ADVERTISEMENT

Web Exclusive | ಉಡುಪಿಯ ಮಲ್ಯಾಡಿ ಪಕ್ಷಿಧಾಮ: ಕ್ಷೀಣಿಸಿದೆ ಬಾನಾಡಿ ಇಂಚರ

ನವೀನ್‌ಕುಮಾರ್ ಜಿ
Published 27 ಜನವರಿ 2026, 0:30 IST
Last Updated 27 ಜನವರಿ 2026, 0:30 IST
   

ಉಡುಪಿ: ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೂರ್ನಾಲ್ಕು ಕಿ.ಮೀ. ಸಾಗಿದರೆ ಕುರುಚಲು ಕಾಡುಗಳಿಂದಾವೃತವಾದ ಬಯಲು ಪ್ರದೇಶವೊಂದು ಕಾಣ ಸಿಗುತ್ತದೆ. ಅದುವೇ ಒಂದು ಕಾಲದಲ್ಲಿ ಈ ಭಾಗದ ಪಕ್ಷಿ ಪ್ರಿಯರ ನೆಚ್ಚಿನ  ತಾಣವಾಗಿದ್ದ ಮಲ್ಯಾಡಿ ಪಕ್ಷಿಧಾಮ.


ನೂರಾರು ಹಕ್ಕಿಗಳಿದೆ ಆಶ್ರಯ ತಾಣವಾಗಿದ್ದ  ಈ ಪ್ರದೇಶವನ್ನು ಅಧಿಕೃತವಾಗಿ ಪಕ್ಷಿಧಾಮವಾಗಿ ಘೋಷಿಸಿರದಿದ್ದರೂ ಮಲ್ಯಾಡಿ ಪಕ್ಷಧಾಮ ಎಂದೇ ಪಕ್ಷಿ ಪ್ರೇಮಿಗಳು, ಪರಿಸರಪ್ರಿಯರು ಈಗಲೂ ಕರೆಯುತ್ತಾರೆ.

ಬಾನಾಡಿಗಳ ಬೀಡಾಗಿದ್ದ ಇಲ್ಲಿಗೆ ಟೆಲಿ ಲೆನ್ಸ್‌ ಅಳವಡಿಸಿದ ಕ್ಯಾಮೆರಾ, ಬೈನಾಕ್ಯೂಲರ್‌ ಹಿಡಿದುಕೊಂಡು ಪಕ್ಷಿಪ್ರಿಯರು ಗುಂಪು ಗುಂಪಾಗಿ ಬರುತ್ತಿದ್ದರು. ಬಾನಾಡಿಗಳ ಸ್ವಚ್ಛಂದ ವಿಹಾರಕ್ಕೆ ಇಲ್ಲಿ ಎಲ್ಲೆ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಲ್ಲಿನ ಕೆರೆಗಳಲ್ಲಿ ಬಾತುಕೋಳಿಗಳ ಶಿಳ್ಳೆ ಕೇಳಿಸುವುದಿಲ್ಲ. ಕಣ್ಣಿಗೆ ಬೀಳುವ ಪಕ್ಷಿಗಳ ಸಂಖ್ಯೆಯೂ ತೀರಾ ಕಡಿಮೆಯಾಗಿದೆ.

ಬಗೆ ಬಗೆಯ ಬಾತುಕೋಳಿಗಳು ವಿಹರಿಸುತ್ತಿದ್ದ ನೀರಿನ ಹೊಂಡಗಳು ಇಂದು ಕಿರಿದಾಗಿವೆ, ಅಂತರಗಂಗೆ, ಸಾಲ್ವೇನಿಯಾ ಕಳೆ ಆವರಿಸಿ ನೀರ ಹೊಂಡಗಳೆಲ್ಲ ಹುಲ್ಲುಗಾವಲಿನಂತಾಗಿವೆ. ಇರುವ ಹೊಂಡಗಳಲ್ಲಿ ಬೇಸಿಗೆಯಲ್ಲೂ ನೀರು ತುಂಬಿಕೊಂಡಿರುತ್ತದೆ.

ಈಚೆಗೆ ಈ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಜೊತೆಗೆ ಬೇಸಿಗೆಯಲ್ಲೂ ವಾರಾಹಿ ನದಿಯ ನೀರು ಕಾಲುವೆಯ ಮೂಲಕ  ಹರಿದು ಬರುತ್ತಿರುವುದರಿಂದ. ನೀರಿನ ಮಟ್ಟ ಕಡಿಮೆಯಾಗುತ್ತಿಲ್ಲ ಎನ್ನುತ್ತಾರೆ ಪಕ್ಷಿ ಪ್ರಿಯರು.

ADVERTISEMENT

ಮಲ್ಯಾಡಿಯ ಜಲತಾಣಗಳಲ್ಲಿ ಕಳೆ ಬೆಳೆದಿರುವುದು



ನೀರಿನ ಹೊಂಡಗಳಲ್ಲಿ ಕಳೆ ತುಂಬಿರುವುದರಿಂದ ಸ್ವಚ್ಛಂದವಾಗಿ ನೀರಿನಲ್ಲಿ ವಿಹರಿಸಿ ಮೀನು ಭಕ್ಷಿಸುತ್ತಿದ್ದ ಬಾತುಕೋಳಿ ಜಾತಿಗೆ ಸೇರಿದ ಅನೇಕ ಹಕ್ಕಿಗಳಿಗೆ ತೊಂದರೆಯಾಯಿತು. ಬೇಸಿಗೆಯಲ್ಲಿ ಗದ್ದೆಗಳ ಹೊಂಡದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ನೀರ ಹಕ್ಕಿಗಳಿಗೆ ಆಹಾರ ಸಿಗುತ್ತದೆ ಆದರೆ ಈಗ ನೀರಿನ ಮಟ್ಟ ಸದಾ ಒಂದೇ ರೀತಿಯಲ್ಲಿರುತ್ತದೆ. ಈ ಕಾರಣಕ್ಕೂ ಹಕ್ಕಿಗಳು ಇಲ್ಲಿಂದ ದೂರವಾಗಿರಬಹುದು ಎಂದೂ ಹೇಳುತ್ತಾರೆ.

ಮಲ್ಯಾಡಿಯ ಸುಮಾರು 1.5 ಚದರ ಕಿ.ಮೀ. ವ್ಯಾಪ್ತಿಯ ಜಲತಾಣಕ್ಕೆ ಚಳಿಗಾಲದಲ್ಲಿ ವಲಸೆ ಹಕ್ಕಿಗಳಾದ ಗೋಲ್ಡನ್‌ ಪ್ಲಾವರ್ಸ್‌, ಸ್ಯಾಂಡ್‌ ಪ್ಲಾವರ್‌, ವೈಟ್‌ ನೆಕ್ಡ್ ಸ್ಟಾರ್ಕ್‌, ಪ್ರಾಂಟಿನ್ಕೊಲ್‌, ಪೇಂಟೆಂಡ್‌ ಸ್ಟಾರ್ಕ್‌, ಬ್ಲ್ಯಾಕ್‌ ವಿಂಗ್‌ಡ್‌ ಸ್ಟಿಲ್ಟ್ ಭೇಟಿ ನೀಡುತ್ತಿದ್ದವು ಈಗ ಈ ಹೆಸರುಗಳು ಪ್ರವಾಸೋದ್ಯಮ ಇಲಾಖೆಯ ನಾಮಫಲಕದಲ್ಲಷ್ಟೇ ಕಾಣಬಹುದು ಎನ್ನುತ್ತಾರೆ ಪಕ್ಷಿ ವೀಕ್ಷಕರು.

ಮಲ್ಯಾಡಿಯ ಕೆರೆ ಪ್ರದೇಶ



ಈ ಪಕ್ಷಿಧಾಮದ ಸುತ್ತ ಮುತ್ತಲಿನ ಪ್ರದೇಶದಲ್ಲಿ   ವಿಸಿಲಿಂಗ್‌ ಡಕ್‌, ಸ್ಪಾಟ್‌ ಬಿಲ್‌ಡ್‌ ಡಕ್‌ಗಳು ಕೆಲ ವರ್ಷಗಳ ಹಿಂದಿನ ವರೆಗೂ ಕಂಡು ಬರುತ್ತಿದ್ದವು ಈಚೆಗೆ ಕಾಣಸಿಗುತ್ತಿಲ್ಲ ಎಂದೂ ಹೇಳುತ್ತಾರೆ.

ಈಗ  ಮಲ್ಯಾಡಿಗೆ ಭೇಟಿ ನೀಡಿದರೆ, ಕಳೆ ಬೆಳೆದಿರುವ ನೀರಿನ ಹೊಂಡಗಳಲ್ಲಿ  ಜಕಾನ, ಬೆರಳೆಣಿಕೆಯ ಸ್ವಾಂಪ್‌ ಹೆನ್‌, ಬ್ಲ್ಯಾಕ್‌ ಹೆಡೆಡ್‌ ಐಬಿಸ್‌, ಬೆಳ್ಳಕ್ಕಿ ಬಿಟ್ಟರೆ ಬೇರೆ ಪ್ರಭೇದದ ಹಕ್ಕಿಗಳು ಕಂಡು ಬರುವುದಿಲ್ಲ. ಪಕ್ಕದ ಕುರುಚಲು ಕಾಡು ಪ್ರದೇಶದಲ್ಲಿ ಬೀ ಈಟರ್‌ಗಳಷ್ಟೇ ದರ್ಶನ ನೀಡುತ್ತವೆ.

ಮಲ್ಯಾಡಿಯ ನೂರಾರು ಎಕರೆ ಖಾಸಗಿ ಜಮೀನು ಹಲವು ವರ್ಷಗಳ ಹಿಂದೆ ಭತ್ತದ ಗದ್ದೆಗಳಾಗಿದ್ದವು.  ಹಂಚಿನ ಕಾರ್ಖಾನೆಗೆ ಇಲ್ಲಿನ ಗದ್ದೆಗಳಿಂದ ಆವೆ ಮಣ್ಣು ತೆಗೆದ ಬಳಿಕ ಗದ್ದೆಗಳು ಕೊಳದ ರೂಪಕ್ಕೆ ತಿರುಗಿ ಹಕ್ಕಿಗಳನ್ನು ಆಕರ್ಷಿಸಿದ್ದವು. ಈ ಕಾರಣಕ್ಕೆ ಸ್ಥಳೀಯವಾಗಿ ಕಂಡು ಬರುವ ಹಕ್ಕಿಗಳಲ್ಲದೆ ವಲಸೆ ಹಕ್ಕಿಗಳೂ ಮಲ್ಯಾಡಿಯ ಗದ್ದೆಗಿಳಿಯುತ್ತಿದ್ದವು. ಹಾಗೆಯೇ ಇದು ಪಕ್ಷಿಪ್ರಿಯರ ಸ್ವರ್ಗವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ  ಇಲ್ಲಿನ ಹಿರಿಯರು.

ಮಲ್ಯಾಡಿಯ ಜಲತಾಣಗಳಲ್ಲಿ ಕಳೆ ಬೆಳೆದಿರುವುದು



ಹಂಚಿನ ಕಾರ್ಖಾನೆಗಳಿಗಾಗಿ ಮಣ್ಣುತೆಗೆದ ಪರಿಣಾಮವಾಗಿ ಉಂಟಾದ ಹೊಂಡಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಜೌಗು ಪ್ರದೇಶವಾಗಿ ಮಾರ್ಪಟ್ಟು ನೈಸರ್ಗಿಕವಾಗಿ ಪಕ್ಷಧಾಮವಾಗಿ ಮಾರ್ಪಟ್ಟಿತ್ತು ಎಂದು ಹೇಳುತ್ತಾರೆ.

ನೀರಿನ ಸಂಗ್ರಹದಿಂದ ಕುತ್ತು: ‘ವಾರಾಹಿಯ ನೀರು ಮಲ್ಯಾಡಿ ಬರಲಾರಂಭಿಸಿದ ಬಳಿಕ ಅಲ್ಲಿನ ಹೊಂಡಗಳಲ್ಲಿ ನೀರಿನ ಮಟ್ಟ ಏರಿಕೆಯಾಯಿತು. ಎಲ್ಲಾ ಋತುವಲ್ಲೂ ನೀರಿನ ಮಟ್ಟ ಒಂದೇ ರೀತಿಯಲ್ಲಿ ಇದ್ದುದರಿಂದ ಪಕ್ಷಿಗಳು ಅಲ್ಲಿಂದ ದೂರವಾದವು. ಈಗ ನೀರಿನ ಮಟ್ಟ ಕಡಿಮೆಯಾದರೂ ಪಕ್ಷಿಗಳು ಬರುತ್ತಿಲ್ಲ. ಹಲವು ವರ್ಷಗಳ ಕಾಲ ಅತಿಯಾದ ನೀರಿನ ಸಂಗ್ರಹವು ಈ ಪಕ್ಷಿಧಾಮಕ್ಕೆ ಕುತ್ತು ತಂದಿದೆ’ ಎನ್ನುತ್ತಾರೆ ಪಕ್ಷಿತಜ್ಞ ವಿ. ಲಕ್ಷ್ಮಿ ನಾರಾಯಣ ಉಪಾಧ್ಯ.

ಲಿಟಿಲ್‌ ಕಾರ್ಮೊರೆಂಟ್‌



‘ಯಾವುದೇ ಪ್ರದೇಶದಲ್ಲಿ ಮಾನವನ ಚಟುವಟಿಕೆ ಅಧಿಕವಾದಾಗಲೂ ಪಕ್ಷಿಗಳು ದೂರವಾಗುತ್ತವೆ. ಮಲ್ಯಾಡಿಯ ಸುತ್ತಮುತ್ತಲು ಈಗ ವಾಹನಗಳ ಓಡಾಟ ಹೆಚ್ಚಾಗಿದ್ದು, ಅವುಗಳ ಕರ್ಕಶ ಧ್ವನಿಗೆ ಹಕ್ಕಿಗಳು ಬೆದರುತ್ತವೆ’ ಎನ್ನುತ್ತಾರೆ ಅವರು.

ಬ್ಲ್ಯಾಕ್‌ ಹೆಡೆಡ್‌ ಐಬಿಸ್‌



‘ಕುಂದಾಪುರ ಪರಿಸರಕ್ಕೆ ಪ್ರತಿವರ್ಷವೂ ಬಗೆ ಬಗೆಯ ವಲಸೆ ಹಕ್ಕಿಗಳು ಬರುತ್ತವೆ. ಮಲ್ಯಾಡಿಯು ಕುಂದಾಪುರಕ್ಕೆ ಸಮೀಪದಲ್ಲೇ ಇರುವುದರಿಂದ ಅಲ್ಲಿಗೂ ಹಕ್ಕಿಗಳು ಬರುತ್ತಿದ್ದವು. ಆದರೆ ಈಗ ಈ ಪಕ್ಷಿಧಾಮವು ಹಕ್ಕಿಗಳನ್ನು ಆಕರ್ಷಿಸುವ ತಾಣವಾಗಿ ಉಳಿದಿಲ್ಲ. ಕೆಲ ವರ್ಷಗಳ ಹಿಂದೆ ಕುಂದಾಪುರ ಪರಿಸರದಲ್ಲೇ ನಮಗೆ ಕ್ರ್ಯಾಬ್‌ ಪ್ಲೋವರ್‌ ಹಕ್ಕಿಯೂ ಕಂಡು ಬಂದಿತ್ತು’ ಎಂದೂ ಹೇಳುತ್ತಾರೆ ಅವರು.

ಕೆರೆಯಲ್ಲಿ ಕಳೆ ತುಂಬಿರುವುದು


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.