
ಯಾದಗಿರಿ: ‘ಕಳ್ಳಭಟ್ಟಿ, ಸಿಎಚ್ ಪೌಡರ್ ಕಲಬೆರಕೆಯ ಸೇಂದಿ ತಯಾರಿಸಿ ಮಾರಾಟ ಮಾಡುವವರನ್ನು ಹಾಗೂ ಅದರಲ್ಲಿ ಭಾಗಿಯಾಗುವವರನ್ನು ಗಡಿಪಾರು ಮಾಡಬೇಕು’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಭಾನುವಾರ ಕಲಬುರಗಿ ವಿಭಾಗದ ಜಿಲ್ಲೆಗಳ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಶರೀರಕ್ಕೆ ಹಾನಿಕರವಾದ ಕಳ್ಳಭಟ್ಟಿ, ಸಿಎಚ್ ಪೌಡರ್ ಬೆರಕೆಯ ಸೇಂದಿ ತಯಾರಕೆ ತಡೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಿರ್ಲಕ್ಷವಹಿಸಿದ್ದು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಸೇಂದಿ, ಕಳಭಟ್ಟಿಯನ್ನು ವ್ಯಾಪಕವಾಗಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇಂತಹ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಈ ಹಿಂದಿನ ಸಭೆಯಲ್ಲಿಯೇ ಸೂಚಿಸಲಾಗಿತ್ತು. ಇದುವರೆಗೂ ನಿರೀಕ್ಷೆಯಂತೆ ಕೆಲಸವಾಗಿಲ್ಲ. ಹಾಗಿದ್ದರೆ, ನೀವೆಲ್ಲರೂ ಏಕೆ ಇರಬೇಕು’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಅಕ್ರಮ ಸರಾಯಿ, ಸೇಂದಿ ಮಾರಾಟವಾದರೆ ಜನರ ಸ್ವಾಸ್ಥ್ಯ ಕೆಡುತ್ತದೆ. ಜೊತೆಗೆ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ತೆರಿಗೆ ನಷ್ಟವಾಗುತ್ತದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಧಿಕಾರಿಗಳು ಎಚ್ಚರಿಕೆಯಿಂದ ಇದ್ದು, ಅಕ್ರಮಗಳನ್ನು ತಡೆಯಬೇಕು’ ಎಂದು ತಾಕೀತು ಮಾಡಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ‘ಯಾದಗಿರಿ ನಗರದಲ್ಲಿ ಬ್ಯಾರೆಲ್‌ನಲ್ಲಿ ಕಳ್ಳಭಟ್ಟಿ, ಸೇಂದಿ ತಯಾರಿಸಿ ಮಹಡಿಯ ಮೇಲೆ ಇರಿಸಿ ಮಾರಾಟ ಮಾಡಲಾಗುತ್ತಿದೆ’ ಎಂದು ಸಚಿವರ ಮುಂದೆ ಪ್ರಸ್ತಾಪಿಸಿದರು.
ಈ ಬಗ್ಗೆ ಸಚಿವರಿಗೆ ಸ್ಪಷ್ಟನೆ ನೀಡಿದ ಅಧಿಕಾರಿಗಳು, ‘ಅಂತಹುದೆಲ್ಲ ಇಲ್ಲ’ ಎನ್ನುತ್ತಿದ್ದಂತೆ, ಶಾಸಕರು ಸಿಟ್ಟಾಗಿ, ‘ನಾನೊಬ್ಬ ಶಾಸಕನಾಗಿ ಹೇಳುತ್ತಿರುವುದು ಸುಳ್ಳೆ’ ಎಂದು ಪ್ರಶ್ನಿಸಿದರು. ಆಗ ಸಚಿವರು, ‘ಅದನ್ನು ಕೂಡಲೇ ಪತ್ತೆ ಹಚ್ಚಿ ತಡೆಗಟ್ಟಿ ಕ್ರಮವೂ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ‘ಶಹಾಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪೌಡರ್ ಬೆರೆಸಿ ಮದ್ಯ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಕುಡಿದವರಲ್ಲಿ ಯುವಕರು ಹೃದಯಾಘತಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ತಡೆಯಬೇಕಿದೆ’ ಎಂದರು.
ಸಭೆಯಲ್ಲಿ ಅಬಕಾರಿ ಇಲಾಖೆಯ ಕಲಬುರಗಿ ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ಸಿಎಂ ಬದಲಾವಣೆ: ಕ್ರಾಂತಿ ಭ್ರಾಂತಿಯೂ ಇಲ್ಲ’
‘ಮುಖ್ಯಮಂತ್ರಿ ಬದಲಾವಣೆ ಮಾಡುವಲ್ಲಿ ಯಾವುದೇ ಕ್ರಾಂತಿ ಭ್ರಾಂತಿಯೂ ಇಲ್ಲ. ಅದೆಲ್ಲ ನಿಮ್ಮ (ಮಾಧ್ಯಮ) ಸೃಷ್ಟಿ’ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ಇಲ್ಲಿನ ಶಾಸಕರ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮರ್ಥ ನಾಯಕರಿದ್ದು ಕರ್ನಾಟಕದ ಆಗು–ಹೋಗುಗಳು ಚೆನ್ನಾಗಿ ಗೊತ್ತಿದೆ. ದಲಿತ ಸಿಎಂ ಸೇರಿದಂತೆ ಎಲ್ಲವನ್ನು ಹೈಕಮಾಂಡ್ ಸಿಎಲ್‌ಪಿ ನಾಯಕರೂ ನಿರ್ಧರಿಸುತ್ತಾರೆ’ ಎಂದರು. ‘ಮುಖ್ಯಮಂತ್ರಿಯಾಗಿದ್ದರೆ ಮುಂದಿನ ಬಜೆಟ್ ಮಂಡನೆ ಮಾಡುತ್ತಾರೆ. ಅದರಲ್ಲಿ ಯಾವುದೇ ಸಂಶಯ ಬೇಡ. ಆ ಬಗ್ಗೆ ಚಿಂತೆಯೂ ಬೇಡ. ದ್ವೇಷ ಭಾಷಣದ ಬಿಲ್ ಅನ್ನು ರಾಜ್ಯಪಾಲರು ವಾಪಸ್ ಕಳುಹಿಸಬಾರದಿತ್ತು. ಏಕೆ ಕಳಿಸಿದ್ದರು ಎಂಬುದನ್ನು ಮಾಹಿತಿ ಪಡೆಯುತ್ತೇನೆ’ ಎಂದು ಪ್ರತಿಕ್ರಿಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಮುಖಂಡರಾದ ಶಾಮಸನ್ ಮಾಳಿಕೇರಿ ಬಸುಗೌಡ ಬಿಳ್ಹಾರ ಶಾಮರಾವ ನಾಟೀಕಾರ ದತ್ತು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.