
ಯಾದಗಿರಿ: ರಾಜ್ಯ ಸರ್ಕಾರ ರೈತರಿಗಾಗಿ ಬಿಡುಗಡೆ ಮಾಡಿರುವ ಬೆಳೆಹಾನಿ ಪರಿಹಾರದ ಹಣವು ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕ್‌ಗಳು ಸಾಲದ ಖಾತೆಗಳಿಗೆ ಹೊಂದಿಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು, ಪರಿಹಾರದ ಹಣ ಸಾಲಕ್ಕೆ ಜಮೆ ಮಾಡುಕೊಳ್ಳುವವರಿಗೆ ತಕ್ಷಣವೇ ನಿಲ್ಲಿಸುಂವತೆ ಸೂಚನೆ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ರೈತರೊಂದಿಗೆ ಖುದ್ದಾಗಿ ಬ್ಯಾಂಕ್‌ಗಳ ಮುಂದೆ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಿಲ್ಲೆಯ 1.22 ಲಕ್ಷ ರೈತರಿಗೆ ಮೊದಲ ಕಂತಿನಲ್ಲಿ ₹ 124 ಕೋಟಿ ಬೆಳೆಹಾನಿ ಪರಿಹಾರದ ಹಣ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. 2ನೇ ಕಂತಿನಲ್ಲಿ ₹ 99 ಕೋಟಿ ಬಿಡುಗಡೆಯಾಗಲಿದೆ. ಕಷ್ಟದಲ್ಲಿರುವ ರೈತರಿಗೆ ನೆರವಾಗಲು ಸರ್ಕಾರ ಪರಿಹಾರ ನೀಡಿದರೆ ಅದನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್‌ಗಳ ಕಾರ್ಯವೈಖರಿ ಹೇಗಿದೆ ಎಂದರೆ; ರೈತರು ಆತ್ಮಹತ್ಯೆ ದಾರಿ ತುಳಿಯಲು ಪ್ರೇರಣೆ ನೀಡಿದಂತೆ ಎಂದಿದ್ದಾರೆ.
ರೈತರು ಏನಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನೇರವಾಗಿ ಬ್ಯಾಂಕ್‌ನವರೆ ಹೊಣೆಯಾಗುತ್ತಾರೆ. ಕೂಡಲೇ ಜಿಲ್ಲಾಧಿಕಾರಿ ಸಂಬಂಧಪಟ್ಟ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಆದೇಶ ನೀಡಿ, ಈ ಪ್ರವೃತ್ತಿ ನಿಲ್ಲಿಸಬೇಕು. ಕಷ್ಟದ ಸಮಯದಲ್ಲಿ ಸ್ವಲ್ಪ ಸಹಾಯವಾಗಲಿ ಎಂದು ಸರ್ಕಾರ ಪರಿಹಾರ ನೀಡಿದರೆ ಅದನ್ನು ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿರುವ ಬ್ಯಾಂಕ್‌ಗಳ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.