ADVERTISEMENT

ಯಾದಗಿರಿ | ಕೃತಕ ಬುದ್ಧಿಮತ್ತೆ: ಶಿಕ್ಷಣದಲ್ಲಿ ಬದಲಾವಣೆ: ಡಾ.ಶರಣಪ್ರಕಾಶ ‍ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:58 IST
Last Updated 26 ಜನವರಿ 2026, 7:58 IST
ಯಾದಗಿರಿಯ ಆರ್ಯಭಟ ಶಾಲೆಯಲ್ಲಿ ಭಾನುವಾರ ನಡೆದ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಮತ್ತು ಸಂದೀಪ‍್ ಪಾಂಡೆ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು
ಯಾದಗಿರಿಯ ಆರ್ಯಭಟ ಶಾಲೆಯಲ್ಲಿ ಭಾನುವಾರ ನಡೆದ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಮತ್ತು ಸಂದೀಪ‍್ ಪಾಂಡೆ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು   

ಯಾದಗಿರಿ: ‘ಕೃತಕ ಬುದ್ಧಿಮತ್ತೆ ಬಳಕೆಯು ಬಹಳಷ್ಟು ಬದಲಾವಣೆ ತಂದಿದ್ದು, ಶಿಕ್ಷಣದಲ್ಲಿಯೂ ಬದಲಾವಣೆ ತರುವುದು ಅವಶ್ಯವಿದೆ. ಕಂಠಪಾಠ ಮಾಡಿ ಕಲಿಯುವ ದಿನಗಳು ಹೊರಟು ಹೋದವು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ‍ಪಾಟೀಲ ಹೇಳಿದರು.

ನಗರ ಹೊರವಲಯದ ಆರ್ಯಭಟ ಇಂಟರ್‌ನ್ಯಾಷನಲ್ ಅಕಾಡೆಮಿಯ ವಸತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆರಳ ತುದಿಯಲ್ಲಿ ಸರ್ಚ್‌ ಎಂಜಿನ್ ಇರುವುದರಿಂದ ಕೆಲವೇ ಸೆಕೆಂಡ್‌ಗಳಲ್ಲಿ ಮಾಹಿತಿಯ ಕಣಜ ನಿಮ್ಮ ಮುಂದೆ ಬರುತ್ತದೆ. ಕೃತಕ ಬುದ್ಧಿಮತ್ತೆಯ ಇಂದಿನ ದಿನಗಳಲ್ಲಿ ದೇಶದ ಬದಲಾವಣೆಗೆ ಅಗತ್ಯವಾದ ಶಿಕ್ಷಣ ಬೇಕಿದೆ. ಜೊತೆಗೆ ಮಕ್ಕಳಿಗೆ ನಿರಂತರವಾಗಿ ಓದುವಂತೆ ಒತ್ತಡ ಹಾಕದಂತೆಯೂ ಪೋಷಕರಿಗೆ ಮಾರ್ಗದರ್ಶನ ನೀಡಬೇಕಿದೆ’ ಎಂದರು.

ADVERTISEMENT

‘ಯಶಸ್ಸಿಗೆ ಅಡ್ಡದಾರಿಗಳು ಇಲ್ಲ. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ನಮ್ರತೆಯನ್ನು ವಿದ್ಯಾರ್ಥಿ ಜೀವನದಿಂದಲೇ ಅಳವಡಿಸಿಕೊಳ್ಳಬೇಕು. ಈ ಮೂರು ನಿಮ್ಮಲ್ಲಿ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು’ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಸಂದೀಪ ಪಾಂಡೆ ಮಾತನಾಡಿ, ‘ನೂರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ, ಸ್ಪರ್ಧೆ ನಡೆಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಕೊಟ್ಟರೆ ಉಳಿದ ಮಕ್ಕಳ ಮನಸ್ಸಿನಲ್ಲಿ ಯಾವ ಭಾವನೆ ಮೂಡುತ್ತದೆ? ಶಿಕ್ಷಕರಾದವರು ತಮ್ಮ ವಿಷಯಗಳನ್ನು ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಅರ್ಥಮಾಡಿಕೊಳ್ಳುವವರೆಗೆ ಕಲಿಸುವುದು. ಪರೀಕ್ಷೆಗಳನ್ನು ನಡೆಸುವುದಲ್ಲ’ ಎಂದರು.

‘ಜಗತ್ತಿನ ಪ್ರತಿಯೊಂದು ದೇಶದಲ್ಲಿ ಸಮಾನ ಶಿಕ್ಷಣ ಪದ್ಧತಿ ಇದೆ. ರಾಷ್ಟ್ರಪತಿಯ ಮಗ, ಸಾಮಾನ್ಯ ಪ್ರಜೆಯ ಮಗನಿಗೂ ಒಂದೇ ತರಹದ ಶಿಕ್ಷಣ ಸಿಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಡವರು ಮತ್ತು ಶ್ರೀಮಂತರ ಮಕ್ಕಳು ಪಡೆಯುವ ಶಿಕ್ಷಣದ ಬೋಧನೆಯಲ್ಲಿ ಅಂತರ ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಸುಧಾಕರ ರೆಡ್ಡಿ ಮಾತನಾಡಿ, ‘ನಮ್ಮ ಅಕಾಡೆಮಿಯ ಒಳ್ಳೆಯ ಮನುಷ್ಯರನ್ನು ಸೃಷ್ಟಿಸಲು ಬಯಸುತ್ತದೆ ಹೊರತು ಹಣ ಮಾಡುವ ಯಂತ್ರಗಳನ್ನಲ್ಲ. ನಮಗೆ ನಾಯಕರು ಬೇಕಿದೆ ಅನುಯಾಯಿಗಳಲ್ಲ. ನಮಗೆ ಸೃಜನಕಾರರು ಬೇಕಾಗಿದೆ ಹೊರತು ಗ್ರಾಹಕರಲ್ಲ. ನಮಗೆ ಉದ್ಯಮಿಗಳು ಬೇಕು ಉದ್ಯೋಗಿಗಳಲ್ಲ. ಇಂತಹ ಸಮಾಜ ನಿರ್ಮಾಣಕ್ಕೆ ನಿಮ್ಮೆಲ್ಲರ ಬೆಂಬಲ ಬೇಕಿದೆ' ಎಂದು ಹೇಳಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಪ್ರಾಂಶುಪಾಲ ವೆಂಕಟೇಶ್ವರಲು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಬಸರೆಡ್ಡಿ ಅನಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.