ADVERTISEMENT

ಯಾದಗಿರಿ ಜಿಲ್ಲೆಯ 17,396 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ

ಕೋವಿಡ್‌–19ನಿಂದ ಮುಂದೂಡಲ್ಪಟ್ಟಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ; ಜಿಲ್ಲಾಡಳಿತ ಸರ್ವ ಸನ್ನದ್ಧ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 16:54 IST
Last Updated 24 ಜೂನ್ 2020, 16:54 IST
ಯಾದಗಿರಿಯ ಸ್ಟೇಷನ್‌ ಬಜಾರ್‌ ಶಾಲೆಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಬುಧವಾರ ಭೇಟಿ ನೀಡಿ ಪರೀಶೀಲಿಸಿದರು. ಡಿಡಿಪಿಐ ಶ್ರೀನಿವಾಸ ರೆಡ್ಡಿ ಇದ್ದಾರೆ
ಯಾದಗಿರಿಯ ಸ್ಟೇಷನ್‌ ಬಜಾರ್‌ ಶಾಲೆಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಬುಧವಾರ ಭೇಟಿ ನೀಡಿ ಪರೀಶೀಲಿಸಿದರು. ಡಿಡಿಪಿಐ ಶ್ರೀನಿವಾಸ ರೆಡ್ಡಿ ಇದ್ದಾರೆ   

ಯಾದಗಿರಿ: ಜಿಲ್ಲೆಯಾದ್ಯಂತ ಗುರುವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, 17,396 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮಾರ್ಚ್ 27ರಿಂದ ಏಪ್ರಿಲ್ 9ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಕೋವಿಡ್‌–19 ಕಾರಣದಿಂದ ಮುಂದೂಡಲಾಗಿತ್ತು. ಈಗ ಜೂನ್‌ 25ರಿಂದ ಜುಲೈ 4 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.

ಎಸ್ಸೆಸ್ಸೆಲ್ಸಿ ಕಟ್ಟಡಗಳ ವಿವರ: ಶಹಾಪುರ ತಾಲ್ಲೂಕಿನಲ್ಲಿ ಸರ್ಕಾರಿ ಕಟ್ಟಡ 12, ಅನುದಾನಿತ ಕಟ್ಟಡ 1, ಅನುದಾನ ರಹಿತ ಕಟ್ಟಡ 3, ಸುರಪುರ ತಾಲ್ಲೂಕಿನಲ್ಲಿ ಸರ್ಕಾರಿ 12, ಅನುದಾನಿತ ಕಟ್ಟಡ 1, ಅನುದಾನ ರಹಿತ ಕಟ್ಟಡ 2, ಯಾದಗಿರಿ ತಾಲ್ಲೂಕಿನ ಸರ್ಕಾರಿ ಕಟ್ಟಡ 12, ಅನುದಾನಿತ ಕಟ್ಟಡ 4, ಅನುದಾನ ರಹಿತ ಕಟ್ಟಡ 5 ಪರೀಕ್ಷೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದಲ್ಲದೆ 104 ವಿಶೇಷ/ ಹೆಚ್ಚುವರಿ ಕೊಠಡಿ ಮೀಸಲಾಡಲಾಗಿದೆ.

ADVERTISEMENT

17,396 ವಿದ್ಯಾರ್ಥಿಗಳ ನೋಂದಣಿ: ಶಹಾಪುರದಲ್ಲಿ 229, ಸುರಪುರದಲ್ಲಿ 283, ಯಾದಗಿರಿಯಲ್ಲಿ 359 ಸೇರಿದಂತೆ 870 ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಬೇರೆ ಜಿಲ್ಲೆಗಳಲ್ಲಿ ಓದುತ್ತಿರುವ ಜಿಲ್ಲೆಯ 456 ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಅದೇ ರೀತಿ ಜಿಲ್ಲೆಯಿಂದ 274 ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಜಿಲ್ಲೆಯಲ್ಲಿ 17,396 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಡಿಪಿಐ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 8 ಸೂಕ್ಷ್ಮ, ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಶೈಕ್ಷಣಿಕ ತಾಲ್ಲೂಕುಗಳ ಪ್ರಕಾರ ಶಹಾಪುರ ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆ ವಡಗೇರಾ, ಸರ್ಕಾರಿ ಪ್ರೌಢ ಶಾಲೆ ದೋರನಹಳ್ಳಿ, ಸುರಪುರ ತಾಲ್ಲೂಕಿನ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಶಾಲೆ ರಂಗಂಪೇಟೆ, ಸರ್ಕಾರಿ ಪದವಿ ಪೂರ್ವ ಕಾಲೇಜು ನಾರಾಯಣಪುರ, ಯಾದಗಿರಿ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಬಾಲಕಿಯ ಕಾಲೇಜು ಗುರುಮಠಕಲ್‌, ಸರ್ಕಾರಿ ಕನ್ಯಾ ಪ್ರೌಢ ಶಾಲೆ ಯಾದಗಿರಿ, ಸರ್ಕಾರಿ ಪ್ರೌಢ ಶಾಲೆ ಸ್ಟೇಷನ್‌ ಬಜಾರ್‌ ಯಾದಗಿರಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾಗಿವೆ.

ಬಸ್‍ಗಳಲ್ಲಿ ಉಚಿತ ಪ್ರಯಾಣ: ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಾರಿಗೆ ಅನಾನುಕೂಲ ಆಗದಂತೆ ಒಪ್ಪಂದದ ಮೇರೆಗೆ ಎನ್‌ಇಕೆಎಸ್‍ಆರ್‌ಟಿಸಿ ವತಿಯಿಂದ 50 ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ

ವಡಗೇರಾ: ಪಟ್ಟಣದ ಪ್ರೌಢ ಶಾಲೆ ಸೇರಿದಂತೆ ತಾಲ್ಲೂಕಿನ ಬೆಂಡೆಗಂಬಳಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಹತ್ತನೆಯ ತರಗತಿ ಪರೀಕ್ಷೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ಮಾಹಿತಿ
ನೀಡಿದರು.

ತಾಲ್ಲೂಕಿನ ಬೆಂಡೆಗಂಬಳಿ ಕೇಂದ್ರದಲ್ಲಿ 333 ವಿದ್ಯಾರ್ಥಿಗಳು ಮತ್ತು ಪಟ್ಟಣದ ಪ್ರೌಢ ಶಾಲೆಯಲ್ಲಿ 253 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಿಗೆ ಈಗಾಗಲೇ ಕೊರೊನಾ ವೈರಸ್ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಲಾಗಿದೆ. ಅದರಂತೆ ವಿದ್ಯಾರ್ಥಿಗಳು ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.

ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಸಾರಿಗೆ ವ್ಯವಸ್ಥೆ, ಆರೋಗ್ಯ ಸಿಬ್ಬಂದಿಯ ವ್ಯವಸ್ಥೆ ಮತ್ತು ಕಂಟೇನ್‌ಮೆಂಟ್‌ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದ ಎಲ್ಲಾ ಕೋಣೆಗಳಿಗೆ ಅಗ್ನಿ ಶಾಮಕ ಇಲಾಖೆಯ ವತಿಯಿಂದ ಸ್ಯಾನಿಟೈಸ್‌ ಮಾಡಲಾಗಿದೆ. ಪರೀಕ್ಷೆ ಮುಗಿದ ನಂತರ ಮತ್ತೆ ಸ್ಯಾನಿಟೈಸ್ ಮಾಡಲಾಗುತ್ತದೆ
ಎಂದರು.

ಬೆಳಿಗ್ಗೆ 7:30ರಿಂದ ಕೇಂದ್ರಕ್ಕೆ ಬರಬಹುದು. ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್‌ ಮಾಡಲಾಗುವುದು ಎಂದು
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.