ADVERTISEMENT

ಯಾದಗಿರಿ: ಕೊನೆಯ ದಿನಗಳು ಎಣಿಸುತ್ತಿರುವ ಮೂರು ಸುತ್ತಿನ ಕೋಟೆ

ಮಲ್ಲಿಕಾರ್ಜುನ ನಾಲವಾರ
Published 1 ಮಾರ್ಚ್ 2026, 2:30 IST
Last Updated 1 ಮಾರ್ಚ್ 2026, 2:30 IST
   

ಯಾದಗಿರಿ: ಎತ್ತರದ ಗಿರಿಯ ‘ಏತಗಿರಿ’, ‘ಏದಗಿರಿ’ ಆಗಿದ್ದ ಈಗಿನ ಯಾದಗಿರಿ ನಗರದಲ್ಲಿನ ಬೃಹತ್ ಬೆಟ್ಟದ ಮೇಲೆ ನಿರ್ಮಿಸಲಾದ ಮೂರು ಸುತ್ತಿನ ಕೋಟೆಯು ಜಿಲ್ಲೆಯ ಸಮೃದ್ಧ ಇತಿಹಾಸವನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದ್ದು, ಕೋಟೆಯ ಪುನಶ್ಚೇತನ ಕಾರ್ಯನಡೆಯದೆ ಐತಿಹಾಸಿಕ ಕುರುಹುಗಳು ಒಂದೊಂದಾಗಿ ನಶಿಸುತ್ತಿವೆ.

ಭೀಮಾ ನದಿ ದಡದಲ್ಲಿ ಇರುವ ಯಾದಗಿರಿ ನಗರದ ಹೃದಯ ಭಾಗದಲ್ಲಿ ಕೋಟೆಯು ಕರ್ನಾಟಕದ ಬೆಟ್ಟದ ಮೇಲಿರುವ ದೊಡ್ಡ ಕೋಟೆಗಳ ಪೈಕಿ ಒಂದಾಗಿದೆ. ಕಲ್ಯಾಣ ಚಾಲುಕ್ಯರ, ಯಾದವರ, ಚೋಳರ, ಬಹಮನಿ ಸುಲ್ತಾನರ, ಆದಿಲ್‌ಶಾಹಿ ಹಾಗೂ ಹೈದರಾಬಾದ್ ನಿಜಾಮರ ಆಡಳಿತಕ್ಕೂ ಈ ಕೋಟೆ ಒಳಪಟ್ಟಿತ್ತು. ರಾಜ ಮಹಾರಾಜರ ಆಡಳಿತ, ವೀರಾವೇಶ, ರಕ್ಷಣೆ ತಂತ್ರಗಾರಿಕೆ, ಕಲಾವಂತಿಕೆ, ಧಾರ್ಮಿಕ ಆರಾಧನೆಗೆ ಸಾಕ್ಷಿಯಾಗಿರುವ ಕೋಟೆಯು ಇತಿಹಾಸದ ಪುಟ ಸೇರುತ್ತಾ ಕೊನೆಯ ದಿನಗಳನ್ನು ಎಣಿಸುತ್ತಿದೆ. ಇತಿಹಾಸಕಾರರ ಅಧ್ಯಯನ ಕೇಂದ್ರವಾಗಬೇಕಿದ್ದ ಕೋಟೆಯು ಪಾಳು ಬಿದ್ದಿದೆ. ಎಲ್ಲೆಂದರಲ್ಲಿ ಮುಳ್ಳಿನ ಗಿಡಗಳು ಬೆಳೆದಿವೆ. ಬಹುತೇಕ ಗೋಡೆಗಳಲ್ಲಿನ ಕಲ್ಲುಗಳು ಕುಸಿದು ಬಿದ್ದು ಮಣ್ಣಲ್ಲಿ ಸೇರಿವೆ.

ಕಡಿದಾದ, ಇಳಿಜಾರಾದ, ಏರಿಳಿತಗಳ ಕಲ್ಲು ಬೆಟ್ಟದ ಮೇಲಿನ ಮೂರು ಸುತ್ತಿನ ಈ ಕೋಟೆಗೆ ವಿಶಿಷ್ಟವಾದ ವಿನ್ಯಾಸವಿದೆ. ಬೆಟ್ಟದ ಉಬ್ಬು–ತಗ್ಗುಗಳಲ್ಲಿ ಬಂಡೆಗಲ್ಲುಗಳನ್ನು ಬಳಸಿ ಎತ್ತರವಾದ ರಕ್ಷಣಾ ಗೋಡೆಗಳನ್ನು ಕಟ್ಟಲಾಗಿದೆ. ಅರ್ಧ, ಪೂರ್ಣ ಹಾಗೂ ಚೌಕಾಕಾರದ ರಕ್ಷಣಾ ಗೋಡೆಗಳಿಂದ ಚಾಚಿಕೊಂಡಿರುವ ಭದ್ರವಾದ ಕೋಟೆ ಇದು. ಏಳು ಪ್ರವೇಶ ದ್ವಾರಗಳು, ಪ್ರತಿ ದ್ವಾರದ ಎಡ–ಬಲಗಳಲ್ಲಿ ಅರ್ಧ ಇಲ್ಲವೆ ಪೂರ್ಣ ವರ್ತುಲಗಳ ರಕ್ಷಣಾ ಗೋಡೆಗಳೂ ಇವೆ. ಅವುಗಳ ಮೇಲೆ ತೋಪುಗಳಿದ್ದು, ಕೆಲವೇ ಅಳಿದು ಉಳಿದು ಬಿದ್ದಿವೆ. ಕಾವಲುಗಾರರ ಗುಮ್ಮಟವುಳ್ಳ ಕೊಠಡಿಗಳು, ಅಲ್ಲಲ್ಲಿ ಬಾವಿಗಳು, ಕೊಳ್ಳಗಳು ಸಹ ಕಾಣಸಿಗುತ್ತವೆ.

ADVERTISEMENT

ಕೊನೆಯ ಬಾಗಿಲು ದಾಟಿದ ಬಳಿಕ ಚೌಕಾಕಾರದ ಆವರಣವಿದ್ದು, ಶಿಥಿಲವಾದ ಕಟ್ಟಡದ ಅವಶೇಷಗಳು ಅಲ್ಲಿವೆ. ಫಿರ್ದೇಶ ಮಹಲ್‌, ಮೋತಿ ತಲಾಬ್‌, ದರಬಾರ್‌ ಮಹಾಲ್‌, ಕಬೂತರ್‌ ಖಾನಾ, ಚೀನಿ ಮಸೀದಿ, ಎಣ್ಣೆ ಶೇಖರಿಸುವ ಕೊಳ, ಹಿಂದೂ ದೇವಾಲಯಗಳೂ ಕೂಡ ಇವೆ. ಪಾತಾಳ ಬಾವಿ, ವೃತ್ತಾಕಾರದ ಬತ್ತೇರಿಗಳು ಅಲ್ಲಲ್ಲಿ ಇವೆ. ಕೋಟೆಯ ಗೋಡೆಗಿಂತ ಎತ್ತರವಾಗಿಯೂ ತೋಪು ಹೊತ್ತು ನಿಂತಿವೆ.

ಕೋಟೆಯಲ್ಲಿ ಹಿಂದೂ, ಜೈನ, ಮುಸ್ಲಿಂ ಹಾಗೂ ಶೈವ ಧರ್ಮದ ಕುರುಹುಗಳೂ ಇವೆ. ತೀರ್ಥಂಕರರ ಗವಿಗಳು, ಕೂಷ್ಮಾಂಡಿನಿ ಅವತಾರದ (ಅಂಬಿಕಾ, ಆಮ್ರಾ) ದೇವಿಯ ಉಬ್ಬು ಶಿಲ್ಪವಿರುವ ದೇವಸ್ಥಾನವಿದ್ದು, ಈಗ ಭುವನೇಶ್ವರಿ ದೇವಿ ಎಂದು ಪೂಜಿಸಲಾಗುತ್ತಿದೆ. ರಾಮಲಿಂಗೇಶ್ವರ ಎಂಬ ಶೈವ ದೇವಸ್ಥಾನ, ಈಶ್ವರ, ಕಾಳಿಕಾ ಹಾಗೂ ಆಂಜನೇಯ ದೇವಸ್ಥಾನಗಳು, ಮಸೀದಿ, ಅಕ್ಕತಂಗಿಯರ ಬಾವಿ, ಸಿಡಿಲು ಬಾವಿಗಳಿವೆ.

ನಿಜಾಮ ಕಾಲದಲ್ಲಿನ ಇತಿಹಾಸಕಾರ ಗುಲಾಮ್ ಯಜ್ದಾನಿ ಅವರು ಈ ಕೋಟೆಯನ್ನು ಸಮೀಕ್ಷೆ ಮಾಡಿದ್ದರು. ಕೋಟೆಯಲ್ಲಿ ಐದು ಶಾಸನಗಳು ಪತ್ತೆಯಾಗಿದ್ದು, ಕೋಟೆಯ ದ್ವಾರದ ಮೇಲಿರುವ ಒಂದು ಸಾಲಿನ ಶಾಸನವು ಕೋಟೆ ಸಗರದ ಜಗನ್ನಾಥನ ನಿರ್ಮಾಣವೆಂದು ಹೇಳುತ್ತದೆ. ತೀರ್ಥಂಕರ ಗುಹೆ ಸಮೀಪದ 10–11ನೇ ಶತಮಾನಕ್ಕೆ ಸೇರಿದ ಎರಡು ಪ್ರತ್ಯೇಕ ಶಾಸನಗಳು ಬಸದಿಗೆ ಸಂಬಂಧಿಸಿದವು. ಮೋತಿ ತಲಾಬಿನ ಗೋಡೆಯ ಮೇಲಿರುವ 1964ರ ಶಾಸನವು 1ನೇ ಇಬ್ರಾಹಿಂ ಆದಿಲ್ ಶಾ ಕಾಲಕ್ಕೆ ಸೇರಿದೆ. ಅಥಾರ್ ಮಸೀದಿ ದ್ವಾರದ ಮೇಲಿರುವ 1573ರ ಶಾಸನವು 1ನೇ ಅಲಿ ಆದಿಲ್‌ ಶಾಹಿ ಆಡಳಿದ ಅವಧಿಯದ್ದು, ಮಿರ್ಜಾ ಅಲಿಯ ಮಗ ಖ್ವಾಜಾ ಹಸನ್ ಕಿರ್ಮಾನಿ ನಿರ್ಮಿಸಿದ್ದಾಗಿ ತಿಳಿಸುತ್ತವೆ ಎನ್ನುತ್ತವೆ ಇತಿಹಾಸ ಸಂಬಂಧಿತ ದಾಖಲೆಗಳು.

‘ಸಾವಿರಕ್ಕೂ ಹೆಚ್ಚು ವರ್ಷಗಳು, ಆರೇಳು ಸಾಮ್ರಾಜ್ಯಗಳ ಆಳ್ವಿಕೆಗೆ ಒಳಪಟ್ಟು, ಬಿಸಿಲು– ಮಳೆ, ಭೂಕಂಪನ, ಯುದ್ಧದ ದಾಳಿಗೆ ಸಿಲುಕ್ಕಿದ್ದರೂ ಭದ್ರವಾಗಿ ನಿಂತಿದ್ದ ಕೋಟೆಯ ಗೋಡೆಗಳು ನಿರ್ಲಕ್ಷ್ಯದಿಂದ ಅವನತಿಯತ್ತ ಸಾಗುತ್ತಿವೆ. ದಶಕಗಳಿಂದ ಕೋಟೆಯ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಸುರಿದರೂ ಅಭಿವೃದ್ಧಿಕೆ ಕುರುಹುಗಳು ಕಾಣಿಸುತ್ತಿಲ್ಲ. ಬದಲಿಗೆ ಮುಳ್ಳಿನ ಗಿಡಗಂಟಿಗಳೇ ಆವರಿಸಿಕೊಳ್ಳುತ್ತಿವೆ. ಇದು ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎನ್ನುತ್ತಾರೆ ಸ್ಥಳೀಯರು.

ಡಿಪಿಆರ್ ತಯಾರಿ

‘ಯಾದಗಿರಿ ಕೋಟೆಯನ್ನು ಒಂದು ಜಿಲ್ಲೆ ಒಂದು ತಾಣ ಅಡಿ ಆಯ್ಕೆ ಮಾಡಲಾಗಿದೆ. ಪುರಾತತ್ತ್ವ ಇಲಾಖೆಯು ಕೋಟೆಯ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಕಟ್ಟಿಮನಿ.

‘ಈ ಹಿಂದೆ ಕೋಟೆಯ ಅಭಿವೃದ್ಧಿಗಾಗಿ ₹ 4 ಕೋಟಿ ಬಿಡುಗಡೆಯಾಗಿತ್ತು. ಅದರಲ್ಲಿ ₹ 2 ಕೋಟಿ ಮೊತ್ತದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಮಾಡಿದ್ದರು. ಉಳಿದ ₹ 2 ಕೋಟಿಯಲ್ಲಿ ಪಿಡಬ್ಲ್ಯುಡಿ ಮಾಡಿದ್ದು, ಇನ್ನೂ ₹ 79 ಲಕ್ಷ ಉಳಿದಿದೆ. ಅದನ್ನು ಡಿಯುಡಿಸಿಗೆ (ನಗರಾಭಿವೃದ್ಧಿ) ಕೊಡಲಾಗಿದೆ. ಇನ್ನೂ ಕಾಮಗಾರಿ ಉಳಿದೆ’ ಎಂದರು.

ಕೋಟೆಯ ಐತಿಹಾಸಿಕ ಹಿನ್ನೆಲೆ

ಕಲ್ಯಾಣ ಚಾಲುಕ್ಯ ಅರಸ ಜಯಸಿಂಹ ಕ್ರಿ.ಶ. 1019–33 ನಡುವೆ ಯಾದಗಿರಿ ಕೋಟೆಯನ್ನು ರಾಜಧಾನಿಯಾಗಿ ಮಾಡಿದ್ದ. ಆ ಬಳಿಕ ಕ್ರಿ.ಶ. 1044–50ರ ನಡುವೆ ಚೋಳರು ಕೃಷ್ಣೆಯನ್ನು ದಾಟಿ ಇಲ್ಲಿಯೇ ಬೀಡುಬಿಟ್ಟು ಹುಲಿಯ ಲಾಂಛನ ಸ್ತಂಭವನ್ನು ನೆಟ್ಟರು ಎನ್ನುತ್ತವೆ ಇತಿಹಾಸದ ದಾಖಲೆಗಳು.

ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಯಾದಗಿರಿ ಕೋಟೆಯನ್ನು ಕಟ್ಟಲಾಗಿದ್ದಯ, ಬಳಿಕ ಅದನ್ನು ಯಾದವರು ಬಲಪಡಿಸಿದರು. ಬಹಮನಿ ಸುಲ್ತಾನರ, ಆದಿಲ್‌ ಶಾಹಿ ಹಾಗೂ ನಿಜಾಮರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಹಾಗೂ ವಿಸ್ತರಣೆಯಾಗಿ ಬೃಹತ್ ಕೋಟೆಯಾಗಿ ರೂಪುಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.