ADVERTISEMENT

ಯಾದಗಿರಿ | ಕೊರೊನಾ ಯೋಧರ ಸೇವೆಯಲ್ಲಿ ನಿರತರಾಗಿರುವ ಯುವಕ

45 ದಿನಗಳಿಂದ ಪಾನಕ, ಮಜ್ಜಿಗೆ, ಟೀ ವಿತರಿಸುತ್ತಿರುವ ದರ್ಶನ ಗಾಂಧಿ

ಬಿ.ಜಿ.ಪ್ರವೀಣಕುಮಾರ
Published 10 ಮೇ 2020, 20:15 IST
Last Updated 10 ಮೇ 2020, 20:15 IST
ಯಾದಗಿರಿಯಲ್ಲಿ ಬೆಲ್ಲದ ಪಾನಕ ವಿತರಣೆಯಲ್ಲಿ ನಿರತಾಗಿರುವ ದರ್ಶನ ಕುಟುಂಬ
ಯಾದಗಿರಿಯಲ್ಲಿ ಬೆಲ್ಲದ ಪಾನಕ ವಿತರಣೆಯಲ್ಲಿ ನಿರತಾಗಿರುವ ದರ್ಶನ ಕುಟುಂಬ   

ಯಾದಗಿರಿ: ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರು, ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸ್‌ ಇಲಾಖೆ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಯಲ್ಲಿರುವವರಿಗೆಮಾರ್ಚ್‌ 25ರಿಂದ ಇಲ್ಲಿಯವರೆಗೆ ಬೆಲ್ಲದಪಾನಕ, ಮಜ್ಜಿಗೆ, ಟೀ ವಿತರಿಸುವ ಮೂಲಕ ನಗರದ ಫೈನಾನ್ಶಿಯರ್ದರ್ಶನ ಗಾಂಧಿ ಅಲ್ಪ ಸೇವೆ ಸಲ್ಲಿಸುತ್ತಿದ್ದಾರೆ.

ನಗರದ ಹೊಸಳ್ಳಿ ಕ್ರಾಸ್‌ ರಸ್ತೆಯಲ್ಲಿ ಮನೆಹೊಂದಿದ್ದು, ಅಲ್ಲಿಯೇ ಎಲ್ಲ ತಯಾರಿಸಿ ನಗರದೆಡೆಲ್ಲೆಡೆ ಸಂಚರಿಸಿ ತಮ್ಮ ಕಾಯಕ ಮುಂದುವರಿಸಿದ್ದಾರೆ. ಲಾಕ್‌ಡೌನ್‌ ಅದ ತಕ್ಷಣ ನೀರು ವಿತರಣೆಯಲ್ಲಿ ತೊಡಿಸಿಕೊಂಡಿದ್ದಾರೆ. ನಂತರ ಊಟ, ಬೆಲ್ಲದ ಪಾನಕ, ಮಜ್ಜಿಗೆ, ಚಹಾ ವಿತರಿಸುವ ಮೂಲಕ ಗಮನಸೆಳೆದಿದ್ದಾರೆ.

ಬೆಳಿಗ್ಗೆ 7ರಿಂದ ಆರಂಭವಾಗುವ ಕೆಲಸ ರಾತ್ರಿ 12 ಗಂಟೆತನಕ ಮುಂದುವರಿಯುತ್ತದೆ. ಬೆಳಿಗ್ಗೆ ಬೆಲ್ಲದ ಪಾನಕವನ್ನು ರಸ್ತೆಯಲ್ಲಿ ಸಿಗುವ ಎಲ್ಲರಿಗೆ ಹಂಚಿಕೊಂಡು ಬಂದಿದ್ದಾರೆ. ನಂತರ ಬೆಳಿಗ್ಗೆ 11 ಗಂಟೆಗೆ ಊಟ ವಿತರಿಸಿದ್ದಾರೆ. ಸಂಜೆ 4 ಗಂಟೆಗೂ ಆಹಾರ ವಿತರಿಸಿದ್ದಾರೆ. ರಾತ್ರಿ 10 ಗಂಟೆಯಿಂದ 12 ಗಂಟೆ ವರೆಗೆ ಚಹಾ ವಿತರಿಸಿಕೊಂಡು ಬಂದಿದ್ದಾರೆ.

ADVERTISEMENT

ಕೂಲಿ ಕಾರ್ಮಿಕರಿಗೂ ಆಹಾರ:ಆಯುಷ್‌ ಆಸ್ಪತ್ರೆ ಬಳಿ ವಲಸೆ ಹೋಗಿರುವ ಕೂಲಿ ಕಾರ್ಮಿಕರು ಜ್ವರ ತಪಾಸಣೆ ಮಾಡಿಸಿಕೊಳ್ಳಲು ಬರುತ್ತಿದ್ದರು. ಅಂಥವರಿಗೂ ಊಟ, ನೀರು ನೀಡಿದ್ದಾರೆ. ಇಂಥ ಕಾರ್ಯಕ್ಕೆ ಕೊರೊನಾ ಯೋಧರುಇವರ ಸೇವೆಯನ್ನು ಗುರುತಿಸಿ ಸನ್ಮಾನ ಕೂಡ ಮಾಡಿದ್ದಾರೆ.

ಅಕಗಳಿಗೆ ಕಲ್ಲಂಗಡಿ:ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ದರ್ಶನಗಾಂಧಿ ಕುಟುಂಬ ಆಹಾರ ಪೂರೈಸಿದೆ. ನಗರದಲ್ಲಿರುವ ಬಿಡಾಡಿ ದನಗಳಿಗೆ ಕಲ್ಲಂಗಡಿಯನ್ನು ಕತ್ತರಿಸಿ ಪ್ಲಾಸ್ಟಿಕ್‌ ಹಾಳೆಯಲ್ಲಿ ಇಟ್ಟು ಆ ಮೂಲಕ ಲಾಕ್‌ಡೌನ್‌ ವೇಳೆ ಪ್ರಾಣಿಗಳಿಗೆ ಆಹಾರದ ಕೊರತೆ ನೀಗಿಸಿದ್ದಾರೆ.

ಮಾಸ್ಕ್‌ ವಿತರಣೆ:ಇವುಗಳ ಜೊತೆಗೆ ಜನರಿಗೆ ಮಾಸ್ಕ್‌ ವಿತರಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಸಾವಿರಾರು ಜನರಿಗೆ ಉಚಿತವಾಗಿ ಮಾಸ್ಕ್‌ ವಿತರಿಸಿದ್ದಾರೆ.

‘ದಿನಕ್ಕೆ ₹3000 ಖರ್ಚು ತಗುಲುತ್ತದೆ. ರಾತ್ರಿಯೇ ಬೆಲ್ಲವನ್ನು ನೀರಿನಲ್ಲಿ ಹಾಕಿ ಬೆಳಿಗ್ಗೆ ಶೋಧಿಸಿ ಅದಕ್ಕೆ ಶುಂಠಿ, ನಿಂಬೆರಸ ಹಾಕಿ ದಾರಿಹೋಕರು, ಪೊಲೀಸರು, ಪೌರಕಾರ್ಮಿಕರು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಹೀಗೆ ಎಲ್ಲರಿಗೂ ವಿತರಿಸುತ್ತಾ ಬಂದಿದ್ದೇನೆ. ಬೆಳಿಗ್ಗೆ 50 ಲೀಟರ್ ಪಾನಕ, ಮಧ್ಯಾಹ್ನ 100 ಲೀಟರ್ ಮಸಾಲ ಮಜ್ಜಿಗೆ, ರಾತ್ರಿ ಹೊತ್ತು 10 ಕಪ್‌ ಚಹಾ ಕಳೆದ 45 ದಿನಗಳಿಂದ ದಿನಕ್ಕೆ ಸಾವಿರ ಜನಕ್ಕೆ ವಿತರಿಸಿದ್ದೇನೆ’ ಎನ್ನುತ್ತಾರೆ ದರ್ಶನಗಾಂಧಿ.

‘ಮೊದಲು ಎಲ್ಲವನ್ನು ಕುಟುಂಬದವರು ಸೇರಿ ಮಾಡುತ್ತಿದ್ದಿವಿ. ನಂತರ ಅಪಾರ್ಟ್‌ಮೆಂಟ್‌ನಲ್ಲಿರುವ 16 ಕುಟುಂಬಗಳು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾರೆ. ಇದರಿಂದ ನೂರಾರು ಜನಕ್ಕೆ ಊಟ, ನೀರು, ಪಾನಕ, ಮಜ್ಜಿಗೆ, ಚಹಾ ವಿತರಿಸುವಂತಾಯಿತು. ತಾಯಿ, ಪತ್ನಿ ಇದೆಲ್ಲವನ್ನು ತಯಾರಿಸುತ್ತಾರೆ. ಅಣ್ಣ ಉತ್ತಮ ಗಾಂಧಿ,ಮಕ್ಕಳಾದ ಚಾರ್ವಿ ಗಾಂಧಿ, ಚಿರಾಕ್‌ ಗಾಂಧಿ, ಕೌಶಿಲ್‌ ಗಾಂಧಿ, ತಾಯಿ ಲೀಲಾಬಾಯಿ ಕಾಂತಿಲಾಲ್‌, ಪತ್ನಿ ಪಿಂಕಿ ದರ್ಶನ ಗಾಂಧಿ ಸೇರಿ ಎಲ್ಲರಿಗೆ ಹಂಚಿ ಬರುತ್ತೇವೆ. ಇದು ಒಳ್ಳೆಯ ಅವಕಾಶ. ಇಂಥದು ಮತ್ತೆಂದು ಸಿಗದು. ಹೀಗಾಗಿ ಇದರಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.

***

ಕುಟುಂಬ, ಆಪಾರ್ಟ್‌ಮೆಂಟ್‌ನವರ ಸಹಾಕಾರದಿಂದಮಗ, ಮಗಳು ಜೀವ ಭಯವನ್ನು ಬಿಟ್ಟು, ನಗರದಲ್ಲಿ ಓಡಾಡಿ ಜನರಿಗೆ ಪಾನೀಯವನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ.
-ದರ್ಶನಗಾಂಧಿ,ಫೈನಾನ್ಶಿಯರ್

***

ಕೊರೊನಾ ಸೋಂಕಿನ ಗಂಭೀರ ಪರಿಸ್ಥಿತಿಯಲ್ಲಿ ಕೊರೊನಾ ಯೋಧರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ನಿಸಾರ್ಥ ಸೇವೆ ಮಾಡುತ್ತಿದ್ದಾರೆ. ಇದನ್ನು ಯಾರೂ ಉಹಿಸಿಕೊಳ್ಳಲು ಸಾಧ್ಯವಿಲ್ಲ.
-ಪ್ರದೀಪ್‌ ಬಿಸೆ, ಸಂಚಾರ ಪೊಲೀಸ್‌ ಪಿಎಸ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.