ADVERTISEMENT

ಅಕ್ರಮ ಸಾಗಣೆ ಜಾಲದ ಪತ್ತೆಗೆ ಯಾದಗಿರಿ ಪೊಲೀಸರ ನಿರಾಸಕ್ತಿ...

‘ಅನ್ನಭಾಗ್ಯ’ದ ಅಕ್ಕಿ, ‘ಕ್ಷೀರಭಾಗ್ಯ’ದ ಹಾಲಿನ ಪುಡಿ ಅಕ್ರಮ ಸಾಗಣೆ

ಟಿ.ನಾಗೇಂದ್ರ
Published 1 ಜನವರಿ 2020, 10:26 IST
Last Updated 1 ಜನವರಿ 2020, 10:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಹಾಪುರ: ಯಾದಗಿರಿ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ಕ್ಷೀರ ಭಾಗ್ಯ ಯೋಜನೆಯ ನಂದಿನಿ ಹಾಲಿನ ಪುಡಿಯ ಅಕ್ರಮ ಮಾರಾಟ ಜಾಲದ ಬೇರು ಪತ್ತೆಗೆ ಪೊಲೀಸರು ಹಿಂದೇಟು ಹಾಕಿದ್ದಾರೆ ಎಂಬ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಭಾನುವಾರ ತಾಲ್ಲೂಕಿನ ಚಾಮನಾಳ ಗ್ರಾಮದಿಂದ ಅಕ್ರಮವಾಗಿ 25 ಕ್ವಿಂಟಲ್ ಅಕ್ಕಿಯನ್ನು ಸಾಗಣೆ ಮಾಡುತ್ತಿರುವುದನ್ನು ಜಿಲ್ಲಾ ಪೊಲೀಸ್ ಜಾಗೃತ ದಳ ಪತ್ತೆ ಮಾಡಿ ಜಪ್ತಿ ಮಾಡಿಕೊಂಡಿತ್ತು. ಪೊಲೀಸರು ಸಹ ವಾಹನದ ಚಾಲಕ ಮತ್ತು ಮಾಲೀಕನ ಮೇಲೆ ದೂರು ದಾಖಲಿಸಿಕೊಂಡು ಕೈ ತೊಳೆದುಕೊಳ್ಳುತ್ತಾರೆ. ಆದರೆ ಜಾಲದ ಹಿಂದಿರುವ ಕೈಗಳನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲು ಮುತುವರ್ಜಿ ವಹಿಸುತ್ತಿಲ್ಲ. ಇದು ಅಕ್ರಮವಾಗಿ ಮಾರಾಟ ಸಾಗಣೆಗೆ ಕುಮ್ಮಕ್ಕು ನೀಡಿದಂತೆ ಆಗುತ್ತಿದೆ ಎನ್ನುತ್ತಾರೆ ರೈತ ಶರಣಪ್ಪ.

ಹಾಗೆಯೇ ತಿಂಗಳ ಹಿಂದೆ ಕ್ಷೀರ ಭಾಗ್ಯ ಯೋಜನೆಯ ₹6.42 ಲಕ್ಷ ಮೌಲ್ಯದ ನಂದಿನಿ ಹಾಲಿನ ಪುಡಿಯನ್ನು ಶಹಾಪುರ ಠಾಣೆ ಪೊಲೀಸರು ವಶಪಡಿಸಿಕೊಂಡರು. ಆದರೆ ಜಾಲದ ಮೂಲ ಪತ್ತೆಗೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಇದು ಪೊಲೀಸರ ನಡೆಯನ್ನು ಜನತೆ ಪ್ರಶ್ನಿಸುವಂತೆ
ಆಗಿದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು.

ADVERTISEMENT

‘ಬಿಪಿಎಲ್ ಕಾರ್ಡ್ ಹೊಂದಿದ ಬಡ ಕುಟುಂಬಗಳಿಗೆ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ 7 ಕೆ.ಜಿ ಅಕ್ಕಿ ವಿತರಣೆ ಮಾಡುತ್ತಾರೆ. ಆದರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿರುವುದರಿಂದ ಗ್ರಾಮೀಣ ಜನತೆಗೆ ಗುಣಮಟ್ಟದ ಅಕ್ಕಿ ದೊರೆಯುತ್ತಿದೆ. ಹೀಗಾಗಿ ಪಡಿತರ ಅಕ್ಕಿಯನ್ನುಹೆಚ್ಚಾಗಿ ಊಟ ಮಾಡುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಅಂಗನವಾಡಿ ಕೇಂದ್ರದ ಸಹಾಯಕರು
ಸಹ ಮಕ್ಕಳಿಗೆ ಸಮರ್ಪಕವಾಗಿ ಆಹಾರ ವಿತರಿಸದೆ ಮಾರಾಟ ಮಾಡುತ್ತಾರೆ ಎನ್ನುತ್ತಾರೆ’ ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಘಟಕದ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ.

‘ಪ್ರತಿ ಹಳ್ಳಿಯಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸುವ ಜಾಲವೆ ಇಲ್ಲಿದೆ. ರಾತ್ರಿ ಸಮಯದಲ್ಲಿ ಮನೆ ಮನೆ ತೆರಳಿ ಅಕ್ಕಿಯನ್ನು ಸಂಗ್ರಹಿಸಿಕೊಂಡು ಗೋದಾಮಿನಲ್ಲಿ ಸಂಗ್ರಹಿಸಿ. ಅಕ್ಕಿಗೆ ಹೊಳಪು ನೀಡುವ ಪಾಲಿಶ್ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದಕ್ಕೊಂದು ಲೇಬಲ್ ಹಚ್ಚಿ ನೆರೆ ತೆಲಂಗಾಣ ರಾಜ್ಯಕ್ಕೆ ಸಾಗಣೆ ಮಾಡುತ್ತಾರೆ’ ಎನ್ನುತ್ತಾರೆ ಅವರು.

ವಡಗೇರಾ ತಾಲ್ಲೂಕು ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಗಳು ಪ್ರಭಾವಿ ರಾಜಕೀಯ ಮುಖಂಡರ ಕೈಯಲ್ಲಿ ಇದ್ದು ಕ್ಕಿಯನ್ನು ಅನಾಮತ್ತಾಗಿ ಮಾರಾಟ ಮಾಡುತ್ತಾರೆ. ಇದನ್ನು ನಾವು ಪ್ರಶ್ನಿಸಿದರೆ ಉಲ್ಟಾ ಗದರಿಸುತ್ತಾರೆ ಎನ್ನುತ್ತಾರೆ ಅಸಹಾಯಕ ಬಡ ಜನತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.