ADVERTISEMENT

ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ: ಹುಲಿಕಲ್‌ ನಟರಾಜ

ಬೆರಗು ಮೂಡಿಸಿದ ಹುಲಿಕಲ್‌ ನಟರಾಜ ಪವಾಡು ಬಯಲು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:45 IST
Last Updated 28 ನವೆಂಬರ್ 2021, 8:45 IST
ಮೌಢ್ಯ ನಿರ್ಮೂಲನಾ ಪವಾಡ ಬಯಲು ಕಾರ್ಯಕ್ರಮದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಲಿಕಲ್‌ ನಟರಾಜ ಅವರು ಹಾಲಿನಲ್ಲಿ ದ್ರಾವಣ ಬೆರೆಸಿ ಹಾಲು ಉಕ್ಕುವಂತೆ ಮಾಡಿ ಪವಾಡ ಬಯಲು ಮಾಡಿದರು
ಮೌಢ್ಯ ನಿರ್ಮೂಲನಾ ಪವಾಡ ಬಯಲು ಕಾರ್ಯಕ್ರಮದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಲಿಕಲ್‌ ನಟರಾಜ ಅವರು ಹಾಲಿನಲ್ಲಿ ದ್ರಾವಣ ಬೆರೆಸಿ ಹಾಲು ಉಕ್ಕುವಂತೆ ಮಾಡಿ ಪವಾಡ ಬಯಲು ಮಾಡಿದರು   

ಯಾದಗಿರಿ: ತಾಂತ್ರಿಕ ಯುಗದಲ್ಲೂ ಮೌಢ್ಯಚಾರಣೆ ನಡೆಯುತ್ತಿದ್ದು, ಇದಕ್ಕೆ ಒಳಗಾಗುವರು ವಿದ್ಯಾವಂತರೆ ಆಗಿದ್ದಾರೆ. ಹೀಗಾಗಿ ಮೌಢ್ಯ ತೊಲಗಿ ವೈಚಾರಿಕೆ ಬೆಳೆಯಲಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಲಿಕಲ್‌ ನಟರಾಜ ಹೇಳಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಯಾದಗಿರಿ ಘಟಕ ಶನಿವಾರ ಆಯೋಜಿಸಿದ್ದ ಪವಾಡ ಬಯಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜ್ಞಾನ ಯುಗದಲ್ಲಿ ವಿದ್ಯಾವಂತರಿದ್ದಾರೆ. ಆದರೆ, ಪ್ರಜ್ಞಾವಂತರಿಲ್ಲ. ದೇವರು ಕೇಡು ಮಾಡುವುದಿಲ್ಲ. ಪ್ರೀತಿ ತೋರಿಸುತ್ತಾರೆ. ದೇವರ ಹೆಸರಿನಲ್ಲಿ ಅನೇಕ ಮೂಢನಂಬಿಕೆಗಳನ್ನು ಹೇರಲಾಗುತ್ತಿದೆ ಎಂದು ವಿಷಾದಿಸಿದರು.

ADVERTISEMENT

ವಿಜ್ಞಾನ ಬೆಳೆದಂತೆ ಮೌಢ್ಯತೆಯೂ ಬೆಳೆಯುತ್ತಿದೆ. ಆದರೆ, ಮೌಢ್ಯತೆ ನಿಂತ ನೀರಾದರೆ ವಿಜ್ಞಾನ ಹರಿಯುವ ನೀರಾಗಿದೆ. ಎಲ್ಲರೂ ವೈಚಾರಿಕೆತೆ ಬೆಳೆಸಿಕೊಂಡರೆ ಮೂಢ ನಂಬಿಕೆಗೆ ಜಾಗ ಇರುವುದಿಲ್ಲ ಎಂದರು.

ಇದೇ ವೇಳೆ ಅವರು ಹಲವಾರು ಪವಾಡಗಳನ್ನು ಬಯಲು ಮಾಡಿ ನೆರೆದವರನ್ನು ಚಕಿತಗೊಳಿಸಿದರು.

ಇದಕ್ಕೂ ಮೊದಲು ಮಾತನಾಡಿದ ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಶರಣರ, ದಾರ್ಶನಿಕರ ತತ್ವಗಳ‌ ಅಡಿಪಾಯದ ಮೇಲೆ ಇಂದಿನ ಸಮಾಜ ನಿರ್ಮಾಣ ಮಾಡುವುದರ ಜೊತೆಗೆ ವೈಜ್ಞಾನಿಕ ಮನೋಭಾವನೆ ಬಲವಾಗಿ ಬೆಳೆಸಿಕೊಂಡಾಗ ಮಾತ್ರ ಮೌಢ್ಯತೆ ಸಂಪೂರ್ಣವಾಗಿ ತೊಡೆದು‌ ಹಾಕಬಹುದಾಗಿದೆ ಎಂದರು.

ಹುಲಿಕಲ್‌ ನಟರಾಜ್ ಅವರ ಪವಾಡು ಬಯಲು ಕಾರ್ಯಕ್ರಮವನ್ನು ಕೊಂಡಾಡಿದ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಪ್ರವೀಣ್ ಕೆ.ಜೆ. ಹಾಗೂ ಮುಫ್ತಿ ಸಮೀಯುದ್ದೀನ್ ಇಮಾಮ್ ಮಸೀದ್ ಇ ಶಾಹ ಅಲಿ ಮಿರ್ಜಾ ಹಾಗೂ ಚಿಂತಕ‌ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳು
ನಡೆದು ಜನರಲ್ಲಿ‌ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವಾನಂದ ಹೂಗಾರ, ಮಲ್ಲಿಕಾರ್ಜುನ ಸತ್ಯಂಪೇಟೆ, ದಾವಲಸಾಬ ನದಾಫ್, ನಾಗರತ್ನ ಪಾಟೀಲ ಯಕ್ಷಿಂತಿ, ಚನ್ನಪ್ಪ ಆನೆಗುಂದಿ ಹಾಗೂ ಶಿವಣ್ಣ ಇಜೇರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ರೂವಾರಿಗಳಾದ ಗುಂಡಪ್ಪ ಕಲಬುರ್ಗಿ ದಂಪತಿಯನ್ನು ಸನ್ಮಾನ ಮಾಡಲಾಯಿತು.

ಮಾಜಿ ಶಾಸಕ ಡಾ ವೀರಬಸಂತರೆಡ್ಡಿ ಮುದ್ನಾಳ, ಬಸವರಾಜ ಜೈನ್, ನಾಗರತ್ನ ಅನಪುರ, ಲಾಯಕ ಹುಸೇನ್ ಬಾದಲ್, ಡಾ.ಎಸ್.ಎಸ್.ನಾಯಕ, ಡಾ. ಭೀಮರಾಯ ಲಿಂಗೇರಿ, ಮಲ್ಲಿಕಾರ್ಜುನ ಮಠ,‌ ವೆಂಕಪ್ಪ ಅಲೆಮನೆ, ಗೊಂದಡಗಿ ವಿಶ್ವನಾಥರೆಡ್ಡಿ, ರಿಯಾಜ್ ಪಟೇಲ್, ಡಿ.ಉಮಾದೇವಿ, ಡಾ.ಶಫೀ ತುನ್ನೂರ, ಮರೆಪ್ಪ ನಾಟೇಕರ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸ್ಕೌಟ್ಸ್ ಮತ್ತು ಗೈಡ್ಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.