ADVERTISEMENT

ಉತ್ಸವಕ್ಕೆ ಕೈಬೀಸಿ ಕರೆಯುತ್ತಿದೆ ಹಂಪಿ: ಕಲ್ಲು ಕಲ್ಲಿನಲ್ಲಿ ಆಲಿಸಿ ಪಿಸುನುಡಿ..

ಎಂ.ಜಿ.ಬಾಲಕೃಷ್ಣ
Published 12 ಫೆಬ್ರುವರಿ 2026, 23:30 IST
Last Updated 12 ಫೆಬ್ರುವರಿ 2026, 23:30 IST
   

ಹಂಪಿ ಎಂದೊದನೆ ನೆನಪಿಗೆ ಬರುವುದು ವಿರೂಪಾಕ್ಷ ದೇವಾಲಯ, ಬಂಡೆಗಳು, ಸ್ಮಾರಕಗಳು, ಕಲ್ಲಿನ ರಥ, ಸಂಗೀತ ಮಂಟಪ, ಕಲ್ಲಿನ ಸಾಲು ಮಂಟಪಗಳು ಹಾಗೂ ಸದಾ ಝುಳು ಝುಳು ಹರಿಯುವ ತುಂಗಭದ್ರಾ ನದಿ. ವಿಶ್ವದ ಅತಿ ದೊಡ್ಡ ಬಯಲು ವಸ್ತುಸಂಗ್ರಹಾಲಯ ಎಂದೇ ಈ ತಾಣಕ್ಕೆ ಹೆಸರು. ಏಕೆಂದರೆ ಸುಮಾರು 42 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮನಮೋಹಕ ಸ್ಮಾರಕಗಳು ಇಲ್ಲಿವೆ. ಆದಿಮಾನವರ ವಾಸಸ್ಥಳವೂ ಇದಾಗಿತ್ತು. ರಾಮಾಯಣ ಕಾಲದ ಕುರುಹುಗಳೂ ಇಲ್ಲಿವೆ. ವಿಜಯನಗರ ಸಾಮ್ರಾಜ್ಯಕ್ಕಿಂತ ಮೊದಲು ಆಡಳಿತ ನಡೆಸಿದ ರಾಜರ ಕೊಡುಗೆಗಳು, ವಿಜಯನಗರ ಸಾಮ್ರಾಜ್ಯದ ವೈಭವಗಳೆಲ್ಲ ಈಗಲೂ ಸ್ಮಾರಕಗಳ ರೂಪದಲ್ಲಿ ನಮ್ಮ ಮುಂದಿವೆ. ಈ ನೆಲದಲ್ಲಿ ಆಗಿ ಹೋಗಿದ್ದ ಅಮೋಘ ಘಟನಾವಳಿಗಳು, ಕಲೆ, ಸಂಸ್ಕೃತಿಗೆ ನೀಡಿದ ಕೊಡುಗೆಗಳನ್ನು ಮತ್ತೆ ನೆನಪಿಸುವ ನಿಟ್ಟಿನಲ್ಲಿ ಬಂದಿದೆ ಹಂಪಿ ಉತ್ಸವ. ಫೆಬ್ರುವರಿ 13, 14 ಮತ್ತು 15ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಷಾಂತರ ಜನರ ಮನರಂಜಿಸಲಿವೆ.

ಏಳು ಶತಮಾನಗಳ ಹಿಂದೆ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾಗಿದ್ದ ವಿದ್ಯಾರಣ್ಯರ ಪ್ರೇರಣೆಯಿಂದ ಹಕ್ಕ ಬುಕ್ಕರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯ ಭಾರತ ಮಾತ್ರವಲ್ಲ, ಇಡೀ ಜಗತ್ತೇ ಬೆರಗಾಗಿ ನೋಡಿದಂತಹ ಶ್ರೀಮಂತಿಕೆಯ ತಾಣವಾಗಿತ್ತು, ಅಂತಹ ವೈಭವದ ಸಾಮ್ರಾಜ್ಯದ ರಾಜಧಾನಿಯೇ ಹಂಪಿ. ಕ್ರಿ.ಶ.1336ರಿಂದ 1680ರವರೆಗೆ ಅನೇಕ ಅರಸರು ಇಲ್ಲಿನ ನೆಲ-ಜಲ, ಕಲೆ, ಸಂಸ್ಕೃತಿಯನ್ನು ಪೋಷಿಸುತ್ತ, ವೈಭವದಿಂದ ಮೆರೆದ ಕುರುಹುಗಳು ಸಿಗುವುದು ಅಳಿದುಳಿದ ಸ್ಮಾರಕಗಳ ಮೂಲಕ. 

ಇಂತಹ ಸ್ಮಾರಕಗಳ ನಡುವಲ್ಲೇ 39 ವರ್ಷಗಳ ಹಿಂದೆ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರು ಹಂಪಿ ಉತ್ಸವದ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಅದು ಇಂದು ಬಹಳ ದೊಡ್ಡದಾಗಿ ಬೆಳೆದಿದೆ. ಐದು ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ಆನೆಲಾಯ ಪ್ರದೇಶದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಇಲ್ಲಿಗೆ ಬರುತ್ತಾರೆ. 

ADVERTISEMENT

ಹಂಪಿ ಉತ್ಸವಕ್ಕೆ 39 ವರ್ಷದ ಇತಿಹಾಸವಿದ್ದರೂ ನಡುವೆ 10 ವರ್ಷ ವಿವಿಧ ಕಾರಣಗಳಿಂದ ಉತ್ಸವ ನಡೆದಿಲ್ಲ. ಹೀಗಾಗಿ ಫೆಬ್ರುವರಿ 13ರಿಂದ 15ರವರೆಗೆ ನಡೆಯಲಿರುವ ಈ ಬಾರಿಯ ಹಂಪಿ ಉತ್ಸವ 29ನೆಯದು. ಎಂ.ಪಿ.ಪ್ರಕಾಶ್ ಅವರ ಸ್ವತಃ ಕಲಾವಿದರು, ಕಲಾ ಪೋಷಕರು. ಹಂಪಿ ಏಕೆ ಜಗದ್ವಿಖ್ಯಾತವಾಯಿತು ಎಂಬುದನ್ನು ಸ್ಪಷ್ಟವಾಗಿ ಗುರುತಿಸಿದವರು. ಹೀಗಾಗಿ ಇಲ್ಲಿ ಎಂತಹ ಕಾರ್ಯಕ್ರಮಗಳನ್ನು ಸಂಘಟಿಸಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಎಂತಹ ಕಾರ್ಯಕ್ರಮಗಳು ಇರಬೇಕು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರು. ಹೀಗಾಗಿ ಬಹಳ ವರ್ಷ ಹಂಪಿ ಉತ್ಸವ ಎಂದರೆ ಅದೊಂದು ಮನಸ್ಸಿಗೆ ಮುದ ನೀಡುವ ಸಾಂಸ್ಕೃತಿಕ ರಸದೌತಣವಾಗಿತ್ತು. ಇಂದು ಅದಕ್ಕಿಂತ ಹೆಚ್ಚೇ ಜನಪ್ರಿಯವಾಗಿದೆ, ಜನರನ್ನು ಸೆಳೆಯುತ್ತಿದೆ, ಆದರೆ ಹಿಂದೆ ಇದ್ದ ಶಾಸ್ತ್ರೀಯ ಹಾಡು, ನೃತ್ಯ ಪ್ರಕಾರಗಳು ವಿರಳವಾಗತೊಡಗಿವೆ. ಆ ಜಾಗವನ್ನು ಸಿನಿಮಾ ನಟರು, ಗಾಯಕರು ತುಂಬಿಕೊಂಡಿದ್ದಾರೆ. ಜನ ಬಯಸುವುದನ್ನು ನೀಡುತ್ತೇವೆ ಎಂದು ಸರ್ಕಾರ, ಅಧಿಕಾರಿಗಳು ಹೇಳುತ್ತಿದ್ದರೂ, ಹಂಪಿಯ ಭವ್ಯ ಇತಿಹಾಸ, ಪರಂಪರೆಗಳನ್ನು ನೆನಪಿಸಿಕೊಂಡಾಗ ನಾವು ಎಲ್ಲೋ ದಾರಿ ತಪ್ಪಿ ನಡೆಯುತ್ತಿದ್ದೇವೆಯೋ ಎಂಬ ಭಾವನೆಯೂ ಮೂಡತೊಡಗಿದೆ.

ಹಂಪಿಯ ವಿಶೇಷತೆ ಇರುವುದೇ ವಿಜಯನಗರ ಅರಸರು ಆಳ್ವಿಕೆ ಮಾಡಿದ ಬಗೆಯಲ್ಲಿ. ವಿರೂಪಾಕ್ಷನ ಹೆಸರಲ್ಲೇ ಆಡಳಿತ, ಅವನ ಹೆಸರಲ್ಲೇ ಸಾಹಿತ್ಯ ರಚನೆಯಂತಹ ಅತ್ಯಂತ ಅಪರೂಪದ ಪ್ರಸಂಗಗಳ ನೆಲೆಯಾಗಿತ್ತು ಹಂಪಿ. ಇದು ಮಾತಂಗ ಕವಿಯ ಊರು. ಐದನೇ ಶತಮಾನದಲ್ಲಿ ಆತ ರಚಿಸಿದ ಸಂಗೀತಶಾಸ್ತ್ರ ಕುರಿತಾದ ‘ಬೃಹದ್ದೇಶಿ’ ಕೃತಿಯಿಂದ ತೊಡಗಿ ಕನಕ, ಪುರಂದರ ದಾಸರ ದಾಸಸಾಹಿತ್ಯದವರೆಗೆ, ಹರಿಹರನ ರಗಳೆಯಿಂದ ತೊಡಗಿ ನೂರಾರು ವಿರಕ್ತರಿಂದ ವಚನ ಸಾಹಿತ್ಯದ ಸಂರಕ್ಷಣೆವರೆಗೆ ಹಂಪಿ ಎಂಬುದು ವಿಶಿಷ್ಟ ರೀತಿಯಲ್ಲಿ ಸಾಹಿತ್ಯವನ್ನು ಪೋಷಿಸಿದ ನೆಲವಾಗಿತ್ತು. ಸಾವಿರಾರು ಕವಿಗಳು, ಸಾಹಿತಿಗಳು, ವಚನಕಾರರು, ದಾಸವರೇಣ್ಯರು ಓಡಾಡಿದ ಈ ನೆಲದಲ್ಲಿ ಹಂಪಿ ಉತ್ಸವ ನಡೆಸುವುದಕ್ಕೆ ವಿಶೇಷ ಮಹತ್ವ ಇದ್ದೇ ಇದೆ.

ಉತ್ಸವದ ಇತಿಹಾಸ: 

1986ರಲ್ಲಿ ಹಂಪಿ ‘ಯುನೆಸ್ಕೊ’ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಯಿತು. ಬಳಿಕ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರಲಾರಂಭಿಸಿದರು. ಆಗ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಇತ್ತು. ಎಂ.ಪಿ.ಪ್ರಕಾಶ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು.1987ರಲ್ಲಿ ಎಂ.ಪಿ.ಪ್ರಕಾಶ್ ಅವರು ‘ಕನಕ ಪುರಂದರ ಉತ್ಸವ’ ಹೆಸರಿನಲ್ಲಿ ಹಂಪಿ ಉತ್ಸವಕ್ಕೆ ಮುನ್ನುಡಿ ಬರೆದರು.

ಜಿಲ್ಲಾ ಮಟ್ಟದಲ್ಲಿ ಆರಂಭಿಸಿದ ಉತ್ಸವ ಮರು ವರ್ಷ ‘ವಿಜಯನಗರ ವೈಭವ’ ಹೆಸರಲ್ಲಿ ಆಚರಣೆಗೆ ಸಜ್ಜಾಗಿತ್ತು. ಅದ್ಧೂರಿಯಾಗಿ ಉತ್ಸವದ ಉದ್ಘಾಟನೆಯೂ ನಡೆದಿತ್ತು. ಕೆಲ ಗಂಟೆಗಳಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್‌ ಅವರ ನಿಧನದ ಕಾರಣ ಉತ್ಸವ ರದ್ದುಗೊಂಡಿತು.

1989ರಿಂದ 1993ರವರೆಗೆ ನಾನಾ ಕಾರಣಗಳಿಗಾಗಿ ಹಂಪಿ ಉತ್ಸವ ನಡೆಯಲಿಲ್ಲ. 1994ರಲ್ಲಿ ಜನತಾದಳ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಂಪಿ ಉತ್ಸವಕ್ಕೆ ಮರುಜೀವ ಸಿಕ್ಕಿತು. ಬಜೆಟ್‌ನಲ್ಲೇ ಅನುದಾನ ಒದಗಿಸಲಾಯಿತು. ಪ್ರತಿ ವರ್ಷ ನವೆಂಬರ್‌ 3, 4 ಮತ್ತು 5ನೇ ತಾರೀಖಿಗೆ ಉತ್ಸವ ನಿಗದಿಪಡಿಸಿ ರಾಜ್ಯಪತ್ರವನ್ನೂ ಹೊರಡಿಸಲಾಯಿತು. ಆಗ ನಡೆಯುತ್ತಿದ್ದ ಹಂಪಿ ಉತ್ಸವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ದೇಶ, ವಿದೇಶದ ಕಲಾವಿದರನ್ನು, ಅಲ್ಲಿನ ಕಲೆ, ಸಂಸ್ಕೃತಿಯನ್ನು ಹಂಪಿಯಲ್ಲೇ ನೋಡಿ ಆನಂದಿಸುವುದು ಸಾಧ್ಯವಿತ್ತು ಎಂದು ಈಗಲೂ ಹೇಳುತ್ತಿದ್ದಾರೆ ಹಿರಿಯ ಕಲಾ ರಸಿಕರು.

2008ರಿಂದ ಹಂಪಿ ಉತ್ಸವಕ್ಕೆ ಹೊಸ ಆಯಾಮ ಸಿಕ್ಕಿತು. ಸಿನಿಮಾ ನಟ ನಟಿಯರಿಗೆ, ಗಾಯಕ, ಗಾಯಕಿಯರಿಗೆ ಹೆಚ್ಚಿನ ಮಹತ್ವ ಸಿಗತೊಡಗಿತು. ಶಾಸ್ತ್ರೀಯ ಹಾಡು, ನೃತ್ಯಗಳು ಸ್ವಲ್ಪಮಟ್ಟಿಗೆ ಮೂಲೆಗುಂಪಾದವು. ಮುಖ್ಯ ವೇದಿಕೆಯಲ್ಲಿ ಸಿನಿಮಾ ನಟ, ನಟಿಯರು, ಗಾಯಕ, ಗಾಯಕರಿಗೆ ಲಕ್ಷ ಲಕ್ಷ ಪ್ರೇಕ್ಷಕರು, ಉಳಿದ ನಾಲ್ಕೈದು ವೇದಿಕೆಗಳಲ್ಲಿ ಕಲಾವಿದರು ಖಾಲಿ ಕುರ್ಚಿಗಳಿಗೆ ತಮ್ಮ ಪ್ರದರ್ಶನ ತೋರಿಸುವ ಅನಿವಾರ್ಯತೆ ಎದುರಾಯಿತು.

ಕೆಲವೊಂದು ಬಾರಿ ಅಧಿಕಾರಿಗಳ, ರಾಜಕಾರಣಿಗಳ ಪ್ರಚಾರದ ಉತ್ಸವವಾಗಿಯೂ ಬದಲಾದುದು ಇದೆ. ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ ಜಗತ್ತಿನ ಗಮನಸೆಳೆಯುವ ನಿಟ್ಟಿನಲ್ಲಿ 2010ರ ಜ.27ರಿಂದ 29ರವರೆಗೆ ಅದ್ದೂರಿ ಉತ್ಸವವನ್ನು ಆಚರಿಸಿದರು. ಅಲ್ಲಿಂದೀಚೆಗೆ ಹಂಪಿ ಉತ್ಸವಕ್ಕೆ ಜನ  ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ರಾಷ್ಟ್ರ, ಅಂತರರಾಷ್ಟ್ರೀಯ ಖ್ಯಾತಿಯ ಶಾಸ್ತ್ರೀಯ ನೃತ್ಯ, ಹಾಡುಗಾರರನ್ನು ಕರೆಸುವುದು ಕಡಿಮೆಯಾಗಿದೆ, ಅವರ ಜಾಗವನ್ನು ಸಿನಿಮಾ ನಟರು, ಗಾಯಕರು ಆಕ್ರಮಿಸಿಕೊಂಡಿದ್ದಾರೆ.

ಡ್ರೋನ್‌ ಶೋ ವಿಶೇಷ

ಈ ಬಾರಿಯ ಹಂಪಿ ಉತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಡ್ರೋನ್‌ ಶೋ ಮೂಲಕ ಹಂಪಿಯ ಗತವೈಭವವನ್ನು ಆಗಸದಲ್ಲಿ ತೋರಿಸುವ ಪ್ರಯತ್ನ ನಡೆಯಲಿದೆ. ಮುಖ್ಯ ವೇದಿಕೆಯಾದ ಗಾಯತ್ರಿ ಪೀಠ ಸಮೀಪದ ಎಂ.ಪಿ.ಪ್ರಕಾಶ್ ವೇದಿಕೆ ಬಳಿ ಒಂದು ಸಾವಿರ ಡ್ರೋನ್‌ಗಳು ವಿಜಯನಗರ ಸಾಮ್ರಾಜ್ಯದ ವೈಭವವನ್ನು ಡ್ರೋನ್‌ಗಳು ಹಾಯಿಸುವ  ಬೆಳಕಿನ ಕಿರಣಗಳ ಮೂಲಕ ಆಗಸದಲ್ಲಿ ಬಿಂಬಿಸುವ ಕಾರ್ಯ ನಡೆಯಲಿದೆ. ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ ದೇವಸ್ಥಾನದ ಕಲ್ಲಿನ ರಥ, ಸಂಗೀತ ಮಂಟಪ, ಕೃಷ್ಣದೇವರಾಯ ಸಹಿತ ಹಲವು ದೃಶ್ಯಗಳು ಮೂಡಿಬರಲಿದೆ. ಮೂರೂ ದಿನ ಸುಮಾರು 15 ನಿಮಿಷಗಳ ಕಾಲ ಈ ಪ್ರದರ್ಶನ ಸಂಜೆ 7 ಗಂಟೆ ಸುಮಾರಿಗೆ ನಡೆಯಲಿದೆ. 

ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಬಾರಿ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಅದು ಫೆ.14ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ. ಸಾಹಸ ಕ್ರೀಡೆಗಳ ಪೈಕಿ ಪವರ್‌ಲಿಫ್ಟಿಂಗ್ ಸ್ಪರ್ಧೆಯನ್ನು ಈ ಬಾರಿ ಅಳವಡಿಸಲಾಗಿದೆ. 

ಹಂಪಿ ಉತ್ಸವದಲ್ಲಿ ಪ್ರತಿ ವರ್ಷ ನಡೆಯುವ ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ಜಾನಪದ ಕಲಾತಂಡಗಳ ಮೆರವಣಿಗೆ ವೈಭವ, ವಿಚಾರಗೋಷ್ಠಿ, ಕವಿಗೋಷ್ಠಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ಕರಕುಶಲ ಪ್ರದರ್ಶನ, ಗ್ರಾಮೀಣ ಕ್ರೀಡೆಗಳು, ಕುಸ್ತಿ, ಜಲಸಾಹಸ ಕ್ರೀಡೆಗಳು, ಕುರಿ ಪ್ರದರ್ಶನ, ಎತ್ತು ಪ್ರದರ್ಶನಗಳೆಲ್ಲ ಈ ಬಾರಿಯೂ ಇವೆ. ಹೆಲಿಕಾಪ್ಟರ್‌ ಮೂಲಕ ಹಂಪಿಯ ಸೊಬಗನ್ನು ಉಣಬಡಿಸುವ ‘ಹಂಪಿ ಬೈ ಸ್ಕೈ’ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ.

‘ವಿಜಯನಗರ ವೈಭವ’ವನ್ನು ಬಿಂಬಿಸುವ ‘ಧ್ವನಿ ಬೆಳಕು’ ಕಾರ್ಯಕ್ರಮ ಆನೆಲಾಯ ಪ್ರದೇಶದಲ್ಲಿ ಫೆ.13ರಂದು ಸಂಜೆ ಆರಂಭವಾಗಲಿದೆ. ಸುಮಾರು ಎರಡು ಗಂಟೆಗಳ ಪ್ರದರ್ಶನ ಒಂದು ವಾರ ಕಾಲ ಸಂಜೆ ಹೊತ್ತಲ್ಲಿ ನಡೆಯಲಿದೆ. ಸುಮಾರು 115 ಕಲಾವಿದರನ್ನು ಒಳಗೊಂಡ ಈ ಪ್ರದರ್ಶನ ವಿಜಯನಗರ ಸಾಮ್ರಾಜ್ಯದ ಆರಂಭ, ವೈಭವ, ಪತನದ ತನಕ ಸಮಗ್ರ  ಮಾಹಿತಿಯನ್ನು ನಟನೆ, ಬೆಳಕು, ಧ್ವನಿಯ ಮೂಲಕ ಕಟ್ಟಿಕೊಡುತ್ತದೆ.

ಹಂಪಿಗೆ ಏಕೆ ಬರಬೇಕು? ಅಲ್ಲಿ ಈಗೇನು ಉಳಿದಿದೆ ವಿಶೇಷ ಎಂದು ಕೆಲವರಾದರೂ ಕೇಳಬಹುದು. ಅದಕ್ಕೆ ನಾವು ಇತಿಹಾಸವನ್ನು ಸ್ವಲ್ಪ ತಿಳಿಯುವ, ಮನನ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಹಂಪಿಯ ಅಳಿದುಳಿದ ಶಾಸನ, ನಾಣ್ಯ, ಸ್ಮಾರಕಗಳು ಮತ್ತು ವಿದೇಶಿಯರಾದ ಅಬ್ದುಲ್ ರಜಾಕ್, ಡೊಮಿಂಗೋ ಪೆಯಾಸ್, ಬಾರ್ಬೋಸಾ, ನ್ಯೂನಿಜ್ ಮತ್ತಿತರ ಪ್ರವಾಸಿಗರು ದಾಖಲಿಸಿದ ಬರವಣಿಗೆಗಳು ವಿಜಯನಗರದ ವೈಭವಕ್ಕೆ ಕನ್ನಡಿ ಹಿಡಿಯುತ್ತದೆ. ಈ ಬಗೆಯ ವೈವಿಧ್ಯಮಯ ಚಾರಿತ್ರಿಕ ಕುರುಹುಗಳು, ನಿಸರ್ಗದತ್ತ ಚೆಲುವನ್ನು ಹೊಂದಿದ ಬೆಟ್ಟಗುಡ್ಡ, ಕಣಿವೆ, ನದಿಕೊಳ್ಳಗಳು, ಪ್ರಾಣಿಪಕ್ಷಿ, ಗಿಡಮರಗಳನ್ನು ಒಂದೇ ಕಡೆ ನೋಡಲು ಸಾಧ್ಯವಾಗುವುದಿಲ್ಲ. ಅದುವೇ ಹಂಪಿಯ ವಿಶೇಷತೆ. ಹೀಗಾಗಿ ಹಂಪಿ ಉತ್ಸವದ ನೆಪದಲ್ಲಾದರೂ ಇಲ್ಲಿಗೆ ಬನ್ನಿ, ಇಲ್ಲಿನ ಸ್ಮಾರಕಗಳ ಸೌಂದರ್ಯ ಸವಿಯಿರಿ, ವಿಜಯನಗರ ಅರಸರ ಕಾಲದ ವೈಭವವನ್ನು ಕಣ್ತುಂಬಿಕೊಳ್ಳುವ ಪ್ರಯತ್ನ ಮಾಡಿ ಎಂಬ ಸಂದೇಶವನ್ನು ಹಂಪಿ ಉತ್ಸವ ಸೂಚ್ಯವಾಗಿಯೇ ನೀಡುತ್ತಿದೆ.

ಹಂಪಿ ಉತ್ಸವ ಉದ್ಘಾಟನೆ ಸಮಾರಂಭ

ಎಂ.ಪಿ.ಪ್ರಕಾಶ್ ವೇದಿಕೆ

ಉದ್ಘಾಟನಾ ಸಮಾರಂಭ ದಿನಾಂಕ 13-2-2026
ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಸ್ಥಿತಿ: ಡಿಸಿಎಂ ಡಿ.ಕೆ.ಶಿವಕುಮಾರ್‌, ಗೌರವ ಉಪಸ್ಥಿತಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹಮದ್ ಖಾನ್,  ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌.ತಂಗಡಗಿ ಅಧ್ಯಕ್ಷತೆ: ಶಾಸಕ ಎಚ್.ಆರ್.ಗವಿಯಪ್ಪ. ಸಮಯ: ಸಂಜೆ 7 ಗಂಟೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

  • ಸಂಜೆ 4:00 ಶಾಹಾನಯಿ ವಾದನ, ಬಸವರಾಜ ಭಜಂತ್ರಿ ಮತ್ತು ತಂಡ, ಹಾವೇರಿ

  • 4:15 ಗೀತ ಗಾಯನ, ವಾತ್ಸಲ್ಯ ಟ್ರಸ್ಟ್ ಮತ್ತು ತಂಡ, ಹೊಸಪೇಟೆ

  • 4:30 ಸಮೂಹ ನೃತ್ಯ, ಮಂಜುಳಾ ಪರಮೇಶ್ ಮತ್ತು ತಂಡ, ಬೆಂಗಳೂರು

  • 4:45 ಗಾಯನ, ನೀರಲಿಗಿ ಮಂಜುನಾಥ ಮತ್ತು ದಿವ್ಯಶ್ರೀ, ಕೆಂಬಾವಿಮಠ (ರೈಟ್ ಮ್ಯೂಸಿಕ್), ಹೊಸಪೇಟೆ

  • 5:00 ಸಮೂಹ ನೃತ್ಯ ರೂಪಕ, ನಾಟ್ಯಂಕುರ ಪರ್ಫಾಮಿಂಗ್ ಆರ್ಟಿಸ್ಟ್, ಬೆಂಗಳೂರು

  • 5:15 ಜಾನಪದ ಹಬ್ಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಕಲಾವಿದರು

  • 6:00 ಸೂಪಿ ಗಾಯನ, ನಿಜಾಮ್ ಬಂದು

  • 6:30 ನೃತ್ಯ ರೂಪಕ, ಅನುರಾಧ ವಿಕ್ರಾಂತ್ ಮತ್ತು ತಂಡ, ಬೆಂಗಳೂರು

  • 7:00 ಉದ್ಘಾಟನಾ ಸಮಾರಂಭ

  • ರಾತ್ರಿ 8:00 ಮಿಮಿಕ್ರಿ, ಗೋಪಿ ಮತ್ತು ತಂಡ, ಬೆಂಗಳೂರು

  • 8:30 ನೃತ್ಯ ವೈಭವ, ಸಿಜ್ಲರ್ ತಂಡ, ಬೆಂಗಳೂರು

  • 8:45ಬ್ಯಾಂಬೂ ಪ್ಯೂಷನ್, ಕೇರಳ ಕಲಾತಂಡ

  • 9:30 ನೃತ್ಯ, ಸಂಜನಾ ಆನಂದ್ ಮತ್ತು ತಂಡ, ಬೆಂಗಳೂರು

  • 9:45 ನೃತ್ಯ, ಮಾನ್ವಿತಾ ಹರೀಶ್ ಮತ್ತು ತಂಡ, ಬೆಂಗಳೂರು

  • 10:15 ರಸಮಂಜರಿ ಖ್ಯಾತ ಬಾಲಿವುಡ್ ಗಾಯಕ ಹರಿಹರನ್ ಮತ್ತು ತಂಡ

  • 11:30 ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮತ್ತು ತಂಡ, ಬೆಂಗಳೂರು

ಎಂ.ಪಿ.ಪ್ರಕಾಶ್ ವೇದಿಕೆ 14-02-2026

  • 4.00 ಸುಗಮ ಸಂಗೀತ, ಎಸ್.ಪಾಂಡುನಾಯಕ, ತಾಳೇಬಸಾಪುರ ತಾಂಡಾ, ಹೊಸಪೇಟೆ

  • 4:15 ಯಕ್ಷಗಾನ ನೃತ್ಯ ರೂಪಕ ಸಹನ ಸಿ. ಮತ್ತು ತಂಡ, ಅಡುಗೋಡಿ, ಬೆಂಗಳೂರು

  • 4:30 ಭರತನಾಟ್ಯ ಪ್ರದರ್ಶನ ಸಿ.ಎನ್. ರಾಜನ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್, ಬೆಂಗಳೂರು

  • 4:45 ರಾಮಾಯಣ ದೃಶ್ಯಾವಳಿ, ಅಲೆಮಾರಿ ಬುಡ್ಗ ಜಂಗಮ ಕಲಾವಿದರು, ಹೊಸಪೇಟೆ

  • 5:00 ಗೀತ ಗಾಯನ ಎಚ್. ಜನಾರ್ದನ್‌ (ಜನ್ನಿ) ಮತ್ತು ತಂಡ, ಮೈಸೂರು

  • 5:15 ದಾಸರ ಪದಗಳ ಗಾಯನ, ಸವಿತಾ ಅಮರೇಶ್ ಮತ್ತು ತಂಡ, ಹೊಸಪೇಟೆ

  • 5:30 ಸಮೂಹ ಭರತನಾಟ್ಯ, ವಿದುಷಿ ಹೇಮಾ ವಾಗ್ಮೋಡೆ ಮತ್ತು ತಂಡ, ಹುಬ್ಬಳ್ಳಿ

  • 6:00 ಗಾನ ವೈಭವ, ಸಂಗೀತ ಕಟ್ಟಿ ಮತ್ತು ತಂಡ, ಬೆಂಗಳೂರು

  • 6:30 ಹಿಂದೂಸ್ತಾನಿ ಗಾಯನ, ಪಂಡಿತ್ ಉದಯ್ ಕುಮಾರ್ ಮಲ್ಲಿಕ್ ಮತ್ತು ತಂಡ, ದೆಹಲಿ

  • 7:00 ಗಂಟೆಯಿಂದ 2ನೇ ದಿನದ ಕಾರ್ಯಕ್ರಮದ ಉದ್ಘಾಟನೆ

  • 7:30 ಮ್ಯೂಸಿಕ್ ಪ್ಯೂಷನ್, ಚಂಡೆ ಮತ್ತು ವೈಲಿನ್ ತಂಡ, ಬೆಂಗಳೂರು

  • 8:00, ಜಾನಪದ ಗೀತೆ, ಸಾದ್ವಿನ್ ಕೊಪ್ಪ ಮತ್ತು ತಂಡ, ಬೆಂಗಳೂರು

  • ರಾತ್ರಿ 8:00 ನೃತ್ಯ, ಸಪ್ತಮಿ ಗೌಡ ಮತ್ತು ತಂಡ, ಬೆಂಗಳೂರು

  • 8:45 ರಸಮಂಜರಿ ಆಲ್ ಓಕೆ ಮತ್ತು ತಂಡ, ಬೆಂಗಳೂರು

  • 9:30 ಹೆಸರಾಂತ ಗಾಯಕ ನವೀನ್ ಸಜ್ಜು ಮತ್ತು ತಂಡ, ಬೆಂಗಳೂರು

  • 11:00 ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತು ತಂಡ, ಬೆಂಗಳೂರು


    ಎಂ.ಪಿ.ಪ್ರಕಾಶ್ ವೇದಿಕೆ 15-02-2026

  • ಸಂಜೆ 4:00 ಸುಗಮ ಸಂಗೀತ ಎ. ತಿಮ್ಮಪ್ಪ ಮತ್ತು ತಂಡ, ಕೂಡ್ಲಿಗಿ

  • 4:15 ಕಥಕ್ ನೃತ್ಯ , ವರ್ಣಿಕಾ ಶಾನಭೋಗರ, ಹೊಳಗುಂದಿ

  • 4:30 ಸಮೂಹ ನೃತ್ಯ ನಿಖಿತಾ ಮತ್ತು ತಂಡ, ಹೊಸಪೇಟೆ

  • 4.45 ಗೀತೆ ಗಾಯನ ಶ್ರೀಇಂಚರ ಪ್ರವೀಣ್ ಕುಮಾರ್ ಮತ್ತು ತಂಡ, ರಾಮೋಹಳ್ಳಿ, ಬೆಂಗಳೂರು

  • 5:00 ಭರತನಾಟ್ಯ, ಚಂದನ ಎಂ.ಎನ್.ಎಸ್ ಮತ್ತು ತಂಡ, ಮೈಸೂರು

  • 5:15 ಜಾನಪದ ಗಾಯನ ಮೆಹಬೂಬ್ ಕಿಲ್ಲೇದಾರ ಮತ್ತು ತಂಡ, ಕಾರಟಗಿ, ಕೊಪ್ಪಳ

  • 5:30 ಮೋಹಿನಿಯಾಟ್ಟಂ ಕೆ. ಭೈರವಿ ಮತ್ತು ತಂಡ, ಬೆಂಗಳೂರು

  • 5:45 ತತ್ವಪದ ಗಾಯನ ಶ್ರೀ ವೀರಭದ್ರಯ್ಯ ಸ್ಥಾವರಮಠ, ಕಲಬುರ್ಗಿ

  • 6:00 ನೃತ್ಯ ರೂಪಕ, ಪವಿತ್ರ ಮತ್ತು ತಂಡ, ಬೆಂಗಳೂರು

  • 6:30 ನೃತ್ಯ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ತಂಡ, ಬೆಂಗಳೂರು

  • 7:00 ಸಮಾರೋಪ ಸಮಾರಂಭ

  • 7:30 ಸ್ಟ್ಯಾಂಡಿಂಗ್ ಕಾಮಿಡಿ ರಾಘವೇಂದ್ರ ಆಚಾರ್, ಬೆಂಗಳೂರು

  • ರಾತ್ರಿ 8:00 ಬಾಲಿವುಡ್ ನೃತ್ಯ ಎಕ್ಸ್‍ಎನ್‍ಎಕ್ಸ್ ನೃತ್ಯ ತಂಡ

  • 8:30 ಹಾಸ್ಯ, ಕಾಂತರಾ ತಂಡದ ಕಲಾವಿದರು

  • 9:00 ರಸಮಂಜರಿ ಹೆಸರಾಂತ ಹಿನ್ನೆಲೆ ಗಾಯಕ ಮಣಿಕಾಂತ್ ಕದ್ರಿ ಮತ್ತು ತಂಡ

  • 10:00 ಹೆಸರಾಂತ ಹಿನ್ನೆಲೆ ಗಾಯಕಿ ಮಂಗ್ಲಿ ಮತ್ತು ತಂಡ

  • 11:15 ರಸಮಂಜರಿ, ಖ್ಯಾತ ಗಾಯಕ ರಘು ದೀಕ್ಷಿತ್ ಮತ್ತು ತಂಡ

ಇತರ ವೇದಿಕೆಗಳು

ಎದುರುಬಸವಣ್ಣ ವೇದಿಕೆಗೆ ಶ್ರೀಕೃಷ್ಣದೇವರಾಯ ವೇದಿಕೆ ಎಂಬ ಹೆಸರು ಇಡಲಾಗಿದೆ. ವಿರೂಪಾಕ್ಷ ದೇವಸ್ಥಾನದ ಆವರದಲ್ಲಿ ಶ್ರೀ ವಿರೂಪಾಕ್ಷೇಶ್ವರ ವೇದಿಕೆ ನಿರ್ಮಿಸಲಾಗಿದೆ. ಸಾಸಿವೆಕಾಳು ಗಣಪ ವೇದಿಕೆ ನಿರ್ಮಾಣವಾಗಿದ್ದು, ಮಹಾನವಮಿ ದಿಬ್ಬದ ಬಳಿ ವಿದ್ಯಾರಣ್ಯ ವೇದಿಕೆ ನಿರ್ಮಿಸಲಾಗಿದೆ. ಈ ನಾಲ್ಕೂ ವೇದಿಕೆಗಳಲ್ಲಿ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 4ರಿಂದ ಮಧ್ಯರಾತ್ರಿಯವರೆಗೆ ನಡೆಯಲಿವೆ. ಆನೆಲಾಯ ಪ್ರದೇಶದಲ್ಲಿ ‘ವಿಜಯನಗರ ವೈಭವ ಧ್ವನಿ ಮತ್ತು ಬೆಳಕು’ ಕಾರ್ಯಕ್ರಮ ಫೆ.13ರಿಂದ ಒಂದು ವಾರ ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.