
ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕು ಕೇಂದ್ರದಿಂದ 30 ಕಿ.ಮಿ. ಹಾಗೂ ಜಿಲ್ಲಾ ಕೇಂದ್ರದಿಂದ 120 ಕಿ.ಮೀ. ದೂರದಲ್ಲಿನ ಬೂದಿಹಾಳ ಗ್ರಾಮ ಅಥವಾ ‘ಬೂದಿಗುಡ್ಡ’ ನವಶಿಲಾಯುಗದ ಹಲವು ಕುರುಹುಗಳನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡಿದೆ. ಆರೇಳು ಎಕರೆಯಲ್ಲಿ ವಿಸ್ತರಿಸಿಕೊಂಡಿರುವ ಬೂದಿಗುಡ್ಡ ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಇದೊಂದು ಮಹತ್ವದ ಜಾಗ.
ಇಲ್ಲಿರುವ ಬೂದಿಗುಡ್ಡಗಳಿಂದಾಗಿ ಈ ಗ್ರಾಮಕ್ಕೆ ‘ಬೂದಿಹಾಳ’ ಎಂದು ಹೆಸರು ಬಂದಿದ್ದು ಶತಮಾನದ ಹಿಂದೆಯೇ. ಅದು, ಮೆಡೋಸ್ ಟೇಲರ್ ಎಂಬುವವರು ಬೂದಿಗುಡ್ಡವನ್ನು ಪತ್ತೆ ಹಚ್ಚಿದ್ದರಿಂದಾಗಿ. ಆ ಬಳಿಕ ಬೂದಿಹಾಳಕ್ಕೆ ವಿಶ್ವದ ಪುರಾತತ್ವ ನಕ್ಷೆಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಸಿಗುವಂತೆ ಮಾಡಿದ ಶ್ರೇಯಸ್ಸು ಮಹಾರಾಷ್ಟ್ರದ ಪುಣೆ ಡೆಕ್ಕನ್ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಪದ್ದಯ್ಯ ಅವರಿಗೆ ಸಲ್ಲಿತ್ತದೆ.
ಪದ್ದಯ್ಯ ಅವರು 1965ರಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ಇಲ್ಲಿಯೇ ವಾಸ ಮಾಡಿದ್ದರು. ಬೂದಿಹಾಳ ಸುತ್ತಲಿನ ಹಲವು ಸ್ಥಳಗಳಲ್ಲಿ ಉತ್ಖನನ, ಸಂಶೋಧನೆ ನಡೆಸಿದರು. ಆ ಮೂಲಕ ನವಶಿಲಾಯುಗದ ಜನರ ಕುರುಹುಗಳು, ಅವರ ನಿತ್ಯ ಬಳಕೆಗೆ ಬಳಸುತ್ತಿದ್ದ ಕಲ್ಲಿನ ಆಯುಧಗಳು, ಕೈ ಕೊಡಲಿ, ಪ್ರಾಣಿಗಳ ಹಲ್ಲು, ದಿನ ಬಳಕೆ ವಸ್ತುಗಳು, ಒಳ್ಳು, ಗುಂಡು ಸೇರಿ ಇತರೆ ಮಹತ್ವದ ವಸ್ತುಗಳನ್ನು ಪತ್ತೆ ಮಾಡಿದರು.
ಬೂದಿಯಲ್ಲಿ ಅಡಗಿದ್ದ ನವಶಿಲಾಯುಗದ ಮಾನವ ಚರಿತ್ರೆಯನ್ನು ಹೊರ ಜಗತ್ತಿಗೆ ಪರಿಚಯಿಸಿದರು. ಸುಮಾರು 4,500 ರಿಂದ 5,000 ವರ್ಷಗಳ ಹಿಂದಿನ ಚರಿತ್ರೆ ಬೂದಿಯಿಂದ ಹೊರಬಂತು. ವಿವಿಧ ವಿನ್ಯಾಸದ ಮಡಿಕೆಗಳು, ಪ್ರಾಣಿಗಳ ಎಲುಬುಗಳು, ಶಿಲಾಯುಧಗಳ ಅವಶೇಷಗಳು ಲಭಿಸಿದವು. ನವಶಿಲಾಯುಗ ಸಂಸ್ಕೃತಿಯ ಶಿಲಾಯುಧ ಕಾರ್ಖಾನೆಯಾಗಿದ್ದ ಬೂದಿಹಾಳದ ಪುರಾತನ ಸಂಸ್ಕೃತಿ ಹೊರ ಜಗತ್ತಿಗೆ ಪರಿಚಯವಾಯಿತು. ಇದೊಂದು ಪ್ರಾಚೀನ ಶಿಲಾಯುಗ ಸಂಸ್ಕೃತಿಯ ವಸತಿ ನಿವೇಶನವಾಗಿದೆ. ಲಕ್ಷಾಂತರ ವರ್ಷಗಳಷ್ಟು ಪ್ರಾಚೀನವಾದದ್ದು ಎಂಬುದನ್ನು ಪದ್ದಯ್ಯ ಅಭಿಪ್ರಾಯಪಟ್ಟರು.
‘ನವಶಿಲಾಯುಗದ ಕಾಲಘಟದಲ್ಲಿ ಆದಿಮಾನವರು ಈ ಬೂದಿಹಾಳ ಗ್ರಾಮದಲ್ಲಿ ವಾಸವಾಗಿದ್ದರು. ಅವರು ಹೆಚ್ಚಾಗಿ ಪಶು ಸಾಕಾಣಿಕೆ ಮಾಡಿಕೊಂಡಿದ್ದರು. ಆ ಪಶು ಪ್ರಾಣಿಗಳಿಂದ ಶೇಖರಣೆಯಾದ ತ್ಯಾಜ್ಯ ಹಾಗು ಸೆಗಣಿಯನ್ನು ಮನೆಗಳ ಹಿಂದೆ ಸೇರಿಸುತ್ತಿದ್ದರು. ಆ ಬಳಿಕ ಆಹಾರ ತಯಾರಿಕೆ ಹಾಗೂ ರಾತ್ರಿ ವೇಳೆ ಈ ಗುಡ್ಡಕ್ಕೆ ಬೆಂಕಿ ಹಚ್ಚುತ್ತಿರಬಹುದು. ಆಗ ರಾತ್ರಿ ಬೆಳಕು ಸಿಗುವುದರ ಜೊತೆಗೆ ಕಾಡು ಪ್ರಾಣಿಗಳ ಭಯವೂ ದೂರಾಗುತ್ತಿರಬಹುದು. ಕಾಲ ಕ್ರಮೇಣ ಈ ಬೂದಿಯ ಗುಡ್ಡವೇ ಹಲವು ಪದರುಗಳಾಗಿ ನಿರ್ಮಾಣವಾಗಿದೆ. ಅದು ಹಗುರವಾರ ಗಟ್ಟಿಯಾಗಿ ನಮಗೆ ಇತಿಹಾಸದ ಕುರುವಾಗಿ ಉಳಿದುಕೊಂಡಿದೆ’ ಎಂದು ಸಂಶೋಧಕರಾದ ಎಸ್.ಕೆ. ಅರುಣಿ ವಿವರಿಸಿದರು.
ಬೂದಿಹಾಳದ ಸುತ್ತಲಿನ ಕೊಡೇಕಲ್, ಹಗರಟಗಿ, ರಾಜನಕೋಳೂರು, ಹುಣಸಗಿ ಸೇರಿದಂತೆ ಇತರೆ ಸ್ಥಳಗಳು ಬೃಹತ್ ಶಿಲಾಯುಗ ಸಂಸ್ಕೃತಿಯ ನೆಲೆಗಳಾಗಿ, ಪ್ರಾಗೈತಿಹಾಸಿಕ ಮಹತ್ವವನ್ನು ಸಾರುತ್ತಿವೆ. ಬೂದಿಹಾಳ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಕಮಕಿ ಕಲ್ಲು (ಪರಸ್ಪರ ಉಜ್ಜಿದಾಗ ಬಿಂಕಿ ಉತ್ಪತ್ತಿ ಯಾಗುವ ಕಲ್ಲುಗಳು) ಹೇಳರವಾಗಿ ಸಿಗುತ್ತಿದ್ದವು. ಇಂದಿಗೂ ಸಿಗುತ್ತವೆ. ’ಇಂಸಾಪುರ ಗ್ರಾಮದಿಂದ ಹುಣಸಗಿ, ವಜ್ಜಲ, ಹೆಬ್ಬಾಳ, ದೇವತಕಲ್ಲ ಮೂಲಕ ವರ್ಷಪೂರ್ತಿಯೂ ಹಿರೇಹಳ್ಳ ಹರಿಯುತ್ತದೆ’. ಇಸಾಂಪುರ, ರಾಜನಕೋಳುರು ಬುಡ್ಡರ ಮನೆಗಳೆಂದು ಕರೆಯಲಾಗುತ್ತಿರುವ ಶಿಲಾ ಸಮಾಧಿಗಳು, ಕೂಡಲಗಿ, ಬೈಚಬಾಳ, ಅರಕೇರಾ (ಜೆ), ತೆಗ್ಗೇಳ್ಳಿ ಸೇರಿದಂತೆ ಇತರ ಗ್ರಾಮದಲ್ಲಿ ಆದಿ ಮಾನವ ಅವಶೇಷಗಳು ಸಹ ದೊರೆತಿವೆ.
ಬೂದಿಹಾಳ ಗ್ರಾಮದಲ್ಲಿ ಆದಿ ಮಾನವರು ವಾಸದ ಜೊತೆಯಲ್ಲಿ ಪ್ರಾಣಿಗಳನ್ನು ಒಂಡೆಡೆ ಸುಡುತ್ತಿದ್ದರು. ಕಾಲಾಂತರದಲ್ಲಿ ಅದುವೇ ಬೂದಿಗುಡ್ಡವಾಗಿದೆ. ಅದರ ಕುರುಹುಗಳು ಇಂದಿಗೂ ಇಲ್ಲಿ ಕಾಣಸಿಗುತ್ತವೆ. ನಿರ್ದಿಷ್ಟ ಪ್ರದೇಶದಲ್ಲಿರುವ ಆ ಮಣ್ಣು ಬೂದಿಯಂತಿದ್ದು, ಕೆಂಪು ಹಾಗೂ ಕಪ್ಪು ಮಣ್ಣಿಗಿಂತ ಈ ಮಣ್ಣು ಹಗುರವಾಗಿಯೂ ಗಟ್ಟಿಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಇತಿಹಾಸದ ಆಸಕ್ತರು ಇಲ್ಲಿಗೆ ಬಂದು ವೀಕ್ಷಣೆ, ಅಧ್ಯಯನ ಮಾಡುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.
‘ನಾಗರಿಕತೆಯ ಚಾರಿತ್ರೆಯ ದೃಷ್ಟಿಯಿಂದ ಆ ಪ್ರದೇಶ ಮಹತ್ವವನ್ನು ಪಡೆದುಕೊಂಡಿದ್ದರೂ ಇಂದಿಗೂ ರಕ್ಷಣೆಗಾಗಿ ಎದುರು ನೋಡುತ್ತಿದೆ. ಸ್ಥಳದ ಮಹತ್ವವನ್ನು ತಿಳಿಸಿಕೊಡುವಂತಹ ಸಣ್ಣ ಫಲಕವಾಗಲಿ ಪ್ರಾಚ್ಯವಸ್ತು ಇಲಾಖೆ ಹಾಕಿಲ್ಲ. ಬೂದಿಗುಡ್ಡಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ಮಾರ್ಗ ಸೂಚಿಗಳೂ ಇಲ್ಲ. ಆಸಕ್ತಿಯಿಂದ ಅಧ್ಯಯನ, ವೀಕ್ಷಣೆಗೆ ಬರುವವರಿಗೆ ಸಾಕಷ್ಟು ತೊಂದರೆ ಆಗುತ್ತದೆ. ಇಲ್ಲಿ ಇಂದಿಗೂ ಹಳೇ ತಲೆಮಾರಿನವರು ಬಳಸುತ್ತಿದ್ದ ಬೆಂಕಿ ಹೊತ್ತಿಸುವ (ಚಕಮಕಿ) ಕಲ್ಲು ಅಲ್ಲಲ್ಲಿ ಕಾಣ ಸಿಗುತ್ತವೆ’ ಎನ್ನುತ್ತಾರೆ ಹುಣಸಗಿ ನಿವಾಸಿ ನಾಗಪ್ಪ ಅಡಿಕ್ಯಾಳ.
ರಾಜ್ಯದ ವಿವಿಧ ಭಾಗಗಳಿಂದ ಇತಿಹಾಸದ ಆಸಕ್ತರು ಇಲ್ಲಿಗೆ ಬಂದು ವೀಕ್ಷಣೆ, ಅಧ್ಯಯನ ಮಾಡುತ್ತಾರೆ
ವಸ್ತು ಸಂಗ್ರಹಾಲಯ: ಕೆ. ಪದ್ದಯ್ಯ ಅವರು ಸಂಶೋಧನೆ ಮಾಡಿ ಸಂಗ್ರಹಿಸಿದ ಮಹತ್ವದ ವಸ್ತುಗಳ ಪೈಕಿ ಕೆಲವು ಮಡಿಕೆ, ಕುಡಿಕೆ ಪಾತ್ರೆಗಳ ಅವಶೇಷ, ಆಯುಧದ ಮಾದರಿಯ ಕೆಲ ತುಣುಕುಗಳನ್ನು ಹುಣಸಗಿಯ ಈ ಹಿಂದಿನ ಗ್ರಾಮ ಪಂಚಾಯಿತಿಯಲ್ಲಿ (ಈಗಿನ ಪಟ್ಟಣ ಪಂಚಾಯಿತಿ) ಇರಿಸಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೆ ಅಧ್ಯಯನ ಉತ್ಖನನಕ್ಕೆ ಸ್ಫೂರ್ತಿಯಾಗಲಿ ಎಂಬುದು ಅವರ ಆಸೆಯವಾಗಿದೆ ಎನ್ನುತ್ತಾರೆ ಡಾ. ಎಂ.ಎಸ್.ಹುದ್ದಾರ.
‘60 ವರ್ಷಗಳ ಹಿಂದೆ ನವಶಿಲಾಯುಗದ ನೆಲಗಳನ್ನು ಹುಡುಕಿಕೊಂಡು ಊರೂರಿಗೆ ನಡೆದುಕೊಂಡು ಹೋಗಿ ಅಧ್ಯಯನ ಮಾಡಿದ್ದೇನೆ. ಕನ್ಯಾಕೊಳೂರ, ಬೀರನೂರು, ಮದ್ದರಕಿ, ಹಾರಣಗೇರಾ ಸೇರಿ ಇತರೆಡೆ ನವಶಿಲಾಯುಗದ ಬೂದಿಗುಡ್ಡಗಳ ಕುರುಹುಗಳು ಪತ್ತೆಯಾದವು. ಹಸು, ಎಮ್ಮೆಗಳಂತಹ ಪ್ರಾಣಿಗಳನ್ನು ಪಳಗಿಸಿದ ಆದಿ ಮಾನವರು, ಅವುಗಳ ಪಾಲನೆಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆಯುತ್ತಿದ್ದರು. ಅಲೆಯುವ ಮಧ್ಯದಲ್ಲಿ ಅಲ್ಲಲ್ಲಿ ನೆಲೆ ನಿಂತು ಸೆಗಣಿಯನ್ನು ಒಂದೆಡೆ ಸಂಗ್ರಹಿಸಿದರು. ಕಾಲಕ್ರಮೇಣು ಸಗಣಿ ಗುಡ್ಡಗಳೇ ನಿರ್ಮಾಣವಾದವು. ಆ ಗುಡ್ಡಗಳಿಗೆ ನೈಸರ್ಗಿಕವಾಗಿ ಅಥವಾ ಆದಿಮಾನವರೇ ಬೆಂಕಿ ಹಚ್ಚಿರಬಹುದು. ಸೆಗಣಿ ಗುಡ್ಡಗಳು ಸುಟ್ಟು ಬೂದಿ ದಿಬ್ಬಗಳಾಗಿ ಪದರಿನ ರೂಪದಲ್ಲಿ ಕುರುಹುಗಳಾಗಿ ಪತ್ತೆಯಾಗಿವೆ’ ಎನ್ನುತ್ತಾರೆ ಹಿರಿಯ ಸಂಶೋಧಕ ಡಿ.ಎನ್. ಅಕ್ಕಿ.
‘ಈಗ ಪ್ರತಿಯೊಂದು ಗ್ರಾಮಕ್ಕೆ ಹೋಗಲು ಸರಿಯಾಗ ರಸ್ತೆ ವ್ಯವಸ್ಥೆ, ವಾಹನಗಳಿವೆ. ಪುರಾತತ್ವಶಾಸ್ತ್ರಜ್ಞರು, ಇತಿಹಾಸ ವಿದ್ಯಾರ್ಥಿಗಳು, ಸಂಶೋಧಕರು ನಮ್ಮ ಭಾಗದಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕು. ಜನಪ್ರತಿನಿಧಿಗಳ ಸಹ ಮಾನವ ಕಾಳಜಿ ವಹಿಸಿ, ಸಂಶೋಧನೆಗೆ ಬೇಕಾದ ಸವಲತ್ತುಗಳನ್ನು ಕೊಡಲು ಗಮನ ಹರಿಸಿದರೆ ನಾಗರಿಕತೆಯ ಇತಿಹಾಸದಲ್ಲಿ ನಮ್ಮ ಜಿಲ್ಲೆಯು ಸ್ಥಾನ ಪಡೆಯುತ್ತದೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.