
ಯಾದಗಿರಿ: ಆಗಷ್ಟೇ ರೈಲ್ವೆ ಪ್ರಯಾಣ ನಿಧಾನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಬ್ರಿಟಿಷರು ಆಳ್ವಿಕೆಯಲ್ಲಿ ರೈಲಿನ ಸೀಟುಗಳಲ್ಲಿ ವರ್ಗಭೇದವೂ ಪ್ರಖರವಾಗಿತ್ತು. ಬೆಂಚುಗಳ ಮೇಲೆ ಕೂರುವುದನ್ನು ತಿಳಿಯದ ಭಾರತೀಯರಿಗೆ ಆಸನಗಳು ಏಕೆ ಎಂದು ಕೆಲವೆಡೆ ಆಸನಗಳೇ ಇಲ್ಲದ ಬೋಗಿಗಳನ್ನು ಓಡಿಸುತ್ತಿದ್ದರಂತೆ.
ಅಂತಹುದ್ದೆ ವ್ಯವಸ್ಥೆ ಈ ಹಿಂದಿನ ಹೈದರಾಬಾದ್ ಕರ್ನಾಟಕದ (ಈಗಿನ ಕಲ್ಯಾಣ ಕರ್ನಾಟಕ) ಮೇಲೆ ಹೊರಿಸಿದ್ದಿರಬಹುದು. ಅದು, ಇಂದಿಗೂ ಚಾಲ್ತಿಯಲ್ಲಿದೆ ಎಂಬುದನ್ನು ಈ ಭಾಗದಿಂದ ಬೆಂಗಳೂರು ಸಂಪರ್ಕಿಸುವ ರೈಲಿನ ಜನರಲ್ ಬೋಗಿಗಳಲ್ಲಿ ರಾತ್ರಿ ಇಡೀ ನಿಂತು ಪ್ರಯಾಣಿಸುವವರನ್ನು ನೋಡಿದಾಗ ಭಾಸವಾಗುತ್ತದೆ.
ಬೀದರ್, ಕಲಬುರಗಿ, ಯಾದಗಿರಿಯಿಂದ ಬೆಂಗಳೂರು ನಡುವೆ ಸಂಚರಿಸುವ ಲಿಂಕ್, ಬಸವ ಎಕ್ಸ್‌ಪ್ರೆಸ್, ಹಾಸನ–ಸೋಲಾಪುರ, ಉದ್ಯಾನ್ ಎಕ್ಸ್‌ಪ್ರೆಸ್, ಕೆಕೆ ಎಕ್ಸ್‌ಪ್ರೆಸ್, ಬೀದರ್ ಎಕ್ಸ್‌ಪ್ರೆಸ್, ವಾರದ ನಡುವೆ ಸಂಚರಿಸುವ ರೈಲುಗಳು ಸೇರಿದಂತೆ ಯಾವುದೇ ವಿಶೇಷ ರೈಲುಗಳು ಓಡಿಸಿದರು ಜನರಲ್ ಬೋಗಿಗಳಲ್ಲಿ ಗುಳೆ ಹೊರಟವರಿಗೆ ಕುರಿಮಂದೆಯಂತೆ ಪರಿತಾಪದ ಪ್ರಯಾಣ ತಪ್ಪಿದ್ದಲ್ಲ.
ಯಾದಗಿರಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರು
ತಮ್ಮ ಊರುಗಳಲ್ಲಿ ದುಡಿಯಲು ಕೆಲಸ ಇಲ್ಲದೆ ಬಿಳಿಯ ಅಂಗಿ, ಕಚ್ಚೆ ಹಾಕಿದ ಬಿಳಿ ಧೋತ್ರ, ದಪ್ಪನೆಯ ಬಾಳಿಕೆ ಬರುವಂಥ ಜೋಡು ಚಪ್ಪಲ್ಲ, ಪಾತ್ರೆ ಪಗಡೆ, ಬಟ್ಟೆ ಬರೆ, ದವಸ ಧಾನ್ಯಗಳಿಂದ ತುಂಬಿದ್ದ ಡಿಎಪಿ ಚೀಲ ಹೊತ್ತ ರೈತ; ಆತನ ಪತಿಯ ಸೊಂಟದ ಮೇಲೆ ಕುಳಿತಿದ್ದ ಎರಡು ವರ್ಷದ ಮಗು, ಅದರ ಕೈಯಲ್ಲಿ ಸಣ್ಣ ಖಾಲಿ ಪ್ಲಾಸ್ಟಿಕ್ ಬಿಂದಿಗೆ; ತಾಯಿಯ ತಲೆಯ ಮೇಲೆ ರೊಟ್ಟಿಯ ಬುತ್ತಿಯ ಗಂಟು ಹೊತ್ತುಕೊಂಡು ರೈಲಿಗಾಗಿ ಕಾಯುವ ದೃಶ್ಯಗಳು ಬೀದರ್‌ನಿಂದ ಹಿಡಿದು ರಾಯಚೂರುವರೆಗಿನ ರೈಲು ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
ಕೆಲವರು ಸಂಜೆಯ ಗಾಡಿಹತ್ತಲು ಬಂದು ರೈಲಿನ ಸೀಟು ಸಿಗದೆ ಮಧ್ಯರಾತ್ರಿಯ ಕೆಕೆ ಎಕ್ಸ್‌ಪ್ರೆಸ್‌ಗಾಗಿ ಮಕ್ಕಳೊಂದಿಗೆ ಫ್ಲಾಟ್‌ಫಾರ್ಮ್ ಮೇಲೆಯೇ ಠಿಕಾಣಿ ಹೂಡಿರುತ್ತಾರೆ. ಅದರಲ್ಲಿಯೂ ಸೀಟು ಸಿಗದೆ ಇದ್ದಾಗ ಮರುದಿನದ ರೈಲು ಹತ್ತಿ ಹೋಗಿದ್ದ ಸಾಕಷ್ಟು ನಿದರ್ಶನಗಳು ಸಹ ಇವೆ.
ಗಂಟೆಗಟ್ಟಲೆ ಕಾದು ಸಾಮಾನು ಸರಂಜಾಮುಗಳನ್ನು ಹೊತ್ತು ರೈಲು ಹತ್ತಿದರೆ ಕಾಲಿಡಲು ಸಾಧ್ಯವಾಗಿ ಇರದಷ್ಟು ಜನ ತುಂಬಿರುತ್ತಾರೆ. ತಳ್ಳಾಡಿ, ಗಲಾಟೆ ಮಾಡಿಕೊಂಡು ಎರಡೂ ಶೌಚಾಲಯದ ನಡುವೆ, ಖಾಲಿ ಇದ್ದರೆ ಸೀಟುಗಳ ಕೆಳಗೆ ಸಾಮಗ್ರಿಗಳನ್ನು ಇರಿಸಿ ನಿಟ್ಟುಸಿರು ಬಿಡ್ಡುವ ಮುನ್ನವೇ ಮತ್ತೊಂದು ನಿಲ್ದಾಣ ಬಂದಿರುತ್ತದೆ. ಹತ್ತಾರು ಮಂದಿ ಗಂಟುಮುಟ್ಟೆಗಳನ್ನು ಹೊತ್ತು ತಳ್ಳಿಕೊಂಡು ರೈಲಿನ ಒಳ ಬಂದು, ವಾಗ್ವಾದಕ್ಕೂ ಇಳಿದು ಅಳಿದು ಉಳಿದ ಜಾಗದಲ್ಲಿ ತಮ್ಮ ಗುಳೆಯ ಚೀಲಗಳನ್ನು ಇರಿಸುತ್ತಾರೆ. ಬೋಗಿ ಉದ್ದಕ್ಕೂ ಬ್ಯಾಗ್‌ಗಳನ್ನು ಬಾವಲಿಯಂತೆ ನೇತು ಹಾಕಿ ಬೆಂಗಳೂರು ತಲುಪುವವರೆಗೂ ಇಡೀ ರಾತ್ರಿ ನಿಂತೇ ಪ್ರಯಾಣಿಸುವುದು ಇಲ್ಲಿನವರಿಗೆ ಅಭ್ಯಾಸವಾದಂತೆ ಇದೆ.
ನಿದ್ರೆಯನ್ನು ಸಹಿಸಲು ಆಗದವರು ಆಸನಗಳ ಅಡಿ ಮಲಗಿ, ಓಡಾಡುವ ಮಾರ್ಗದಲ್ಲಿ ಕೂತು, ಕೆಲವರು ಮಲಗಿ ಪ್ರಯಾಣಿಸುತ್ತಾರೆ. ಮತ್ತೆ ಕೆಲವರು ಮಲಗಿರುವ ಪ್ರಯಾಣಿಕರ ಪಾದದ ಸಮೀಪ ಕುಳಿತಿದ್ದರೇ ಜಾಗದ ಸಿಗದ ಹಲವರು ನಿಂತು ತೆರಳುತ್ತಾರೆ. ಮೇಲಿನ ಸೀಟುಗಳ ನಡುವೆ ಸೀರೆಯನ್ನು ಕಟ್ಟಿ ಅದರಲ್ಲಿ ಮಕ್ಕಳನ್ನು ಮಲಗಿಸಿ ಅವರನ್ನು ಕಾಯುತ್ತಾ ಎಚ್ಚರವಿದ್ದು ಪೋಷಕರು ಪ್ರಯಾಣಿಸುವ ಅಮಾನವೀಯ ದೃಶ್ಯಗಳು ಇಲ್ಲಿಂದ ಗೆದ್ದು ಅಧಿಕಾರ ಹಿಡಿದ ಜನಪ್ರತಿನಿಧಿಗಳಿಗೆ ಕಾಣಿಸುತ್ತಿಲ್ಲ ಎನ್ನುತ್ತಾರೆ ರೈಲು ಪ್ರಯಾಣಿಕರು.
ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರು
ಚುನಾವಣೆ, ಊರ ಹಬ್ಬ, ಜಾತ್ರೆ, ದಸರಾ, ದೀಪಾವಳಿಯಂತಹ ಸಂದರ್ಭದಲ್ಲಿ ಸ್ಲೀಪರ್ ಬೋಗಿಗಳು ಜನರಲ್ ಬೋಗಿಗಳಂತೆ ಪ್ರಯಾಣಿಕ ದಟ್ಟಣೆಯಿಂದ ತುಂಬಿ ತುಳುಕುತ್ತವೆ. ರೈಲಿನ ಟಿಟಿಇ, ರೈಲ್ವೆ ಭದ್ರತಾ ಸಿಬ್ಬಂದಿ ಬಂದು ಸ್ಲೀಪರ್ ಬೋಗಿಗಳಲ್ಲಿ ಕೆಳಗೆ ಕುಳಿತಿದ್ದವರನ್ನು ಪ‍್ರಶ್ನಿಸಿದಾಗ, ತಾವೆಲ್ಲ ವೇಟಿಂಗ್ ಲಿಸ್ಟ್‌ನಲ್ಲಿದ್ದವರು ಎನ್ನುತ್ತಾರೆ. ಜನರಲ್ ಬೋಗಿಗೆ ಹೋಗುವಂತೆ ಆದೇಶಿಸಿದರೆ, ಸೀಟುಗಳಿಲ್ಲದೆ ಹೆಚ್ಚುವರಿಯಾಗಿ ಟಿಕೆಟ್ ನೀಡುವುದು ಏಕೆ? ಟಿಕೆಟ್ ಕೊಟ್ಟ ಮೇಲೆ ಅಗತ್ಯಕ್ಕೆ ತಕ್ಕಷ್ಟು ಹೆಚ್ಚುವರಿ ಬೋಗಿಯನ್ನಾದರೂ ಕೊಡಬೇಕಲ್ಲವೇ ಎಂದು ಪ್ರಶ್ನಿಸಿ ತರಾಟೆಗೂ ತೆಗೆದುಕೊಳ್ಳುತ್ತಾರೆ.
ಬೀದರ್– ಕಲಬುರಗಿ– ಯಾದಗಿರಿ– ಬೆಂಗಳೂರು ಮಾರ್ಗದ ರೈಲುಗಳಲ್ಲಿ ಸೀಟುಗಳಿಗಾಗಿ, ನಿಲ್ಲುವ ಜಾಗಕ್ಕೆ, ಬ್ಯಾಗ್ ನೇತು ಹಾಕುವ ವಿಚಾರಕ್ಕೂ ಗಲಾಟೆ, ವಾಗ್ವಾದ, ಕೆಲವೊಮ್ಮೆ ಹೊಡೆದಾಡುತ್ತಾ ಪ್ರಯಾಣಿಸುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ.
ವಿಜಯಪುರ– ಯಶವಂತಪುರ, ಬೆಂಗಳೂರು– ಬೆಳಗಾವಿ, ಶಿವಮೊಗ್ಗ– ಮೈಸೂರು, ವಿಜಯಪುರ– ಮಂಗಳೂರು, ಹುಬ್ಬಳ್ಳಿ– ಬೆಂಗಳೂರು, ಹುಬ್ಬಳ್ಳಿ– ಬೆಳಗಾವಿ, ಮೈಸೂರು– ಬೆಂಗಳೂರು ಮೆಮು, ಬೆಂಗಳೂರು ಸುತ್ತಲಿನ ಜಿಲ್ಲೆಗಳಿಗೆ ಡೆಮು ರೈಲುಗಳ ಓಡಾಟ ಹೆಚ್ಚಿಸಲಾಗಿದೆ. 10ರಿಂದ 11 ಗಂಟೆಗಳು ಪ್ರಯಾಣಿಸುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ನೆರೆಯ ರಾಜ್ಯಗಳಿಂದ ಬರುವ ಎಕ್ಸ್‌ಪ್ರೆಸ್ ರೈಲುಗಳು ಓಡಿಸಲಾಗುತ್ತಿದೆ. ಕಲುಬರಗಿಯಿಂದ ನೇರವಾಗಿ ರೈಲು ಓಡಿಸಿ ಎಂಬ ಬಹುದಿನಗಳ ಬೇಡಿಕೆ ಸ್ಪಂದನೆ ಸಿಗುತ್ತಿಲ್ಲ. ಆಸಕ್ತಿಯೂ ತೋರುತ್ತಿಲ್ಲ ಎಂಬ ಅಸಮಾಧಾನ ಇಲ್ಲಿನ ಪ್ರಯಾಣಿಕರದ್ದು.
‘ವಿಶೇಷ ರೈಲು ನಿತ್ಯ ಓಡಿಸಿ’
‘06207 ಬೆಂಗಳೂರು– ಕಲಬುರಗಿ ವಿಶೇಷ ರೈಲು ವಾರದಲ್ಲಿ ಒಂದು ದಿನ ಮಾತ್ರ ಓಡಿಸಲಾಗುತ್ತಿದೆ. ಬೆಂಗಳೂರಿನಿಂದ ಶನಿವಾರ ಸಂಜೆ 7.20ಕ್ಕೆ ಹೊರಟು ಮರುದಿನ ಬೆಳಿಗ್ಗೆ 7.30ಕ್ಕೆ ಕಲಬುರಗಿ ತಲುಪುತ್ತದೆ. ಭಾನುವಾರ ಬೆಳಿಗ್ಗೆ 9.35ಕ್ಕೆ ಹೊರಟು ರಾತ್ರಿ 8.30ಕ್ಕೆ ಬೆಂಗಳೂರು ತಲುಪುತ್ತದೆ. ಪ್ರಯಾಣಿಕರ ದಟ್ಟಣೆಯನ್ನು ತಾತ್ಕಾಲಿಕವಾಗಿ ಸರಿದೂಗಿಸಲು ಇದನ್ನು ನಿತ್ಯ ಸಂಚರಿಸುವಂತೆ ಮಾಡಬೇಕು’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸುನೀಲ ಕುಲಕರ್ಣಿ.
‘15 ವರ್ಷಗಳಿಂದ ಬೆಂಗಳೂರು– ಕಲಬುರಗಿ ನಡುವೆ ಪ್ರಯಾಣ ಮಾಡುತ್ತಿದ್ದೇನೆ. ಯಾದಗಿರಿ ನಿಲ್ದಾಣ ಒಂದರಿಂದಲೇ ನಿತ್ಯ ಸುಮಾರು ಒಂದು ಸಾವಿರ ಜನರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅವರಲ್ಲಿ ಬಹುತೇಕರು ರಾತ್ರಿ ಇಡೀ ನಿದ್ರೆಯೂ ಮಾಡುವುದಿಲ್ಲ. ಕೂಲಿ ಕಾರ್ಮಿಕರ ಬೆಂಗಳೂರಿನ ರೈಲು ಪ್ರಯಾಣ ನೋಡಿದರೆ ಯಾದಗಿರಿ ಜಿಲ್ಲೆಯು ಬಿಹಾರ ರಾಜ್ಯದ ವಲಸಿಗರಂತೆ ಕಾಣಿಸುತ್ತದೆ. ತಾತ್ಕಾಲಿಕವಾಗಿ ರೈಲು ಗಾಡಿಗಳನ್ನು ಹೆಚ್ಚಿಸಿ, ದೀರ್ಘಕಾಲದ ಪರಿಹಾರವಾಗಿ ಸ್ಥಳೀಯವಾಗಿ ಕೆಲಸ ಸಿಗುವಂತೆ ಮಾಡಿ ಗುಳೆ ಹೋಗುವುದನ್ನು ತಪ್ಪಿಸಬೇಕು’ ಎನ್ನುವುದು ಅವರ ಅಭಿಪ್ರಾಯ.
ಮುಂಬೈ– ಬೆಂಗಳೂರು ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ನಿಂತು ಪ್ರಯಾಣಿಸಿದ ಪ್ರಯಾಣಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.