ADVERTISEMENT

ಯಾದಗಿರಿ: ಖಾಕಿ ಪಡೆ ಬಲವರ್ಧನೆಗೆ ₹ 10 ಕೋಟಿ ಮಂಜೂರು

‘ಸೆನ್’ ಠಾಣೆ, ಕೆಂಭಾವಿ ವಸತಿ ಗೃಹ, ಶ್ವಾನದಳ ಕೇಂದ್ರ, ಔಟ್‌ಪೋಸ್ಟ್‌ ಕಟ್ಟಡಕ್ಕೆ ಕೆಕೆಆರ್‌ಡಿಬಿ ಅನುದಾನ ಬಳಕೆ

ಮಲ್ಲಿಕಾರ್ಜುನ ನಾಲವಾರ
Published 10 ಡಿಸೆಂಬರ್ 2025, 6:40 IST
Last Updated 10 ಡಿಸೆಂಬರ್ 2025, 6:40 IST
ಯಾದಗಿರಿ ಜಿಲ್ಲಾ ಪೊಲೀಸ್ ಕಾರ್ಯಾಲಯ
ಯಾದಗಿರಿ ಜಿಲ್ಲಾ ಪೊಲೀಸ್ ಕಾರ್ಯಾಲಯ   

ಯಾದಗಿರಿ: ಜಿಲ್ಲೆಯ ಪೊಲೀಸ್ ಇಲಾಖೆಯ ಮೂಲಸೌಕರ್ಯ ಬಲವರ್ಧನೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿವಿ) ₹ 10 ಕೋಟಿ ಅನುದಾನವನ್ನು ಮಂಜೂರು ಮಾಡಿದೆ.‌

ಜಿಲ್ಲೆಯ ಪೊಲೀಸ್ ಆಡಳಿತಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೆಕೆಆರ್‌ಡಿಬಿಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದ್ದರು. ಬೇಡಿಕೆಗಳ ಪಟ್ಟಿಯನ್ನು ಪರಿಶೀಲನೆ ಮಾಡಿರುವ ಮಂಡಳಿಯು ₹ 10 ಕೋಟಿ ಅನುದಾನಕ್ಕೆ ಅನುಮೋದನೆ ಕೊಟ್ಟಿದೆ. ಇದರಲ್ಲಿ ₹ 7 ಕೋಟಿ ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ಉಳಿದ ₹ 3 ಕೋಟಿಯನ್ನು ವಾಹನಗಳ ಖರೀದಿ ಸೇರಿ ಇತರೆ ಸಾಮಗ್ರಿಗಳಲ್ಲಿ ವಿನಿಯೋಗಿಸಲು ಜಿಲ್ಲಾ ಪೊಲೀಸ್ ಮುಂದಾಗಿದೆ.

ಎರಡು ವರ್ಷಗಳ ಹಿಂದೆಯೇ ಕೆಂಭಾವಿ ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಯಾಗಿದ್ದರೂ ಸಿಬ್ಬಂದಿಯ ವಸತಿ ಗೃಹ ಬೇಡಿಕೆ ಹಾಗೆಯೇ ಉಳಿದುಕೊಂಡಿತ್ತು. ದಶಕಗಳ ಬೇಡಿಕೆಗೆ ಈಗ ಸ್ಪಂದನೆ ಸಿಕ್ಕಿದೆ. ಕೆಕೆಆರ್‌ಡಿಬಿಯಿಂದ ಬಿಡುಗಡೆಯಾಗಿ ಬರುವ ಅನುದಾನದಲ್ಲಿ 12 ಮಂದಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಉಳಿದುಕೊಳ್ಳಲು ಅನುಕೂಲ ಆಗುವಂತೆ 12 ಹೊಸ ಮನೆಗಳು ನಿರ್ಮಾಣ ಆಗಲಿವೆ.

ಅಪರಾಧ ಪತ್ತೆ, ಬಾಂಬ್ ನಿಷ್ಕ್ರಿಯ ದಳ, ಮಾದಕ ವಸ್ತುಗಳನ್ನು ಹುಡುಕುವುದು ಸೇರಿದಂತೆ ಪೊಲೀಸರ ತನಿಖೆಗೆ ಪೂರಕವಾಗಿ ಕೆಲಸ ಮಾಡುವ ಶ್ವಾನ ಪಡೆಗೆ ಇಲಾಖೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಹೀಗಾಗಿ, ಪೊಲೀಸ್ ಶ್ವಾನದಳವನ್ನು ಮತ್ತಷ್ಟು ಬಲಪಡಿಸಲು ಶ್ವಾನ ದಳದ ತರಬೇತಿ ಕೇಂದ್ರಕ್ಕೂ ಕೆಕೆಆರ್‌ಡಿಬಿಯಿಂದ ಮಂಜೂರಾದ ಅನುದಾನ ಬಳಕೆಯಾಗಲಿದೆ. ಪೊಲೀಸ್ ಪರೇಡ್ ಮೈದಾನದಲ್ಲಿ ಸುಸಜ್ಜಿತವಾದ ಶ್ವಾನ ದಳದ ತರಬೇತಿ ಕೇಂದ್ರ ತಲೆ ಎತ್ತಲಿದೆ.

ತಂತ್ರಜ್ಞಾನ, ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್‌ ವಹಿವಾಟು ಹೆಚ್ಚಾದಂತೆ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿವೆ. ಇಂತಹ ಅಪರಾಧಗಳ ನಿಯಂತ್ರಣಕ್ಕೆ ಸ್ಥಾಪನೆಯಾಗಿರುವ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯು ಪ್ರಸ್ತುತ ಜಿಲ್ಲಾ ಪೊಲೀಸ್ ಕಾರ್ಯಾಲಯದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೆಕೆಆರ್‌ಡಿಬಿಯ ಅನುದಾನದಿಂದಾಗಿ ‘ಸೆನ್‌’ ಠಾಣೆಗೆ ಪ್ರತ್ಯೇಕವಾದ ಹೊಸ ಕಟ್ಟಡದ ಭಾಗ್ಯ ಸಿಗಲಿದೆ.

‘ಕೆಕೆಆರ್‌ಡಿಬಿಯ ಅನುದಾನದ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಶಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ₹ 50 ಲಕ್ಷ ಕೊಟ್ಟಿದ್ದಾರೆ. ತೆರೆದ ವಾಹನ ಹಾಗೂ ಜನರೇಟರ್‌ಗೂ ತಲಾ ₹ 20 ಲಕ್ಷ ಅನುದಾನ ನೀಡಿದ್ದಾರೆ. ಈ ಎಲ್ಲಾ ಅನುದಾನವು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸದ್ಬಳಕೆ ಆಗುವಂತೆ ವಿನಿಯೋಗ ಮಾಡಲಾಗುವುದು’ ಎಂದು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ವಡಗೇರಾ ತಾಲ್ಲೂಕಿನ ಬೆಂಡಬೆಂಬಳಿ ಗ್ರಾಮದಲ್ಲಿ ಪೊಲೀಸ್ ಹೊರಠಾಣೆ (ಔಟ್‌ಪೋಸ್ಟ್‌) ಕಟ್ಟಡಕ್ಕೂ ಇದೇ ಅನುದಾನ ಬಳಕೆಯಾಗಿದೆ.

ಪೃಥ್ವಿಕ್ ಶಂಕರ್

‘ಸೆನ್‌ ಠಾಣೆಗೆ ಎರಡು ಕಡೆ ಜಾಗ ಗುರುತು’

‘ಸೆನ್ ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಎರಡು ಕಡೆಗಳಲ್ಲಿ ಜಾಗವನ್ನು ಗುರುತಿಸಲಾಗಿದೆ. ಕನಕ ವೃತ್ತದ ಸಮೀಪ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಹತ್ತಿರದಲ್ಲಿ ಇಲಾಖೆಗೆ ಸೇರಿದ ಖಾಲಿ ಜಾಗವಿದೆ. ಅವುಗಳಲ್ಲಿ ಯಾವುದು ಸೂಕ್ತ ಆಗುತ್ತದೆ ಎಂಬುದನ್ನು ನೋಡಿಕೊಂಡು ಸ್ಥಳವನ್ನು ಅಂತಿಮಗೊಳಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನುದಾನ ಮಂಜೂರಾದ ಬಗ್ಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕಟ್ಟಡಗಳ ನಿರ್ಮಾಣಕ್ಕೆ ಏಜೆನ್ಸಿಯ ತಂಡವೊಂದು ಬರಲಿದ್ದು, ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗವನ್ನು ತೋರಿಸುವಂತೆ ಹೇಳಿದ್ದಾರೆ’ ಎಂದರು.

‘₹ 2.4 ಕೋಟಿ ವೆಚ್ಚದ ಇಂಟೆಲಿಜೆಂಟ್‌ ಅಥವಾ ಇಂಟಿಗ್ರೇಟೆಡ್‌ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ ಸಿಸ್ಟಮ್ (ಐಟಿಎಂಎಸ್‌) ಅಳವಡಿಕೆಯು ಟೆಂಡರ್ ಆಗಿದೆ. ಶೀಘ್ರವೇ ಕೆಲಸವೂ ಆರಂಭವಾಗಲಿದ್ದು, ಸಂಚಾರ ವ್ಯವಸ್ಥೆಯ ಸುಧಾರಣೆಯೂ ಆಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.