ADVERTISEMENT

ಶಿಕ್ಷಣದಿಂದ ಬಾಲ್ಯವಿವಾಹ ಹತೋಟಿಗೆ: ಶಾಸಕ ಚನ್ನಾರೆಡ್ಡಿ ಪಾಟೀಲ

ಬಾಲ್ಯ ವಿವಾಹ ನಿಷೇಧ, ಪೋಕ್ಸೊ, ಬಾಲ ನ್ಯಾಯ ಕಾಯ್ದೆಗಳ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 6:48 IST
Last Updated 10 ಸೆಪ್ಟೆಂಬರ್ 2025, 6:48 IST
ಯಾದಗಿರಿಯಲ್ಲಿ ಮಂಗಳವಾರ ಮಕ್ಕಳ ಸಂಬಂಧಿತ ಕಾಯ್ದೆಗಳ ಕುರಿತ ಕಾರ್ಯಾಗಾರವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಉದ್ಘಾಟಿಸಿದರು. ನಗರ ಸಭೆ ಅಧ್ಯಕ್ಷೆ ಲಲಿತಾ ಅನಾಪುರ, ಎಡಿಸಿ ರಮೇಶ ಕೋಲಾರ್ ಸೇರಿ ಹಲವರು ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಮಂಗಳವಾರ ಮಕ್ಕಳ ಸಂಬಂಧಿತ ಕಾಯ್ದೆಗಳ ಕುರಿತ ಕಾರ್ಯಾಗಾರವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಉದ್ಘಾಟಿಸಿದರು. ನಗರ ಸಭೆ ಅಧ್ಯಕ್ಷೆ ಲಲಿತಾ ಅನಾಪುರ, ಎಡಿಸಿ ರಮೇಶ ಕೋಲಾರ್ ಸೇರಿ ಹಲವರು ಉಪಸ್ಥಿತರಿದ್ದರು   

ಯಾದಗಿರಿ: ‘ಹೆಣ್ಣು ಮಕ್ಕಳಿಗೆ ಬಾಲ್ಯದಿಂದ ಉತ್ತಮವಾದ ಶಿಕ್ಷಣ ಕೊಡಿಸಿ ಬುದ್ಧಿವಂತರನ್ನಾಗಿ ಮಾಡಿದರೆ ಅವರೇ ಮುಂದೆ ಬಂದು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಾರೆ. ಜತೆಗೆ ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗು ಸಹ ದೂರಾಗುತ್ತದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಹಾಗೂ ಬಾಲ ನ್ಯಾಯ ಕಾಯ್ದೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮ, ಬಾಲ್ಯ ವಿವಾಹ ಕಾಯ್ದೆ ಕುರಿತು ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಶಿಕ್ಷೆಯಾಗಬೇಕು. ಪೋಕ್ಸೊ ಪ‍್ರಕರಣಗಳ ದಾಖಲಾತಿಯಲ್ಲಿ ಅಧಿಕಾರಿಗಳು ಯಾವುದಕ್ಕೂ ಕಿವಿಗೊಡಬಾರದು’ ಎಂದು ಹೇಳಿದರು.

ADVERTISEMENT

ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಮಾತನಾಡಿ, ‘ನಾಗರಿಕ ಜೀವನ, ಮಕ್ಕಳ ಹಕ್ಕುಗಳ ಬಗೆಗಿನ ತಿಳಿವಳಿಕೆಯ ಕೊರತೆಯ ಕಾರಣಕ್ಕೆ ಜಿಲ್ಲೆಯಲ್ಲಿ ವಿಚಿತ್ರವಾದ ಪ್ರಕರಣಗಳು ನಡೆಯುತ್ತಿವೆ. ನಾಗರಿಕ ಸಮಾಜದವರು ಎನಿಸಿಕೊಂಡವರು ಅಂತಹ ಘಟನೆಗಳಿಗೆ ಅವಕಾಶ ಮಾಡಿಕೊಡದಿರುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದರು.

‘ಅತ್ಯಂತ ಹಿಂದುಳಿದ ಜಿಲ್ಲೆಯಲ್ಲಿ ಮಕ್ಕಳ ಸಂಬಂಧಿತ ವಿಚಿತ್ರ ಘಟನೆಗಳನ್ನು ನಮ್ಮನ್ನು ಪೇಚಿಗೆ ಸಿಲುಕಿಸುತ್ತಿವೆ. ಇದಕ್ಕೆ ನಾವೆಲ್ಲರೂ ಜವಾಬ್ದಾರರು ಆಗುತ್ತೇವೆ. ಮಕ್ಕಳನ್ನು ರಕ್ಷಿಸುವ ಮತ್ತು ಅವರ ಹಕ್ಕುಗಳನ್ನು ಕಾಪಾಡುವ ಗುರುತರ ಹೊಣೆ ಹೊರಬೇಕಿದೆ’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಾಪುರ ಮಾತನಾಡಿ, ‘ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೊ ಕಾಯ್ದೆಗಳ ಬಗ್ಗೆ ತಳಮಟ್ಟದಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸುರಪುರ ಮತ್ತು ಗುರುಮಠಕಲ್‌ನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಗ್ರಾಮ ಸಭೆ, ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳಲ್ಲಿಯೂ ಜಾಗೃತಿ ತರಬೇಕಿದೆ’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ್ ಮಾತನಾಡಿ, ‘ಬಾಲ್ಯ ವಿವಾಹ ಪ್ರಕರಣಗಳ ದಾಖಲಾತಿಯಲ್ಲಿ ರಾಜ್ಯದಲ್ಲಿಯೇ ಯಾದಗಿರಿ ಮೂರನೇ ಸ್ಥಾನದಲ್ಲಿರುವುದು ವಿಪರ್ಯಾಸ. ಹೆಣ್ಣು ಮಕ್ಕಳ ಜೀವನವನ್ನು ನರಕ ಮಾಡುವ ಬಾಲ್ಯ ವಿವಾಹವನ್ನು ತಡೆಯಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಿರ್ಮಲಾ ಸುರಪುರ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ದಿನೇಶಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಕಾಯಂ ಜನತಾ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದ್ದು ₹ 1 ಕೋಟಿ ಮೌಲ್ಯದ ವ್ಯಾಜ್ಯಗಳು ನಾಗರಿಕ ಸೇವಾ ನ್ಯೂನತೆಗಳ ವ್ಯಾಜ್ಯಗಳಿಗೆ ಶುಲ್ಕರಹಿತವಾಗಿ ಪರಿಹಾರ ಕಂಡುಕೊಳ್ಳಬಹುದು
ಮರಿಯಪ್ಪ ಹಿರಿಯ ಸಿವಿಲ್ ನ್ಯಾಯಾಧೀಶ

ಕಾರ್ಯಾಗಾರದಲ್ಲಿ ಯಾರೆಲ್ಲ ಭಾಗಿ?

ಕಾರ್ಯಾಗಾರದಲ್ಲಿ ಮಾಧ್ಯಮದವರು ಪ್ರಿಂಟಿಂಗ್ ಪ್ರೆಸ್ ಟೆಂಟ್ ಹೌಸ್ ಡಿ.ಜೆ.ಬ್ಯಾಂಡ್‌ಬಾಜಾ ಕಲ್ಯಾಣ ಮಂಟಪ ಮತ್ತು ಶಾದಿ ಮಹಲ್ ಮಾಲೀಕರು ಪೂಜಾರಿಗಳು ಖಾಜಿ ಮೌಲಾನ್ ಅಡುಗೆ ಭಟ್ಟರು ಪಾಲ್ಗೊಂಡಿದ್ದರು. ಮಕ್ಕಳ ರಕ್ಷಣಾ ಯೋಜನೆ ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಬಾಲನ್ಯಾಯ ಕಾಯ್ದೆ ಹಾಗೂ ಪೋಕ್ಸೊ ಕುರಿತು ಮಾಹಿತಿ ನೀಡಿದರು.

‘ಪುನರ್ವಸತಿ ಕಲ್ಪಿಸಲು ಸಮೀಕ್ಷೆ’

‘ಲಿಂಗತ್ವ ಅಲ್ಪಸಂಖ್ಯಾತರ ಹಾಗೂ ಮಾಜಿ ದೇವದಾಸಿ ಮಹಿಳೆಯರ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ನಿಖರ ಮಾಹಿತಿ ಸಂಗ್ರಹಿಸಿ ಪುನರ್ವಸತಿ ಕಲ್ಪಿಸಲು ಸಮೀಕ್ಷೆ ನಡೆಸಲಾಗುವುದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಸಮೀಕ್ಷೆಯ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ‌‘ಮೂಲ ಹಂತದ ಸಮೀಕ್ಷೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯನ್ನು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.