ADVERTISEMENT

ಯಾದಗಿರಿ: 4ನೇ ದಿನಕ್ಕೆ ಕಾಲಿಟ್ಟ ‘ಆಶಾ’ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 16:25 IST
Last Updated 13 ಜುಲೈ 2020, 16:25 IST
ಯಾದಗಿರಿ ನಗರಸಭೆ ಪ್ರಭಾರಿ ಪೌರಾಯುಕ್ತ ಬಕ್ಕಪ್ಪ ಅವರಿಗೆ ತಮ್ಮ ಬೇಡಿಕೆಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು
ಯಾದಗಿರಿ ನಗರಸಭೆ ಪ್ರಭಾರಿ ಪೌರಾಯುಕ್ತ ಬಕ್ಕಪ್ಪ ಅವರಿಗೆ ತಮ್ಮ ಬೇಡಿಕೆಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು   

ಯಾದಗಿರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯಾದ್ಯಂತ ಸೋಮವಾರ ಪ್ರತಿಭಟನೆ ನಡೆಸಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಮಾಸಿಕ ₹12,000 ಗೌರವಧನ ಮತ್ತು ಆರೋಗ್ಯ ಸುರಕ್ಷತೆ ಸಾಮಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿ ಕಳೆದ ಮಾರ್ಚ್- ಏಪ್ರಿಲ್‌ನಿಂದಲೇ ಹಲವು ಮನವಿ ಪತ್ರಗಳನ್ನು ನೀಡಿದರೂ ಸರ್ಕಾರ ಪ್ರತಿಕ್ರಿಯೆ ನೀಡದಿರುವುದರಿಂದ ಜೂನ್ 30ರಿಂದ ಎರಡನೇ ಹಂತದ ಹೋರಾಟ ಆರಂಭಿಸಲಾಗಿದೆ‌. ಸಚಿವರು, ಶಾಸಕರು ಮತ್ತು ಸಂಸದರು ಮೂಲಕವೂ ಮನವಿ ಪತ್ರಗಳನ್ನು ಸಲ್ಲಿಸಿದರೂ ಸರ್ಕಾರ, ಸಂಘದ ಮುಖಂಡರನ್ನು ಕರೆದು ಸಮಸ್ಯೆಗಳ ಕುರಿತು ಚರ್ಚೆ ನಡೆಸದೇ ಇರುವುದು ಬೇಸರದ ಸಂಗತಿ. ಅದ್ದರಿಂದಲೇ ಸರ್ಕಾರಕ್ಕೆ ಈ ಮುಂಚೆಯೇ ತಿಳಿಸಿರುವಂತೆ ಜುಲೈ 10ರಿಂದ ಸಂಪೂರ್ಣ ಕೆಲಸಗಳನ್ನು ನಿಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ತಿಳಿಸಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ಕೋವಿಡ್-19 ಸೋಂಕಿಗೆ ಒಳಗಾದ ಆಶಾಗೆ ಪರಿಹಾರ, ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಉಮಾದೇವಿ ಆಗ್ರಹಿಸಿದರು.

ADVERTISEMENT

ಶಾರದಾ, ರೇಣುಕಾ, ಸಂಗಮ್ಮ, ಗಂಗಮ್ಮ, ಸಂಪತ್ ಕುಮಾರಿ, ಸಂಗೀತ, ಸೇರಿದಂತೆ ಇದ್ದರು.

ಮನವಿ ಪತ್ರ ಸಲ್ಲಿಕೆ

ಹುಣಸಗಿ: ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಈಡೇರಿಸಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆಶಾ ಕಾರ್ಯಕರ್ತೆಯರ ಮುಖಂಡರಾದ ಸಂಗಮ್ಮ ಹಿರೇಮಠ ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ವಜ್ಜಲ ಗ್ರಾಮ ಪಂಚಾಯಿತಿ ಸಿಬ್ಬಂದಿ ಮಲ್ಲಯ್ಯ ನಾಯ್ಕಲ್ ಅವರಿಗೆ ನೀಡಿ ಮಾತನಾಡಿದರು.

ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವ ಧನ ₹4,000 ನೀಡುತ್ತಿದ್ದಾರೆ. ಇದರಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ನಮ್ಮ ಕಾರ್ಯವನ್ನು ಗುರುತಿಸಿ ಮಾಸಿಕ ₹12,000 ಗೌರವಧನ ನಿಗದಿಪಡಿಸುವ ಅಗತ್ಯವಿದೆ ಎಂದರು.

ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿರುವ ಜೀವ ರಕ್ಷಕ ಸಾಮಗ್ರಿ, ಮಾಸ್ಕ್‌ಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರಾದ ಶೀಲಾ ಮಠ, ಸುಲೋಚನಾ, ಪದ್ಮಾವತಿ, ಗಂಗಮ್ಮ, ಸುಧಾರಾಣಿ, ಚೌಡಮ್ಮ ಮಲ್ಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.