
ಶರಣಬಸವೇಶ್ವರರ ದೇವಸ್ಥಾನ ಹಾಗೂ ಖಾಜಾ ಬಂದಾನವಾಜ್ ದರ್ಗಾದ ಕೊಲಾಜ್ ಚಿತ್ರ. (ಕೃಪೆ AI)
ಸಬ ಕಹತೆ ಈಶ್ವರ ಅಲ್ಲಾ
ಇದರ ಭೇದ ಯಾರಿಗೆ ತಿಳಿದಿಲ್ಲಾ ||
ನಿರಾಕಾರಸೇ ಆಕಾರ ಹುವೆ
ವೇದಶಾಸ್ತ್ರಕೆ ನಿಲುಕಿಲ್ಲ
ಹಿಂದೂ ಮುಸ್ಲಮಾನ್ ಶಾಸ್ತ್ರ ಪಡತೆ ಹೈ
ಗುರು ಮನಿ ಕೀಲ ಸಿಗಲಿಲ್ಲ ||
ಇವು ಚನ್ನೂರ ಜಲಾಲಸಾಹೇಬರ ತತ್ವಪದದ ಸಾಲುಗಳು. ಒಂದು ಸಾಲು ಕನ್ನಡ, ಮತ್ತೊಂದು ಸಾಲು ದಖನಿ ಉರ್ದುವಿನಲ್ಲಿರುವ ಈ ಸಾಲುಗಳು ಅಕ್ಷರಶಃ ಕಲಬುರಗಿ ನಾಡಿನ ನೆಲದ ಸೌಹಾರ್ದ ಪರಿಮಳದ ಧ್ಯೋತಕ.
‘ತೊಗರಿ ಕಣಜ’ ಖ್ಯಾತಿಯ ಕಲಬುರಗಿ ಶರಣರ ನಾಡು; ಸೂಫಿ ಸಂತರ ನೆಲೆವೀಡು. ಒಂದೊಮ್ಮೆ ಬೌದ್ಧ ಧರ್ಮದ ಸಾಂಸ್ಕೃತಿಕ ಕೇಂದ್ರವೂ ಆಗಿತ್ತು... ಹೀಗೆ ಹಲವು ಮತ, ಪಂಥಗಳು, ಭಾಷೆ ಸಂಸ್ಕೃತಿಗಳಿಗೆ ಈ ನೆಲೆ ನೀರೆರೆದು ಪೋಷಿಸುತ್ತ ಬಂದಿದೆ. ಅದರ ಫಲವಾಗಿ ಶತಮಾನಗಳಿಂದ ಸೌಹಾರ್ದದ ಸೆಲೆ–ತೊರೆಗಳು ನೆಲದಲ್ಲಿ ಹರಿಯುತ್ತಿವೆ. ಇಲ್ಲಿನ ಮಣ್ಣು, ಸಂಸ್ಕೃತಿಯಲ್ಲಿ ಇಂದಿಗೂ ಆ ಪರಿಮಳ ಅಜರಾಮರವಾಗಿದೆ.
ಶರಣಬಸವೇಶ್ವರರ ದೇವಸ್ಥಾನ, ಖಾಜಾ ಬಂದಾನವಾಜ್‌ರ ದರ್ಗಾ, ಕಡಕೋಳ ಮಡಿವಾಳಪ್ಪ ಮಠ, ಸಾವಳಗಿ ಶಿವಲಿಂಗೇಶ್ವರ ಮಠ, ಮಳಖೇಡದ ಸೈಯದ್ ಶಾ ಖಲಿಫತ್ ಹಾಗೂ ಸೈಯದ್ ಶಾ ನ್ಯಾಮತ್‌ಉಲ್ಲಾ ಖಾದ್ರಿ ದರ್ಗಾ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಪ್ರಮುಖ ದೇವಸ್ಥಾನ–ಮಠಗಳು, 10ಕ್ಕೂ ಅಧಿಕ ದರ್ಗಾಗಳು, ಹತ್ತಾರು ಚರ್ಚುಗಳು, ಬೌದ್ಧಮಂದಿರಗಳೂ ಇವೆ.
ಅದರಲ್ಲಿ ಕಲಬುರಗಿಯ ಶರಣಬಸವೇಶ್ವರರ ದೇವಸ್ಥಾನ ಹಾಗೂ ಖಾಜಾ ಬಂದಾನವಾಜರ ದರ್ಗಾ ಸೌಹಾರ್ದ ಪರಂಪರೆಯ ಎರಡು ಕಣ್ಣುಗಳೆಂದರೂ ಅತಿಶಯೋಕ್ತಿಯಲ್ಲ.
ಶರಣಬಸವೇಶ್ವರರ ದೇವಸ್ಥಾನ
ಶರಣಬಸವೇಶ್ವರರ ದೇವಸ್ಥಾನ...
ಕಲಬುರಗಿ ನಗರದಲ್ಲೇ ಇರುವ ಶರಣಬಸವೇಶ್ವರರ ದೇವಸ್ಥಾನ ಸನ್ನಿಧಿ ಈ ಭಾಗದ ಪ್ರಮುಖ ಆರಾಧನಾ ಕೇಂದ್ರ. ದಾಸೋಹಕ್ಕೆ ಹೆಸರಾದ ತಾಣ. ಇಲ್ಲಿ ಕಾಯಕ–ದಾಸೋಹ ಗುಣದೊಂದಿಗೆ ಶರಣರೇ ‘ದೈವತ್ವ’ಕ್ಕೆ ಏರಿದ ಬಗೆಯೇ ಅನನ್ಯ.
19ನೇ ಶತಮಾನದಲ್ಲಿ ಕಪ್ಪು ಕಲ್ಲಿನಲ್ಲಿ ನಿರ್ಮಾಣದ ಆಕರ್ಷಕ ದೇವಸ್ಥಾನದಲ್ಲಿ ಗುರು–ಶಿಷ್ಯರ ಜೋಡಿ ಮೂರ್ತಿಯಿದೆ. ಗುರು ಮರುಳಸಿದ್ಧರು ಹಾಗೂ ಶಿಷ್ಯ ಶರಣಬಸವೇಶ್ವರ ಜಂಟಿ ಮೂರ್ತಿಗಳಿವೆ. ಶರಣಬಸವೇಶ್ವರರು ತಮ್ಮ ಗುರುಗಳನ್ನೇ ಮೀರಿ ಬೆಳೆದ ಶಿಷ್ಯರು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ನಿತ್ಯ ಇಬ್ಬರ ಗದ್ದುಗೆಗೂ ತ್ರಿಕಾಲ ಪೂಜೆ ನಡೆಯುತ್ತದೆ.
ಶರಣಬಸವೇಶ್ವರರು 1882ರಲ್ಲಿ ಲಿಂಗೈಕ್ಯರಾದ ಬಳಿಕ ಈ ವಿಶಾಲವಾದ ದೇವಸ್ಥಾನ ನಿರ್ಮಿಸಲಾಗಿದೆ. ಅರೆ ಕಂಬ, ಬಿಡಿ ಕಂಬ, ಜೋಡಿ ಕಂಬ ಹಾಗೂ 36 ಕಮಾನುಗಳನ್ನು ಬಳಸಿ ನಿರ್ಮಿಸಿರುವ ಈ ದೇವಸ್ಥಾನ ಆಕರ್ಷಕವಾಗಿದೆ. ಈ ಭಾಗದ ಜನರು ಧರ್ಮಾತೀತವಾಗಿ ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಶರಣಬಸವೇಶ್ವರರ ದೇವಸ್ಥಾನದ ವಿಶೇಷ ಪೂಜೆ, ಪ್ರವಚನಗಳ ನಡೆಯುತ್ತವೆ. ಶ್ರಾವಣ ಮಾಸದ ಪ್ರತಿ ಸೋಮವಾರ ದಾಸೋಹ ಗುಣ ಅನಾವರಣಗೊಳ್ಳುತ್ತದೆ. ಶ್ರೀಸಾಮಾನ್ಯರೂ ಸ್ವಂತ ಕಾಯಕದಿಂದ ಮಾಡಿದ ಹಣದಲ್ಲಿ ಕೈಲಾದಮಟ್ಟಿಗೆ ವೆಚ್ಚ ಮಾಡಿ ವಿವಿಧ ಬಗೆಯ ಭಕ್ಷ್ಯಗಳನ್ನು ತಂದು ಭಕ್ತರಿಗೆ ಹಂಚಿ ಖುಷಿ ಭಕ್ತಿ ಮೆರೆಯುತ್ತಾರೆ. ರೈತರು ತಮ್ಮ ಹೊಲಗಳಲ್ಲಿ ಬೆಳೆದ ಕಾಳುಗಳಲ್ಲಿ ಒಂದಿಷ್ಟು ಶರಣಬಸವೇಶ್ವರ ಮಹಾಸಂಸ್ಥಾನದ ದಾಸೋಹಕ್ಕೆ ಅರ್ಪಿಸಿದರೆ, ಅಡತ ವ್ಯಾಪಾರಿಗಳು ಲಾರಿಗಟ್ಟಲೇ ಧಾನ್ಯಗಳನ್ನು ಕೊಡುಗೆ ನೀಡುತ್ತಾರೆ.
ಪ್ರತಿ ವರ್ಷ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಶರಣಬಸವೇಶ್ವರ ಜಾತ್ರೆ ನಡೆಯುತ್ತದೆ. ಮೊದಲ ದಿನ ಉಚ್ಚಾಯ (ಸಣ್ಣ ತೇರು), ಮರುದಿನ ಮಹಾರಥೋತ್ಸವ ಜರುಗುತ್ತದೆ. ಅದೇ ಹೊತ್ತಿಗೆ ಶರಣಬಸವೇಶ್ವರ ಹುಟ್ಟಿದ ಊರಾದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿಯಲ್ಲೂ ಸಡಗರ ಮನೆ ಮಾಡಿರುತ್ತದೆ.
ಖಾಜಾ ಬಂದಾನವಾಜ್ ದರ್ಗಾ.
ಖಾಜಾ ಬಂದಾನವಾಜ್ ದರ್ಗಾ...
ಸೌಹಾರ್ದ ಸಾರಿ ಅಧ್ಯಾತ್ಮ ಉಣಬಡಿಸಿದ ಸಂತರ ಅಗ್ರಪಂಕ್ತಿಗೆ ಸೇರುತ್ತಾರೆ ಖಾಜಾ ಬಂದಾನವಾಜರು. ಅರ್ಥಾಥ್ ಸೂಫಿ ಸಂತ ಸಯ್ಯದ್ ಮುಹಮ್ಮದ್ ಅಲ್–ಹುಸೇನಿ.
14ನೇ ಶತಮಾನದಲ್ಲಿ ಜನಿಸಿದ ಬಂದಾನವಾಜರು, ‘ದೆಹಲಿ ಚಿರಾಗ್’ ಎಂದೇ ಖ್ಯಾತರಾಗಿದ್ದ (ದೆಹಲಿ ಬೆಳಕು) ಹಜರತ್ ಖಾಜಾ ಪೀರ್ ನಸೀರುದ್ದೀನ್ ಮಹಮೂದ್‌ರ ಅನುಯಾಯಿಯಾಗಿದ್ದ ಬಂದಾನವಾಜರು ಬರೀ ಸಂತರಾಗಿರದೇ, ವಿದ್ವಾಂಸರೂ ಆಗಿದ್ದರು. 100ಕ್ಕೂ ಅಧಿಕ ಕೃತಿಗಳನ್ನೂ ರಚಿಸಿದ್ದು ಅವರ ಅಗ್ಗಳಿಕೆ. ದೆಹಲಿಯಲ್ಲಿ ಹುಟ್ಟಿ, ದೌಲತಾಬಾದ್‌ನಲ್ಲಿ ತಂಗಿ ಮರಳಿ ದೆಹಲಿಯಲ್ಲಿ ಬೆಳೆದು–ಬದುಕಿದ ಬಂದಾನವಾಜರು, ಇಳಿ ವಯಸ್ಸಿನಲ್ಲಿ ಭಾರತದ ದಕ್ಷಿಣದತ್ತ ಸಾಗಿ ಬಂದರು. ದೌಲತಾಬಾದ್‌ನಲ್ಲಿ ತಂಗಿದ್ದಾಗ ಬಹಮನಿ ದೊರೆ ಫಿರೋಜ್ ಶಾಹ ಬಹಮನಿ ಆಹ್ವಾನದ ಮೇರೆಗೆ ಬಂದಾನವಾಜರು ಕಲಬುರಗಿಗೆ ಬಂದು ನೆಲೆಸಿದರು. ಸೂಫಿ ತತ್ವ ಪಸರಿಸುವ ಮೂಲಕ ಅಸಂಖ್ಯಾತ ಶ್ರೀಸಾಮಾನ್ಯರ ಮನಗೆದ್ದರು. ಇಂದಿಗೂ ಅವರ ಹೃದಯ ಮಂದಿರಗಳಲ್ಲಿ ‘ರಾಜ’ನ ಸ್ಥಾನ ಪಡೆದಿದ್ದಾರೆ. ಈ ಭಾಗದಲ್ಲಿ ಹಿಂದೂ–ಮುಸ್ಲಿಮರ ನಡುವಣ ಧಾರ್ಮಿಕ ಸಹಿಷ್ಣುತೆ, ಸಮಾಜೋ–ಸಾಂಸ್ಕೃತಿಕ ಸೌಹಾರ್ದಕ್ಕೆ ಬಂದಾನವಾಜರ ಕೊಡುಗೆ ಅಗಣಿತ.
ವರ್ಷದುದ್ದಕ್ಕೂ ಹಿಂದೂ–ಮುಸ್ಲಿಂ ಭಕ್ತರು ‘ಸಂತ’ನ ಸನ್ನಿಧಿಯನ್ನು ಅರಸಿ ಬರುತ್ತಾರೆ. ಅವರ ಕಾಲಾನಂತರದ ಆರು ಶತಮಾನಗಳ ಬಳಿಕವೂ ‘ಅಧ್ಯಾತ್ಮ ಧಾಮ’ದ ಕುರುಹಾಗಿ ನಿಂತಿದೆ. ದೇಶದೆಲ್ಲೆಡೆಯ ಭಕ್ತರನ್ನು ಚುಂಬಕ ಶಕ್ತಿಯಾಗಿಯೂ ಸೆಳೆಯುತ್ತಿದೆ.
ಪ್ರತಿ ವರ್ಷವೂ ಮೂರು ದಿನಗಳ ಉರುಸ್ ಕಾರ್ಯಕ್ರಮ ನಡೆಯುತ್ತದೆ. ಮೊದಲ ದಿನ ಸಂದಲ್ ಶರೀಫ್, ಎರಡನೇ ದಿನ ಮೆಹ್‌ಫಿಲ್–ಎ–ಚಿರಾಗನ್, ಮೂರನೇ ದಿನ ಮೆಹ್‌ಫಿಲ್–ಎ–ಕುಲ್ ನಡೆಯುತ್ತದೆ. ಲಕ್ಷಾಂತರ ಜನರು ವಿವಿಧೆಡೆಯಿಂದ ದರ್ಗಾಕ್ಕೆ ಭೇಟಿ ನೀಡಿದ ಬಂದಾನವಾಜರ ಆಶೀರ್ವಾದ ಪಡೆಯುತ್ತಾರೆ.
ಈ ಉರುಸ್ ಸಂದರ್ಭದಲ್ಲಿ ದರ್ಗಾಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ನೆರೆಯ ತೆಲಂಗಾಣ, ಆಂಧ್ರಪ್ರದೇಶದ ಭಕ್ತರ ಅನುಕೂಲಕ್ಕಾಗಿ ದಕ್ಷಿಣ ಮಧ್ಯೆ ರೈಲ್ವೆಯು ದಶಕಗಳಿಂದ ಹೈದರಾಬಾದ್‌ನಿಂದ ಕಲಬುರಗಿಗೆ ವಿಶೇಷ ರೈಲು ಓಡಿಸುವುದು ವಾಡಿಕೆ.
‘ಸೌಹಾರ್ದ ಇಲ್ಲಿನ ಮಣ್ಣಿನ ಗುಣ’
‘ಇದು ಶರಣರು ಹಾಗೂ ಸೂಫಿ ಸಂತರು ಪರಸ್ಪರ ಮುಖಾಮುಖಿಯಾಗಿ ದಾರ್ಶನಿಕ ಅದಾನ–ಪ್ರದಾನ ನಡೆಸಿದ ನಾಡು. ಸಾವಳಗಿ ಶಿವಲಿಂಗೇಶ್ವರ ಸನ್ನಿಧಿಯಲ್ಲಿ ಭಾವೈಕ್ಯವಿದೆ. ಸಮೀಪದ ಕೊಡೆಕಲ್ ಪರಂಪರೆಯಲ್ಲಿ ಬಸವಾದಿ ಶರಣ ತತ್ವಗಳನ್ನು ಪಾಲಿಸುತ್ತಲೇ ತಲೆಗೆ ಹಸಿರು ರುಮಾಲು ಸುತ್ತಲಾಗುತ್ತದೆ. ಖಾಜಾ ಬಂದಾನವಾಜ್ ದರ್ಗಾ ಹಾಗೂ ಶರಣಬಸವೇಶ್ವರ ಸಂಸ್ಥಾನದ ನಡುವೆ ಜಾತ್ರೆ–ಉರುಸ್ ವೇಳೆ ಪರಸ್ಪರ ಕಾಣಿಕೆ ಸಲ್ಲಿಸುವ ಪದ್ಧತಿಯಿದೆ’ ಎನ್ನುತ್ತಾರೆ ಚಿಂತಕಿ ಮೀನಾಕ್ಷಿ ಬಾಳಿ.
‘ಮೊಹರಂ ಅನ್ನು ಬಹುತೇಕ ಹಿಂದೂಗಳೇ ಆಚರಿಸುವುದು ವಿಶೇಷ. ದಾವಲ್ ಮಲಿಕ್, ಖಾಜಾ ಬಂದಾನವಾಜ್ ಸೇರಿದಂತೆ ಅನೇಕ ಸೂಫಿಸಂತರು ಅನೇಕ ಹಿಂದೂಗಳ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಾರೆ. ಹೆಸರಾಂತ ತತ್ವಪದಕಾರ ಚನ್ನೂರ ಜಲಾಲಸಾಬ್ ಒಂದು ಸಾಲು ಕನ್ನಡ, ಮತ್ತೊಂದು ಸಾಲು ದಖನಿ ಉರ್ದುವಿನಲ್ಲಿ ತತ್ವಪದ ರಚಿಸಿದ್ದಾರೆ. ಅವರು ಕಡಕೋಳ ಮಡಿವಾಳಪ್ಪ ಅವರಿಂದ ಕಾವ್ಯದೀಕ್ಷೆ ಪಡೆದವರು. ಕೊಹಿನೂರ್ ಹುಸೇನಸಾಬ್, ಮಹಾಗಾಂವ ಮೀರಾಸಾಬ್, ಕಡಕೋಳದ ಇಮಾಮಸಾಬ್, ಕರೀಮಸಾಬ್ ಸಹೋದರು ಅದೇ ಸಾಲಿಗೆ ಸೇರಿದವರು.
‘ಕಲಬುರಗಿ ಜಿಲ್ಲೆಯ ಮೊದಲಿನಿಂದಲೂ ಸೌಹಾರ್ದಕ್ಕೆ ಹೆಸರಾಗಿದೆ. ಇತ್ತೀಚೆಗೆ ಅದರ ಸೌಹಾರ್ದ ಕಂಪು ಹಾಳು ಮಾಡುವ ಚಟುವಟಿಕೆ ನಡೆಯುತ್ತಿವೆ. ವಚನ ಸಾಹಿತ್ಯ ಹಾಳು ಮಾಡುವ, ವಚನಕಾರರನ್ನು ವೈದಿಕ ಕವಚದಲ್ಲಿ ಜೋಡಿಸುವ ಪ್ರಯತ್ನಗಳು ನಡೆಯುತ್ತಿರುವುದು ದುರಂತದ ಸಂಗತಿ’ ಎಂದು ಮೀನಾಕ್ಷಿ ಬಾಳಿ ವಿಷಾದ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.