ADVERTISEMENT

PV WEB Exclusive: ಸಂಕ್ರಮಣ ಕಾಲದಲ್ಲಿ ದೊಡ್ಡಬಳ್ಳಾಪುರ ನೇಕಾರಿಕೆ!

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 4:28 IST
Last Updated 4 ಜನವರಿ 2026, 4:28 IST
<div class="paragraphs"><p>ದೊಡ್ಡಬಳ್ಳಾಪುರದ ವಿದ್ಯುತ್ ಮಗ್ಗ</p></div>

ದೊಡ್ಡಬಳ್ಳಾಪುರದ ವಿದ್ಯುತ್ ಮಗ್ಗ

   
ಸೂರತ್‌ ಸೀರೆ ಅಲೆಯ ಅಬ್ಬರದಲ್ಲಿ ಮಂಕಾದ ಮಗ್ಗದ ಸೀರೆ * ಸ್ತಬ್ಧವಾದ ಮಗ್ಗಗಳ ಸದ್ದು * ಸುಧಾರಿಸದ ನೇಕಾರರ ಬದುಕು 

ಶತಮಾನಗಳ ಇತಿಹಾಸ ಇರುವ ದೊಡ್ಡಬಳ್ಳಾಪುರದ ವಿದ್ಯುತ್ ಮಗ್ಗದ ಸಾಂಪ್ರದಾಯಿಕ ಸೀರೆಗಳು ಗುಜರಾತಿನ ಸೂರತ್‌ ಸೀರೆಗಳ ಆಕರ್ಷಣೆ ಹಾಗೂ ಅಬ್ಬರದ ಅಲೆಯ ಎದುರು ಮಂಕಾಗಿವೆ.

ದೊಡ್ಡಬಳ್ಳಾಪುರದದಂತ ಪುಟ್ಟ ನಗರದಲ್ಲಿ 25 ಸಾವಿರ ಮಗ್ಗಗಳಿವೆ. ಪ್ರತಿ ಗಲ್ಲಿ, ಮನೆಗಳಲ್ಲಿ ಕೇಳಿ ಬರುತ್ತಿದ್ದ ಕೈಮಗ್ಗಗಳು ಸದ್ದು ನಿಧಾನವಾಗಿ ಸ್ತಬ್ಧವಾಗುತ್ತಿದೆ. ಒಂದು ಕಾಲಕ್ಕೆ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕೈಮಗ್ಗಗಳು ಕಳಾಹೀನವಾಗಿದ್ದು ನಿಧಾನವಾಗಿ ಉಸಿರು ಚೆಲ್ಲುತ್ತಿವೆ. ಕೈಮಗ್ಗ ಉದ್ಯಮ ಅವಸಾನದತ್ತ ಸಾಗುತ್ತಿದೆ.

ADVERTISEMENT

ವಿದ್ಯುತ್ ಮಗ್ಗಗಳಿಗೆ ಹೆಸರಾಗಿದ್ದ ದೊಡ್ಡಬಳ್ಳಾಪುರ ಕೂಡ ತಮಿಳುನಾಡಿನ ಕಂಚಿಪುರದಂತೆ ನೇಕಾರರ ಊರು ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು.  ಎಲ್ಲ ಮನೆಗಳಲ್ಲಿ ಕೈಮಗ್ಗಗಳು ಸದ್ದು ಕೇಳಿಸುತ್ತಿತ್ತು. ಕಾಲದೊಂದಿಗೆ ಹೆಜ್ಜೆ ಹಾಕದ ದೊಡ್ಡಬಳ್ಳಾಪುರ ನೇಕಾರಿಕೆ ಈಗ ಸಂಕ್ರಮಣ ಕಾಲದಲ್ಲಿದೆ...  

ನೇಕಾರಿಕೆ ಇನ್ನೂ ಗುಡಿ ಕೈಗಾರಿಕೆ ರೂಪದಲ್ಲಿಯೇ ಇದೆ. ಇದನ್ನು ಕನಿಷ್ಠ ಒಂದು ಲಕ್ಷ ಮಂದಿ ಅವಲಂಬಿಸಿ ಜೀವನ ಕಟ್ಟಿಕೊಂಡಿದ್ದಾರೆ. ಮಗ್ಗ ನಂಬಿ ಬದುಕು ಕಟ್ಟಿಕೊಂಡವರಿಗೆ ತಲೆಮಾರುಗಳಿಂದ ನಂಬಿದ ಕುಲಕಸಬು ಮುಂದುವರಿಸುವುದೇ ಸವಾಲಾಗಿದೆ. ನೇಯ್ಗೆ ಉದ್ಯಮವನ್ನು ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಕುಲಕಸುಬಿಗೆ ಸಾವಿರದ ಶರಣು ಹೇಳಿ ಪರ್ಯಾಯ ಉದ್ಯೋಗಗಳನ್ನು ನೇಕಾರ ಕುಟುಂಬಗಳು ಹುಡುಕ ತೊಡಗಿವೆ.   

ಹೆಚ್ಚು ಸಮಯ ಮತ್ತು ಸಂಯಮದಿಂದ ಕೌಶಲದಿಂದ ನೇಯಲಾಗುವ ಮಗ್ಗದ ಸೀರೆಗಗಳ ಜಾಗವನ್ನು ಆಧುನಿಕ ತಂತ್ರಜ್ಞಾನದ ರೇಪಿಯರ್ ಏರ್‌ಜೆಟ್ ಮಗ್ಗಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ತಯಾರಾಗುವ ಸೂರತ್‌ ಸೀರೆಗಳು ಆಕ್ರಮಿಸಿಕೊಂಡಿವೆ. ಬೆಳೆಯುತ್ತಿರುವ ತಂತ್ರಜ್ಞಾನ ಜತೆ ಹೆಜ್ಜೆ ಹಾಕಲು ಇಲ್ಲವೇ ಸ್ಪರ್ಧಿಸಲು ಆಗದ ಮಗ್ಗದ ಉತ್ಪನ್ನ ಮೂಲೆ ಸೇರುತ್ತಿವೆ.

‘ ಕೈ ಮಗ್ಗ ಮತ್ತು ವಿದ್ಯುತ್‌‌ ಮಗ್ಗ’ ಉದ್ಯಮದ ಏರುಪೇರು ಅಧ್ಯಯನಕ್ಕೆ ದೊಡ್ಡಬಳ್ಳಾಪುರ ಉತ್ತಮ ನಿದರ್ಶನವಾಗಿದೆ. ಇಲ್ಲಿಯ ನೇಕಾರರು 21 ತಿಂಗಳಲ್ಲಿ ನೇಯುವ ಸೀರೆಗಳನ್ನು ಸೂರತ್‌ನಲ್ಲಿ ಒಂದು ತಿಂಗಳಲ್ಲಿ ನೇಯಲಾಗುತ್ತಿದೆ. ಮಾರುಕಟ್ಟೆಯಲ್ಲಿ ಕೈಮಗ್ಗದ ಸೀರೆಗಿಂತ ಅರ್ಧ ಬೆಲೆಗೆ ಸೂರತ್‌ ಸೀರೆಗಳು ಸಿಗುತ್ತವೆ. ಇದರಿಂದ ಮಗ್ಗದ ನೇಕಾರಿಕೆ ಸಂಕಷ್ಟಕ್ಕೆ ಸಿಲುಕಿದ್ದು, ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. 

ಆರಂಭದಲ್ಲಿ ಫ್ಯಾಷನ್‌ ಸೀರೆಗಳನ್ನು ಮಾತ್ರ ಸೂರತ್‌ನಲ್ಲಿ ನೇಯಲಾಗುತಿತ್ತು. ಈಗ ಸಾಂಪ್ರಾದಾಯಿಕ ಸೀರೆಗಳನ್ನೂ ನೇಯಲಾಗುತ್ತಿದೆ. ಇದೇ ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣ. ಲಾಳಿ ಇರುವ ವಿದ್ಯುತ್‌ ಮಗ್ಗಗಳಲ್ಲಿ ಎಲ್ಲಾ ಮಾದರಿಯ ಸೀರೆಗಳನ್ನು ನೇಯಲಾಗುತ್ತಿದೆ. ಈ ಮಗ್ಗಗಳಲ್ಲಿ ದಿನಕ್ಕೆ ಎರಡು ಸೀರೆ  ನೇಯಬಹುದು. ಒಬ್ಬ ಕಾರ್ಮಿಕ ಎರಡು ವಿದ್ಯುತ್‌ ಮಗ್ಗಗಳನ್ನು ಏಕ ಕಾಲಕ್ಕೆ ಚಾಲನೆ ಮಾಡುವ ಮೂಲಕ ದಿನಕ್ಕೆ ಮೂರರಿಂದ ನಾಲ್ಕು ಸೀರೆ ನೇಯುತ್ತಾರೆ. ಸೀರೆಗಳ ಲೆಕ್ಕದಲ್ಲಿ ಕಾರ್ಮಿಕರಿಗೆ ಕೂಲಿ ನೀಲಾಗುತ್ತಿದೆ. 

ಆದರೆ, ಅದೇ ಸೂರತ್‌ನಲ್ಲಿ ಒಬ್ಬ ಕಾರ್ಮಿಕ ಎಂಟು ತಾಸು ಕೆಲಸ ಮಾಡಿ ತಿಂಗಳ ಲೆಕ್ಕದಲ್ಲಿ ಸಂಬಳ ಪಡೆಯುತ್ತಾನೆ. ಕನಿಷ್ಠ 8 ರಿಂದ 10 (ಲಾಳಿ ಇಲ್ಲದ) ಮಗ್ಗಗಳನ್ನು ಏಕ ಕಾಲಕ್ಕೆ ನಡೆಸಲಾಗುತ್ತದೆ. ಹೀಗಾಗಿ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಅಲ್ಲಿನ ನೇಕಾರಿಗೆ ಸಾಧ್ಯವಾಗಿದೆ. ಬದಲಾವಣೆಗೆ ಒಗ್ಗಿಕೊಳ್ಳಲು ಸಾಧ್ಯವಾಗದ ಇಲ್ಲಿನ ನೇಕಾರ ಕುಟುಂಬಗಳು ಕುಲ ಕಸುಬಿಗೆ ವಿದಾಯ ಹೇಳುವ ದಯನೀಯ ಸ್ಥಿತಿಗೆ ತಲುಪಿದ್ದಾರೆ.

ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಸೀರೆಗಳು

ಇಲ್ಲಿ ಎಲ್ಲರ ವೃತ್ತಿಯೂ ನೇಕಾರಿಕೆ:

ಸಾಮಾನ್ಯವಾಗಿ ನೇಕಾರಿಕೆ ದೇವಾಂಗ ಸಮುದಾಯದವರ ಕುಲಕಸುಬು. ಇಲ್ಲಿ ದೇವಾಂಗ ಜನಾಂಗದವರು ಮಾತ್ರವಲ್ಲದೆ ಎಲ್ಲಾ ಸಮುದಾಯವದರೂ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಉತ್ತರ ಭಾರತದ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರಿಕೆಗೆ ಧುಮುಕುತ್ತಿದ್ದಾರೆ. ಹಾಗಾಗಿ ಆಧುನಿಕ ವಿದ್ಯುತ್‌ ಮಗ್ಗ, ವಿನ್ಯಾಸಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ದಶಕಗಳಿಂದಲೂ ಇಲ್ಲಿ ಸೀರೆಗಳನ್ನು ನೇಯುತ್ತಿದ್ದವರು ಮಾರಾಟಕ್ಕೆ ಸೂಕ್ತ ವೇದಿಕೆ, ಬ್ರ್ಯಾಂಡ್‌ ರೂಪಿಸಿಕೊಳ್ಳುವ ಕಡೆಗೆ ಚಿಂತನೆ ನಡೆಸದೆ ಹೋಗಿದ್ದು ಇಂದಿನ ದುಃಸ್ಥಿತಿಗೆ ಕಾರಣ. ಸಂಕಷ್ಟದ ದಿನ ಎದುರಿಸುತ್ತಿರುವ ನೇಕಾರಿಕೆ ಎಲ್ಲದಕ್ಕೂ ಸರ್ಕಾರವನ್ನು ಅವಲಂಬಿಸುವ ಸ್ಥಿತಿಗೆ ಬಂದು ತಲುಪಿದೆ. 

ಯುವ ಜನಾಂಗ ನೇಕಾರಿಕೆಯ ಕುಲಕಸಬು ಬಿಟ್ಟು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುವ ಮೂಲಕ ಇಲ್ಲಿಯ ನೇಕಾರ ಕುಟುಂಬದ ಯುವ ಜನತೆ ನೆಮ್ಮದಿಯ ಬದುಕಿಗೆ ದಾರಿ ಕಂಡುಕೊಳ್ಳುತ್ತಿದೆ. 

ಒಗ್ಗಟ್ಟಿನ ಕೊರತೆ:

ಸುಮಾರು 25 ಸಾವಿರ ವಿದ್ಯುತ್‌ ಮಗ್ಗ ಇರುವ ಇಲ್ಲಿ ಒಂದೂವರೆ ದಶಕಗಳ ಹಿಂದೆ ನೇಕಾರರು ಒಂದೇ ಸಂಘಟನೆ ಅಡಿ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿದ್ದರು. ಹೋರಾಟದ ಫಲವಾಗಿಯೇ ಮಗ್ಗಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್‌ ದೊರೆಯುವಂತೆ ಆಯಿತು.

ಈಗ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಎಂಟಕ್ಕೂ ಹೆಚ್ಚಿನ ನೇಕಾರ ಸಂಘ, ಸಂಘಟನೆ ಇವೆ. ಆದರೆ ನೇಕಾರರ ಸಂಕಷ್ಟಕ್ಕೆ ಅವು ಸ್ಪಂದಿಸುತ್ತಿಲ್ಲ. 

ಆಡಳಿತ ಪಕ್ಷದ ಪರವಾಗಿರುವ ಸಂಘಟನೆ ಸರ್ಕಾರದ ಪರ ಮೃಧು ದೋರಣೆ ತೋರಿದರೆ, ಸರ್ಕಾರದ ವಿರುದ್ಧವಾಗಿರುವ ಸಂಘಟನೆ ಹೋರಾಟಕ್ಕೆ ಕರೆ ನೀಡುತ್ತದೆ. ಹೀಗಾಗಿಯೇ ನೇಕಾರ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಬಜೆಟ್‌ನಲ್ಲಿ ನೇಕಾರರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಂತೆ ಆಗಿದೆ.

ಸೀರೆಗಳಿಗೆ ನಿಗದಿತ ಬೆಲೆ, ಸೀರೆಗಳ ಖರೀದಿಗೆ ಸಹಕಾರ ಸಂಘ ಸ್ಥಾಪನೆ, ಇಲ್ಲಿ ನೇಯುವ ಸೀರೆಗಳಿಗೆ ಪ್ರತ್ಯೇಕ ಬ್ರ್ಯಾಂಡ್‌ ರೂಪಿಸುವ ಬೇಡಿಕೆಗಳು ಒಗ್ಗಟ್ಟಿನ ಕೊರತೆಯಿಂದಾಗಿ ಜಾರಿಗೆ ಬರಲೇ ಇಲ್ಲ.

ಸೂರತ್‌ ಸೀರೆ ತಂದೊಡ್ಡಿರುವ ಬಿಕ್ಕಟ್ಟು ಕುರಿತು ಸಂಸದ, ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ, ಜವಳಿ ಸಚಿವ ಹಾಗೂ ಮುಖ್ಯಮಂತ್ರಿ ಗಮನ ಸೆಳೆಯಲಾಗಿತ್ತು. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ನೇಕಾರರ ಸಂಕಷ್ಟದ ಬಗ್ಗೆ ಸ್ಥಳೀಯ ಶಾಸಕ ಮೊದಲುಗೊಂಡು ಯಾರೂ ಸಹ ಧ್ವನಿ ಎತ್ತಲಿಲ್ಲ. 

ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಸೀರೆಗಳು

ಲೋಕಲ್‌ ಸೀರೆಗೆ ಹೊರಗಿನ ಬ್ರ್ಯಾಂಡ್‌: 

ಇಲ್ಲಿನ ಸೀರೆ ಖರೀದಿಸಿ ಬೇರೆ ಬ್ರ್ಯಾಂಡ್‌ ಹೆಸರಿನ ಲೇಬಲ್‌ ಅಂಟಿಸಿ ಮಾರಾಟ ಮಾಡುವ ಮೂಲಕ ವರ್ತಕರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಹಗಲು, ರಾತ್ರಿ ಸೀರೆ ನೇಯುವ ನೇಕಾರರು ವಿದ್ಯುತ್‌ ಬಿಲ್‌ ಕಟ್ಟಲು ಹೆಣಗಾಡುವ ಸ್ಥಿತಿ ಇದೆ. ಈ ಸೀರೆಗಳ ಮಾರಾಟಕ್ಕೆ ಬ್ರ್ಯಾಂಡ್‌ ರೂಪಿಸಿಕೊಳ್ಳುವ ತುರ್ತು ಅಗತ್ಯವಿದೆ. ಇಲ್ಲವಾದರೆ ನೇಕಾರಿಕೆ ಸ್ಥಳೀಯರ ಕೈ ತಪ್ಪುವ ಅಪಾಯಗಳಿವೆ. 

ಮಾರುಕಟ್ಟೆ ಕಂಡುಕೊಳ್ಳಲು, ಬದಲಾದ ನವ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗದಿರುವುದರಿಂದ ನೇಯ್ಗೆ ಉದ್ಯಮ  ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.

ಅತ್ತ, ನೇಕಾರ ಸಂಘಟನೆಗಳು ನೇಕಾರರನ್ನು ಉಳಿಸಲು ಸೂರತ್ ಸೀರೆಗಳು ಇಲ್ಲಿಗೆ ಬರದಂತೆ ತಡೆಯುವುದೊಂದೇ ಮಾರ್ಗ ಎಂದು ನಂಬಿವೆ. ಆದರೆ, ಮಗ್ಗಗಳಲ್ಲೂ ಕಾಲ ಕಾಲಕ್ಕೆ ತಕ್ಕಂತೆ ಬದಲಾಗಿ, ಭಿನ್ನವಾಗಿ ಆಲೋಚಿಸಿ ಹೊಸತನದ ಉತ್ಪನ್ನಗಳು ದೇಶ, ವಿದೇಶಗಳಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಇಂಥ ನೇಕಾರರು ಹೊಸ ಮಾರುಕಟ್ಟೆ ಸೃಷ್ಟಿಸಿಕೊಂಡ ಬಹಳಷ್ಟು ಉದಾಹರಣೆಗಳಿವೆ. ಅಂತಹ ಸಾಧ್ಯತೆಗಳಿಗೆ ದೊಡ್ಡಬಳ್ಳಾಪುರ ನೇಕಾರರು ಪ್ರಯತ್ನಿಸದಿರುವುದು ಇಂದಿನ ಅವರ ಸ್ಥಿತಿಗೆ ಪ್ರಮುಖ ಕಾರಣ. 

ಬಿಕ್ಕಟ್ಟಿಗೆ ಜಿಐ ಟ್ಯಾಗ್‌ ಪರಿಹಾರ!

ಇಳಕಲ್, ಮೊಳಕಾಲ್ಮೂರು ಸೀರೆಗಳಂತೆ ದೊಡ್ಡಬಳ್ಳಾಪುರದಲ್ಲಿಯೂ ಬ್ರ್ಯಾಂಡೆಡ್‌ ಸೀರೆಗಳನ್ನು ತಯಾರಿಸಬೇಕು. ಇದಕ್ಕೆ ಭೌಗೋಳಿಕ ಮಾನ್ಯತೆ (ಜಿಯೋಗ್ರಾಫಿಕಲ್‌ ಇಂಡಿಕೇಶನ್‌–ಜಿಐ ಟ್ಯಾಗ್‌) ಪಡೆದರೆ ಇಲ್ಲಿಯ ಸೀರೆಗಳನ್ನು ಯಾರೂ ಸಹ ನಕಲು ಮಾಡಲು ಸಾಧ್ಯವಿಲ್ಲ. ಹೀಗಾಗಿ ಮ್ಯಾನತೆ ಪಡೆದುಕೊಳ್ಳಬೇಕು ಎನ್ನುವ ಸಲಹೆ ಆಗಾಗ ಕೇಳಿ ಬರುತ್ತಿದೆ. 

ಸರ್ಕಾರ ಐದು ವರ್ಷಕ್ಕೊಮ್ಮೆ ಜವಳಿ ನೀತಿ ಪರಿಷ್ಕರಿಸುತ್ತಿದೆ. ತಾಂತ್ರಿಕ ಉನ್ನತೀಕರಣಕ್ಕೆ ಸಹಾಯ ಧನ ನೀಡುವುದಾಗಿ ಹೇಳುತ್ತಿದೆ. ಕಚ್ಚಾ ಸಾಮಗ್ರಿಗೆ ಸಹಾಯಧನ ಸೇರಿದಂತೆ ನೇಕಾರರಿಗೆ ಪೂರಕವಾಗುವ ಹೊಸ ಯೋಜನೆ ರೂಪಿಸಲಾಗುವುದು. ಸೂರತ್‌ ಸೀರೆ ಮತ್ತು ರೀಪಿಯರ್‌ ಮಗ್ಗದ ಸೀರೆಗಳಿಂದ ಈಗ ಎದುರಾಗಿರುವ ನೇಯ್ಗೆ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜವಳಿ ಅಧಿಕಾರಿಗಳು ಮಾಮೂಲು ಭರವಸೆ ನೀಡಿದ್ದಾರೆ. 

ಸೂರತ್‌ ಸೀರೆಗಳಿಂದಲೇ ದೊಡ್ಡಬಳ್ಳಾಪುರ ನೇಕಾರರಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಸೂರತ್‌ ಸೀರೆಗಳನ್ನು ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರೇಪಿಯರ್‌ ಮಗ್ಗಗಳಲ್ಲಿ ಸೀರೆಗಳನ್ನು ನೇಯಲು ಅವಕಾಶ ಇಲ್ಲ. ಈ ಬಗ್ಗೆ ಸಚಿವರು ಪ್ರಯತ್ನ ನಡೆಸಬೇಕು. ಪವರ್‌ ಲೂಮ್‌ ರಿಸರ್‌ವೇಷನ್‌ ಕಾಯ್ದೆ ತಿದ್ದುದಪಡಿಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ಕರೆದೊಯ್ಯುಲಾಗವುದು. ದೊಡ್ಡಬಳ್ಳಾಪುರದಲ್ಲಿ ನೇಯಲಾಗುವ ಸೀರೆಗೆ ಭೌಗೋಳಿಕ ಮೌನ್ಯತೆ (ಜಿ.ಐ ಟ್ಯಾಗ್‌) ಪಡೆಯಲು ಪ್ರಯತ್ನಿಸಲಾಗುವುದು. ನೇಕಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರದ ಇತಿಮಿತಿಯಲ್ಲಿ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುವುದು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ನಿಯೋಗ ತೆರಳಿ ಒತ್ತಡ ತರಲಾಗುವುದು ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್‌ ಮುನಿರಾಜು, ಸ್ಥಳೀಯ ನೇಕಾರರಿಗೆ ಭರವಸೆ ನೀಡಿದ್ದಾರೆ.

ನೇಕಾರರಿಗೆ ಉತ್ಪಾದನಾ ವೆಚ್ಚ ಕಡಿಮೆ ಆಗಬೇಕು. ಸರ್ಕಾರದ ನೀತಿಗಳು ನೇಕಾರರಿಗೆ ನೆರವಾಗಬೇಕು. ನೇಕಾರರ ಸೀರೆಗೆ ಬೆಲೆ ಸಿಗಬೇಕು. ರೇಪಿಯರ್‌ನಲ್ಲಿ ಬಟ್ಟೆ ತಯಾರಾಗದಂತೆ ಅಥವಾ ಬ್ರ್ಯಾಂಡ್‌ ಹೆಸರಿನಲ್ಲಿ ತೆರಿಗೆ ವಿಧಿಸುವ ಕ್ರಮ ಕೈಗೊಳ್ಳಬಹುದಾಗಿದೆ. ಕೈಮಗ್ಗ ನಡೆಸಲು ಇಡೀ ಕುಟುಂಬವೇ ಶ್ರಮಪಡಬೇಕು. ಆದಾಯವೂ ದೊಡ್ಡ ಪ್ರಮಾಣದಲ್ಲಿ ಇಲ್ಲ. ಇಲ್ಲಿ ಹಾಕುವ ಶ್ರಮವನ್ನು ಬೇರೆ ಕೆಲಸಗಳಿಗೆ ಹಾಕಿದರೆ ಉತ್ತಮ ಆದಾಯ ಗಳಿಸಬಹುದು. ಅಲ್ಲದೆ, ಸರ್ಕಾರ ಕೈಮಗ್ಗ ನಡೆಸುವವರಿಗೆ ನೀಡುತ್ತಿರುವ ವಿವಿಧ ಸೌಲಭ್ಯ ಅರ್ಹರನ್ನು ತಲುಪುತ್ತಿಲ್ಲ ಎನ್ನುವ ಕೊರಗು ನೇಕಾರರನ್ನು ಕಾಡುತ್ತಲೇ ಇದೆ.

ಈ ಎಲ್ಲದರ ನಡುವೆ, ದೊಡ್ಡಬಳ್ಳಾಪುರದ ಜೀವನಾಡಿ ಉದ್ಯಮವಾಗಿರುವ ನೇಕಾರಿಕೆ ಅವಲಂಭಿಸಿದ್ದವರು ಮುಂದಿನ ಭವಿಷ್ಯ ಹೇಗೆ ಎನ್ನುವ ಚಿಂತೆ ಕಾಡಲಾರಂಭಿಸಿದೆ. ಕೈಮಗ್ಗ ಮತ್ತು ನೇಕಾರಿಕೆ ಸಂಕ್ರಮಣ ಕಾಲಘಟ್ಟಕ್ಕೆ ಬಂದು ನಿಂತಿದೆ.

ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಸೀರೆಗಳು

ಸೂರತ್‌ ಸೀರೆ ನಿಷೇಧ: ಈಡೇರದ ಭರವಸೆ

ಸೂರತ್‌ ಸೀರೆಗಳ ನಿಷೇಧಕ್ಕೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುವುದು. ಸೂರತ್‌ ಸೀರೆಗಳನ್ನು ನಿಷೇಧ ಮಾಡಬೇಕು ಎಂಬ ಬೇಡಿಕೆ ಸ್ಥಳೀಯ ನೇಕಾರರ ಹಿತರಕ್ಷಣೆ ದೃಷ್ಟಿಯಿಂದ ಒಳ್ಳೆಯದೆ. ಆದರೆ ಕಾನೂನಿನಲ್ಲಿ ಅವಕಾಶ ಇದೆಯೇ, ನಿಷೇಧ ಮಾಡಬಹುದೇ ಎಂಬುದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಅವಕಾಶ ಇದ್ದರೆ ಖಂಡಿತ ನಿಷೇಧ ಮಾಡಲಾಗುವುದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ. ಆದರೆ, ಈ ಭರವಸೆ ಇನ್ನೂ ಈಡೇರಿಲ್ಲ!

ಇತ್ತೀಚೆಗೆ ಅವರನ್ನು ದೊಡ್ಡಬಳ್ಳಾಪುರ ಕೈಮಗ್ಗ ನೇಕಾರರ ನಿಯೋಗ ಭೇಟಿಯಾಗಿತ್ತು. ಇಂದಿನ ವ್ಯಾಪಾರದ ಸ್ಪರ್ಧಾಯುಗದಲ್ಲಿ ಆಧುನೀಕರಣ ಅನಿವಾರ್ಯವಾಗಿದ್ದು, ಕೈಮಗ್ಗ ಹೊಂದಿರುವವರು ರೇಪಿಯರ್‌ ಮಗ್ಗಕ್ಕೆ ಪರಿವರ್ತನೆ ಹೊಂದಲು ಬಯಸಿದರೆ ಸರ್ಕಾರದಿಂದ ಸಬ್ಸಿಡಿ ಕೊಡುವ ಪ್ರಯತ್ನ ಮಾಡುತ್ತೇವೆ. ಆದರೆ ದೊಡ್ಡಬಳ್ಳಾಪುರದಲ್ಲಿರುವ 25 ಸಾವಿರ ನೇಕಾರರಿಗೆ ಏಕಕಾಲಕ್ಕೆ ಸಬ್ಸಿಡಿ ಕೊಡುವುದು ಕಷ್ಟ. ಹಂತ ಹಂತವಾಗಿ ರೇಪಿಯರ್‌ ಮಗ್ಗಕ್ಕೆ ಬದಲಾವಣೆ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ. ಆದರೆ, ಅದು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದು ಪ್ರಶ್ನೆ. 

ಸೂರತ್‌ ವಿರುದ್ಧ ನೇಕಾರರ ಮುನಿಸು

ಸೂರತ್ ಹಾಗೂ ಇತರ ರೇಪಿಯರ್ ಮಗ್ಗಗಳಲ್ಲಿ ನೇಯ್ದ ಸೀರೆಗಳನ್ನು ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ನೇಕಾರರ ಹಿತರಕ್ಷಣಾ ಸಮಿತಿ, ದೊಡ್ಡಬಳ್ಳಾಪುರ ಟೆಕ್ಸ್‌ ಟೈಲ್ಸ್ ವೀವರ್ಸ್ ಅಸೋಸಿಯೇಶನ್, ನೇಕಾರರ ಹೋರಾಟ ಸಮಿತಿ, ವಿವಿಧ ನೇಕಾರ ಸಂಘಟನೆಗಳ ನೇತೃತ್ವದಲ್ಲಿ ನೇಕಾರರು ಈಚೆಗೆ ಬೃಹತ್‌ ಪ್ರತಿಭಟನೆ ನಡೆಸಿದ್ದರು.

ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದ ಸೀರೆಗಳನ್ನು ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದದೊಡ್ಡಬಳ್ಳಾಪುರದ ನೇಕಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಕಾರರ ಹಿತರಕ್ಷಣೆಗಾಗಿ ವಿದ್ಯುತ್ ಮಗ್ಗಗಳ ಮೀಸಲು ಕಾಯ್ದೆ ರೂಪಿಸಬೇಕು. ಹೊರ ರಾಜ್ಯಗಳಿಂದ ಬರುವ ಸೀರೆ ಮಾರಾಟ ತಡೆಯಬೇಕು. ರೇಪಿಯರ್ ಮಗ್ಗಗಳಲ್ಲಿ ಇಲ್ಲಿನ ಮಾದರಿಯ ಸೀರೆಗಳನ್ನು ನೇಯದಂತೆ ಸರ್ಕಾರ ಕಾನೂನು ಜಾರಿಗೆ ತರಬೇಕು ಎಂದುನೇಯ್ಗೆ ಉದ್ಯಮ ಬಿಕ್ಕಟ್ಟಿಗೆ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. 

ನೇಕಾರಿಕೆ ಬಿಕ್ಕಟ್ಟು: ನಾಳೆ ಬಂದ್

ಸೂರತ್‌ ಸೀರೆಗಳ ಹಾವಳಿಯಿಂದ ನೇಕಾರಿಕೆ ಉದ್ಯಮದಲ್ಲಿ ಉಂಟಾಗಿರುವ ಬಿಕ್ಕಟ್ಟು ಸರಿಪಡಿಸಲು ಆಗ್ರಹಿಸಿ ಜನವರಿ 5 ರಂದು ವಿವಿಧ ನೇಕಾರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.

ವಿದ್ಯುತ್ ಮಗ್ಗಗಳ ನೇಕಾರಿಕೆ ಉಳಿವಿಗೆ ಆಗ್ರಹಿಸಿ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ನಗರದಲ್ಲಿ ಸುಮಾರು 25 ಸಾವಿರ ವಿದ್ಯುತ್‌ ಮಗ್ಗಗಳು ಇವೆ. ಇವುಗಳ ಮೇಲೆ ಸಾವಿರಾರು ಕುಟುಂಬಗಳು ಮತ್ತು ಹಲವು ಉದ್ಯಮಗಳು ಅವಲಂಬಿಸಿವೆ. ಆದರೆ, ಈಗ ಸೂರತ್‌ನಿಂದ ಕಡಿಮೆ ಬೆಲೆಗೆ ಸೀರೆಗಳನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಇಲ್ಲಿ ನೇಯಲಾಗುತ್ತಿರುವ ಸೀರೆಗಳಿಗೆ ಮಾರುಕಟ್ಟೆಯೇ ಇಲ್ಲದಂತಾಗಿದೆ ಎಂದು ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್‌ ಹೇಳಿದ್ದಾರೆ. 

ದೊಡ್ಡಬಳ್ಳಾಪುರದ ಸೀರೆಗಳನ್ನು ಬೃಹತ್‌ ಮಿಲ್‌ಗಳಲ್ಲಿ ತಯಾರು ಮಾಡಲಾಗುತ್ತಿರುವುದು ನೇಕಾರರಿಗೆ ಸಂಕಷ್ಟವಾಗಿದೆ. ಇದಕ್ಕೆ ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ಉತ್ಪನ್ನಗಳನ್ನು ತಯಾರಿಸಬಾರದು ಎಂದು 2006ರ ಕಾಯ್ದೆಯಲ್ಲಿ ಇರುವ ಅಂಶಗಳ ಆಧಾರದ ಮೇಲೆ ಈ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ಕಾಯ್ದೆ ರೂಪಿಸಲು ಮನವಿ ಮಾಡಲಾಗುವುದು. ನೇಕಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಂಬಲ ನೀಡುವೆ.
ಧೀರಜ್ ಮುನಿರಾಜು, ಶಾಸಕ, ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದಲ್ಲಿ ಜವಳಿ ಉತ್ಪನ್ನ ಮಾರುಕಟ್ಟೆ ಸಂಕಿರಣ ಶಿಲಾನ್ಯಾಸ ಶೀಘ್ರವೇ ಆಗಬೇಕು. ಎಲ್ಲಾ ಮಗ್ಗದ ಘಟಕಗಳು ಒಂದೇ ಜಾಗದಲ್ಲಿ ನಿರ್ವಹಿಸುವಂತ ಪವರ್ ಲೂಮ್ ವಸಾಹತು ನಿರ್ಮಿಸಬೇಕು. ತೆಲಂಗಾಣ ರಾಜ್ಯದಂತೆ ಸರ್ಕಾರವೇ ನೇಕಾರರಿಂದ ಸೀರೆಗಳನ್ನು ಖರೀದಿಸಬೇಕಿದೆ
ಬಿ.ಜಿ. ಹೇಮಂತರಾಜು,ಅಧ್ಯಕ್ಷ, ನೇಕಾರ ಹೋರಾಟ ಸಮಿತಿ
ನೇಕಾರರು ನೇಯುವ ಬಟ್ಟೆಗಳನ್ನು ಸೂರತ್ ಹಾಗೂ ಇತರ ರೇಪಿಯರ್ ಮಗ್ಗಗಳಲ್ಲಿ ತಯಾರು ಮಾಡುವಂತಿಲ್ಲ. ಈ ಬಗ್ಗೆ ರೇಪಿಯರ್ ಮಗ್ಗಗಳ ಮಾಲೀಕರ ವಿರುದ್ಧ ಕೈಮಗ್ಗ ಮೀಸಲಾತಿ ಅಧಿನಿಯಮದಂತೆ ಜಾಗೃತ ದಳದ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು
ವಿ.ನರಸಿಂಹಮೂರ್ತಿ,ಅಧ್ಯಕ್ಷ, ಟೆಕ್ಸ್‌ಟೈಲ್‌ ವೀವರ್ಸ್ ಅಸೋಸಿಯೇಶನ್‌
ಮುಕ್ತ ವ್ಯಾಪರ ಒಪ್ಪಂದ ಜಾಗತೀಕರಣದ ಪ್ರಭಾವದಿಂದ ನೇಕಾರರು ಮಾರಾಟ ಮಾಡುವ ಸೀರೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿ ನೇಕಾರರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ನೇಕಾರರ ಹೋರಾಟದ ಫಲವಾಗಿ ರಾಜ್ಯ ಉಚಿತ ವಿದ್ಯುತ್ ಸೌಲಭ್ಯಗಳು ಸರ್ಕಾರದಿಂದ ದೊರೆತಿತ್ತು. ಈಗ ಸರ್ಕಾರ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಮಾಡುವುದರೊಂದಿಗೆ, ನೇಕಾರರು ಉತ್ಪಾದಿಸಿದ ಬಟ್ಟೆಗಳನ್ನು ಖರೀದಿಸುವ ವ್ಯವಸ್ಥೆ ಮಾಡಬೇಕಿದೆ
ದೊಡ್ಡಬಳ್ಳಾಪುರ ನೇಕಾರರ ಸಂಘ
ಫ್ಯಾಷನ್‌ ಸೀರೆಗಳನ್ನು ಮಾತ್ರ ಸೂರತ್‌ನಲ್ಲಿ ನೇಯಲಾಗುತಿತ್ತು.ಈಗ ಸಾಂಪ್ರಾದಾಯಿಕ ಸೀರೆಗಳನ್ನೂ ನೇಯಲಾಗುತ್ತಿದೆ. ಸೂರತ್‌ನ ಶಟಲ್‌ ಲೆಸ್‌ (ಲಾಳಿ ಇಲ್ಲದ) ವಿದ್ಯುತ್‌ ಮಗ್ಗಗಳ ಸಂಖ್ಯೆಯೇ ಹೆಚ್ಚು. ಈ ಮಾದರಿಯ ಮಗ್ಗದಲ್ಲಿ ನೇಯುವ ಸಾಂಪ್ರಾದಾಯಿಕ ಸೀರೆಗಳ ಗುಣಮಟ್ಟ ಅಷ್ಟಕ್ಕಷ್ಟೆ.
ಲಕ್ಷ್ಮೀನಾರಾಯಣ, ದೊಡ್ಡಬಳ್ಳಾಪುರ
ನೇಕಾರರು ಭಾವನಾತ್ಮಕವಾಗಿ ಯೋಚಿಸದೆ, ವಾಸ್ತವ ಸಂಗತಿ ಅರ್ಥ ಮಾಡಿಕೊಳ್ಳಬೇಕಿದೆ. ಇದು ಸರ್ಕಾರದ ಕಾಯ್ದೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ನಿರಂತರ ಹೋರಾಟ ಹಾಗೂ ಒತ್ತಾಯದ ಮೂಲಕ ಬಗೆಹರಿಸಿಕೊಳ್ಳಬೇಕಿದೆ.
ವೇಣುಗೋಪಾಲ್, ಅಧ್ಯಕ್ಷ, ನೇಕಾರ ವೇದಿಕೆ
ನಾವು ಮಾರುತ್ತಿರುವ ಬೆಲೆಗಿಂತ ಅರ್ಧ ಬೆಲೆಗೆ ಮಾರಾಟ ಮಾಡಿ ನೇಕಾರಿಕೆ ಉದ್ಯಮವನ್ನು ಹಾಳು ಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಕಾಯ್ದೆ ರೂಪಿಸಿ ನೇಕಾರರ ಹಿತ ಕಾಪಾಡಬೇಕೆಂದು ನೇಕಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪಿ.ಎ.ವೆಂಕಟೇಶ್ ಒತ್ತಾಯಿಸಿದರು.ನಾವು ಮಾರುತ್ತಿರುವ ಬೆಲೆಗಿಂತ ಅರ್ಧ ಬೆಲೆಗೆ ಮಾರಾಟ ಮಾಡಿ ನೇಕಾರಿಕೆ ಉದ್ಯಮವನ್ನು ಹಾಳು ಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಕಾಯ್ದೆ ರೂಪಿಸಿ ನೇಕಾರರ ಹಿತ ಕಾಪಾಡಬೇಕು
ಪಿ.ಎ.ವೆಂಕಟೇಶ್‌, ಅಧ್ಯಕ್ಷ, ನೇಕಾರರ ಹಿತರಕ್ಷಣಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.