ವಡಗೇರಾ: ‘ತನು, ಮನದಿಂದ ಕ್ಷೇತ್ರದ ಪ್ರತಿ ಬೂತ್‌ಗಳಲ್ಲಿರುವ ಎಲ್ಲ ಮನೆಗೂ ತೆರಳಿ ಬಿಜೆಪಿ ಸದಸ್ಯತ್ವ ಮಾಡಿಸುವ ಮೂಲಕ ಪಕ್ಷ ನೀಡಿದ ಗುರಿಯನ್ನು ಕಾರ್ಯಕರ್ತರು ತಲುಪಬೇಕು’ ಎಂದು ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಹೇಳಿದರು.
ಪಟ್ಟಣದ ಹನುಮಾನ ಮಂದಿರದ ಆವರಣದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಈಗಾಗಲೇ ಸದಸ್ಯತ್ವ ಅಭಿಯಾನದಲ್ಲಿ ಯಾದಗಿರಿ ಜಿಲ್ಲೆಯಲ್ಲಿಯೇ ಯಾದಗಿರಿ ಮತಕ್ಷೇತ್ರ ಎರಡನೇ ಸ್ಥಾನದಲ್ಲಿದೆ. ಇನ್ನು ಮುಂದೆಯೂ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಹೆಚ್ಚಿನ ಸದಸ್ಯತ್ವ ಮಾಡುವ ಮೂಲಕ ಮೊದಲ ಸ್ಥಾನವನ್ನು ಪಡೆಯಲು ಶ್ರಮವಹಿಬೇಕು’ ಎಂದು ತಿಳಿಸಿದರು.
ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ ಮಾತನಾಡಿ, ‘ಬಿಜೆಪಿ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮುವಲ್ಲಿ ಕಾರ್ಯಕರ್ತರ ಶ್ರಮ ದೊಡ್ಡದಿದೆ. ಇನ್ನಷ್ಟು ಪಕ್ಷ ಸಂಘಟನೆ ಮಾಡುವ ದಿಸೆಯಲ್ಲಿ ಸದಸ್ಯತ್ವ ಅಭಿಯಾನ ನಡೆದಿದೆ. ಇದನ್ನು ಸಹ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿ ಪಕ್ಷ ಸಂಘಟನೆಗೆ ಕೈಜೋಡಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಸೊನ್ನದ, ರಾಜಶೇಖರ ಕಾಡಂನೋರ, ಯಂಕಣ್ಣ ಬಸಂತಪೂರ, ಶಿವಕುಮಾರ ಕೊಂಕಲ್, ಜಗದೀಶ ಹೀರೆಮಠ, ಶ್ರೀನಿವಾಸರಾವ ಕುಲಕರ್ಣಿ, ಮಲ್ಲಿಕಾರ್ಜುನ ಕರಿಕಳ್ಳಿ, ಸಿದ್ದಪ್ ಪತಮ್ಮಣ್ಣೋರ, ಮಹ್ಮದ್ ಖುರೇಷಿ ಸೇರಿದಂತೆ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.