ಶಹಾಪುರ: ನಗರದ ರಾಘವೇಂದ್ರ ಫಿರಂಗಿ ಮಾಲೀಕತ್ವದ ದುರ್ಗಾ ಹಾಗೂ ಕನಕದುರ್ಗಾ ಬೋರ್ಡಿಂಗ್ ಹಾಗೂ ಲಾಡ್ಜಿಂಗ್ ಸಿಎಲ್-7 ಸನ್ನದ್ದುಗಳು ರದ್ದುಗೊಳಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ ಹೊರಡಿಸಿದ್ದಾರೆ. ಪರವಾನಗಿ ನೀಡುವಾಗ ಅಬಕಾರಿ ಇಲಾಖೆ ಕೆಲ ಸಿಬ್ಬಂದಿ ಮಾಲೀಕರ ಜೊತೆ ಶಾಮೀಲಾಗಿ, ಅಕ್ರಮ ಎಸಗಿ ಬೇಲಿ ಎದ್ದು ಹೊಲ ಮೇಯ್ದ ಪ್ರಕರಣಕ್ಕೆ ಇತಿಶ್ರೀ ಹಾಡಿದಂತೆ ಆಗಿದೆ.
‘ಅಬಕಾರಿ ಪರವಾನಗಿ ಒಂದು ಹಕ್ಕು ಅಲ್ಲ, ಅದು ಸರ್ಕಾರ ನೀಡುವ ಸವಲತ್ತು. ಅಬಕಾರಿ ಕಾಯ್ದೆ-165 ಕಲಂ 29 ಸ್ವತಂತ್ರವಾಗಿ ಹಾಗೂ ಸಮರ್ಥವಾಗಿ ಪರವಾನಗಿ ರದ್ದುಪಡಿಸಲು ಅಧಿಕಾರ ನೀಡುತ್ತದೆ’ ಎಂದು ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ನಮೂಸಿದ್ದಾರೆ. ಆ ಮೂಲಕ ಸರ್ಕಾರದ ಸವಲತ್ತು ಉಲ್ಲಂಘಿಸ ಕೂಡದು ಎಂಬ ಸಂದೇಶ ರವಾನಿಸಿದ್ದಾರೆ.
ಏನಿದು ಪ್ರಕರಣ?: ಮಾಹಿತಿ ಹಕ್ಕು ಕಾರ್ಯಕರ್ತ ಮಾನಪ್ಪ ಹಡಪದ ಅವರು 2022-23ನೇ ಸಾಲಿನಲ್ಲಿ ಹೊಸದಾಗಿ ಸಿಎಲ್-7 ಪರವಾನಗಿ ನೀಡುವಾಗ ದುರ್ಗಾ ಹಾಗೂ ಕನಕದುರ್ಗ ಬೋರ್ಡಿಂಗ್ ಹಾಗೂ ಲಾಡ್ಜಿಂಗ್‌ಗೆ ಅಬಕಾರಿ ಕಾಯ್ದೆ ನಿಯಮ ಉಲ್ಲಂಘಿಸಲಾಗಿದೆ. ಪರವಾನಿಗೆ ರದ್ದುಗೊಳಿಸಿ, ತಪ್ಪಿತಸ್ಥರ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಅಬಕಾರಿ ಆಯುಕ್ತರು ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಸಿಎಲ್-7 ಸನ್ನದು ಮಂಜೂರಾತಿಯ ಎಲ್ಲಾ ನಿಯಮಗಳು ಪಾಲನೆ ಆಗಿರುವ ಬಗ್ಗೆ ವರದಿ ಸಲ್ಲಿಸುವಂತೆ ಯಾದಗಿರಿ ಅಬಕಾರಿ ಉಪ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಸದರಿ ಅಧಿಕಾರಿಯು ಸಿಎಲ್ -7 ಸನ್ನದು ಮಂಜೂರಾತಿಗೆ ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪಾಲನೆ ಆಗಿರುತ್ತದೆ ಎಂದು ವರದಿಯಲ್ಲಿ ನಮೂದಿಸಲಾಗಿತ್ತು.
ಆಗ, ಅದರ ಸತ್ಯಾಸತ್ಯತೆ ತಿಳಿದುಕೊಳ್ಳಲು ಹಿರಿಯ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು ಸಮಗ್ರವಾಗಿ ತನಿಖೆ ನಡೆಸಿತ್ತು. ಮಾಲೀಕರು ನಗರಸಭೆಯಿಂದ ಕಟ್ಟಡದ ಪರವಾನಿಗೆ ಪಡೆದುಕೊಂಡಿರುವುದಿಲ್ಲ. ಪರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯ ನಿರ್ಮಿಸಿರುವುದಿಲ್ಲ. ನೀಡಲಾದ ಪರವಾನಿಗೆಯಂತೆ ಅಡುಗೆ ಕೋಣೆ ಅಥವಾ ಅಡುಗೆ ಸಿಬ್ಬಂದಿಯೂ ಇರುವುದಿಲ್ಲ ಎಂದು ವರದಿಯಲ್ಲಿ ನಮೂದಿಸಿತ್ತು. ಈ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗಿದೆ.
‘ಐವರ ಮೇಲೆ ಅಮಾನತು ತೂಗುಕತ್ತಿ’ ‘
ಸಿಎಲ್-7 ಸನ್ನದ್ದುಗಳನ್ನು ಮಂಜೂರಾತಿ ನೀಡುವಾಗ ಅಬಕಾರಿ ನಿಯಮಗಳನ್ನು ಪಾಲನೆ ಆಗಿರುತ್ತವೆ ಎಂದು ತಪ್ಪು ಮಾಹಿತಿ ನೀಡಿ ಕರ್ತವ್ಯಲೋಪ ಎಸಗಿರುವ ಯಾದಗಿರಿ ಅಬಕಾರಿ ಉಪ ಆಯುಕ್ತೆ ಇಂದುಬಾಯಿ ಶಹಾಪುರ ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ಅಬಕಾರಿ ನಿರೀಕ್ಷ ವಿಜಯಕುಮಾರ ಎಸ್.ಡಿಸಿಗಳಾದ ಪ್ರೇಮಕುಮಾರ ಹಾಗೂ ಮರೆಪ್ಪ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಅಬಕಾರಿ ಆಯುಕ್ತರಿಗೆ ಜಿಲ್ಲಾಧಿಕಾರಿ ಅವರು ಪತ್ರ ಬರೆದು ವರದಿ ಸಲ್ಲಿಸಿದ್ದಾರೆ. ಐವರ ಸಿಬ್ಬಂದಿ ಮೇಲೆ ಅಮಾನತು ತೂಗುಕತ್ತಿ ನೇತಾಡುತ್ತಿದೆ’ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತ ಮಾನಪ್ಪ ಹಡಪದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.