ADVERTISEMENT

ಮಿಡತೆ ಕೀಟಗಳ ನಿಯಂತ್ರಣಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 17:23 IST
Last Updated 28 ಮೇ 2020, 17:23 IST
ಆರ್.ದೇವಿಕಾ
ಆರ್.ದೇವಿಕಾ   

ಯಾದಗಿರಿ: ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಬೆಳೆನಾಶಕ ಮಿಡತೆ ಕೀಟ ಹಾವಳಿ ಕಂಡುಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆ ಕಾಲದ ಬೆಳೆಗಳು, ಕಟಾವು ಹಂತದಲ್ಲಿರುವ ತೋಟಗಾರಿಕೆ ಹಾಗೂ ಅರಣ್ಯೀಕರಣದ ಗಿಡಮರಗಳು ಈ ಮಿಡತೆ ಕೀಟಗಳಿಂದ ಹಾನಿಗೊಳಗಾಗಬಹುದು. ಇವುಗಳ ಹಾವಳಿ ತಡೆಗಾಗಿ ಜಿಲ್ಲೆಯ ರೈತರು ವಿವಿಧ ಹಂತದಲ್ಲಿ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಸಲಹೆ ನೀಡಿದ್ದಾರೆ.

ಜಂಟಿ ತಂಡ ರಚನೆ:ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಜಿಲ್ಲೆಯ ಹೋಬಳಿ ಮಟ್ಟ, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಒಳಗೊಂಡ ಜಂಟಿ ತಂಡ ರಚಿಸಲಾಗಿದೆ. ರೈತರ ಜಮೀನಿನಲ್ಲಿ ನಿಂತಿರುವ ಬೆಳೆಗಳು ಇರುವೆಡೆ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಮಿಡತೆಯಿಂದ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಕ್ಷೇತ್ರಗಳ ರಕ್ಷಣೆ ಕುರಿತು ಅರಿವು ಮೂಡಿಸುವುದು ಜಂಟಿ ತಂಡದ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ಮಿಡತೆ ಕೀಟಗಳ ನಿರ್ವಹಣಾ ಕ್ರಮಗಳು;ಮಿಡತೆಗಳು ತತ್ತಿಗಳಿರಿಸಿದ ಜಾಗವನ್ನು ಗುರುತಿಸಿ ಅವುಗಳ ಸುತ್ತಲು ಕಂದಕ (2 ಅಡಿ ಅಗಲ ಮತ್ತು 2 ಅಡಿ ಆಳ)ವನ್ನು ನಿರ್ಮಿಸಿ ತತ್ತಿಯಿಂದ ಬರುವ ಮರಿಗಳನ್ನು ಆ ಕಂದಕಗಳಲ್ಲಿ ಬಿಡುವಂತೆ ಮಾಡುವುದು. ಅಲ್ಲದೆ ತತ್ತಿಗಳನ್ನು ನಾಶಪಡಿಸಲು ಮೇಲಿಂದ ಮೇಲೆ ಉಳುಮೆ ಮಾಡಬೇಕು. ರೈತರು ಮಿಡತೆ ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್ಮು, ತಟ್ಟೆ ಇವುಗಳನ್ನು ಬಾರಿಸುವ ಮೂಲಕ ಭಾರೀ ಶಬ್ಧ ಮಾಡಬೇಕು. ರೇಡಿಯೋ ಅಥವಾ ಎಲೆಕ್ಟ್ರಾನಿಕ್ ಸೌಂಡ್‍ಗಳನ್ನು ಹಚ್ಚುವುದರಿಂದ ಮಿಡತೆ ತಂಡಗಳು ಹೊಲದ ಮೇಲಿನ ಬೆಳೆಗಳಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.