
ಮಂಗಳೂರು: ಕಡಲ ಪವನ ಶಕ್ತಿ ಅಥವಾ 'ಸಮುದ್ರ ತೀರದ ಪವನ ಶಕ್ತಿ (Offshore Wind Energy) ಉತ್ಪಾದನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಪ್ರಶಸ್ತ ತಾಣವಾಗಿದೆಯೇ? ಹೌದು ಎಂದಾದರೆ, ಕೇಂದ್ರ ಸರ್ಕಾರ ಈ ಯೋಜನೆಯನ್ನು ಇಲ್ಲಿ ಇನ್ನೂ ಏಕೆ ಅನುಷ್ಠಾನಗೊಳಿಸಿಲ್ಲ?
ಭಾರತದ ಗ್ರೀನ್ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ಕಡಲ ಪವನ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದಂತೆಯೇ ಇಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಕಡಲ ಪವನ ಶಕ್ತಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. 2024ರ ಜೂನ್ 19ರಂದು ನಡೆದ ಕೇಂದ್ರ ಸಂಪುಟ ಸಭೆಯು, ಕಡಲ ಪವನ ಶಕ್ತಿ ಯೋಜನೆಗಳಿಗೆ ಕಾರ್ಯಸಾಧ್ಯತೆ ಅಂತರ ನಿಧಿ (ವಿಜಿಎಫ್) ಯೋಜನೆಗೆ ಒಟ್ಟು ₹7,453 ಕೋಟಿ ವೆಚ್ಚದ ಅನುಮೋದನೆ ನೀಡಿತ್ತು. ಇದು 1 ಗಿಗಾ ವಾಟ್, ಕಡಲತೀರದ ಪವನ ಶಕ್ತಿ ಯೋಜನೆಗಳ ಸ್ಥಾಪನೆ ಮತ್ತು ಕಾರ್ಯಾರಂಭಕ್ಕೆ ₹6,853 ಕೋಟಿ ವೆಚ್ಚವನ್ನು ಮತ್ತು ಕಡಲ ಪವನ ಶಕ್ತಿ ಯೋಜನೆಗಳಿಗೆ ಸಾರಿಗೆ ಅವಶ್ಯಕತೆಗಳನ್ನು ಪೂರೈಸಲು ಎರಡು ಬಂದರುಗಳ ಉನ್ನತೀಕರಣಕ್ಕಾಗಿ ₹600 ಕೋಟಿ ಅನುದಾನ ಒಳಗೊಂಡಿತ್ತು. ಇವು ಗುಜರಾತ್ ಮತ್ತು ತಮಿಳುನಾಡು ಕರಾವಳಿಯಲ್ಲಿ ತಲಾ 500 ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಸೀಮಿತವಾಗಿತ್ತು.
ಕಾರ್ಯಸಾಧ್ಯತೆ ಅಂತರ ನಿಧಿ (ವಿಜಿಎಫ್) ಯೋಜನೆಯು 2015ರ ರಾಷ್ಟ್ರೀಯ ಕಡಲ ಪವನ ಶಕ್ತಿ ನೀತಿಯ ಅನುಷ್ಠಾನಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಅಸ್ತಿತ್ವದಲ್ಲಿರುವ ವಿಶಾಲವಾದ ಕಡಲ ಪವನ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಸರ್ಕಾರದ ವಿಜಿಎಫ್ ಯೋಜನೆಯ ಬೆಂಬಲವು ಕಡಲ ಪವನ ಶಕ್ತಿ ಯೋಜನೆಗಳಿಂದ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುತ್ತದೆ. ಪಾರದರ್ಶಕ ಹರಾಜು ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಖಾಸಗಿ ಸಂಸ್ಥೆಗಳು ಯೋಜನೆಗಳನ್ನು ಸ್ಥಾಪಿಸಿದರೆ, ಕಡಲಿನ ಸಬ್ ಸ್ಟೇಷನ್‌ಗಳನ್ನು ಒಳಗೊಂಡಂತೆ ಮೂಲಸೌಕರ್ಯವನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್) ನಿರ್ಮಿಸುತ್ತದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ನೋಡಲ್ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ರಾಷ್ಟ್ರೀಯ ಕಡಲ ಪವನ ಶಕ್ತಿ ನೀತಿಯ ತಿರುಳು.
ಕಡಲ ಪವನಶಕ್ತಿಯು ಹೆಚ್ಚಿನ ಸಮರ್ಪಕತೆ ಮತ್ತು ವಿಶ್ವಾಸಾರ್ಹತೆ, ಕಡಿಮೆ ಸಂಗ್ರಹಣೆಯ ಅವಶ್ಯಕತೆ ಮತ್ತು ಹೆಚ್ಚಿನ ಉದ್ಯೋಗದ ಸಾಮರ್ಥ್ಯವನ್ನು ಹೊಂದಿದೆ.
1 ಗಿಗಾ ವಾಟ್ ಕಡಲ ಪವನ ಶಕ್ತಿ ಸಾಮರ್ಥ್ಯದ ಒಂದು ಯೋಜನೆಯ ಯಶಸ್ವಿ ಕಾರ್ಯಾರಂಭವು ವಾರ್ಷಿಕವಾಗಿ ಸುಮಾರು 3.72 ಶತಕೋಟಿ ಯೂನಿಟ್‌ಗಳ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುತ್ತದೆ. ಇದು 25 ವರ್ಷಗಳ ಅವಧಿಗೆ 2.98 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಸಮಾನವಾದ ಹೊರಸೂಸುವಿಕೆಯನ್ನು ವಾರ್ಷಿಕವಾಗಿ ಕಡಿಮೆ ಮಾಡುತ್ತದೆ ಎಂಬುದು ಕೇಂದ್ರ ಸರ್ಕಾರದ ಮಾಹಿತಿ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಲ ತೀರಕ್ಕೆ ಬರುವುದಾದರೆ, ಇಲ್ಲಿಯ ಕರಾವಳಿಯು ಸುಮಾರು 6,490 ಚದರ ಕಿಲೋ ಮೀಟರ್ ಪ್ರದೇಶವು ಪವನ ಇಂಧನ ಉತ್ಪಾದನೆಗೆ ಹೆಚ್ಚು ಪೂರಕವಾಗಿದೆ. ಇಲ್ಲಿ ಭೂಕಂಪನ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಅಪಾಯ ಕಡಿಮೆ ಇರುವುದರಿಂದ ದೀರ್ಘಕಾಲದ ಪವನ ಇಂಧನ ಯೋಜನೆಗಳ ಸ್ಥಾಪನೆಗೆ ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ಪ್ರದೇಶವಾಗಿದೆ. ಇಲ್ಲಿ ಸಮುದ್ರ ತೀರದ ಪವನ ಶಕ್ತಿ ಉತ್ಪಾದನೆಗೆ ವಿಪುಲ ಅವಕಾಶವಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ (NIO) ವರದಿ ಉಲ್ಲೇಖಿಸಿ ಸಂಸತ್ತಿನಲ್ಲಿ ಮಾತನಾಡಿರುವ ಸಂಸದ ಚೌಟ, 'ಭಾರತದ ಭರವಸೆಯ ಕಡಲ ಪವನ ಇಂಧನ ವಲಯ-2ರಲ್ಲಿ ಮಂಗಳೂರು ಕರಾವಳಿ' ಗುರುತಿಸಿದ್ದು, ಹೀಗಾಗಿ, ಮಂಗಳೂರು ಕಡಲ ತೀರವನ್ನು ಪವನ ಶಕ್ತಿ ಉತ್ಪಾದನೆ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಿದ್ದಾರೆ.
ಇಲ್ಲಿರುವ ಇನ್ನೊಂದು ದೊಡ್ಡ ಅನುಕೂಲ ಎಂದರೆ ನವ ಮಂಗಳೂರು ಬಂದರು. ಅತ್ಯುತ್ತಮ ಮೂಲಸೌಕರ್ಯ, ಬಹು ಬರ್ತ್‌ಗಳು, ಹೆಚ್ಚಿನ ಸರಕು ನಿರ್ವಹಣಾ ಸಾಮರ್ಥ್ಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ಬಂದರಿನಲ್ಲಿವೆ. ವಿಂಡ್ ಟರ್ಬೈನ್‌ಗಳಂತಹ ಬೃಹತ್ ಯಂತ್ರೋಪಕರಣಗಳ ಸಾಗಣೆ ಮತ್ತು ಜೋಡಣೆಗೆ ಇಲ್ಲಿ ಪೂರಕ ವ್ಯವಸ್ಥೆಯಿದೆ. ಇದು ಕಡಲ ಪವನ ಇಂಧನ ಯೋಜನೆಗಳ ನಿರ್ವಹಣೆಗೆ ಒಂದು ಪ್ರಮುಖ ಲಾಜಿಸ್ಟಿಕ್ ನೆಲೆಯನ್ನಾಗಿ ಪರಿವರ್ತಿಸಬಹುದು. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸೇರಿದಂತೆ ಹಲವು ಕಂಪನಿಗಳು, ಮಂಗಳೂರು ಎಸ್‌ಇಝಡ್ (MSEZ) ನಂತಹ ಬೃಹತ್ ಕೈಗಾರಿಕೆಗಳ ಕೇಂದ್ರವಾಗಿರುವುದರಿಂದ, ಇಲ್ಲಿ ತಯಾರಾಗುವ ಗ್ರೀನ್ ಎನರ್ಜಿಗೂ ಸ್ಥಳೀಯವಾಗಿಯೇ ದೊಡ್ಡ ಮಟ್ಟದ ಮಾರುಕಟ್ಟೆ ಲಭ್ಯವಿದೆ. ಹೀಗಾಗಿ ಕಡಲ ಪವನ ಶಕ್ತಿಯಿಂದ ಉತ್ಪಾದನೆಯಾಗುವ ವಿದ್ಯುತ್‌ನ್ನು ನೇರವಾಗಿ ಮಾರಾಟ ಮಾಡಲು ಸುಲಭವಾಗುತ್ತದೆ. ಇವುಗಳೊಂದಿಗೆ ನೇರ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಯೋಜನೆಯ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ತ್ವರಿತ ಅನುಷ್ಠಾನಕ್ಕೂ ಇದು ಸಹಕಾರಿ ಎನ್ನುವುದು ಸಂಸದರು ನೀಡಿರುವ ವಿವರಣೆ.
ಕರ್ನಾಟಕಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದೆ. 2025ರ ಆರಂಭದಲ್ಲಿ ರಾಜ್ಯದ ಗರಿಷ್ಠ ವಿದ್ಯುತ್ ಬೇಡಿಕೆಯು 18,000 ಮೆಗಾವಾಟ್ ದಾಟಿದ್ದು, ಇಂತಹ ಸಂದರ್ಭದಲ್ಲಿ ಪರ್ಯಾಯ ಇಂಧನ ಉತ್ಪಾದಿಸುವ ಪವನ ಶಕ್ತಿಯನ್ನು ಉತ್ತೇಜಿಸುವ ಅಗತ್ಯವಿದೆ. ಕರ್ನಾಟಕದ ಕರಾವಳಿಯಲ್ಲಿ ಗಾಳಿಯ ವೇಗವು ತುಲನಾತ್ಮಕವಾಗಿ ಕಡಿಮೆ ಇದ್ದರೂ, ಅರಬ್ಬಿ ಸಮುದ್ರದಲ್ಲಿ ಕಡಲಾಚೆಯ ಗಾಳಿ ಇಂಧನ ಅಭಿವೃದ್ಧಿಪಡಿಸುವುದು ದಕ್ಷಿಣ ಭಾರತದ ಇಂಧನ ಭದ್ರತೆಗೆ ಅತ್ಯಗತ್ಯವಾಗಿದೆ. ಜೊತೆಗೆ ಬಂಗಾಳ ಕೊಲ್ಲಿಯು ಸದಾ ಚಂಡಮಾರುತದ ಭೀತಿ ಎದುರಿಸುತ್ತಿರುವುದರಿಂದ, ಅರಬ್ಬಿ ಸಮುದ್ರದ ಈ ವಲಯವು ಪವನ ಶಕ್ತಿಯ ಬಲವರ್ಧನೆಗೆ ಹೆಚ್ಚು ಸುರಕ್ಷಿತವಾಗಿದೆ.
2030ರ ವೇಳೆಗೆ 500 ಗಿವಾ ವಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಭಾರತದ ಗುರಿಯನ್ನು ತಲುಪಲು ಮಂಗಳೂರು ಪವನ ಶಕ್ತಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ತಕ್ಷಣವೇ ಸಂಪನ್ಮೂಲಗಳ ಮೌಲ್ಯಮಾಪನ, ಯೋಜನೆಗಳ ಪ್ರಾಯೋಗಿಕ ಅನುಷ್ಠಾನ ಮತ್ತು ಕೈಗಾರಿಕಾ ಸಮಾಲೋಚನೆಗಳನ್ನು ನಡೆಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನವೀಕರಿಸಬಹುದಾದ ಇಂಧನ ಸಚಿವಾಲಯವನ್ನು ಸಂಸದ ಕ್ಯಾ. ಚೌಟ ಒತ್ತಾಯಿಸಿದ್ದಾರೆ.
ಇತಿಹಾಸ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ಮಾಹಿತಿ ಪ್ರಕಾರ, ಜಾಗತಿಕವಾಗಿ ಕಡಲಾಚೆಯ ಪವನ ವಿದ್ಯುತ್ ಉತ್ಪಾದನೆಯು ಸುಮಾರು ಎರಡು ದಶಕಗಳ ಇತಿಹಾಸ ಹೊಂದಿದೆ. 1991 ರಲ್ಲಿ ಡೆನ್ಮಾರ್ಕ್‌ನಲ್ಲಿ ಮೊದಲ ಕಡಲಾಚೆಯ ಪವನ ವಿದ್ಯುತ್ ಟರ್ಬೈನ್ ಸ್ಥಾಪಿಸಲಾಯಿತು. ಡಿಸೆಂಬರ್ 2023 ರ ಹೊತ್ತಿಗೆ 75 ಗಿಗಾ ವಾಟ್ ಗಿಂತ ಹೆಚ್ಚಿನ ಕಡಲಾಚೆಯ ಪವನ ಶಕ್ತಿ ಯೋಜನೆಗಳನ್ನು 18 ವಿವಿಧ ದೇಶಗಳಲ್ಲಿ ಸ್ಥಾಪಿಸಲಾಗಿದೆ. ಅವುಗಳಲ್ಲಿ ಪ್ರಮುಖ ದೇಶಗಳು ಯುಕೆ, ಚೀನಾ, ಜರ್ಮನಿ, ಡೆನ್ಮಾರ್ಕ್ ಮತ್ತು ನೆದರ್‌ಲ್ಯಾಂಡ್.
ಕಡಲ ಪವನ ಶಕ್ತಿ (Offshore Wind Energy) ಸಮುದ್ರದ ಆಳವಿಲ್ಲದ ಅಥವಾ ಆಳವಾದ ನೀರಿನಲ್ಲಿ ತೇಲುವ ಟರ್ಬೈನ್‌ಗಳನ್ನು ಸ್ಥಾಪಿಸಿ, ಅಡೆತಡೆಯಿಲ್ಲದ ಬಲವಾದ ಗಾಳಿಯ ಮೂಲಕ ವಿದ್ಯುತ್ ಉತ್ಪಾದಿಸುವ ಶುದ್ಧ ಇಂಧನ ಮೂಲವಾಗಿದೆ. ಇದು ಭೂಮಿಯ ಮೇಲಿನ ಪವನ ಶಕ್ತಿಗಿಂತ ಎರಡು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಭಾರತವು 2030ರ ವೇಳೆಗೆ 500 ಗಿಗಾ ವಾಟ್ ನವೀಕರಿಸಬಹುದಾದ ಇಂಧನ ಗುರಿಯನ್ನು ತಲುಪಲು ಗುಜರಾತ್ ಮತ್ತು ತಮಿಳುನಾಡು ಕರಾವಳಿಯಲ್ಲಿ ಈ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಸಮುದ್ರದಲ್ಲಿ ಗಾಳಿಯ ವೇಗವು ಹೆಚ್ಚಾಗಿ ಮತ್ತು ಸ್ಥಿರವಾಗಿ ಇರುವುದರಿಂದ, ಕಡಲಾಚೆಯ ಗಾಳಿ ಟರ್ಬೈನ್‌ಗಳು ಹೆಚ್ಚು ಪರಿಣಾಮಕಾರಿಯಾಗಿ ವಿದ್ಯುತ್ ಉತ್ಪಾದಿಸುತ್ತವೆ.
ಕಡಲಾಚೆಯ ಗಾಳಿ ಟರ್ಬೈನ್‌ಗಳು ವಿದ್ಯುತ್ಕಾಂತೀಯ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ, ಇಲ್ಲಿ ಬೃಹತ್ ಬ್ಲೇಡ್‌ಗಳು ಗಾಳಿಯಿಂದ ತಿರುಗಿದಾಗ ವಿದ್ಯುತ್ ಉತ್ಪತ್ತಿಯಾಗುತ್ತದೆ.
ಪರಿಸರ ಸ್ನೇಹಿ, ಮಾಲಿನ್ಯರಹಿತ ಮತ್ತು ಅನಿಯಮಿತ ಶಕ್ತಿಯ ಮೂಲ ಇದಾಗಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ಹೋಲಿಸಿದರೆ, ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಶೇ 99 ಕ್ಕಿಂತ ಹೆಚ್ಚು ಕಡಿಮೆ ಮಾಡುತ್ತದೆ.
ಭಾರತ ಸರ್ಕಾರವು 2030ರ ವೇಳೆಗೆ ಗುಜರಾತ್ ಮತ್ತು ತಮಿಳುನಾಡು ತೀರದಲ್ಲಿ ಒಟ್ಟು 1 ಗಿಗಾ ವಾಟ್ (ತಲಾ 500 ಮೆಗಾ ವಾಟ್) ಸಾಮರ್ಥ್ಯದ ಕಡಲ ಪವನ ಶಕ್ತಿ ಯೋಜನೆಗಳಿಗೆ ₹7,453 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.