ADVERTISEMENT

ಬಸವಸಾಗರ ಜಲಾಶಯ ಭರ್ತಿ: ಬಾಗಿನ ಯಾವಾಗ?

ಮೇ 31 ರಿಂದ ಒಳಹರಿವು ಆರಂಭ, ಕಳೆದ ವರ್ಷ ಆಗಸ್ಟ್‌ನಲ್ಲಿ ಬಾಗಿನ ಸಮರ್ಪಣೆ

ಬಿ.ಜಿ.ಪ್ರವೀಣಕುಮಾರ
Published 1 ಜುಲೈ 2025, 7:27 IST
Last Updated 1 ಜುಲೈ 2025, 7:27 IST
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ   

ಯಾದಗಿರಿ: ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬಸವಸಾಗರ ಜಲಾಶಯ ಲಕ್ಷಾಂತರ ರೈತರಿಗೆ ಜೀವ ನದಿ ಆಗಿದೆ. ಜೂನ್‌ ತಿಂಗಳಲ್ಲೇ ಜಲಾಶಯ ಭರ್ತಿಯಾಗಿದ್ದು, ಯಾವಾಗ ಬಾಗಿನ ಎನ್ನುವ ಪ್ರಶ್ನೆ ಉದ್ಭವಿಸಿದೆ.

2024ರಲ್ಲಿ ಆಗಸ್ಟ್‌ ತಿಂಗಳಲ್ಲಿ ಬಾಗಿನ ಸಮರ್ಪಣೆ ಮಾಡಲಾಗಿತ್ತು. ಪಶ್ಚಿಮ ಘಟ್ಟ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದಿಂದ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗಿದೆ. ಅದರಂತೆ ಹೊರಹರಿವೂ ಹೆಚ್ಚಿಸಲಾಗಿದೆ.

ಬಸವಸಾಗರ ಜಲಾಶಯಕ್ಕೆ ಮೇ 31 ರಿಂದ ಒಳಹರಿವು ಆರಂಭವಾಗಿದ್ದು, ಜೂನ್ 30ರ ಸಂಜೆ 66 ಸಾವಿರ ಕ್ಯೂಸೆಕ್ ದಾಖಲಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಫಲಾನುಭವಿ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ವಿಜಯಪುರ, ಕಲಬುರಗಿಯ ಅಂದಾಜು 6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಪ್ರಮುಖವಾಗಿ ಎಡ ಹಾಗೂ ಬಲದಂಡೆ ಮುಖ್ಯ ಕಾಲುವೆಗಳು ಹಾಗೂ ಇತರೆ ಏತ ನೀರಾವರಿ ಯೋಜನೆಗಳ ಕಾಲುವೆ ಜಾಲಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುತ್ತದೆ.

ADVERTISEMENT

ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದ್ದು, ದಿನದಿಂದ ದಿನಕ್ಕೆ ಒಳಹರಿವು ಮತ್ತು ಹೊರಹರಿವಿನಲ್ಲಿ ವ್ಯತ್ಯಾಸವಾಗುತ್ತಿದೆ. ಈ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಜಲಾಶಯವು ಒಟ್ಟು 10ಕಿ.ಮೀ ಉದ್ದವಿದ್ದು, 30 ಮುಖ್ಯ ಕ್ರಸ್ಟ್‌ಗೇಟ್‌ಗಳನ್ನು ಹೊಂದಿದೆ. ಗರಿಷ್ಠ 492.25 ಮೀಟರ್‌ ಎತ್ತರದಲ್ಲಿ 33.313 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ.

ಬಸವಸಾಗರ ಹಿನ್ನೀರು ವ್ಯಾಪ್ತಿಯಲ್ಲಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಸುರಿದರೆ, ಇಲ್ಲವೇ ಆಲಮಟ್ಟಿ ಲಾಲ್ ಬಹದ್ದೂರ್‌ ಶಾಸ್ತ್ರಿ ಜಲಾಶಯದಿಂದ ಹೊರಹರಿವು ಹೆಚ್ಚಿಸಿದರೆ ಬಸವಸಾಗರದಿಂದ ಕೃಷ್ಣಾ ನದಿಗೆ ನೀರು ಹರಿಸುವ ಪ್ರಮಾಣ ಹೆಚ್ಚಿಸಲಾಗುವುದು ಎಂದು ಡ್ಯಾಂ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 31 ರಂದು 12,378 ಕ್ಯೂಸೆಕ್‌ ಒಳಹರಿವು ದಾಖಲಾಗಿತ್ತು. ಆ ಬಳಿಕ ಜೂನ್ 3 ರಂದು 7 ಸಾವಿರ ಹಾಗೂ ಜೂನ್‌ 7 ರಂದು 300 ಕ್ಯೂಸೆಕ್‌ಗೆ ಇಳಿಮುಖವಾಯಿತು. ಆ ಬಳಿಕ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮಳೆಯಾಗಿದ್ದರಿಂದ ಜೂನ್‌ 13 ರಂದು 20,000 ಕ್ಯೂಸೆಕ್ ಒಳ ಹರಿವು ದಾಖಲಾಗಿದ್ದು, ಅಂದೇ ಜಲಾಶಯದ ಒಂದು ಗೇಟ್ ತೆಗೆಯುವ ಮೂಲಕ 3,000 ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಹರಿಸಲು ಆರಂಭಿಸಲಾಯಿತು. ಅದೇ ದಿನ ಸಂಜೆ 12 ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಲಾಯಿತು. ಜೂನ್‌ 14ರಂದು 52 ಸಾವಿರ ಕ್ಯೂಸೆಕ್ ಹರಿಸಲಾಯಿತು.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ನದಿ ತೀರದ ಗ್ರಾಮಗಳ ಜನ ಜಾನುವಾರುಗಳು ನದಿಗೆ ಇಳಿಯದಂತೆ ಜಲಾಶಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಜಾ ವೇಣುಗೋಪಾಲ ನಾಯಕ
ಜಿಲ್ಲೆಯ ಜೀವನದಿ ಬಸವಸಾಗರ ಜಲಾಶಯ ಭರ್ತಿಯಾಗಿದ್ದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಯಾವಾಗ ಬಾಗಿನ ಅರ್ಪಿಸಬೇಕು ಎಂದು ನಿರ್ಣಯ ಮಾಡುತ್ತೇವೆ
ರಾಜಾ ವೇಣುಗೋಪಾಲ ನಾಯಕ ಸುರಪುರ ಶಾಸಕ

ಐಸಿಸಿ ಸಭೆ ಇಂದು

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಅಶಾದಾಯಕವಾಗಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಅವಧಿಯನ್ನು ನಿರ್ಧರಿಸಲು ಜುಲೈ 1ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ಸಭೆ ಆಯೋಜಿಸಲಾಗಿದೆ. ಕಳೆದ ಬಾರಿ ಮುಂಗಾರು ಹಿಂಗಾರು ಅವಧಿಯಲ್ಲಿ ನೀರು ಹರಿಸಲಾಗಿತ್ತು. ಆ ಹಿಂದಿನ ವರ್ಷ ಮುಂಗಾರು ಅವಧಿಗೆ ಮಾತ್ರ ನೀರು ಹರಿಸಲಾಗಿತ್ತು. ಹಿಂಗಾರಿಗೆ ಬೆಳೆಯನ್ನೇ ಕೈ ಬಿಡಬೇಕು ಎಂದು ರೈತರಲ್ಲಿ ಮನವಿ ಮಾಡಲಾಗಿತ್ತು. ಹೀಗಾಗಿ ಈ ಬಾರಿ ಅವಧಿಗೆ ಮುನ್ನವೇ ಬಸವಸಾಗರ ಜಲಾಶಯ ಭರ್ತಿಯಾಗಿದ್ದು ಮೊದಲ ಬೆಳೆಗೆ ಯಾವುದೇ ಚಾಲೂ ಬಂದ್‌ ಇಲ್ಲದೇ ನೀರು ಹರಿಸುವ ಸಾಧ್ಯತೆಗಳು ದಟ್ಟವಾಗಿವೆ.

ಡ್ಯಾಂಗೆ ಸಾರ್ವಜನಿಕರಿಗೆ ನಿರ್ಬಂಧ!

ಜಮ್ಮು ಕಾಶ್ಮೀರದ ಪಹಲ್ಗಾಮ್‌ ಬಳಿ ಉಗ್ರರ ದಾಳಿ ಕಾರಣದಿಂದ ಬಸವಸಾಗರ ಜಲಾಶಯ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಡ್ಯಾಂ ಮೂಲಗಳು ತಿಳಿಸಿವೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ ಡ್ಯಾಂಗೆ ಒಳಹರಿವು ಹೊರ ಹರಿವು ಹೆಚ್ಚಾಗುತ್ತದೆ. ಹೀಗಾಗಿ ಆಗ ಸಾರ್ವಜನಿಕರು ತಂಡೋಪ ತಂಡವಾಗಿ ಡ್ಯಾಂಗೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಡ್ಯಾಂ ಭರ್ತಿಯಾದರೂ ಭದ್ರತೆ ಕಾರಣ ಪ್ರವಾಸಿಗರ ನಿರ್ಬಂಧದಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.