
ಪಕ್ಕದ ಕೊಡಗು ಜಿಲ್ಲೆಯಲ್ಲಿ ಹಾಸನ ಜಿಲ್ಲೆಗೆ ಬಂದಿರುವ ದೈತ್ಯಾಕಾರದ ಕಾಡಾನೆ
ಕಾಡಾನೆ ದಾಳಿಗೆ ಇದುವರೆಗೆ 90 ಜನರ ಬಲಿ| ಜಿಲ್ಲೆಯಲ್ಲಿ 35–40 ಕಾಡಾನೆ, ಮರಿಗಳ ಸಾವು
ಹಾಸನ: ಕಾಡಾನೆಗಳ ಸಮಸ್ಯೆಯಿಂದ ನಲುಗುತ್ತಿರುವ ಜಿಲ್ಲೆಯಲ್ಲಿ ಇದೀಗ ಅನ್ಯ ಜಿಲ್ಲೆಯ ಆನೆಗಳೂ ಪ್ರವೇಶ ಮಾಡುತ್ತಿದ್ದು, ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಒಂದು ತಿಂಗಳಲ್ಲಿ ಕೊಡಗು ಜಿಲ್ಲೆ, ಭದ್ರಾ ಅರಣ್ಯದಿಂದ 10 ರಿಂದ 12 ಕಾಡಾನೆಗಳು ಜಿಲ್ಲೆಯನ್ನು ಪ್ರವೇಶಿಸಿವೆ.
ಅರಣ್ಯ ಪ್ರದೇಶ ಕಿರಿದಾಗುತ್ತಿರುವುದು, ತಿನ್ನಲು ಆಹಾರ ಸಿಗದೇ ಇರುವುದು, ಜೊತೆಗೆ ವಲಸೆ ಸ್ವಭಾವದಿಂದಾಗಿ ಆನೆಗಳು ಅಲ್ಲಿಂದ ಇಲ್ಲಿಗೆ ಅಲೆಯುತ್ತಿವೆ. ಅದರಲ್ಲಿಯೂ ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಹೆಣ್ಣಾನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವುಗಳನ್ನು ಅರಸಿ ಅನ್ಯ ಜಿಲ್ಲೆಯ ಗಂಡಾನೆಗಳು ಜಿಲ್ಲೆಯನ್ನು ಪ್ರವೇಶಿಸುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದು ಆನೆ ಸದಾ ಸಂಚಾರ ಮಾಡುತ್ತಲೇ ಇರುತ್ತದೆ. ಒಂದು ಸಾವಿರ ಚದರ ಕಿ.ಮೀ.ನಲ್ಲಿ ಸುತ್ತಾಡುತ್ತದೆ. ಅಲ್ಲದೇ ನಿತ್ಯ 200–250 ಕೆ.ಜಿ. ಇಷ್ಟಪಡುವ ಆಹಾರ ಬೇಕು. ಕುಡಿಯುವುದಕ್ಕೆ ನೀರು ಬೇಕು. ಆದರೆ, ಸದ್ಯದ ಸ್ಥಿತಿಯಲ್ಲಿ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಆಹಾರ, ನೀರಿನ ಕೊರತೆ ಎದುರಾಗಿದ್ದು, ನಾಡಿನತ್ತ ಬರಲು ಪ್ರಮುಖ ಕಾರಣ ಎನ್ನುತ್ತಾರೆ ಪರಿಸರವಾದಿಗಳು.
ಸದ್ಯಕ್ಕೆ ಜಿಲ್ಲೆಯ ಬೇಲೂರು ಭಾಗದಲ್ಲಿ 60–70 ಕಾಡಾನೆಗಳಿವೆ. ಆಲೂರು ಭಾಗದಲ್ಲಿ 10, ಪಶ್ಚಿಮ ಘಟ್ಟದ ಯಸಳೂರು, ಬಿಸ್ಲೆ ಘಾಟ್ ಪ್ರದೇಶಗಳಲ್ಲಿ 100ಕ್ಕೂ ಅಧಿಕ ಆನೆಗಳಿವೆ. ಬೇಲೂರು ಭಾಗದ ಆನೆಗಳು ಕೆಲವೊಮ್ಮೆ ಚಿಕ್ಕಮಗಳೂರು ಜಿಲ್ಲೆಗೆ ಹೋಗುತ್ತಿದ್ದು, ಮತ್ತೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಗೆ ಮರಳುತ್ತವೆ. ಇನ್ನು ಯಸಳೂರು, ಬಿಸ್ಲೆ ಘಾಟ್ ಪ್ರದೇಶದ ಆನೆಗಳು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಚಾರ್ಮಾಡಿ, ಕೊಡಗು ಜಿಲ್ಲೆಗಳಲ್ಲಿ ಓಡಾಡುತ್ತಿವೆ.
ಆದರೆ, ಈ ಆನೆಗಳಿಗೆ ಎಲ್ಲಿಯೂ ಸಮರ್ಪಕವಾದ ಆಹಾರ ಸಿಗುತ್ತಿಲ್ಲ. ಹಾಗಾಗಿ ಗದ್ದೆ, ತೋಟಗಳಲ್ಲಿಯೇ ಬೀಡು ಬಿಟ್ಟಿವೆ. ಬೇಲೂರು ಭಾಗದ ಬಿಕ್ಕೋಡು, ಜಗಬೋರನಹಳ್ಳಿಯ ಸುತ್ತ ಮೆಕ್ಕೆಜೋಳ, ಭತ್ತ ಬೆಳೆದಿದ್ದು, ಬಹುತೇಕ ಆನೆಗಳು ಇದೇ ಭಾಗದಲ್ಲಿ ನೆಲೆ ನಿಂತಿವೆ. ರಾತ್ರಿ ಆಗುತ್ತಿದ್ದಂತೆಯೇ ತೋಟದಿಂದ ಹೊರಬರುವ ಆನೆಗಳು, ಬೆಳೆಗಳನ್ನು ತಿಂದು ಮತ್ತೆ ಕಾಫಿ ತೋಟಗಳಿಗೆ ಮರಳುತ್ತಿವೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಕಾರ್ಮಿಕರನ್ನು ಅಟ್ಟಾಡಿಸಿಕೊಂಡು ಬಂದ ಕಾಡಾನೆ
8 ಪುಂಡಾನೆಗಳ ಹಿಂಡು:
ಜಿಲ್ಲೆಯ ಬೇಲೂರ–ಸಕಲೇಶಪುರ ಭಾಗದಲ್ಲಿ 15–16 ವಯಸ್ಸಿನ 8 ಆನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಆಟೋಗಳು, ಮಾನವರ ಮೇಲೆ ದಾಳಿ ಮಾಡುತ್ತಿವೆ. ಈ ಆನೆಗಳು ಪಟಾಕಿ ಸೇರಿದಂತೆ ಯಾವುದೇ ಸದ್ದಿಗೆ ಹೆದರುತ್ತಿಲ್ಲ ಎನ್ನುವುದು ಅರಣ್ಯ ಇಲಾಖೆ ಸಿಬ್ಬಂದಿ ನೀಡುವ ಮಾಹಿತಿ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಜ.16 ರಂದು ಸಕಲೇಶಪುರದಲ್ಲಿ ಜನಸ್ಪಂದನಾ ಸಭೆ ಕರೆಯುವುದಾಗಿ ಹೇಳಿದ್ದಾರೆ. ಕಾಡಾನೆ ದಾಳಿಯಿಂದ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಭಾಗವಹಿಸಲಿದ್ದಾರೆ.ಸಿಮೆಂಟ್ ಮಂಜು, ಶಾಸಕ
ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರಿಗೆ ಮನವಿ ಮಾಡಲಾಗುವುದು.ಶ್ರೇಯಸ್ ಪಟೇಲ್, ಸಂಸದ
ಸೌರ ಬೇಲಿಯಿಂದ ಸಂಕಷ್ಟ
ಬಹುತೇಕ ದೊಡ್ಡ ಕಾಫಿ ಬೆಳೆಗಾರರು ತಮ್ಮ ತೋಟಗಳ ಸುತ್ತ ಸೌರ ವಿದ್ಯುತ್ ಬೇಲಿಗಳನ್ನು ಅಳವಡಿಸಿದ್ದು, ಆನೆಗಳು ಆ ತೋಟಗಳಿಗೆ ಹೋಗದಂತಾಗಿದೆ. ಎಲ್ಲೆಲ್ಲಿ ಸೌರ ವಿದ್ಯುತ್ ಬೇಲಿ ಅಳವಡಿಸಲಾಗಿದೆಯೋ ಅಲ್ಲಿಂದ ಹೊರಬರುವ ಆನೆಗಳು, ಸುರಕ್ಷಿತವಾಗಿರುವ ತೋಟಗಳಲ್ಲಿ ಆಶ್ರಯ ಪಡೆಯುತ್ತಿವೆ.
ಆನೆಗಳ ಹಿಂಡಿನಲ್ಲಿ ಹೆಣ್ಣಾನೆಗಳು, ಮರಿಯಾನೆಗಳೂ ಇವೆ. ಸೌರ ವಿದ್ಯುತ್ ಆಘಾತದಿಂದ ಇವುಗಳಿಗೆ ತೊಂದರೆ ಆಗುತ್ತಿದ್ದು, ಸುರಕ್ಷಿತ ತೋಟಗಳು, ಬಯಲು ಪ್ರದೇಶಗಳ ಜೊತೆಗೆ, ಜನವಸತಿ ಪ್ರದೇಶಗಳತ್ತಲೂ ಆನೆಗಳು ಬರುತ್ತಿವೆ ಎನ್ನುವುದು ಮಲೆನಾಡು ಭಾಗದ ಜನರ ಅಭಿಪ್ರಾಯ.
ಸಕಲೇಶಪುರ ತಾಲ್ಲೂಕಿನಲ್ಲಿ ಕಾರ್ಯಾಚರಣೆ ಮೂಲಕ ಪುಂಡಾನೆ ಸೆರೆ ಹಿಡಿದಿರುವುದು
ಹೆಣ್ಣಾನೆ ಅರಸಿ ಬರುವ ಗಂಡಾನೆಗಳು
‘ಆನೆಗಳು ಓಡಾಡುತ್ತಲೇ ಇರುವ ಪ್ರಾಣಿಗಳಾಗಿದ್ದು, ಆಹಾರ ಹುಡುಕುತ್ತ ನಾಡಿಗೆ ಬರುತ್ತಿವೆ. ಜಿಲ್ಲೆಯ ಬೇಲೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿ ಹಲವು ಆನೆ ಗುಂಪುಗಳಿದ್ದು, ಅವುಗಳಲ್ಲಿ ಹೆಣ್ಣಾನೆಗಳ ಸಂಖ್ಯೆ ಹೆಚ್ಚಾಗಿದೆ. ಹೆಣ್ಣಾನೆಗಳನ್ನು ಅರಸಿಯೂ ಅನ್ಯ ಜಿಲ್ಲೆಯ ಗಂಡಾನೆಗಳು ಬೇಲೂರಿನತ್ತ ಬರುತ್ತಿವೆ’ ಎನ್ನುತ್ತಾರೆ ಪರಿಸರವಾದಿ ಹುರುಡಿ ವಿಕ್ರಂ.
‘ಕೆಲ ತಿಂಗಳ ಹಿಂದೆ ಹೆಣ್ಣಾನೆಯನ್ನು ಹುಡುಕಿಕೊಂಡು ಹೊರಟಿದ್ದ ಕಾಡಾನೆ ಭೀಮ, ಬೇಲೂರು ತಾಲ್ಲೂಕಿನ ಜಗಬೋರನಹಳ್ಳಿಯಲ್ಲಿ ಇನ್ನೊಂದು ಗಂಡಾನೆ ಕ್ಯಾಪ್ಟನ್ ಜೊತೆಗೆ ಕಾದಾಟ ನಡೆಸಿತ್ತು. ಈ ವೇಳೆ ಭೀಮನ ಒಂದು ದಂತ ತುಂಡಾಗಿದೆ. ಗುಂಪಿನ ನಾಯಕತ್ವಕ್ಕಾಗಿಯೂ ಆನೆಗಳು ಕಾದಾಟ ನಡೆಸುತ್ತವೆ’ ಎನ್ನುತ್ತಾರೆ ವಿಕ್ರಂ.
ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.