
ಸುಳ್ವಾಡಿ ಗ್ರಾಮದಲ್ಲಿರುವ ಕಿಚ್‌ಗುತ್ ಮಾರಮ್ಮನ ದೇವಾಲಯ
ಡಿ.14, 2018ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿರುವ ಕಿಚ್‌ಗುತ್ ಮಾರಮ್ಮನ ದೇವಾಲಯದಲ್ಲಿ ವಿತರಿಸಲಾಗಿದ್ದ ವಿಷ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟಿದ್ದರು. 110ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ಈ ಘೋರ ದುರಂತ ಸಂಭವಿಸಿ 7 ವರ್ಷಗಳು ಕಳೆದರೂ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಬದುಕುಳಿದವರ ಬದುಕು ಹಳಿತಪ್ಪಿದೆ. ಮೃತರ ಕುಟುಂಬಗಳು ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದು ಅವರ ಗೋಳು ಅರಣ್ಯರೋಧನವಾಗಿದೆ.
ದೇವಸ್ಥಾನದ ಆಡಳಿತ ಹಾಗೂ ಅಧಿಕಾರ ಕೈವಶ ಮಾಡಿಕೊಳ್ಳುವ ಸಲುವಾಗಿ ಟ್ರಸ್ಟ್‌ಗಳ ನಡುವಿನ ತಿಕ್ಕಾಟದಿಂದ ಕಿಡಿಗೇಡಿಗಳು ದೇವಸ್ಥಾನದ ಗೋಪುರ ನಿರ್ಮಾಣದ ಶುಂಕುಸ್ಥಾಪನೆ ಕಾರ್ಯಕ್ರಮದಲ್ಲಿ ವಿತರಿಸಿದ್ದ ದೇವರ ಪ್ರಸಾದಕ್ಕೆ ವಿಷ ಬೆರೆಸಿದ್ದರು. ದೇವರ ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡು ತಿಂದಿದ್ದ ಭಕ್ತರು ಕಿಚ್‌ಗತ್ ಮಾರಮ್ಮನ ಎದುರೇ ವಿಲವಿಲ ಒದ್ದಾಡಿ ಜೀವ ಬಿಟ್ಟಿದ್ದರು.
ಅಂದಿನ ದುರ್ಘಟನೆಯಲ್ಲಿ ಮನೆಗೆ ಆಧಾರಸ್ತಂಭವಾಗಿದ್ದ ತಂದೆ, ತಾಯಿ, ಅಣ್ಣ, ಅಕ್ಕ ಸಹಿತ ಎದೆಯುದ್ದ ಬೆಳೆದಿದ್ದ ಮಕ್ಕಳು ಜೀವ ಬಿಟ್ಟರು. ಪೋಷಕರನ್ನು ಕಳೆದುಕೊಂಡು ಹಲವು ಮಕ್ಕಳು ಅನಾಥವಾದರೆ, ಜೀವನದ ಸಂಧ್ಯಾಕಾಲದಲ್ಲಿ ಆಧಾರವಾಗಬೇಕಿದ್ದ ಮಕ್ಕಳನ್ನು ಕಳೆದುಕೊಂಡು ಪೋಷಕರು ಬೀದಿಗೆ ಬಿದ್ದರು. ಜನ್ಮದಿನದಂದೇ ಬಾಲಕ ಮೃತಪಟ್ಟಿದ್ದ. ದೇವಿಗೆ ಹರಕೆ ತೀರಿಸಲು ಬಂದಿದ್ದ ಹಲವರು ಹೆಣವಾದರು. ಹೀಗೆ ಮೃತರ ಒಂದೊಂದು ಕುಟುಂಬದ್ದು ಒಂದೊಂದು ಕರಳು ಹಿಂಡುವ ಕಥೆ ಇದೆ.
ವಿಷಪ್ರಾಷನ ಘಟನೆ ಸಂಭವಿಸಿದಾಗ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ದುರಂತ ಸಂಭವಿಸಿದಾಗ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವ ನ ಹೇಳಿದ್ದ ಮುಖ್ಯಮಂತ್ರಿಗಳು ಸೂಕ್ತ ಪರಿಹಾರ, ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ಹಾಗೂ ಜೀವನೋಪಾಯಕ್ಕೆ ಕೃಷಿ ಭೂಮಿ ಹಾಗೂ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.
ಕಿಚ್‌ಗುತ್ ಮಾರಮ್ಮ
ಹುಸಿಯಾಯ್ತು ಭರವಸೆ: ಅಂದಿನ ಸರ್ಕಾರ ಕೊಟ್ಟ ಭರವಸೆಗಳು ಇಂದಿಗೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡಿಗಾಸು ಪರಿಹಾರ ಬಿಡುಗಡೆಯಾಗಿದ್ದು ಬಿಟ್ಟರೆ ನಿವೇಶನವಾಗಲಿ, ವಸತಿ ಸೌಲಭ್ಯವಾಗಲಿ, ಕೃಷಿ ಭೂಮಿಯಾಗಲಿ ಸಿಕ್ಕಿಲ್ಲ. ಇಂದಲ್ಲ ನಾಳೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲೇ ಸಂತ್ರಸ್ತ ಕುಟುಂಬಗಳು ಏಳು ವರ್ಷಗಳನ್ನು ಕಳೆದಿವೆ. ಆದರೆ, ಆಳುವ ಸರ್ಕಾರಗಳು ಮಾತ್ರ ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ.
ಸುಳ್ವಾಡಿ ಕಿಚ್‌ಗುತ್ ಮಾರಮ್ಮನ ದೇವಸ್ಥಾನದಲ್ಲಿ ವಿಷಪ್ರಸಾದ ಸೇವಿಸಿ ಮೃತಪಟ್ಟವರ ಭಾವಚಿತ್ರ
ಬದುಕುಳಿದವರ ಪಾಡು ನರಕ: ಅತ್ಯಂತ ವಿಷಕಾರಿ ಕೀಟನಾಶಕ ಬೆರೆಸಿದ್ದ ಪ್ರಸಾದ್ ಸೇವಿಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡಿ ಕೊನೆಗೂ ಬದುಕುಳಿದವರ ಸ್ಥಿತಿ ಭಿನ್ನವಾಗಿಲ್ಲ. ವಿಷ ದೇಹದ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು ಇಂದಿಗೂ ಹಲವು ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರಿಗೆ ದೃಷ್ಟಿ ಮಂದವಾಗಿದೆ, ಹಲವರಿಗೆ ಶ್ರಮದಾಯಕ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಹೃದ್ರೋಗ, ಕಿಡ್ನಿ, ಯಕೃತ್ತು ಸೋಂಕು ಕಾಣಿಸಿಕೊಂಡಿದೆ.
ಸುಸ್ತು, ಉಬ್ಬಸ ಸಹಿತ ಅನಾರೋಗ್ಯ ಕಾಡುವ ಕಾರಣಕ್ಕೆ ಯಾರೂ ಕೂಲಿಗೆ ಕರೆಯುತ್ತಿಲ್ಲ. ಕುಟುಂಬ ನಿರ್ವಹಣೆ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ. ಆಗಾಗ ಆರೋಗ್ಯ ಹದಗೆಡುತ್ತಿದ್ದು ಚಿಕಿತ್ಸೆಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗಿದೆ. ಪತಿ ಸತ್ತಾಗ ಕೊಟ್ಟಿದ್ದ ಅಲ್ಪ ಸ್ವಲ್ಪ ಹಣ ಚಿಕಿತ್ಸೆಗೆ ಖರ್ಚಾಗಿ ಸಾಲ ಹೆಗಲೇರಿದೆ. ದುರಂತದಲ್ಲಿ ಮೃತಪಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಂತ್ರಸ್ತೆ ರಾಜಮ್ಮ ಬಿಕ್ಕಳಿಸಿ ಅಳತೊಡಗಿದರು.
ಹುಟ್ಟುಹಬ್ಬದ ದಿನ ದೇವರ ಆಶೀರ್ವಾದ ಪಡೆಯಲು ಹೋಗಿದ್ದ ಮಗ ವಿಷಪ್ರಸಾದ ತಿಂದು ಅಸ್ವಸ್ಥಗೊಂಡಿದ್ದ. 15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕುಳಿದ. ಮಗ ಸರ್ವೇಶ ಬದುಕುಳಿದ ಎಂಬ ಖುಷಿ ಒಂದೆಡೆಯಾದರೆ, ಆತ ನಿತ್ಯ ಅನುಭವಿಸುತ್ತಿರುವ ನೋವು ನೋಡಲಾಗುತ್ತಿಲ್ಲ. ಓದಿದ್ದೆಲ್ಲವನ್ನೂ ಮರೆತುಹೋಗುತ್ತಾನೆ, ಆಡುವಾಗ ಸುಸ್ತಾಗಿ ಬಿದ್ದು ಬಿಡುತ್ತಾನೆ. ಆಗಾಗ ಶಾಲೆಯಿಂದ ಶಿಕ್ಷಕರು ಕರೆಮಾಡಿ ಮಗನಿಗೆ ಹುಷಾರು ತಪ್ಪಿದೆ ಕರೆದುಕೊಂಡು ಹೋಗು ಎನ್ನುತ್ತಾರೆ. ಸದಾ ಲವಲವಿಕೆಯಿಂದ ಓಡಾಡುತ್ತಿದ್ದ ಮಗ ಮಂಕು ಬಡಿದವನಂತಾಗಿದ್ದಾನೆ. ಪತಿ ದುಡಿಮೆಯಿಂದ ಕುಟುಂಬ ನಡೆಯುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವಷ್ಟು ಹಣ ಇಲ್ಲ ಎಂದು ಸುಕನ್ಯಾ ಕಣ್ಣೀರು ಸುರಿಸಿದರು.
ಡಿ.12 ಬಂದರೆ ಮಗನ ಹುಟ್ಟುಹಬ್ಬನ ದಿನ ಎಂದು ಸಂಭ್ರಮಿಸಬೇಕಾ ಅಥವಾ ಅವನ ಸ್ಥಿತಿ ಕಂಡು ಮರುಗಬೇಕಾ ತಿಳಿಯುತ್ತಿಲ್ಲ. ವಿಷ ತಿಂದು ಮೃತಪಟ್ಟವರ ಕುಟುಂಬಕ್ಕೆ ಅಲ್ಪಸ್ವಲ್ಪ ಪರಿಹಾರ ಸಿಕ್ಕಿದೆ. ಆದರೆ, ಜೀವಂತ ಶವವಾಗಿ ಬದುಕುತ್ತಿರುವವರಿಗೆ ಏನೂ ಸಿಕ್ಕಿಲ್ಲ. ಪ್ರತಿವರ್ಷ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮಕ್ಕೆ ಬಂದು ಹೋಗುವುದೇ ಆಗಿದೆ. ಸ್ಥಳೀಯ ಶಾಸಕರು, ಸಚಿವರು, ಸಂಸದರು, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸುಕನ್ಯಾ ಆಕ್ರೋಶ ಹೊರಹಾಕಿದರು.
ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳು
ಗಾಯದ ಮೇಲೆ ಬರೆ: ಸುಳ್ವಾಡಿ ವಿಷಪ್ರಾಶನ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಸಾಲೂರು ಮಠದ ಅಂದಿನ ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಮಾದೇಶ, ಅಂಬಿಕಾ ಹಾಗೂ ದೊಡ್ಡಯ್ಯ ಬಂಧಿತರು. ಆರೋಪಿಗಳ ಪೈಕಿ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ನ್ಯಾಯಾಲಯ ಈಚೆಗೆಷ್ಟೆ ಜಾಮೀನು ಮಂಜೂರು ಮಾಡಿದೆ. 17 ಜನರ ಬದುಕನ್ನು ಕಿತ್ತುಕೊಂಡಿರುವ ಆರೋಪಿಗೆ ಜಾಮೀನು ನೀಡಿರುವುದಕ್ಕೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಮಾಯಕರ ಸಾವಿಗೆ ಕಾರಣನಾದ ಪ್ರಮುಖ ಆರೋಪಿಗೆ ಜಾಮೀನು ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನ್ಯಾಯಾಲಯ ಜಾಮೀನು ರದ್ದುಗೊಳಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಸಂಚು ನಡೆದಿದ್ದು ಹೇಗೆ ?
ಸುಳ್ವಾಡಿ ಕಿಚ್‌ಗುತ್ ಮಾರಮ್ಮನ ದೇವಸ್ಥಾನ ತಮಿಳುನಾಡು ಕರ್ನಾಟಕ ಗಡಿಯಲ್ಲಿ ಇದ್ದು ಸಾವಿರಾರು ಭಕ್ತರು ಭೇಟಿ ನೀಡುವುದರಿಂದ ದೇಗುಲಕ್ಕೆ ಆದಾಯ ಹೆಚ್ಚಾಗಿತ್ತು. ದುರಂತ ನಡೆಯುವ ಮುನ್ನ ದೇವಸ್ಥಾನದ ಆಡಳಿತವನ್ನು ಆರೋಪಿ ಇಮ್ಮಡಿ ಮಹದೇವಸ್ವಾಮಿ ನೋಡಿಕೊಳ್ಳುತ್ತಿದ್ದರು. ಹಣ ದುರುಪಯೋಗ ಆರೋಪ ಕೇಳಿಬಂದ ಬಳಿಕ ದೇವಾಲಯದ ಆಡಳಿತ ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್ ರಚನೆ ಮಾಡಿದ್ದರಿಂದ ಇಮ್ಮಡಿ ಮಹದೇವಸ್ವಾಮಿಗೆ ದೇವಾಲಯದ ಆಡಳಿತದ ಮೇಲಿನ ಹಿಡಿತ ಕೈತಪ್ಪಿತ್ತು. ಎರಡು ಬಣಗಳ ನಡುವೆ ವೈಷಮ್ಯ ಬೆಳೆಯಿತು. ಇದರಿಂದ ಕುಪಿತಗೊಂಡ ಮಹದೇವಸ್ವಾಮಿ ಬಣ ಮತ್ತೆ ಅಧಿಕಾರ ಕೈವಶ ಮಾಡಿಕೊಳ್ಳಲು ಪ್ರಸಾದದಲ್ಲಿ ವಿಷ ಬೆರೆಸಿತು ಎನ್ನುತ್ತಾರೆ ಪೊಲೀಸರು.
ಐದು ತನಿಖಾ ತಂಡಗಳ ರಚನೆ: ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿದ್ದ ಸುಳ್ವಾಡಿ ದುರಂತ ಪ್ರಕರಣವನ್ನು ಬೇಧಿಸಲು ಐದು ತಂಡಗಳನ್ನು ರಚನೆ ಮಾಡಲಾಗಿತ್ತು. ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಡಿವೈಎಸ್‌ಪಿ ನೇತೃತ್ವದಲ್ಲಿ 22 ಅಧಿಕಾರಿಗಳು ಹಾಗೂ 40 ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ದುರ್ಘಟನೆ ನಡೆದು 5 ದಿನಗಳ ಬಳಿಕ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಜಿಲ್ಲೆಯ ಪೊಲೀಸರು ಮಾತ್ರವಲ್ಲದೆ, ಮೈಸೂರು, ಮಂಡ್ಯ ಜಿಲ್ಲೆಗಳ ಅಧಿಕಾರಿಗಳೂ ತನಿಖೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಬೇಡಿಕೆ ಏನು: ಸರ್ಕಾರ ಮೃತರ ಕುಟುಂಬಳಿಗೆ ಮಾನವೀಯ ನೆಲೆಯಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು, ನಿವೇಶನ ಹಾಗೂ ಮನೆಗಳನ್ನು ನೀಡಬೇಕು, ಕೃಷಿಗೆ ಭೂಮಿ ಮಂಜೂರು ಮಾಡಬೇಕು ಎಂಬುದು ಮೃತರ ಕುಟುಂಬಗಳ ಪ್ರಮುಖ ಬೇಡಿಕೆ.
ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ದಿನವಾಗಿದೆ ಅಷ್ಟೆ. ಸುಳ್ವಾಡಿ ಸಂತ್ರಸ್ತರಿಗೆ ಭೂಮಿ, ನಿವೇಶನ, ವಸತಿ ನೀಡುವ ಸಂಬಂಧ ಇಲ್ಲಿಯವರೆಗೂ ಹಿಂದಿನ ಜಿಲ್ಲಾಧಿಕಾರಿಗಳು ತೆಗೆದುಕೊಂಡ ಕ್ರಮಗಳು ಹಾಗೂ ಕಡತಗಳನ್ನು ಪರಿಶೀಲಿಸಲಾಗುವುದು.–ಶ್ರೀರೂಪಾ, ಜಿಲ್ಲಾಧಿಕಾರಿ
ಸುಳ್ವಾಡಿ ವಿಷಪ್ರಾಷನ ದುರ್ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಇಂದಿಗೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಬದುಕುಳಿದವರು ಇಂದಿಗೂ ಮಾನಸಿಕ ತೊಳಲಾಟದಲ್ಲಿ ಸಿಲುಕಿದ್ದಾರೆ. ಸರ್ಕಾರ ಅಂದು ನೀಡಿದ್ದ ಭರವಸೆಯಂತೆ ನಿವೇಶನ, ವಸತಿ ನೀಡಬೇಕು. ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು. ಅನಕ್ಷರಸ್ಥರು ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗದವರೇ ಹೆಚ್ಚಾಗಿರುವ ಸಂತ್ರಸ್ಥರು ಹೋರಾಟ ಮಾಡುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಮಾನವೀಯ ನೆಲೆಯಲ್ಲಿ ಸರ್ಕಾರ ಬೇಡಿಕೆಗಳನ್ನು ಈಡೇರಿಸಬೇಕು.–ಬೋಸ್ಕೋ, ಮಾರ್ಟಳ್ಳಿ ಗ್ರಾಮದ ಮುಖಂಡ
ಸುಳ್ವಾಡಿ ದುರಂತದಲ್ಲಿ ಮೃತಪಟ್ಟವರು ಬದುಕುಳಿದ ಬಹುತೇಕರು ತೀರಾ ಬಡವರು, ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರು. ಮೃತರ ಕುಟುಂಬಗಳಲ್ಲಿ ಚಿಕ್ಕ ಮಕ್ಕಳಿದ್ದಾರೆ, ವೃದ್ಧರಿದ್ದಾರೆ, ಮದುವೆಗೆ ಬಂದ ಯುವತಿಯರು ಇದ್ದಾರೆ. ಸರ್ಕಾರದ ನೆರವು ಸಿಗದೆ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವೇಶನ, ಮನೆ ಸಹಿತ ಸೂಕ್ತ ಪರಿಹಾರ ಸಿಗಬೇಕು.–ರಾಮಸ್ವಾಮಿ, ಹಳೆ ಮಾರ್ಟಳ್ಳಿ ಗ್ರಾಮದ ಮುಖಂಡ
ವಿಷಪ್ರಸಾದ ಸೇವಿಸಿ ತಾಯಿ ತೀರಿಕೊಂಡರು, ಬಳಿಕ ಕೊರಗಿನಲ್ಲಿ ತಂದೆಯೂ ಮೃತಪಟ್ಟರು. ಈಗ ಮನೆಯಲ್ಲಿ ಉಳಿದಿರುವುದು ನಾನೊಬ್ಬನೇ, ಯೋಗಕ್ಷೇಮ ವಿಚಾರಿಸುವವರು ಇಲ್ಲ. ಸರಿಯಾದ ಕೆಲಸ ಸಿಗುತ್ತಿಲ್ಲ, ದುಡಿದು ತಿನ್ನಲು ತುಂಡು ಭೂಮಿ ಇಲ್ಲ. ಸರ್ಕಾರ ಡಿ ಗ್ರೂಪ್ ನೌಕರಿ ಕೊಟ್ಟರೆ ಬದುಕಿಗೆ ಆಧಾರವಾಗಲಿದೆ.–ಶಾಂತಕುಮಾರ್, ಮೃತ ಗೋಪಿಯಮ್ಮನ ಪುತ್ರ
ವಿಷಪ್ರಸಾದ ತಿಂದ ಬಳಿಕ ಆಗಾಗ ಆರೋಗ್ಯ ಹದಗೆಡುತ್ತಲೇ ಇದೆ. ಒಮ್ಮೆ ಸ್ಕ್ಯಾನಿಂಗ್ ಮಾಡಿಸಲು ಎರಡರಿಂದ ಮೂರು ಸಾವಿರ ಖರ್ಚಾಗುತ್ತಿದೆ. ಸರ್ಕಾರ ಕೊಟ್ಟಿದ್ದ 50,000 ಪರಿಹಾರ ಚಿಕಿತ್ಸೆಗೆ ಖರ್ಚಾಗಿದ್ದು ಸಾಲದ ಹೊರೆ ಹೆಚ್ಚಾಗಿದೆ. ಯಾರೂ ನೆರವಿಗೆ ಬರುತ್ತಿಲ್ಲ. ಹೃದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದು ಕನಿಷ್ಠ ಚಿಕಿತ್ಸೆಗಾದರೂ ವ್ಯವಸ್ಥೆ ಮಾಡಿ.–ರಾಜಮ್ಮ, ವಿಷಪ್ರಸಾದ ಸೇವಿಸಿದ ಸಂತ್ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.