
ಗುರುಮಠಕಲ್: 'ಯಪ್ಪೋ ಈ ವರ್ಷ ಭಾಳ ತಂಡಿ ಬಿಟ್ಟಾದ. ಈ ತಂಡಿ ಭಯಕ್ಕ ಬಿಸ್ಲೂ ಕೂಡ ಮಕ್ಕೊಂಡಂಗ ಕಾಣ್ತದ. ಅದ್ಕೆ ಬೆಳಿಗ್ಗೆ ಹತ್ತಾದ್ರೂನೂ ಬಿಸ್ಲು ಬರವಲ್ತು. ನಿನ್ನಿ(ಸೋಮವಾರ) ಹತ್ತ ಗಂಟಿ ಆದಮ್ಯಾಲ ಸ್ವಲ್ಪ ಬಿಸ್ಲು ಕಾಣುಸ್ತು. ಮನ್ಯಾಗಿಂದ ಹೊರಗೋದ್ರೆ ಕೈ-ಕಾಲು ಜುಂಜುಂ ಅನ್ನಂಗಾಗ್ತದ'
ಇದು ಮಂಗಳವಾರ ಬೆಳಿಗ್ಗೆ ಚಹಾ ಕುಡಿಯಲೆಂದು ಹೋಟೆಲ್‌ಗೆ ಬಂದಿದ್ದ ಹಿರಿಯರೊಬ್ಬರು ತಮಗಾದ ಚಳಿಯ ಅನುಭವವನ್ನು ‘ಪ್ರಜಾವಾಣಿ’ಯೊಡನೆ ಹಂಚಿಕೊಂಡ ಬಗೆ.
ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳಿಗ್ಗೆ ಹತ್ತು ಗಂಟೆಯವರಗೂ ಚಳಿ ಮತ್ತು ಸಂಜೆ 6 ನಂತರ ಮತ್ತೆ ಶೀತಗಾಳಿಯ ಹೆಚ್ಚಳ. ಮಧ್ಯಾಹ್ನದ ವೇಳೆ ಮಾತ್ರ ಬಿಸಿಲಿನ ಪ್ರಖರತೆಯ ಅನುಭವಾಗುತ್ತಿದೆ. ಜನರು ಚಳಿಯಿಂದ ರಕ್ಷಣೆಗೆ ಸಂಜೆ ವೇಳೆ ಮತ್ತು ಬೆಳಿಗ್ಗೆ ಸಮಯ ಬೆಂಕಿ ಹಚ್ಚಿ ಕಾಯಿಸಿಕೊಳ್ಳುವುದು ಕಂಡುಬರುತ್ತಿದೆ.
ಸಾಧಾರಣಕ್ಕಿಂತಲೂ ಈ ವರ್ಷ ಚಳಿ ಜಾಸ್ತಿಯಿದೆ. ಕಳೆದ ವಾರದಿಂದ ಶೀತ ಹೆಚ್ಚಿದೆ. ಬೆಳಗಿನ ರನ್ನಿಂಗ್ ಮತ್ತು ಸಂಜೆಯ ವಾಕಿಂಗ್ ನಿಲ್ಲಿಸಿದ್ದೇನೆ. ಮನೆಯೊಳಗೇ ವ್ಯಾಯಾಮ ಮತ್ತು ಯೋಗ ಮಾಡುತ್ತಿರುವೆ ಎನ್ನುವ ಪದವಿ ವಿದ್ಯಾರ್ಥಿಯ ಮಾತು ಚಳಿಯ ತೀವ್ರತೆಯನ್ನು ತಿಳಿಸಿದವು.
ಜೋಳ, ಕಡಲೆ ಬೆಳೆಗೆ ಪೂರಕ: ಚಳಿ ಮತ್ತು ಮಂಜು ವಾತವಾರಣವು ಜೋಳ ಮತ್ತು ಕಡಲೆ ಬೆಳೆಗೆ ಪೂರಕವಾಗಿರುತ್ತದೆ. ಆದ್ದರಿಂದ ಈ ವರ್ಷ ಜೋಳ, ಕಡಲೆಯ ಉತ್ತಮ ಫಸಲಿನ ನಿರೀಕ್ಷೆಯಿದೆ.
ಈವರ್ಷ ತೊಗರಿ, ಹೆಸರು, ಉದ್ದು ಎಲ್ಲವೂ ನಷ್ಟವಾಗಿವೆ. ಈಗ ಜೋಳ ಬೆಳೆಯಾದರೂ ಉತ್ತಮ ಫಸಲು ಕೊಟ್ಟರೆ ಸಾಲದಲ್ಲಿ ಮುಳುಗಿದ ನಮಗೆ ಸ್ವಲ್ಪವಾದರೂ ಉಸಿರು ಬಿಡಿವಂತಾಗಬಹುದು ಎನ್ನುವುದು ರೈತರಾದ ಮಾಣಿಕಪ್ಪ, ಸಾಬಪ್ಪ, ಮಹೇಶ ಅವರ ನಿರೀಕ್ಷೆ.
ಚಳಿಯ ಕಾರಣ ಫಸಲು ಹೆಚ್ಚಳವಾಗುವ ಸಾಧ್ಯತೆಯಿದೆ. ಜತೆಗೆ ರೈತರು ತಮ್ಮ ಬೆಳೆಗಾಗುವ ಲಘು ಪೋಷಕಾಂಶಗಳ ಕೊರತೆ ನೀಗಿಸಲು ಲಘು ಪೋಷಕಾಂಶಗಳ ಮಿಶ್ರಣ ಸಿಂಪಡಿಸಿದರೆ ಉತ್ತಮ. ನಮ್ಮಲ್ಲಿ ಅವಶ್ಯಕ ಪೋಷಕಾಂಶಗಳ ಮಿಶ್ರಣ ಲಭ್ಯವಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ತಿಳಿಸಿದರು.
ಚಳಿಯಲ್ಲಿ ಅನವಶ್ಯ ತಿರುಗುವುದು ತಪ್ಪಿಸಿ ಬಿಸಿ-ಶುಚಿಯಾದ ಆಹಾರ ಸೇವಿಸಿ. ದೇಹ ಬಿಸಿಯಾಗಿರುವಂತ ಧಿರಿಸನ್ನು ಧರಿಸಬೇಕು. ಆರೋಗ್ಯದ ಕುರಿತು ಕಾಳಜಿ ಅಗತ್ಯ. ಅನಾರೋಗ್ಯ ಲಕ್ಷಣ ಕಂಡರೆ ತಕ್ಷಣ ವೈದ್ಯರ ಸಲಹೆ ಆರೈಕೆ ಪಡೆಯಿರಿಡಾ.ಮಹೇಶ ಸಜ್ಜನ ಸಿಎಚ್‌ಸಿ ಗುರುಮಠಕಲ್ ವೈದ್ಯಾಧಿಕಾರಿ
ಹಲವು ವರ್ಷಗಳಿಂದ ಇಷ್ಟೊಂದು ಚಳಿಯನ್ನು ಕಂಡಿಲ್ಲ. ತಂಗಾಳಿಯಿಂದಾಗಿ ಬಿಸಿಲಲ್ಲಿ ಕೂತರೂ ಚಳಿಯಾಗುತ್ತೆಅಂಜಪ್ಪ ಹಿರಿಯ ನಾಗರಿಕರು
ಭಯ ಬೇಡ ಆರೈಕೆ ಮುಖ್ಯ
‘ಚಳಿಯು ಹೆಚ್ಚಿರುವ ಕಾರಣ ವೃದ್ಧರು ಮತ್ತು ಚಿಣ್ಣರಿಗೆ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚಿದೆ. ಭಯಪಡುವ ಅವಶ್ಯಕತೆಯಿಲ್ಲ ಮನೆಯಲ್ಲಿ ವೃದ್ಧರು ಮತ್ತು ಮಕ್ಕಳಿದ್ದರೆ ಅವರಿಗೆ ಮುತುವರ್ಜಿಯಿಂದ ಆರೈಕೆ ಮಾಡಿ’ ಎಂದು ವೈದ್ಯಾಧಿಕಾರಿ ಡಾ.ಮಹೇಶ ಸಜ್ಜನ ಸಲಹೆ ನೀಡಿದರು. ಅಸ್ತಮಾ ಕ್ಷಯ ಕೋಲ್ಡ್ ಅಲರ್ಜಿ ಮೂಳೆಗಳ ನೋವು ರಕ್ತ ಸಂಬಂಧಿ ಸೋಂಕು ಸೇರಿದಂತೆ ಆರೋಗ್ಯ ಸಮಸ್ಯೆಯಿರುವ ಎಲ್ಲಾ ವಯಸ್ಸಿನವರೂ ಚಳಿಯಲ್ಲಿ ಓಡಾಟವನ್ನು ನಿಲ್ಲಿಸಿದರೆ ಉತ್ತಮ. ಅನಾರೋಗ್ಯದ ಲಕ್ಷಣವಿದ್ದರೆ ಕೂಡಲೇ ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆಯಲಿ. ವೈದ್ಯಕೀಯ ಆರೈಕೆ ಮತ್ತು ಔಷದೋಪಚಾರ ಮಾಡುವಲ್ಲಿ ನಿರ್ಲಕ್ಷಿಸದಿರಿ ಎನ್ನುತ್ತಾರೆ ವೈದ್ಯರಾದ ಡಾ.ಭಾಗರೆಡ್ಡಿ ಮತ್ತು ಡಾ.ಗುರುರಾಜ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.