ಹುಣಸಗಿ: ತಾಲ್ಲೂಕಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಅಪಾರ ಮಳೆಗೆ ಭತ್ತ, ತೊಗರಿ, ಹತ್ತಿ ಸೇರಿದಂತೆ ಇತರ ಬೆಳೆಗಳು ಹಾನಿಯಾಗಿದ್ದು, ರೈತರು ಮತ್ತಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ.
ಹುಣಸಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆಗಸ್ಟ್‌ನಲ್ಲಿ 206.6 ಮಿಮೀ ಹಾಗೂ ಸೆಪ್ಟೆಂಬರ್‌ನಲ್ಲಿ 315 ಮಿಮೀ ಮಳೆಯಾಗಿದೆ. ವಿಪರೀತ ಮಳೆಯಿಂದಾಗಿ ಬೆಳೆಹಾನಿ ಸಂಭವವಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ ತಿಳಿಸಿದರು.
ಹುಣಸಗಿ ವ್ಯಾಪ್ತಿಯಲ್ಲಿ 21 ಸಾವಿರ ಹೆಕ್ಟೇರ್ ನೀರಾವರಿ ಕ್ಷೇತ್ರ ಹಾಗೂ 18 ಸಾವಿರ ಹೆಕ್ಟರ್ ಮಳೆಯಾಶ್ರಿತ ಹೀಗೆ ಅಂದಾಜು 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಹತ್ತಿ, ತೊಗರಿ, ಭತ್ತ, ಶೇಂಗಾ, ಸಜ್ಜೆ ಸೇರಿದಂತೆ ಇತರ ಬೆಳೆಗಳನ್ನು ಬಿತ್ತನೆ ಮಾಡಲಾತ್ತು ಎಂದು ಕೃಷಿ ಅಧಿಕಾರಿ ಸಿದ್ದಾರ್ಥ ಪಾಟೀಲ ತಿಳಿಸಿದರು.
ತಾಲ್ಲೂಕಿನ ಕೊಡೇಕಲ್ಲ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 32,500 ಹೆಕ್ಟೇರ್ ಬೌಗೋಳಿಕ ಕ್ಷೇತ್ರವಿದ್ದು, ಅದರಲ್ಲಿ ಅಂದಾಜು 29,500 ಹೆಕ್ಟೇರ್ ಸಾಗುವಳಿ ಕ್ಷೇತ್ರ ಹೊಂದಿದೆ. ಇದರಲ್ಲಿ ಅಧಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿ ದೀಪಾ ದೊರೆ ಮಾಹಿತಿ ನೀಡಿದರು.
ಅಂದಾಜಿನ ಪ್ರಕಾರ 11,500 ಹೆಕ್ಟೇರ್ ನಲ್ಲಿ ತೊಗರಿ ಹಾಗೂ 11,300 ಹೆಕ್ಟೇರ್ ನಲ್ಲಿ ಹತ್ತಿ ಹಾಗೂ 779 ಹೆಕ್ಟೇರ್ ನಲ್ಲಿ ಸಜ್ಜೆ ಹಾನಿಯಾಗಿರುವ ಕುರಿತು ಅಂದಾಜಿಸಲಾಗಿದೆ. ಸಮೀಕ್ಷೆ ಕಾರ್ಯ ಮುಕ್ತಾಯದ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದ ಗ್ರಾಮಗಳಾದ ಕೊಡೇಕಲ್ಲ, ಬರದೇವನಾಳ, ಎಣ್ಣಿವಡಗೇರಾ, ಕಲ್ಲದೇವನಹಳ್ಳಿ, ಬೆನಕನಹಳ್ಳಿ, ರಾಜನಕೋಳೂರು, ಗುಂಡಲಗೇರಾ, ಶ್ರೀನಿವಾಸಪುರ, ಮಾರಲಬಾವಿ, ಕರಿಬಾವಿ, ಅಮಲಿಹಾಳ ಸೇರಿದಂತೆ ಇತರ ಗ್ರಾಮಗಳಲ್ಲಿನ ಬೆಳೆಗಳು ಮಳೆಯಿಂದಾಗಿ ಹಾನಿಯಾಗಿರುವುದಾಗಿ ರೈತರು ಹೇಳಿದ್ದಾರೆ.
ಅಧಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಬೇರುಗಳು ಕೊಳೆತು ಬೆಳೆ ಒಣಗಿವೆ. ಇನ್ನು ಹತ್ತಿ ತಾಮ್ರ ರೋಗ ಹಾಗೂ ಕೆಂಪು ರೋಗಕ್ಕೆ ತುತ್ತಾಗಿ ಹಾಳಾಗಿದೆ ಎಂದು ಮಂಜಲಾಪುರಹಳ್ಳಿ ಗ್ರಾಮದ ಪರಮಣ್ಣ ನಿಲೋಗಲ್ಲ, ತಮ್ಮಣ್ಣ ಮೇಟಿ, ಶರಣಬಸವ ಕಂಬಳಿ ಹೇಳಿದರು.
ಮಳೆಗೆ ತೇವಾಂಶ ಅಧಿಕವಾಗಿ ನಮ್ಮ ಗ್ರಾಮದ ಹತ್ತಿ, ತೊಗರಿ ಹಾನಿಯಾಗಿದ್ದು, ಅದಕ್ಕಾಗಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಶೀಘ್ರ ರೈತರ ನೆರವಿಗೆ ಬರಬೇಕು ಎಂದು ಮಾರಲಬಾವಿ ಗ್ರಾಮದ ಹಣಮಂತ್ರಾಯ ನೈಕೋಡಿ, ಪಾಂಡು ಸುಬೇದಾರ, ಸಾಯಬಣ್ಣ ಹೊಸಮನಿ ತಿಳಿಸಿದರು.
ಆರಂಭದಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿತ್ತು. ಆದರೆ ಬೇರೆ ಗ್ರಾಮಗಳಿಂದ ಕಾರ್ಮಿಕರನ್ನು ಕರೆಸಿ ಎರಡು ಬಾರಿ (ಸದಿ) ಕಳೆ ತೆಗೆಯಲಾಗಿತ್ತು. ಸರಿಯಾದ ಸಮಯಕ್ಕೆ ಗೊಬ್ಬರ ಹಾಕಲಾಗಿತ್ತು. ನಾಲ್ಕು ತಿಂಗಳಲ್ಲಿ ಬೆಳೆ ಕೂಡಾ ಚನ್ನಾಗಿತ್ತು. ಆದರೆ ಈ ಮಳೆ ನಮ್ಮ ಬದುಕನ್ನೇ ಕಿತ್ತುಕೊಂಡಂತಾಗಿದೆ ಎಂದು ಕೊಡೇಕಲ್ಲ ಗ್ರಾಮದ ಕನಕಪ್ಪ ಜಂಗಳಿ, ಬಸವರಾಜ ಜಾಲಹಳ್ಳಿ ಹಾಗೂ ಕಲ್ಲದೇವನಹಳ್ಳಿ ಗ್ರಾಮದ ದೇವಿಂದ್ರಪ್ಪ, ಗುಂಡಲಗೇರಾ ಗ್ರಾಮದ ಬಸನಗೌಡ ಇತರರು ಅಲವತ್ತುಕೊಂಡರು.
ಹುಣಸಗಿ ಹಾಗೂ ಸುರಪುರ ತಾಲ್ಲೂಕಿನಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸರ್ವೆ ಕಾರ್ಯ ನಡೆದಿದೆ. ಬೆಳೆ ಹಾನಿಯ ಪ್ರಮಾಣ ಹೆಚ್ಚಿರುವ ಕಾರಣ ಸಮೀಕ್ಷೆ ಇನ್ನೂ ನಡೆಯುತ್ತಿದೆ.– ರಾಮನಗೌಡ ಪಾಟೀಲ, ಕೃಷಿ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.