ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಇದ್ದರೂ ನಿಲ್ಲದ ಮದುವೆಗಳು

ಜಾಗೃತಗೊಳ್ಳದ ಸಾರ್ವಜನಿಕರು; ‘ಕೋವಿಡ್‌ ಅರ್ಜೆಂಟ್‌’ ಎಂದು ಪ್ರಿಂಟ್‌ ಹಾಕಿಸಿಕೊಂಡು ಓಡಾಟ

​ಪ್ರಜಾವಾಣಿ ವಾರ್ತೆ
Published 31 ಮೇ 2021, 16:33 IST
Last Updated 31 ಮೇ 2021, 16:33 IST
‘ಕೋವಿಡ್‌ ತುರ್ತು’ ಎಂದು ಸ್ಟಿಕರ್ ಅಂಟಿಸಿಕೊಂಡು ಮದುವೆ ಕಾರ್ಡ್‌ ನೀಡಲು ಬಂದಿದ್ದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ
‘ಕೋವಿಡ್‌ ತುರ್ತು’ ಎಂದು ಸ್ಟಿಕರ್ ಅಂಟಿಸಿಕೊಂಡು ಮದುವೆ ಕಾರ್ಡ್‌ ನೀಡಲು ಬಂದಿದ್ದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ   

ಯಾದಗಿರಿ: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದ್ದರೂ ಮದುವೆಗಳು ಮಾತ್ರ ಸರಾಗವಾಗಿ ನಡೆಯುತ್ತಿವೆ. ಇದು ಪೊಲೀಸರಿಗೆ ತಲೆನೋವಾಗಿದೆ.

ಪ್ರತಿದಿನ ಬೆಳಿಗ್ಗೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಪೊಲೀಸರಿಗೆ ಮದುವೆಗೆ ತೆರಳುವವರು ಸಿಕ್ಕಿಬೀಳುತ್ತಿದ್ದಾರೆ.

8 ಗಂಟೆಗೆಲ್ಲ ಮದುವೆ ಮುಕ್ತಾಯ: ಜಿಲ್ಲೆಯಲ್ಲಿ ಮೂಹೂರ್ತದ ಪ್ರಕಾರ ನಡೆಯುವುದಕ್ಕಿಂತ ಬೆಳ್ಳಂಬೆಳಿಗ್ಗೆ ನಡೆಯುವ ಮದುವೆಗಳೇ ಹೆಚ್ಚು. ಕೆಲ ಕಡೆ ಬೆಳಗಿನ ಜಾವ 5 ಗಂಟೆಗೆ ನಡೆಯುತ್ತಿವೆ. ಇನ್ನೂ ಹಲವಾರು ಕಡೆ 8 ಗಂಟೆಗೆಲ್ಲ ಮುಕ್ತಾಯವಾಗುತ್ತವೆ. ಪೊಲೀಸರಿಗೆ ಮಾಹಿತಿ ತಲುಪವಷ್ಟರಲ್ಲಿ ಮದುವೆ ಎಲ್ಲ
ಮುಗಿದಿರುತ್ತದೆ.

ADVERTISEMENT

ಮದುವೆಗೆ ತೆರಳಲು ನಾನಾ ವೇಷ: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಇದ್ದರೂ ಮದುವೆಗೆ ತೆರಳಲು, ಮದುವೆ ಕಾರ್ಡ್‌ ಹಂಚಲು ಹಲವಾರು ವೇಷಗಳನ್ನು ಕಂಡುಕೊಂಡಿದ್ದಾರೆ. ಸೋಮವಾರ ವ್ಯಕ್ತಿಯೊಬ್ಬರು ಹಳೆ ಬಸ್‌ ನಿಲ್ದಾಣ ಸಮೀಪ ಪೊಲೀಸರಿಗೆ ಸಿಕ್ಕಿಬಿದ್ದು, ದಂಡ ಹಾಕಿಸಿಕೊಂಡಿದ್ದಾರೆ.

ಬೈಕ್‌ ಮೇಲೆ ‘ಕೋವಿಡ್‌ ತುರ್ತು’ ಎಂದು ಪ್ರಿಂಟ್‌ ಹಾಕಿಸಿಕೊಂಡು ಮದುವೆ ಕಾರ್ಡ್‌ ಹಂಚಲು ತೆರಳಿದ್ದ ವೇಳೆ ಪೊಲೀಸರು ತಪಾಸಣೆ ಮಾಡಿದಾಗ ಸಿಕ್ಕಿ ಹಾಕಿಕೊಂಡಿದ್ದಾರೆ.

ಭಾನುವಾರವಷ್ಟೇ ನವ ದಂಪತಿ ದೇವಸ್ಥಾನಕ್ಕೆ ತೆರಳಲು ಮೆಡಿಕಲ್‌ ಏಪ್ರಾನ್ ಧರಿಸಿ ಪೊಲೀಸರನ್ನು ಯಾಮಾರಿಸಲು ನಾಟಕವಾಡಿದ್ದರು. ಇದು ಪ್ರತಿ ನಿತ್ಯವೂ ನಡೆದುಕೊಂಡು ಬರುತ್ತಿದೆ.

ವಾಹನಗಳ ವಶ: ಪ್ರತಿದಿನ ಪೊಲೀಸರು ಅಲ್ಲಲ್ಲಿ ನಿಂತುಕೊಂಡು ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾರೆ. ಇದರಿಂದ ಮದುವೆಗೆ ತೆರಳುವ ವಾಹನಗಳಲ್ಲಿ ಹೆಚ್ಚು ಜನರು ಕಂಡು ಬಂದಾಗ ವಶಪಡಿಸಿಕೊಳ್ಳುತ್ತಿದ್ದಾರೆ.

30 ಪ್ರಕರಣಗಳು ದಾಖಲು: ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಜಿಲ್ಲೆಯಲ್ಲಿ ಇದುವರೆಗೂ ಪೊಲೀಸರು ವಿವಿಧ ಠಾಣೆಗಳಲ್ಲಿ 30 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ದೇವಸ್ಥಾನದಲ್ಲಿ ಹೆಚ್ಚು ಜನರು ಸೇರಿದ್ದು 6 ಪ್ರಕರಣ, ವಾಹನದಲ್ಲಿ ಹೆಚ್ಚು ಜನರನ್ನು ಕೂಡಿಸಿಕೊಂಡು ತೆರಳಿರುವ 5 ಪ್ರಕರಣ, ಕೋವಿಡ್‌ ಕರ್ತವ್ಯಕ್ಕೆ ಅಡ್ಡಿ 2, ಲಾಕ್‌ಡೌನ್‌ನಲ್ಲಿ ಅಂಗಡಿ ತೆಗೆದು ವ್ಯಾಪಾರ ಮಾಡದವರ ವಿರುದ್ಧ 13, ಡಿಜೆ ಸೌಂಡ್‌ ಹಾಕಿದವರ ವಿರುದ್ಧ -1, ನಿಯಮ ಮೀರಿ ಮದುವೆ ಮಾಡಿದವರ ವಿರುದ್ಧ 1 ಪ್ರಕರಣ ಸೇರಿದಂತೆ ಒಟ್ಟಾರೆ 30 ಪ್ರಕರಣಗಳುದಾಖಲಿಸಲಾಗಿದೆ.

***

₹24,300 ದಂಡ ವಸೂಲಿ

ಜಿಲ್ಲೆಯಾದ್ಯಂತ ಅನವಶ್ಯಕವಾಗಿ ತಿರುಗಾಡುತ್ತಿರುವ ವಾಹನ ಸವಾರರು,ಮಾಸ್ಕ್‌ ಹಾಕದೆ ಇರುವವರ ವಿರುದ್ಧಪ್ರಕರಣಗಳನ್ನು ದಾಖಲಿಸಲಾಗಿದೆ. ಸೋಮವಾರ 243 ಪ್ರಕರಣಗಳನ್ನು ದಾಖಲಿಸಿದ್ದು, ₹24,300 ದಂಡ ವಿಧಿಸಲಾಗಿದೆ. 138 ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ 2 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.ಗ್ರಾಮೀಣ ಪೊಲೀಸ್ ಠಾಣೆ ವತಿಯಿಂದಮಾಸ್ಕ್‌ ಹಾಕದೇ ಇರುವವರ ವಿರುದ್ಧ 5 ಪ್ರಕರಣಗಳನ್ನು ಹಾಕಿ ₹2,500 ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

***

ಕೋವಿಡ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸಹಕಾರ ನೀಡಬೇಕು. ಅನವಶ್ಯಕವಾಗಿ ಯಾರೂ ತಿರುಗಾಡಬಾರದು
ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.