ADVERTISEMENT

ಯಾದಗಿರಿ | ಬೆಳೆಹಾನಿ; ಮರುಸಮೀಕ್ಷೆ, ಹೆಚ್ಚಿನ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:02 IST
Last Updated 5 ಡಿಸೆಂಬರ್ 2025, 7:02 IST
ಯಾದಗಿರಿಯ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಗುರುವಾರ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು
ಯಾದಗಿರಿಯ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಗುರುವಾರ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು   

ಯಾದಗಿರಿ: ಮಳೆ ಹಾಗೂ ನೆರೆಯ ಬೆಳೆಹಾನಿಯ ಮರು ಸಮೀಕ್ಷೆ ಮಾಡಿ, ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರ, ಸಿಎಂ ಹಾಗೂ ಡಿಸಿಎಂ ವಿರುದ್ಧ ಘೋಷಣೆ ಕೂಗಿದರು. ಮಾನವ ಸರಪಳಿ ರಚಿಸಿ ವಾಹನಗಳ ಸಂಚಾರ ತಡೆದರು.

ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಗ್ರೆಸ್ ಸರ್ಕಾರವು ಬಿಜೆಪಿ ತಂದಿದ್ದ ರೈತ ಪರ ಯೋಜನೆಗಳನ್ನು ನಿಲ್ಲಿಸುವ ಮುಖಾಂತರ ರಾಜಕೀಯ ಹಗೆತನವನ್ನು ರೈತರ ಮೇಲೆ ಸಾಧಿಸುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರ 14 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿಯಾಗಿದ್ದು, ₹ 10,748 ಕೋಟಿ ನಷ್ಟವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ADVERTISEMENT

ಎನ್‌ಡಿಆರ್‌ಎಫ್ ಅನ್ವಯ 14.24 ಲಕ್ಷ ರೈತರಿಗೆ ಇನ್‌ ಪುಟ್ ಸಬ್ಸಿಡಿ ರೂಪದಲ್ಲಿ ಈಗಾಗಲೇ ₹ 1,218 ಕೋಟಿ ವಿತರಿಸಲಾಗಿದೆ. ರಾಜ್ಯ ನಿಧಿಯಿಂದ ₹ 1,030 ಕೋಟಿ ಟಾಪ್‌ಅಪ್ ರೂಪದಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಒಟ್ಟಾರೆ ಪರಿಹಾರ ಪಾವತಿಯು ₹ 2,251 63 ಕೋಟಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಬಗೆಗಿನ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಳೆಹಾನಿ ಆಗಿರುವ ಮೊತ್ತಕ್ಕೆ ಪರಿಹಾರ ಕಲ್ಪಿಸುತ್ತಿರುವುದು ಶೇ 20ರಷ್ಟು ಮಾತ್ರ. ₹ 10,748 ಕೋಟಿ ನಷ್ಟವಾಗಿದ್ದು, ₹ 2251.63 ಕೋಟಿ ಪರಿಹಾರ ನೀಡಲಾಗುತ್ತಿದೆ. ಹಾನಿಯ ಬಗ್ಗೆ ಮರು ಸಮೀಕ್ಷೆ ಮಾಡಿ, ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ಸಾಲ ಮನ್ನಾವೂ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕೃಷ್ಣ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ತೊಗರಿ, ಹೆಸರು, ಹತ್ತಿ, ಮೆಕ್ಕೆಜೋಳ ಬೆಳೆಗಳಿಗೆ ಅತಿಹೆಚ್ಚು ಹಾನಿಯಾಗಿದೆ. ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಪ್ರಾಣಿ–ಮಾನವ ಸಂಘರ್ಷ ಹೆಚ್ಚಾಗಿದೆ. ಜೊತೆಗೆ ಕಾಫಿ ಮತ್ತು ಅಡಕೆಗೆ ಕೊಳೆ, ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದೆ ಎಂದಿದ್ದಾರೆ.

ಮಧ್ಯ ಕರ್ನಾಟಕದಲ್ಲಿ ಈರುಳ್ಳಿ ಮತ್ತು ನೆಲಗಡಲೆ ಬೆಳೆ ಹಾನಿ, ಶೇ 50ರಷ್ಟು ತೆಂಗು ಇಳುವರಿ ಕುಸಿತ, ಬೆಂಗಳೂರು ವಿಭಾಗದಲ್ಲಿ ಸರ್ಕಾರ ಮತ್ತು ರೈತರ ನಡುವೆ ಭೂ ವಿವಾದದ ಸಂಘರ್ಷ, ಮೈಸೂರು ವಿಭಾಗದಲ್ಲಿ ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳು ತಲೆದೂರಿವೆ. ಆದರೆ, ರಾಜ್ಯ ಸರ್ಕಾರವು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.

ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರದ ಸ್ಥಾಪಿಸಬೇಕು. ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪ‍ಂದಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ, ಮುಖಂಡರಾದ ಮಹೇಶರೆಡ್ಡಿ ಮುದ್ನಾಳ, ಚಂದ್ರಶೇಖರ ಮಾಗನೂರ, ನಾಗರತ್ನ ಕುಪ್ಪಿ, ದೇವಿಂದ್ರನಾಥ ನಾದ, ಖಂಡಪ್ಪ ದಾಸನ, ಪರುಶುರಾಮ ಕುರಕುಂದಿ, ಮೇಲಪ್ಪ ಗುಳಿಗೆ, ವೆಂಕಟರೆಡ್ಡಿ ಅಬ್ಬೆತುಮಕೂರು, ಎಚ್.ಸಿ. ಪಾಟೀಲ, ಶ್ರೀಧರ ಆರ್.ಸಾಹುಕಾರ, ದೇವಿಂದ್ರಪ್ಪ ಕೋನೇರ, ಅಡಿವೆಪ್ಪ ಜಾಕ, ಮಾರುತಿ ಕಲಾಲ, ವೀಣಾ ಮೋದಿ, ಮಲ್ಲಿಕಾರ್ಜುನ ಹೊನಿಗೆರ, ಸುನಿತಾ ಚವ್ಹಾಣ್, ಭೀಮಾಶಂಕರ ಬಿಲ್ಲವ, ವಿಲಾಸ ಪಾಟೀಲ, ಸುರೇಶ್ ಅಂಬಿಗೇರ, ಸ್ವಾಮಿದೇವ ದಾಸನಕೇರಿ, ವಿಜಯಲಕ್ಷ್ಮಿ ನಾಯಕ, ವೇಣುಮಾದವ ನಾಯಕ, ಚಂದ್ರಶೇಖರ ಯಾಳಗಿ, ಶಕುಂತಲಾ, ಸ್ನೇಹ ರಸಳಕರ್ ಸೇರಿ ಹಲವರು ಪಾಲ್ಗೊಂಡಿದ್ದರು.

ಬೆಳಗಾವಿಯಲ್ಲಿ ಪ್ರತಿ ಟನ್ ಕಬ್ಬಿಗೆ ₹ 3300 ದರ ನಿಗದಿ ಮಾಡಿದ ಸರ್ಕಾರವು ಕಲಬುರಗಿ ಭಾಗದಲ್ಲಿ ಟನ್‌ಗೆ ₹ 2900 ಕೊಟ್ಟು ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ದನಿ ಎತ್ತಬೇಕಾದ ಇಲ್ಲಿನ ಸಚಿವರು ನಾಪತ್ತೆಯಾಗಿದ್ದಾರೆ
ಬಸವರಾಜ ಮತ್ತಿಮಡು ಶಾಸಕ
ಕಲ್ಯಾಣ ಕರ್ನಾಟಕ ಭಾಗದ ನೆರೆ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಎಂಬುವಂತೆ ವೈಮಾನಿಕ ಸಮೀಕ್ಷೆ ನಡೆಸಿದ್ದು ಸರಿಯಾಗಿ ಪರಿಹಾರವೂ ಕೊಟ್ಟಿಲ್ಲ
ಬಸವರಾಜ ವಿಭೂತಿಹಳ್ಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.