ADVERTISEMENT

ಗಾಂಧಿ ಹೆಸರು ಗುಜರಾತ್‌ಗಷ್ಟೇ ಸೀಮಿತವೇ? ಹೆಸರಿನ ಮೂಲ ಹುಡುಕುತ್ತಾ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2026, 12:23 IST
Last Updated 6 ಫೆಬ್ರುವರಿ 2026, 12:23 IST
<div class="paragraphs"><p>ಇಂದಿರಾ ಗಾಂಧಿ ಮತ್ತು ಫಿರೋಜ್‌ ಗಾಂಧಿ ಮದುವೆ ಸಂದರ್ಭ</p></div>

ಇಂದಿರಾ ಗಾಂಧಿ ಮತ್ತು ಫಿರೋಜ್‌ ಗಾಂಧಿ ಮದುವೆ ಸಂದರ್ಭ

   

ಚಿತ್ರ: ಎಕ್ಸ್‌

ನೆಹರು ಕುಟುಂಬದವರು ಹುಟ್ಟು ಕಳ್ಳರು, ಗುಜರಾತ್‌ನಿಂದ ‘ಗಾಂಧಿ’ ಉಪನಾಮವನ್ನು ಕದ್ದೊಯ್ದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಹಾಗಿದ್ದರೆ ‘ಗಾಂಧಿ’ ಹೆಸರಿಗೂ ಹಾಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ಸಂಬಂಧವಿಲ್ಲವೇ? ಇದ್ದರೆ ಹೇಗೆ?. ಮಹಾತ್ಮ ಗಾಂಧಿ ಹೊರತುಪಡಿಸಿದರೆ ಇತರರ ಉಪನಾಮಗಳಲ್ಲಿ ‘ಗಾಂಧಿ’ ಇಲ್ಲವೇ, ಈ ಉಪನಾಮ ಕೇವಲ ಗುಜರಾತ್‌ಗಷ್ಟೇ ಸೀಮಿತವೇ?

ಈ ಗಾಂಧಿ ಎನ್ನುವ ಉಪನಾಮ ಹುಟ್ಟಿಕೊಂಡಿದ್ದೆಲ್ಲಿಂದ, ಹಾಗೆಂದರೆ ಅರ್ಥವೇನು ಎಂದು ನೋಡುವುದಾದರೆ, ಗಾಂಧಿ ಎಂದರೆ ‘ಗಂಧಿಗೆ’ ಅಥವಾ ‘ಗಿರಾಣಿ ವರ್ತಕ’ ಎಂದರ್ಥ.

ADVERTISEMENT

ಭಾರತದಲ್ಲಿ ‘ಗಾಂಧಿ’ ಎಂಬುದು ವ್ಯಾಪಾರಿ ವೃತ್ತಿ ಆಧಾರಿತ ಮನೆತನಗಳ ಹೆಸರಾಗಿದೆ. ಹೆಚ್ಚಾಗಿ ‘ಗಾಂಧಿ’ ಹೆಸರಿನ ಅಡ್ಡಹೆಸರುಗಳು ಗುಜರಾತ್, ರಾಜಸ್ಥಾನ, ಪಂಜಾಬ್‌ನಲ್ಲಿ ಕೇಳಿ ಬರುತ್ತವೆ.

ಭಾರತಕ್ಕೆ ಬ್ರಿಟಿಷರು ಬರುವ ಮೊದಲು ಹಾಗೂ ಬಂದ ಮೇಲೆ ಸುಗಂಧ ದ್ರವ್ಯಗಳು, ಮಸಾಲೆ ಪದಾರ್ಥಗಳು ಅಥವಾ ಗಿಡಮೂಲಿಕೆಗಳ ಮಾರುವವರನ್ನು ಸೌರಾಷ್ಟ್ರ ಭಾಗದಲ್ಲಿ ‘ಗಂಧಿ’ಎಂದು ಸಂಬೋಧಿಸುತ್ತಿದ್ದರು. ಕ್ರಮೇಣ ಇದು ‘ಗಾಂಧಿ’ ಎಂದಾಯಿತು.

ಗಾಂಧಿ ಕುಟುಂಬಗಳು ಬಾಂಬೆ ಪ್ರೆಸಿಡೆನ್ಸಿ ಆಡಳಿತ ವೇಳೆ ಭಾರತದಲ್ಲಿ ಗುಜರಾತ್, ರಾಜಸ್ಥಾನ, ಪಂಜಾಬ್, ಮುಂಬೈ, ಉತ್ತರ ಮಹಾರಾಷ್ಟ್ರ ಭಾಗದಲ್ಲಿ ವ್ಯಾಪಾರಿ ವೃತ್ತಿಗಳಿಗೆ ಹೆಸರಾದರು. ಹೀಗಾಗಿ ಆ ಭಾಗದಲ್ಲಿ ‘ಗಾಂಧಿ’ ಎಂಬುದು ಜನಜನಿತವಾಯಿತು.

ಮನೆತನಕ್ಕೆ ಗಾಂಧಿ ಎಂಬ ಅಡ್ಡ ಹೆಸರು ಹೊಂದಿರುವವರು ಹಿಂದೂ, ಪಾರ್ಸಿ, ಜೈನ ಹಾಗೂ ಮುಸ್ಲಿಂ ಧರ್ಮದಲ್ಲಿ ಕಾಣಸಿಗುತ್ತಾರೆ. ಇದು ವೃತ್ತಿ ಆಧಾರಿತ ಸಮುದಾಯದ ಹೆಸರೇ ಹೊರತು, ಒಂದು ಧರ್ಮ ಅಥವಾ ಜಾತಿಗೆ ಸಂಬಂಧಿಸಿದ್ದಲ್ಲ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಕುಟುಂಬದ ಮೋಹನದಾಸ ಕರಮಚಂದ ಗಾಂಧಿ ಅವರು ತೊಡಗಿಸಿಕೊಂಡ ನಂತರ ಗಾಂಧಿ ಉಪನಾಮ ದೇಶ ವಿದೇಶಗಳಲ್ಲಿ ಹೆಸರಾಯಿತು.

ಮಹಾತ್ಮ ಗಾಂಧಿ

ಮೋಹನದಾಸ ಕರಮ ಚಂದ ಗಾಂಧಿಗೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 1915ರಲ್ಲಿ ಬೆಂಗಾಳಿ ಕವಿ ರವೀಂದ್ರನಾಥ ಟ್ಯಾಗೋರ್‌ ಅವರು ‘ಮಹಾತ್ಮ’ ಎನ್ನುವ ಬಿರುದು ಕೊಟ್ಟಿದ್ದರು. ಅಲ್ಲಿಂದ ಮಹಾತ್ಮ ಗಾಂಧಿ, ಮಹಾತ್ಮ ಗಾಂಧೀಜಿ ಎನ್ನುವ ಹೆಸರು ಜನಪ್ರಿಯವಾಯಿತು.

ಇಂದಿರಾ ‘ಗಾಂಧಿ’ಯಾಗಿದ್ದು ಹೇಗೆ?

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಪುತ್ರಿಯಾಗಿದ್ದ ಇಂದಿರಾ ಗಾಂಧಿ ಅವರ ಮೂಲ ಹೆಸರು ಇಂದಿರಾ ಪ್ರಿಯದರ್ಶಿನಿ ನೆಹರು. ಮುಂಬೈನ ಖಾಟೇವಾಡಿ ಮಹೊಲ್ಲಾದಲ್ಲಿದ್ದ ನೌರೊಜಿ ನಾಟಕ್‌ವಾಲ್‌ ಭವನ ಬಳಿ ನೆಲೆಸಿದ್ದ ಜಹಂಗೀರ್ ಫರ್ದೂನ್‌ ಗಾಂಧಿ ಹಾಗೂ ರತಿಮಾಯಿ ಅವರ ಪುತ್ರರಾದ ಫಿರೋಜ್‌ ಹಾಗೂ ಇಂದಿರಾ ಪ್ರಿಯದರ್ಶಿನಿ ಅವರು ವಿವಾಹವಾಗಲು ನಿರ್ಧರಿಸಿದರು. ಈ ವಿವಾಹದ ನಂತರ ಇಂದಿರಾ ಅವರ ಉಪನಾಮವೂ ಗಾಂಧಿ ಎಂದು ಬದಲಾಯಿತು.

ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ನೀಡುವ ಉದ್ದೇಶದಿಂದ ಫಿರೋಜ್ ಅವರು ತಮ್ಮ Ghandy ಉಪನಾಮವನ್ನು ಗಾಂಧಿ (Gandhi) ಎಂದು ಬದಲಿಸಿಕೊಂಡರು ಎಂಬ ಉಲ್ಲೇಖವೂ ಇದೆ.

ಇನ್ನೊಂದೆಡೆ, ಫಿರೋಜ್‌ ಮತ್ತು ಇಂದಿರಾ ಅವರ ಮದುವೆ ಸಮಯದಲ್ಲಿ ಗಾಂಧೀಜಿ ಅವರು ಮಧ್ಯಪ್ರವೇಶಿಸಿ ಫಿರೋಜ್‌ ಅವರನ್ನು ದತ್ತು ತೆಗೆದುಕೊಂಡು, ‘ಗಾಂಧಿ’ ಉಪನಾಮವನ್ನು ನೀಡಿ ಅಫಿಡವಿಟ್‌ ಮಾಡಿಸಿದ್ದರು. ಹೀಗಾಗಿ ಫಿರೋಜ್‌ ಗಾಂಧಿ ಎಂಬ ಹೆಸರು ಬಂದಿತು ಎನ್ನುವ ಹೇಳಿಕೆಗಳೂ ಇವೆ. ಅದರೆ ಇದಕ್ಕೆ ಯಾವುದೇ ದಾಖಲೆಗಳಾಗಲೀ, ಅಧಿಕೃತ ಹೇಳಿಕೆಗಳಾಗಲೀ ಇಲ್ಲ ಎನ್ನುವುದು ಗಮನಾರ್ಹ.

ಮಹಾತ್ಮ ಗಾಂಧಿ ಕುಟುಂಬಕ್ಕೆ ಸಂಬಂಧವಿಲ್ಲ

ಮುಂಬೈ ಭಾಗದ ವ್ಯಾಪಾರಿಗಳನ್ನು ವೃತ್ತಿಯನ್ನು ಆಧರಿಸಿ ಗಂಧಿ ಎಂದೇ ಕರೆಯಲಾಗುತ್ತಿದ್ದ ಕಾರಣ ಫೀರೋಜ್‌ ಕುಟಂಬಕ್ಕೂ ಗಂಧಿ ಎನ್ನುವ ಉಪನಾಮವಿತ್ತು. ನಂತರ ಅದು ಗಾಂಧಿ ಎಂದೇ ಜನಪ್ರಿಯವಾಯಿತು. ಇಂದಿರಾ ಗಾಂಧಿ ಅದೇ ‘ಗಾಂಧಿ’ ಉಪನಾಮದಿಂದಲೇ ಮುಂದುವರಿದರು. ಈಗನ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿವರೆಗೂ ಅದು ಮುಂದುವರಿದುಕೊಂಡು ಬಂದಿದೆ.

ಮಗನ ಹೆಸರಿಗೆ ಗಾಂಧಿ ಉಪನಾಮ ಸೇರಿಸಿದರೇ ಪ್ರಿಯಾಂಕಾ?

ಪ್ರಿಯಾಂಕಾ ಗಾಂಧಿ ಅವರು 1969ರಲ್ಲಿ ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ಮದುವೆಯಾಗಿದ್ದರು, ಈ ದಂಪತಿಗೆ ಇಬ್ಬರು ಮಕ್ಕಳು. ಮಿರಾಯ್‌ ವಾದ್ರಾ ಮತ್ತು ರೈಹಾನ್ ವಾದ್ರಾ. ಕೆಲ ದಿನಗಳ ಹಿಂದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಮಗ ರೈಹಾನ್ ಅವರ ಹೆಸರನ್ನು ‘ರೈಹಾನ್ ರಾಜೀವ್ ಗಾಂಧಿ’ ಎಂದು ಬದಲಿಸಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಗ್ರೋಕ್ ಎಐ ಮೂಲಕ ಬಳಕೆದಾರರೊಬ್ಬರು ಪರಿಶೀಲನೆ ನಡೆಸಿದಾಗ ಅದು ಸುಳ್ಳು ಎನ್ನುವ ವಿಚಾರ ಹೊರಬಂದಿದೆ. ಅಲ್ಲದೆ ರೈಹಾನ್ ಅವರ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲೂ ರೈಹಾನ್ ವಾದ್ರಾ ಎಂಬ ಹೆಸರೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.