ಶಹಾಪುರ (ಯಾದಗಿರಿ ಜಿಲ್ಲೆ): ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 37 ಪೌರಕಾರ್ಮಿಕರ ಭವಿಷ್ಯ ನಿಧಿ (ಪಿ.ಎಫ್) ಹಾಗೂ ಉದ್ಯೋಗಿಗಳ ರಾಜ್ಯ ವಿಮೆ(ಇಪಿಎಫ್) ಮೊತ್ತವು 67 ತಿಂಗಳಿಂದ ಪೌರಕಾರ್ಮಿಕರ ಖಾತೆಗೆ ಜಮಾ ಆಗಿಲ್ಲ! ಅಧಿಕಾರಿಗಳ ತಪ್ಪಿನಿಂದ ಪೌರಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
‘2017ರಿಂದ 37 ಪೌರಕಾರ್ಮಿಕರ ತಿಂಗಳದ ವೇತನದಲ್ಲಿ ಪ್ರತಿ ಕಾರ್ಮಿಕನಿಂದ ₹3,363 ಮೊತ್ತವನ್ನು ಕಡಿತ ಮಾಡುತ್ತಾ ಬರಲಾಗಿದೆ. ನಮ್ಮ ಸಂಬಳದಿಂದ ಕಡಿತ ಮಾಡಿದ 67 ತಿಂಗಳ ಮೊತ್ತ ಸುಮಾರು ₹1.50 ಕೋಟಿ ಆಗುತ್ತದೆ. ಕಾರ್ಮಿಕ ಭವಿಷ್ಯ ನಿಧಿ ಖಾತೆಗೆ ಪ್ರತಿ ತಿಂಗಳು ಜಮಾ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಹಲವು ಬಾರಿ ಹೋರಾಟ ಮಾಡಿದ್ದರೂ ಪೌರಾಯುಕ್ತರು ಅಗತ್ಯ ಕ್ರಮ ತೆಗೆದುಕೊಂಡಿಲ್ಲ. ಕೊನೆಗೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ’ ಎನ್ನುತ್ತಾರೆ ನೊಂದ 37 ಪೌರಕಾರ್ಮಿಕರು.
‘ಸರ್ಕಾರದ ಮಾರ್ಗಸೂಚಿ ಪ್ರಕಾರ ಪಿಎಫ್ ಕೇವಲ ಶೇ 12ರಷ್ಟು ಸಂಬಳದಲ್ಲಿ ಕಡಿತಗೊಳಿಸಬೇಕು. ಆದರೆ, ಅಧಿಕಾರಿಗಳು ಶೇ 20ರಷ್ಟು ಕಡಿತಗೊಳಿಸಿ ಆರ್ಥಿಕ ನಷ್ಟ ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ಅಧಿಕಾರಿಗಳು ನಗರಸಭೆಯ ಲೆಕ್ಕ ಖಾತೆಯಲ್ಲಿ ಉಳಿಸಿಕೊಂಡಿರುವುದು ಕರ್ತವ್ಯಲೋಪವಾಗಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಬೇಕು’ ಎಂದು ನೊಂದ ಪೌರಕಾರ್ಮಿಕರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡಿದ್ದಾರೆ.
‘ಪೌರಕಾರ್ಮಿಕ ಶರಣಪ್ಪ ಅವರು 2023ರ ಡಿಸೆಂಬರ್ 7ರಂದು ಪೌರಾಯುಕ್ತರಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದರು. ಅಂದಿನ ಪೌರಾಯುಕ್ತ ರಮೇಶ ಬಡಿಗೇರ ಹಿಂಬರಹ ನೀಡಿ, ‘2017 ಆಗಸ್ಟ್ ತಿಂಗಳಿಂದ ಪೌರಕಾರ್ಮಿಕರ ವೇತನದಲ್ಲಿ ಇ.ಪಿ.ಎಫ್ ಮೊತ್ತವನ್ನು ಕಡಿತಗೊಳಿಸುತ್ತಿದ್ದು, ಈ ಕಾರ್ಮಿಕರ ಯುಎಎನ್ ನಂಬರ್ ನೋಂದಣಿ ಮಾಡಿ ಅವರ ಖಾತೆಗೆ ಇ.ಪಿ.ಎಫ್ ಮೊತ್ತವನ್ನು ಜಮಾ ಮಾಡಬೇಕಾಗಿತ್ತು. ಆದರೆ, ಹಣವನ್ನು ಸಂಬಂಧಿಸಿದ ಇಲಾಖೆಗೆ ಜಮಾ ಮಾಡಲು ಹಿಂದಿನಿಂದಲೂ ಕ್ರಮ ಕೈಗೊಂಡಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎನ್ನುತ್ತಾರೆ ಪೌರಕಾರ್ಮಿಕರು.
ಕಾರ್ಮಿಕರ ಭವಿಷ್ಯ ನಿಧಿ ನೀಡುವಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಹಾಗೂ ಲೆಕ್ಕ ಶಾಖೆಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೂ ಮನವಿ ಮಾಡಿದ್ದಾರೆ.
- 15 ದಿನ ಕಾಲಾವಕಾಶಕ್ಕೆ ಮನವಿ
2017ರಿಂದ ಕಾರ್ಮಿಕರ ಸಂಬಳದಿಂದ ಕಡಿತ ಮಾಡಿದ ಪಿ.ಎಫ್ ಹಾಗೂ ಇಪಿಎಫ್ ಹಣ ತುಂಬಿಲ್ಲ. ನಮ್ಮ ಖಾತೆಯಲ್ಲಿಯೇ ಇದೆ. ಎರಡು ದಿನಗಳ ಹಿಂದೆ ಕಲಬುರಗಿಯ ಪಿಎಫ್ ಕಚೇರಿಯ ಸಹಾಯಕ ಆಯುಕ್ತರ ಖಾತೆಗೆ ₹1 ಕೋಟಿ ಜಮಾ ಮಾಡಲಾಗಿದೆ. ಆಯೋಗದ ಮುಂದೆ 15 ದಿನ ಕಾಲಾವಕಾಶ ಪಡೆದುಕೊಂಡು ತ್ವರಿತವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗುವುದು ಜೀವನಕುಮಾರ ಕಟ್ಟಿಮನಿ ಪೌರಯುಕ್ತ ಶಹಾಪುರ
ಇಂದು ಸಭೆ: ಹಾಜರಾಗಲು ಸೂಚನೆ
ಪೌರಕಾರ್ಮಿಕರಿಗೆ ಇಎಸ್‌ಐ ಮತ್ತು ಪಿಎಫ್ ಮೊತ್ತವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡುವಂತೆ ಏಳೆಂಟು ತಿಂಗಳಿಂದ ಮೌಖಿಕವಾಗಿ ಹಾಗೂ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಅವರು ಜೂ.3ರಂದು ನಗರಸಭೆ ಪೌರಾಯುಕ್ತ ಹಾಗೂ ಯೋಜನಾ ನಿರ್ದೇಶಕರಿಗೆ ಬರೆದ ಸಭಾ ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ. ಗುರುವಾರ (ಜೂ.12) ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಆಯೋಗದ ನ್ಯಾಯಾಲಯದ ಸಭಾಂಗಣದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಗಿದ್ದು ಕಡ್ಡಾಯವಾಗಿ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.