ADVERTISEMENT

Web Exclusive: ಕೃಷ್ಣದೇವರಾಯ ಸಮಾಧಿಯ ಮೂಕವೇದನೆ

ಪ್ರಮೋದ ಕುಲಕರ್ಣಿ
Published 19 ಫೆಬ್ರುವರಿ 2026, 0:30 IST
Last Updated 19 ಫೆಬ್ರುವರಿ 2026, 0:30 IST
   

ಕೊಪ್ಪಳ: ವಿಜಯನಗರ ಸಾಮ್ರಾಜ್ಯದ ಐತಿಹ್ಯಗಳು, ರಾಯ ಗೋಪುರಗಳು, ಸ್ಮಾರಕಗಳು, ದೇವಸ್ಥಾನಗಳು ಹಾಗೂ ಐತಿಹಾಸಿಕ ಕಟ್ಟಡಗಳು ಇರುವ ಹಂಪಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಹಂಪಿ ಉತ್ಸವದ ಅಂಗವಾಗಿ ಇತ್ತೀಚೆಗೆ ಭಾರಿ ಸಂಭ್ರಮ ಮನೆ ಮಾಡಿತ್ತು.

ಪ್ರತಿವರ್ಷವೂ ಚಾಚುತಪ್ಪದೆ ನಡೆಯುವ ಹಂಪಿ ಉತ್ಸವದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತ, ರಾಜರ ಸಾಹಸದ ಮೇಲೆ ಬೆಳಕು ಚೆಲ್ಲುವ ಧ್ವನಿ ಬೆಳಕು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಸಾವಿರಾರು ಜನ ವಿಜಯನಗರದ ವೈಭವ ಕಣ್ತುಂಬಿಕೊಳ್ಳುತ್ತಿದ್ದರೆ, ಕೃಷ್ಣದೇವರಾಯನ ಸಮಾಧಿ ಸ್ಥಳ (64 ಕಂಬಗಳ ಮಂಟಪ) ಮೂಕರೋಧನೆ ಅನುಭವಿಸುವಂತೆ ಭಾಸವಾಗುತ್ತಿತ್ತು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದಲ್ಲಿರುವ ಕೃಷ್ಣದೇವರಾಯನ ಸಮಾಧಿ ಸ್ಥಳ ತುಂಗಭದ್ರಾ ನದಿಯ ದಂಡೆಯಲ್ಲಿದೆ. ಜಲಾಶಯದಿಂದ ಅಲ್ಪ ನೀರು ಹೊರಬಿಟ್ಟರೆ ಸಮಾಧಿ ಸ್ಥಳ ಭಾಗಶಃ ಮುಳುಗಿ ಹೋಗುತ್ತದೆ. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ವ್ಯಾಪ್ತಿಯೊಂದರಲ್ಲಿಯೇ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಸೇರಿದ 74 ರಾಜ್ಯ ಸಂರಕ್ಷಿತ ಪ್ರದೇಶಗಳಿವೆ. ಇವುಗಳ ನಿರ್ವಹಣೆ ಹಾಗೂ ಮಾಹಿತಿ ನೀಡಲು ಬೆರಳೆಣಿಯಕೆಯಷ್ಟೇ ಭದ್ರತಾ ಸಿಬ್ಬಂದಿ ಇದ್ದಾರೆ.

ADVERTISEMENT

64 ಕಂಬಗಳ ಮಂಟಪವೂ ಸೇರಿದಂತೆ ಈ ವ್ಯಾಪ್ತಿಯ ಎಲ್ಲ ಸ್ಮಾರಕಗಳು 1988ರಲ್ಲಿಯೇ ರಾಜ್ಯ ಸಂರಕ್ಷಿತ ಪ್ರದೇಶಗಳೆಂದು ಘೋಷಣೆಯಾಗಿವೆ. ಈ ಘೋಷಣೆಯಾಗಿ ಮೂರೂವರೆ ದಶಕಗಳು ಉರುಳಿದರೂ ಸುರಕ್ಷಣೆಗೆ ಕ್ರಮಗಳಾಗಿಲ್ಲ. ದೇಶ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರು ಕೃಷ್ಣದೇವರಾಯ ಸಮಾಧಿ ಸ್ಥಳವನ್ನು ಐತಿಹಾಸಿಕ ಸ್ಮಾರಕವನ್ನಾಗಿ ನೋಡುತ್ತಾರೆ. ಅಲ್ಲಿ ಓಡಾಡಿ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ನೆನಪುಗಳು ಸ್ಮರಣೀಯವಾಗಿಟ್ಟುಕೊಳ್ಳುತ್ತಾರೆ. ಇಂಥ ಮಹತ್ವದ ಸ್ಮಾರಕ ಈಗ ನಿರ್ಲಕ್ಷಕ್ಕೆ ಒಳಗಾಗಿದೆ. 

ಸಮಾಧಿ ಸ್ಥಳದಲ್ಲಿ ಸ್ಥಳೀಯರು ಅದರ ಮಹತ್ವದ ಅರಿವಿಲ್ಲದೆ ಮಲಗುವುದು, ಚೌಕಾಬಾರ ಆಟವಾಡುವುದು, ಮದ್ಯಪಾನ ಮಾಡುತ್ತಾರೆ. ಸಮಾಧಿ ಸ್ಮಾರಕದ ಮೇಲೆ ಹಲವು ತಿಂಗಳುಗಳ ಹಿಂದೆ ಮಾಂಸ ಕತ್ತರಿಸಲಾಗಿತ್ತು. ನದಿಯಲ್ಲಿ ನೀರು ಕಡಿಮೆಯಾದರೆ ಮಾತ್ರ ಸಮಾಧಿ ಸ್ಥಳದ ಮೇಲೆ ಓಡಾಡಲು ಸಾಧ್ಯವಾಗುತ್ತದೆ; ಇಲ್ಲವಾದರೆ ದೂರದಿಂದಲೇ ನೋಡಿ ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆ.

ಆನೆಗೊಂದಿ ಗ್ರಾಮವನ್ನು ಪ್ರವೇಶಿಸುವ ಪ್ರವೇಶ ಕೋಟೆ ದ್ವಾರಕ್ಕೂ ಮೊದಲು ಬೃಹತ್‌ ಕೃಷ್ಣದೇವರಾಯನ ಮೂರ್ತಿ ನಿರ್ಮಿಸಿ ಗೌರವ ಸಲ್ಲಿಸಲಾಗಿದೆ. ಆದರೆ ಸಮಾಧಿ ಸ್ಥಳ ನಿರ್ವಹಣೆ ಕೊರತೆ ಹಾಗೂ ಪ್ರಾಮುಖ್ಯತೆ ಸಿಗದೆ ಮೂಲೆಗೆ ಸೇರುತ್ತಿದೆ. ಕೃಷ್ಣದೇವರಾಯ ಮೃತಪಟ್ಟು (1529) 497 ವರ್ಷಗಳು ಉರುಳಿವೆ. ಇಂಥದ್ದೊಂದು ಐತಿಹಾಸಿಕ ಸ್ಥಳವನ್ನು ಮೇಲ್ದರ್ಜೆಗೆ ಏರಿಸಬೇಕಾದ ಅಗತ್ಯವಿದೆ. ಸಮಾಧಿ ಸ್ಥಳದಲ್ಲಿರುವ 64 ಸಾಲಿನ ಕಲ್ಲುಗಳು ಗಟ್ಟಿಮುಟ್ಟಾಗಿದ್ದು ಆಗಿನ ಗಟ್ಟಿ ಕಾಮಗಾರಿಗೆ ನಿದರ್ಶನದಂತಿವೆ. ಈ ಸ್ಥಳವನ್ನು ಅಭಿವೃದ್ಧಿಪಡಿಸಿ ಸ್ಮಾರಕ ಸ್ಥಳಕ್ಕೆ ಹೊಸರೂಪ ಕೊಟ್ಟರೆ ಪ್ರವಾಸೋದ್ಯಮ ದೃಷ್ಟಿಯಿಂದಲೂ ಅನುಕೂಲವಾಗುತ್ತದೆ.   

ಪ್ರವಾಸೋದ್ಯಮಕ್ಕೂ ಅನುಕೂಲ

ಕೃಷ್ಣದೇವರಾಯ ಸಮಾಧಿ ಸ್ಥಳ ಹಾಗೂ ಸುತ್ತಲಿನ ಸ್ಥಳಗಳು ಅಭಿವೃದ್ಧಿಗೊಂಡರೆ ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ಅನುಕೂಲವಾಗುತ್ತದೆ. ತುಂಗಭದ್ರಾ ನದಿಯ ಒಂದು ಭಾಗದಲ್ಲಿ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ, ಇನ್ನೊಂದು ಭಾಗದಲ್ಲಿ ಕೊಪ್ಪಳ ಜಿಲ್ಲೆಯ ಕಿಷ್ಕಿಂಧೆ ಪ್ರದೇಶವಿದ್ದು ಈ ಎರಡು ಐತಿಹಾಸಿಕ ಸ್ಥಳಗಳ ನಡುವೆ ನದಿ ಟಿಸಿಲೊಡೆದು ಹರಿಯುತ್ತದೆ.  

ಆನೆಗೊಂದಿಯಲ್ಲಿ ಗಗನ್‌ ಮಹಲ್‌, ಚಿಂತಾಮಣಿ, ನವವೃಂದಾವನ, ಸಮೀಪದಲ್ಲಿಯೇ ರಾಮಾಯಣದ ಐತಿಹ್ಯ ಹೊಂದಿರುವ ಪಂಪಾಸರೋವರ, ಅಂಜನಾದ್ರಿ ಬೆಟ್ಟ, ಋಷ್ಯಮುಖ ಪರ್ವತ ಹೀಗೆ ಅನೇಕ ತಾಣಗಳು ಗಮನ ಸೆಳೆಯುತ್ತವೆ. ಈ ಎಲ್ಲಾ ತಾಣಗಳಿಂದ ಸ್ಥಳೀಯರಿಗೆ ಉದ್ಯೋಗ ಹಾಗೂ ಆರ್ಥಿಕ ಅಭಿವೃದ್ಧಿಗೂ ಅವಕಾಶಗಳಿವೆ. ಪ್ರಮುಖ ತಾಣಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಾದ ಅಗತ್ಯವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.