ಶಹಾಪುರ: ವಾಣಿಜ್ಯ ಬೆಳೆಯಾದ ಹತ್ತಿ ಬಿತ್ತನೆ ಕ್ಷೇತ್ರವು ಕಳೆದ ಸಾಲಿಗಿಂತ ಈ ಬಾರಿ 8 ಸಾವಿರ ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ.
ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ರೈತರು 38,978 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ. ನಿಗದಿಯಂತೆ ಮಳೆ ಬಂದಿರುವುದು ಹಾಗೂ ಕಾಲುವೆ ನೀರು ರೈತರ ಕೈ ಹಿಡಿದಿದೆ. ಉತ್ಪಾದನೆಯ ಕ್ಷೇತ್ರವೂ ಹೆಚ್ಚಳವಾಗುತ್ತಿದೆ.
‘ಎಕರೆಗೆ ಕನಿಷ್ಠ 10 ಕ್ವಿಂಟಲ್ ಹತ್ತಿ ಇಳುವರಿ ಬರುತ್ತಲಿದೆ. ಅಲ್ಲದೆ ಅಕ್ಟೋಬರ್ ತಿಂಗಳಲ್ಲಿ ಹತ್ತಿ ಕೀಳಿದ ಮೇಲೆ 2ನೇ ಅವಧಿಗೆ ರೈತರು ಸಜ್ಜೆ, ಶೇಂಗಾ ಬಿತ್ತನೆ ಮಾಡುತ್ತಾರೆ. ಬೆಲೆ ಸ್ಥಿರತೆ ಹಾಗೂ ತಾತ್ಕಾಲಿಕ ಮಾರುಕಟ್ಟೆಯ ಲಭಿಸಿರುವುದು ರೈತರಿಗೆ ಹತ್ತಿ ಬೆಲೆ ಆಶಾದಾಯಕವಾಗಿದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೋಳ.
‘ತೊಗರಿ ಬಿತ್ತನೆ ಕ್ಷೇತ್ರ ಕ್ಷೀಣಿಸುತ್ತಲಿದೆ. ಹೆಚ್ಚಿನ ಇಳುವರಿ ಬರುತ್ತಿಲ್ಲ. ಬೆಲೆಯಲ್ಲಿ ಸ್ಥಿರತೆ ಕಾಣುತ್ತಿಲ್ಲ. ಡಿಸೆಂಬರ್ ತಿಂಗಳಲ್ಲಿ ಕಟಾವಿಗೆ ಬರುತ್ತದೆ. 2ನೇ ಅವಧಿಗೆ ಬಿತ್ತನೆ ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ರೈತರು ಹತ್ತಿ ಬಿತ್ತನೆಗೆ ಮುಂದಾಗುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
‘ಹತ್ತಿ ಬೆಳೆ ಸಂರಕ್ಷಣೆಗೆ ಹೆಚ್ಚಿನ ವೆಚ್ಚ ಮಾಡಿದರೂ ಲಾಭವೂ ಇದೆ. ನಷ್ಟ ಆಗಲು ಸಾಧ್ಯವಿಲ್ಲ. ನೀರು, ರಸಗೊಬ್ಬರ ಕಡಿಮೆ ಉಪಯೋಗಿಸುತ್ತೇವೆ. ಆದರೆ ಹತ್ತಿ ಕೀಳಲು ನಮ್ಮಲ್ಲಿ ಇನ್ನೂ ಆಧುನಿಕ ಯಂತ್ರ ಬಂದಿಲ್ಲ. ಮಾನವ ಸಂಪನ್ಮೂಲದ ಮೇಲೆ ಅವಲಂಬಿತರಾಗಿದ್ದೇವೆ. ಹೆಚ್ಚಿನ ಲಾಭವನ್ನು ಹತ್ತಿ ಕೀಳುವ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ನೀಡುವಂತೆ ಆಗಿದೆ’ ಎನ್ನುತ್ತಾರೆ ರೈತರ ಶರಣಪ್ಪ.
₹ 300 ಕೋಟಿ ಅಧಿಕ ವಹಿವಾಟು
‘ಕಳೆದ ವರ್ಷ ಹತ್ತಿ ಮಾರಾಟದ ವಹಿವಾಟು ₹300 ಕೋಟಿಗೂ ಅಧಿಕ ವಹಿವಾಟು ಆಗಿದೆ. ಹತ್ತಿ ನಿಗಮ ಹಾಗೂ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದರು. ಅಲ್ಲದೆ ನೆರೆ ಗುಜರಾತದಿಂದ ರೈತರು ಹತ್ತಿ ಖರೀದಿಗೆ ಆಗಮಿಸಿದ್ದರು. ಅಲ್ಲದೆ ತಾಲ್ಲೂಕಿನಲ್ಲಿ 20 ಹತ್ತಿ ಕಾರ್ಖಾನೆ ಇವೆ. ರೈತರು ನೇರವಾಗಿ ಕಾರ್ಖಾನೆಗೆ ತೆರಳಿ ಮಾರಾಟ ಮಾಡುತ್ತಾರೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೋಳ ತಿಳಿಸಿದರು.
ಪ್ರಸಕ್ತ ವರ್ಷ 8 ಸಾವಿರ ಹೆಕ್ಟೇರ್ ಹತ್ತಿ ಬಿತ್ತನೆ ಕ್ಷೇತ್ರ ಹೆಚ್ಚಾಗಿದೆ. ಸದ್ಯಕ್ಕೆ ಬೆಳೆಯೂ ಉತ್ತಮವಾಗಿದೆ.- ಸುನಿಲಕುಮಾರ ಯರಗೋಳ, ಸಹಾಯಕ ಕೃಷಿ ನಿರ್ದೇಶಕ ಶಹಾಪುರ
‘ಹತ್ತಿ ನಿಗಮವು ಪ್ರತಿ ಕ್ವಿಂಟಾಲ್ ಗೆ ₹8,010 ಬೆಲೆ ನಿಗದಿಗೊಳಿಸಿದ್ದರಿಂದ ರೈತರಿಗೆ ಬೆಲೆ ಸ್ಥಿರತೆ ನೆರವಾಗಲಿದೆ’ ಎನ್ನುತ್ತಾರೆ ಅವರು.
ಹತ್ತಿ ಸಂಶೋಧನಾ ಕೇಂದ್ರ ಸ್ಥಾಪಿಸಲಿ
‘ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ ಕಾಯಂ ಆಗಿ ಹತ್ತಿ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದಲ್ಲಿ ರೈತರಿಗೆ ಅನುಕೂಲವಾಗುತ್ತದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಹಾಗೂ ಹೊಸ ತಂತ್ರಜ್ಞಾನದ ಅವಿಷ್ಕಾರಗಳು ದೊರಕುತ್ತವೆ. ಹತ್ತಿ ಕೀಳುವ ಯಂತ್ರ ಹಾಗೂ ಏಕಕಾಲಕ್ಕೆ ಹತ್ತಿ ಬೆಳೆ ಬರುವ ಬೀಜಗಳ ಉತ್ಪಾದಿಸುವುದು ಅಗತ್ಯವಾಗಿದೆ’ ಎನ್ನುತ್ತಾರೆ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಡೀನ್ ಪ್ರೊ.ಪ್ರಕಾಶ ಕುಚನೂರ ಮನವಿ ಮಾಡಿದರು.
‘ಈಗಾಗಲೇ ಹತ್ತಿ ಬಿತ್ತನೆ ಕ್ಷೇತ್ರದ ಜತೆಯಲ್ಲಿ ಉತ್ಪಾದನೆ ಪ್ರದೇಶ ಹೆಚ್ಚಳವಾಗಿದೆ. ಹೆಚ್ಚು ಜಿನ್ನಿಂಗ್ ಮಿಲ್ ಬಂದಿವೆ. ಅಲ್ಲದೆ ಹತ್ತಿ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಹತ್ತಿ ನಿಗಮದ ಖರೀದಿ ಕೇಂದ್ರ ಸ್ಥಾಪಿಸಿಸದರೆ ಮಾರುಕಟ್ಟೆ ಲಭಿಸಲಿದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಲು ನೆರವಾಗಲಿವೆ’ ಎಂದರು.
ಹತ್ತಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಪತ್ರ
‘ರಾಯಚೂರಿನಲ್ಲಿರುವ ಹತ್ತಿ ಸಂಶೋಧನಾ ಕೇಂದ್ರ ಹಾಗೂ ಹತ್ತಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಸಂಸದ ಜಿ.ಕುಮಾರ ನಾಯಕ ಜತೆ ಚರ್ಚಿಸಿ ಕೇಂದ್ರಕ್ಕೆ ಶೀಘ್ರದಲ್ಲಿ ಪತ್ರ ಬರೆಯುವೆ. ಹತ್ತಿಗೂಡೂರದಲ್ಲಿ ಬೀಜ ಸಂಶೋಧನಾ ಕೇಂದ್ರದ ಅಧೀನದಲ್ಲಿ 40 ಎಕರೆ ಜಮೀನು ಲಭ್ಯವಿದೆ. ಜಾಗದ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.