
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಿಸಿರುವ ಶ್ರೀನಿವಾಸ ರಾಮಾನುಜನ್ ಗಣಿತ ಉದ್ಯಾನ
ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ (ಆರ್‌ಸಿಎಸ್) ನಿರ್ಮಿಸಿರುವ ಶ್ರೀನಿವಾಸ ರಾಮಾನುಜನ್ ಗಣಿತ ಉದ್ಯಾನ ಉದ್ಘಾಟನೆಗೆ ಸಿದ್ಧವಾಗಿದೆ. ಶಾಲಾ ವಿದ್ಯಾರ್ಥಿಗಳು ಚಟುವಟಿಕೆ ಆಧಾರಿತವಾಗಿ ಗಣಿತ ಕಲಿಯಲು ಪೂರಕವಾಗಿ ಉದ್ಯಾನವನ್ನು ಸಜ್ಜುಗೊಳಿಸಲಾಗಿದೆ.
ಕೇಂದ್ರದ ಹೊರಾಂಗಣ ಆವರಣದ ಹಸಿರು ಪರಿಸರದಲ್ಲಿ ಗಿಡ, ಮರಗಳ ನೆರಳಿನಲ್ಲಿ ಉದ್ಯಾನವನ್ನು ವಿನ್ಯಾಸಗೊಳಿಸಲಾಗಿದೆ. ಒಂದು ಎಕರೆಯಲ್ಲಿಈ ಉದ್ಯಾನ ಇದೆ. ಅಂಕಗಣಿತ, ಬೀಜಗಣಿತ, ರೇಖಾಗಣಿತ, ‘ಟ್ರಿಗ್ನಾಮೆಟ್ರಿ’ ಸಹಿತ ಗಣಿತದ ವಿವಿಧ ವಿಭಾಗಗಳ ಮಾದರಿಗಳು ಇಲ್ಲಿವೆ. ಸಿಮೆಂಟ್ ಕಟ್ಟೆಗಳನ್ನು ನಿರ್ಮಿಸಿ ಮಾದರಿಗಳನ್ನು ಅಳವಡಿಸಲಾಗಿದೆ. ಪಾರ್ಕ್‌ನೊಳಗೆ ಓಡಾಡಲು ಕಲ್ಲುಹಾಸಿನ ಮಾರ್ಗ ನಿರ್ಮಿಸಲಾಗಿದೆ.
5 ರಿಂದ 10ನೇ ತರಗತಿಯ ಗಣಿತ ಪಠ್ಯಕ್ಕೆ ಸಂಬಂಧಿಸಿದ ಮಾದರಿಗಳು ಇವೆ. ‘ನೋಡಿ ತಿಳಿ, ಮಾಡಿ ಕಲಿ’ ಪರಿಕಲ್ಪನೆಗೆ ಪೂರಕವಾಗಿ ಅವುಗಳನ್ನು ಸಿದ್ಧಪಡಿಸಲಾಗಿದೆ. ಮಾದರಿಗಳ ಪಕ್ಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವರಣೆ ಫಲಕಗಳು ಇವೆ. ವಿದ್ಯಾರ್ಥಿಗಳು ಸ್ವತಃ ಮಾದರಿಗಳನ್ನು ಮುಟ್ಟಿ, ನೋಡಿ, ಫಲಕದಲ್ಲಿನ ವಿವರಣೆ ಓದಿ, ಚಟುವಟಿಕೆ ಆಧಾರಿತವಾಗಿ ವಿಷಯ ಮನದಟ್ಟು ಮಾಡಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಗಣಿತ ಉದ್ಯಾನದಲ್ಲಿನ ವಿವಿಧ ಮಾದರಿಗಳು
29 ಮಾದರಿಗಳು: ಉದ್ಯಾನದಲ್ಲಿ 29 ಮಾದರಿಗಳನ್ನು ಅಳವಡಿಸಲಾಗಿದೆ. ಉಕ್ಕು, ಕಬ್ಬಿಣದ ಕಂಬಿಗಳು, ಅಲ್ಯುಮಿನಿಯಂ (ಎಸಿಪಿ) ಶೀಟುಗಳು, ಸಿಮೆಂಟ್ ಬಳಸಿ ಮಾದರಿಗಳನ್ನು ತಯಾರಿಸಲಾಗಿದೆ. ಕೆಂಪು, ಬಿಳಿ, ನೇರಳೆ, ನೀಲಿ, ಹಳದಿ, ಹಸಿರು ಮೊದಲಾದ ಬಣ್ಣಗಳಲ್ಲಿ ಆಕೃತಿಗಳನ್ನು ರಚಿಸಲಾಗಿದೆ.
‘ತ್ರಿಕೋನದ ವಿಧಗಳು’, ‘ತ್ರಿಕೋನದ ಕೋನಗಳ ಮೊತ್ತ 180 ಡಿಗ್ರಿ’, ‘ಚತುಷ್ಪಥ ಆಂತರಿಕ ಕೋನಗಳ ಮೊತ್ತ 360 ಡಿಗ್ರಿ’, ‘ಅಭಿಮುಖ ಕೋನಗಳು ಸಮಾನ, ವೃತ್ತದ ಪ್ರಮೇಯಗಳು’, ‘ಪೈ ಮೌಲ್ಯ’, ‘ವೃತ್ತಗಳ ಸಹಾಯದಿಂದ ಪೈ ಮೌಲ್ಯ ಕಂಡುಹಿಡಿಯುವುದು’, ‘ಪೈಥಾಗೊರಸ್ ಪ್ರಮೇಯ’, ‘ಸಿಲಿಂಡರ್‌ನ ಪ್ರಮಾಣ ಕೋನಿನ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚಿರುತ್ತದೆ’, ‘ಚೌಕಾಕಾರದ ಚಕ್ರದ ಟ್ರೈಸಿಕಲ್’, ‘ಶಂಕುವಿನಾಕಾರದ ವಿಭಾಗ’, ‘ಷಡ್ಭುಜೀಯ ಪ್ರಿಸಂ’, ‘ಬಹುಭುಜಾಕೃತಿ’, ‘ದೈತ್ಯ ಕೋನಮಾಪಕ’, ‘ಮಾಂತ್ರಿಕ ಷಡ್ಭುಜಾಕೃತಿ’, ‘ಸೂಪರ್ ಷಡ್ಭುಜಾಕೃತಿ ತ್ರಿಕೋನಮಿತಿ’, ‘ಟೆಟ್ರಾ ಹೆಡ್ರನ್ನ’, ‘ಗಾರ್ಫೀಲ್ಡ್ ಪುರಾವೆ’, ‘ಐಕೋಸಾ ಹೆಡ್ರೆನ್’, ‘ಡೋಡೆಕಾಹೆಡ್ರೆನ್’, ‘ವಾಸ್ತವ ಸಂಖ್ಯೆ’, ‘ಭಿನ್ನರಾಶಿಗಳು’, ‘ಸಮಾನ ಭಿನ್ನರಾಶಿಗಳು’, ‘ರೋಂಬಸ್‌ನ ಗುಣಲಕ್ಷಣಗಳು’, ‘3ಡಿ ಆಯಾಮ ವ್ಯವಸ್ಥೆ’, ‘4 ಆಯಾಮ ಟೆಸ್ಸೆರಾಕ್ಟ್’ ಮಾದರಿಗಳು ಇವೆ.
ಗಣಿತ ಉದ್ಯಾನದಲ್ಲಿನ ವಿವಿಧ ಮಾದರಿಗಳು
ಶ್ರೀನಿವಾಸ ರಾಮಾನುಜನ್ ಪ್ರತಿಮೆ: ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಅವರ ಪ್ರತಿಮೆಯನ್ನು (ಎಫ್‌ಆರ್‌ಪಿ) ಉದ್ಯಾನದಲ್ಲಿ ಇಡಲಾಗಿದೆ ಅವರ ಜೀವಿತಾವಧಿ (1887 ಡಿಸೆಂಬರ್ 22 ರಿಂದ 1920 ಏಪ್ರಿಲ್ 26), ಗಣಿತ ಕ್ಷೇತ್ರಕ್ಕೆ ಅವರ ಕೊಡುಗೆಗಳ (ಗಣಿತ ವಿಶ್ಲೇಷಣೆ, ಸಂಖ್ಯಾ ಸಿದ್ಧಾಂತ, ಅನಂತ ಸರಣಿ ಮತ್ತು ಮುಂದುವರಿದ ಭಿನ್ನರಾಶಿ..) ಕುರಿತು ಮಾಹಿತಿ ಫಲಕದಲ್ಲಿ ಇದೆ.
‘ವಿದ್ಯಾರ್ಥಿಗಳು ಗಣಿತವನ್ನು ಪ್ರಾಯೋಗಿಕವಾಗಿ, ಸರಳವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಮಾದರಿಗಳನ್ನು ರಚಿಸಲಾಗಿದೆ. ಉದಾಹರಣೆಗೆ ‘ಸಿಲಿಂಡರ್‌ನ ಪ್ರಮಾಣವು ಕೋನಿನ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ’ ಎಂದು ತಿಳಿಸಲು ಸಿದ್ಧಪಡಿಸಿರುವ ಮಾದರಿಯಲ್ಲಿ ಒಂದು ಕೋನ್, ಒಂದು ಸಿಲಿಂಡರ್ ಇಟ್ಟು, ಕೋನಿಗೆ ನೀರು ತುಂಬಿಸಿ ಸಿಲಿಂಡರ್‌ಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಕೋನ್‌ಗೆ ನೀರು ಭರ್ತಿ ಮಾಡಿ ಸಿಲಿಂಡರ್‌ಗೆ ಸುರಿಯಬೇಕು, ಮೂರು ಬಾರಿ ಈ ರೀತಿ ಮಾಡಿದಾಗ ಸಿಲಿಂಡರ್ ಭರ್ತಿಯಾಗುತ್ತದೆ. ಈ ಪ್ರಯೋಗ ನೋಡಿದಾಗ ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟಾಗುತ್ತದೆ’ ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ನೌಕರ ಸಂದೀಪ್ ‘ಪ್ರಜಾವಾಣಿ’ಗೆ ವಿವರಿಸಿದರು.
‘ಗಣಿತ ವಿಷಯ ‘ಕಬ್ಬಿಣದ ಕಡಲೆ’ ಎಂದು ಹಲವರು ಹೇಳುತ್ತಾರೆ. ಆದರೆ, ಈ ಪಾರ್ಕ್ ಗಣಿತ ಕಲಿಕೆಯ ಆಸಕ್ತಿ ಬೆಳೆಸುವಂತಿದೆ. ಈ ಪಾರ್ಕ್ ವಿಶೇಷವಾಗಿದ್ದು, ಒಳಗೆ ಸುತ್ತಿದರೆ ಪ್ರಮೇಯಗಳು, ಆಕೃತಿಗಳು ಮೊದಲಾದ ವಿಷಯಗಳನ್ನು ಸರಳವಾಗಿ ತಿಳಿದುಕೊಳ್ಳವಂತೆ ರೂಪಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕ ಬಸವರಾಜ ಮಾದಣ್ಣವರ ತಿಳಿಸಿದರು.
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಿಸಿರುವ ಶ್ರೀನಿವಾಸ ರಾಮಾನುಜನ್ ಗಣಿತ ಉದ್ಯಾನ
‘ದಕ್ಷಿಣ ಭಾರತದಲ್ಲಿ ಇಂಥ ಗಣಿತ ಉದ್ಯಾನದ ಬೇರೆ ಕಡೆ ಇಲ್ಲ. ಈ ಉದ್ಯಾನವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ರಾಜ್ಯ ಸರ್ಕಾರವು ಕಳೆದ ವರ್ಷ ಒದಗಿಸಿದ ಅನುದಾನದಲ್ಲಿ ಗಣಿತ ಉದ್ಯಾನ ನಿರ್ಮಿಸಲಾಗಿದೆ. ₹ 29 ಲಕ್ಷ ವೆಚ್ಚದಲ್ಲಿ ಉದ್ಯಾನವನ್ನು ನಿರ್ಮಿಸಲಾಗಿದೆ. ಉದ್ಯಾನ ಉದ್ಘಾಟನೆ ಏಪ್ರಿಲ್ 8ಕ್ಕೆ ನಿಗದಿಯಾಗಿದೆ’ ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ವೀರಣ್ಣ ಡಿ.ಬೋಳಿಶೆಟ್ಟಿ ತಿಳಿಸಿದರು.
‘ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ ಆಸಕ್ತಿ ಬೆಳೆಸುವುದು, ಸರಳವಾಗಿ ಗಣಿತವನ್ನು ಅರ್ಥೈಸುವುದು ಈ ಪಾರ್ಕ್ ನಿರ್ಮಾಣದ ಉದ್ದೇಶವಾಗಿದೆ. ಈ ಪಾರ್ಕ್‌ನ ಸಮಗ್ರ ಮಾಹಿತಿಯ ‘ಕಿರುಹೊತ್ತಿಗೆ’ ಸಿದ್ಧಪಡಿಸಿ ಎಲ್ಲ ಶಾಲೆಗಳಿಗೆ ತಪಿಸಲು ಉದ್ದೇಶಿಸಲಾಗಿದೆ. ಈ ಭಾಗದ ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ವಿಜಯಪುರ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳ ಶಾಲೆಗಳ ವಿದ್ಯಾರ್ಥಿಗಳು ಪಾರ್ಕ್‌ಗೆ ಭೇಟಿ ನೀಡುವ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಶಿಕ್ಷಕರು ಪ್ರಾಯೋಗಿಕವಾಗಿ ಗಣಿತ ವಿಷಯಗಳನ್ನು ಇಲ್ಲಿ ಮಕ್ಕಳಿಗೆ ಕಲಿಸಬಹುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.