೆಜ್ಜೆ ಹೆಜ್ಜೆಗೂ ಒದಗಿಸುತ್ತಾರೆ. ದಾನಿಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ, ಅವರಿಗೆ ಸುರಕ್ಷಿತ ನಡಿಗೆ ಮತ್ತು ರಕ್ಷಣೆಯನ್ನು ನೀಡುವ ಕೆಲಸವನ್ನಾದರೂ ಸರ್ಕಾರ ಮಾಡಬೇಕು. ಸ್ವಚ್ಛತೆ ಕಾಪಾಡುವ ಕೆಲಸವನ್ನು ಜಿಲ್ಲಾಡಳಿತದ ಅಧಿಕಾರಿಗಳು ಮಾಡಿಸಬೇಕು. ಒಂದು ವಾರದ ಮಟ್ಟಿಗೆ ಪೊಲೀಸರನ್ನು ನಿಯೋಜಿಸಿ ಸುರಕ್ಷತೆ ಒದಗಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ಅವರು ಹೇಳಿದರು.
ದಾನಿಗಳು ನೀಡಿದ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಹಿಡಿದು ಸಾಗುವ ಭಕ್ತರು ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಬಿಸಾಡಿ ಹೋಗುವುದು ಪ್ರತಿವರ್ಷ ಸಾಮಾನ್ಯವಾಗಿದೆ. ಅಲ್ಲಲ್ಲಿ ಕಸದ ಬುಟ್ಟಗಳನ್ನು ಇರಿಸಿ ಪರಿಸರ ಕಾಪಾಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು. ಇನ್ನು ಘಾಟಿಯಲ್ಲಿ ರಸ್ತೆ ಬಿಟ್ಟು ಅರಣ್ಯದಲ್ಲಿ ನುಗ್ಗುವುದು ಕೂಡ ಕಳೆದ ವರ್ಷ ಹೆಚ್ಚಾಗಿತ್ತು. ರಸ್ತೆ ಬದಿಯಲ್ಲಿ ಒಂದೆಡೆ ಪ್ರಪಾತವಿದ್ದು, ಝರಿಗಳು ಹರಿಯುತ್ತಿವೆ. ಕಾಡು ದಾರಿಯಲ್ಲಿ ಸಾಗುವವರು ಅವಘಡ ಮೈಮೇಲೆ ಎಳೆದುಕೊಳ್ಳುವ ಅಪಾಯವೂ ಇದೆ. ಈ ಬಗ್ಗೆಯೂ ಅರಣ್ಯ ಇಲಾಖೆ ಎಚ್ಚರ ವಹಿಸಬೇಕು ಎಂಬುದು ಸ್ಥಳೀಯರ ಮನವಿ.
ಕೊಟ್ಟಿಗೆಹಾರ ದಾಟಿದ ನಂತರ ಚಾರ್ಮಾಡಿ ಘಾಟಿ ಇಳಿದು ಸಾಗಬೇಕು. ಬಿಸಿಲಿಗಿಂತ ತಂಪು ವಾತಾವರಣದಲ್ಲಿ ಸಾಗಿದರೆ ಹೆಚ್ಚು ದೂರ ಕ್ರಮಿಸಬಹುದು ಎಂಬ ಕಾರಣಕ್ಕೆ ನಸುಕಿನಲ್ಲೇ ಪಾದಯಾತ್ರೆಯನ್ನು ಜನ ಆರಂಭಿಸುತ್ತಾರೆ.
ಕಳೆದ ವಾರ ಚಾರ್ಮಾಡಿ ಘಾಟಿಯಲ್ಲಿ ಆನೆಯೊಂದು ಕಾಣಿಸಿಕೊಂಡಿದ್ದು, ರಸ್ತೆಯಲ್ಲೇ ಗಂಟೆಗಟ್ಟಲೆ ನಿಂತು ವಾಹನ ಸಂಚಾರಕ್ಕೆ ಅಡಚಣೆ ಮಾಡಿತ್ತು. ಆಗಾಗ ಇಲ್ಲಿ ಆನೆ ಕಾಣಿಸಿಕೊಳ್ಳುತ್ತಿದೆ. ಆನೆ ಎದುರಾದರೆ ಭಕ್ತರು ಗಲಿಬಿಲಿಯಾಗಿ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆ ಕೂಡ ಪಾದಯಾತ್ರೆ ಮುಗಿಯುವ ತನಕ ಹೆಚ್ಚು ನಿಗಾ ವಹಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹ.
ಇಡೀ ಪಾದಯಾತ್ರೆ ಸಾಗುವ ರಸ್ತೆಯಲ್ಲಿ ಭಕ್ತರಿಗೆ ಶೌಚಾಲಯದ್ದೆ ದೊಡ್ಡ ಸಮಸ್ಯೆ. ಮೂಡಿಗೆರೆ ಬಳಿ ಸ್ಥಳೀಯರು ಸೇರಿ ಭಕ್ತರ ಕಾಲಿಗೆ ಮಸಾಜ್, ಊಟ, ಔಷಧಿ, ಶೌಚಾಲಯ ವ್ಯವಸ್ಥೆಯನ್ನು ಮಾಡುತ್ತಾರೆ. ಮುಂದೆ ಸಾಗಿದರೆ ಧರ್ಮಸ್ಥಳ ಸೇರುವ ತನಕ ಎಲ್ಲಿಯೂ ಭಕ್ತರಿಗಾಗಿ ಶೌಚಾಲಯಗಳನ್ನು ನಿರ್ಮಿಸಿದ ಉದಾಹರಣೆಗಳಿಲ್ಲ.
ಮಹಿಳೆಯುರು, ಯುವತಿಯರು ಪಾದಯಾತ್ರೆಯಲ್ಲಿ ತೆರಳುವಾಗ ಶೌಚಾಲಯ ಇಲ್ಲದೆ ಪರದಾಡುತ್ತಾರೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿಯಲ್ಲಿ ಪ್ರಪಾತಗಳಿವೆ. ಅಪಾಯದ ನಡುವೆ ರಸ್ತೆ ಬದಿಯ ತೆರೆಮರೆಗಳನ್ನು ಹುಡುಕಿ ತೆರಳುವುದು ಸಾಮಾನ್ಯವಾಗಿದೆ. ಅಲ್ಲಲ್ಲಿ ಮಹಿಳೆಯರಿಗಾದರೂ ತಾತ್ಕಾಲಿಕ ಶೌಚಾಲಯಗಳನ್ನು ಇರಿಸುವ ಕೆಲಸವನ್ನು ಜಿಲ್ಲಾಡಳಿತ ಅಥವಾ ಧರ್ಮಸ್ಥಳದ ಆಡಳಿತ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.