ADVERTISEMENT

ಯಾದಗಿರಿ: ಕೋವಿಡ್‌ 19 ಲಾಕ್‌ಡೌನ್ ಮತ್ತಷ್ಟು ಬಿಗಿ ಕ್ರಮ

ಬೆಳಿಗ್ಗೆ 7ರಿಂದ 1ರ ವರೆಗೆ ವಹಿವಾಟಿಗೆ ಅವಕಾಶ, ಬಟ್ಟೆ, ಚಿನ್ನದ ಅಂಗಡಿ ಮತ್ತೆ ಬಂದ್‌

​ಪ್ರಜಾವಾಣಿ ವಾರ್ತೆ
Published 13 ಮೇ 2020, 17:19 IST
Last Updated 13 ಮೇ 2020, 17:19 IST
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌   

ಯಾದಗಿರಿ: ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟ ಪರಿಣಾಮ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬಟ್ಟೆ, ಚಿನ್ನದ ಅಂಗಡಿ ಹೊರತು ಪಡಿಸಿ ಮಿಕ್ಕ ಅಂಗಡಿಗಳ ತೆೆರೆಯಲು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅನುಮತಿ ನೀಡಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಬೇಕಾಗುವ ಸಿಮೆಂಟ್, ಕಬ್ಬಿಣ, ಹಾರ್ಡ್‍ವೇರ್ ಪ್ಲಂಬಿಂಗ್‌ ಅಂಗಡಿಗಳು ಹಾಗೂ ಅಲ್ಲದೇ ಇನ್ನಿತರೆ ಎಲ್ಲಾ ಅಂಗಡಿಗಳು (ಬಟ್ಟೆ, ಚಿನ್ನದ ಅಂಗಡಿಗಳು ಹೊರತುಪಡಿಸಿ) ಜಿಲ್ಲೆಯಾದ್ಯಂತ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಷರತ್ತುಗಳು: ಎಲ್ಲಾ ಸಾರ್ವಜನಿಕ ಸ್ಥಳ/ಅಂಗಡಿಗಳಲ್ಲಿ ಒಂದು ಮೀಟರ್ ಅಂತರ ಪಾಲನೆ ಕಡ್ಡಾಯ ಮತ್ತು ಎಲ್ಲರೂ ಮಾಸ್ಕ್ ಅಥವಾ ಮುಖಗವಸು ಕಡ್ಡಾಯವಾಗಿ ಧರಿಸತಕ್ಕದ್ದು. ಎಲ್ಲಾ ಸಾರ್ವಜನಿಕ ಸ್ಥಳ, ಅಂಗಡಿಗಳಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಉಪಯೋಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪಾನ್, ಗುಟ್ಕಾ, ತಂಬಾಕು ಇತ್ಯಾದಿಗಳನ್ನು ಸೇವಿಸಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಅನಗತ್ಯವಾಗಿ ಹೊರಗೆ ಬಂದರೆ ಕ್ರಮ: ಅಂಗಡಿ, ಕಾರ್ಖಾನೆ, ಸಾರ್ವಜನಿಕ ಸ್ಥಳ ಅಥವಾ ಇನ್ನಿತರೆ ಮಾಲೀಕರು ಕಡ್ಡಾಯವಾಗಿ ಆಯಾ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಮುಚ್ಚಳಿಕೆ ಪತ್ರ ನೀಡತಕ್ಕದ್ದು. ಸಾರ್ವಜನಿಕರು ತುರ್ತು ಸೇವೆಗೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಬಂದಿರುವುದು ಕಂಡುಬಂದಲ್ಲಿ ಅಂಥ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ಹೊರ ರಾಜ್ಯದಿಂದ ಬರುವ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ಪ್ರವಾಸಿಗರು ಕಡ್ಡಾಯವಾಗಿ 14 ದಿನಗಳವರೆಗೆ ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್‍ಗಳಲ್ಲಿ ಇರತಕ್ಕದ್ದು. ಒಂದು ವೇಳೆ ಈಗಾಗಲೇ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರು ಅಥವಾ ವಲಸೆಗಾರರು ಕೆಲವೊಂದು ಗ್ರಾಮಗಳಲ್ಲಿ ಅನವಶ್ಯಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ಮಾಡುತ್ತಿರುವುದು ವರದಿಯಾದಲ್ಲಿ ಅಂಥ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಂಟೇನ್ಮೆಂಟ್ ವಲಯ ಸಂಬಂಧಿಸಿದಂತೆ ಪ್ರತ್ಯೇಕ ಕಟ್ಟುನಿಟ್ಟಿನ ನಿರ್ಬಂಧನೆಗಳು ಇರುವುದರಿಂದ, ಸದರಿ ಆದೇಶವು ಅನ್ವಯಿಸುವುದಿಲ್ಲ. ಈ ಆದೇಶವು ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು ಇತ್ಯಾದಿ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

***

ಈ ಎಲ್ಲಾ ಅಂಶಗಳನ್ನು ಕಟುನಿಟ್ಟಾಗಿ ಪಾಲಿಸತಕ್ಕದ್ದು. ಒಂದು ವೇಳೆ ಪಾಲಿಸದೇ ಇದ್ದಲ್ಲಿ ವಿಪತ್ತು ನಿರ್ವಹಣಾ ಅಧಿನಿಯಮ 2005 ರನ್ವಯ ದಂಡ ವಿಧಿಸಿ ಅಂಗಡಿಗಳ ಪರವಾನಗಿ ರದ್ದುಪಡಿಸಿ, ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು

- ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.