ಯಾದಗಿರಿ: ‘ಡಿಸೆಂಬರ್ 1ರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ’ ಎಂದು ಜಾಗೃತಿ ಮೂಡಿಸಿದ್ದ ಪೊಲೀಸ್ ಇಲಾಖೆ, ಇದೀಗ ವಾಹನ ಚಲನಾ ಪರವಾನಗಿ (ಡಿಎಲ್) ಮತ್ತು ವಿಮೆ (ಇನ್ಶೂರೆನ್ಸ್) ಜಾಗೃತಿಗೆ ಮುಂದಾಗಿದೆ.
ಜಿಲ್ಲೆಯಲ್ಲಿ ಪ್ರತಿವರ್ಷ ಸಾವಿರಾರು ವಾಹನಗಳು ನೋಂದಣಿ ಆಗುತ್ತವೆ. ಖರೀದಿಸಿದಾಗ ಮಾತ್ರ ವಿಮೆ ಮಾಡಿಸುವ ವಾಹನ ಚಾಲಕರು ನಂತರ ಈ ಬಗ್ಗೆ ಮರೆತು ಬಿಡುತ್ತಾರೆ. ಹೀಗಾಗಿ ಇವುಗಳ ಮೇಲೆ ಕಣ್ಣಿಟ್ಟಿರುವ ಖಾಕಿ ಪಡೆ, ಅರಿವು ಮೂಡಿಸಲು ಮುಂದಾಗಿದೆ. ಜೊತೆಗೆ ಸ್ಥಳದಲ್ಲಿಯೇ ವಿಮೆ ಮಾಡಿಸಲು ವ್ಯವಸ್ಥೆಯನ್ನೂ ಮಾಡಿದೆ.
ವಿಮೆಯಲ್ಲಿ ಫಸ್ಟ್ ಪಾರ್ಟಿ, ಸೆಕೆಂಡ್ ಪಾರ್ಟಿ, ಥರ್ಡ್ ಪಾರ್ಟಿ ವಿಧಗಳಿದ್ದು, ವಾಹನಗಳ ಮಾಲೀಕರು ತಮ್ಮಗೆ ಬೇಕಾದ ವಿಮೆ ಮಾಡಿಸಬಹುದಾಗಿದೆ. ಆದರೆ, ಬಹಳಷ್ಟು ಚಾಲಕರು ಮಾಡುವುದಿಲ್ಲ. ಹೀಗಾಗಿ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಇಲಾಖೆಯಿಂದ ಆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಯು ಆರು ತಾಲ್ಲೂಕುಗಳನ್ನು ಒಳಗೊಂಡಿದ್ದು, ಮೂರು ಹಳೆಯ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳು ನೋಂದಣಿಯಾಗುತ್ತಿವೆ. ಹಬ್ಬದ ಸಂದರ್ಭಗಳಲ್ಲಿ ಷೋರೂಂಗಳಲ್ಲಿ ನೂರಾರು ವಾಹನಗಳು ಏಕಕಾಲದಲ್ಲಿ ನೋಂದಣಿಯಾಗುತ್ತಿವೆ. ಆದರೆ, ಡಿಎಲ್, ಇನ್ಶೂರೆನ್ಸ್ ಗ್ರಾಹಕರು ಆಸಕ್ತಿ ತೋರಿದರೆ ಮಾತ್ರ ಮಾಡಲಾಗುತ್ತಿದೆ. ಇದರಿಂದ ಲೈಸನ್ಸ್ ಇಲ್ಲದೇ ವಾಹನ ಚಾಲನೆ ಮಾಡುವುದು ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಪೊಲೀಸರು.
‘ಜಿಲ್ಲೆಯಲ್ಲಿ ಸಣ್ಣ ವಯಸ್ಸಿನವರು ವಾಹನ ಚಾಲನೆ ಮಾಡುತ್ತಿದ್ದಾರೆ. ಅದರಲ್ಲೂ ಅಪಘಾತಗಳಾದರೆ ವಿಮೆಯೂ ಇರುವುದಿಲ್ಲ. ಇದರಿಂದ ವಾಹನ ನೀಡಿದ ಮಾಲೀಕರಿಗೆ ನಷ್ಟವಾಗುತ್ತಿದೆ. ವಿಮೆ ಕ್ಲೈಮ್ ಮಾಡಿಕೊಳ್ಳಲು ವಿಮೆ ಮಾಡಿಸುವುದು ಅಗತ್ಯವಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಜಾಗೃತಿಗೆ ಜೊತೆಗೆ ವಿಮೆಯವರನ್ನು ಸ್ಥಳಕ್ಕೆ ಕರೆಯಿಸಿ ಅವರಿಂದ ನೋಂದಣಿ ಮಾಡಿಸಲಾಗುತ್ತಿದೆ’ ಎಂದು ಸಂಚಾರ ಪೊಲೀಸರು ಹೇಳುತ್ತಾರೆ.
ಜಿಲ್ಲೆಯಲ್ಲಿ ಚಲನಾ ಪರವಾನಗಿ ವಿಮೆ ಮಾಡಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಚಾಲಕರು ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದುಪೃಥ್ವಿಕ್ ಶಂಕರ್ ಯಾದಗಿರಿ ಎಸ್ಪಿ
ಎಸ್ಪಿ ಸೂಚನೆ ಮೇರೆಗೆ ಡಿಎಲ್ ಇನ್ಶೂರೆನ್ಸ್ ಬಗ್ಗೆ ಜಾಗೃತಿ ಮೂಡಿಸಿ ಸ್ಥಳದಲ್ಲೇ ವಿಮೆ ಮಾಡಿಸಲು ಚಾಲಕರಿಗೆ ಅನುಕೂಲ ಕಲ್ಪಿಸಲಾಗಿದೆವೀರೇಶ್ ಪಿಎಸ್‌ಐ ಸಂಚಾರ ಪೊಲೀಸ್ ಠಾಣೆ ಯಾದಗಿರಿ
ಪೃಥ್ವಿಕ್ ಶಂಕರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಯಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದಾರೆ. ಅದರಂತೆ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳಲಿ ಎನ್ನುವುದು ಜಿಲ್ಲೆಯ ಜನರ ಆಶಯವಾಗಿದೆ. ‘ಜಿಲ್ಲೆಯಲ್ಲಿ ಮರಳು ದಂಧೆ ಇಸ್ಪೀಟ ಜೂಜಾಟ ಮಟ್ಕಾ ಜೂಜಾಟ ಮದ್ಯ ಅಕ್ರಮ ಮಾರಾಟ ಕೋಳಿ ಪಂದ್ಯದಂಥ ಕಾನೂನು ಬಾಹಿರ ಚಟುವಟಿಕೆಗಳು ಪೊಲೀಸರ ಕಣ್ಣಳತೆಯಲ್ಲೇ ನಡೆಯುತ್ತಿವೆ. ಅವುಗಳಿಗೆ ಕಡಿವಾಣ ಬಿದ್ದಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಬಡವರ ಕುಟುಂಬಕ್ಕೆ ನಷ್ಟ ಉಂಟು ಮಾಡುವ ಕೃತ್ಯಗಳಿಗೂ ಕಡಿವಾಣ ಹಾಕಬೇಕು. ಬೀಟ್ ಪೊಲೀಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರೆ ಇಂಥ ಕೃತ್ಯಗಳನ್ನು ತಡೆಯಬಹುದು’ ಎನ್ನುತ್ತಾರೆ ಬಿಜೆಪಿ ಮುಖಂಡರಾದ ಯಲ್ಲಯ್ಯ ನಾಯಕ ವನುದರ್ಗ ಜಯರಾಮ ಮೌನೇಶ.
ಇತ್ತೀಚೆಗೆ ನಡೆದ ಮಕ್ಕಳ ಕೆಡಿಪಿ ದಿಶಾ ಸಭೆಯಲ್ಲಿ ಪೊಲೀಸರ ನಡವಳಿಕೆ ಬಗ್ಗೆ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ‘ಜಿಲ್ಲೆಯಲ್ಲಿ 15 ಪೊಲೀಸ್ ಠಾಣೆಗಳಿದ್ದು ಜನಸ್ನೇಹಿ ಠಾಣೆ ಎಂದು ಬೋರ್ಡ್ ಹಾಕಿಕೊಂಡಿರುತ್ತಾರೆ. ಆದರೆ ಜನರ ಜೊತೆ ಒರಟಾಗಿ ವರ್ತಿಸುತ್ತಿದ್ದಾರೆ’ ಎನ್ನುವ ಅರೋಪಗಳು ಕೇಳಿ ಬಂದಿದ್ದವು. ಅಲ್ಲದೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರ ಬಳಿಯೂ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ‘ಜನರ ಸ್ನೇಹಿಯಾಗಿ ಕೆಲಸ ಮಾಡಿದರೆ ಪೊಲೀಸ್ ಬಗೆಗಿನ ಗೌರವ ಮತ್ತಷ್ಟು ಹೆಚ್ಚುತ್ತದೆ’ ಎನ್ನುವುದು ಜಿಲ್ಲೆಯ ಜನರ ಅಂಬೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.