ADVERTISEMENT

ಯಾದಗಿರಿ: ಮಸೀದಿಯಂತೆ ಕಾಣುವ ಸೋಮನಾಥ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 19:30 IST
Last Updated 14 ಜನವರಿ 2020, 19:30 IST
ಕ್ಕಕೇರಾ ಪಟ್ಟಣದ ಆರಾಧ್ಯದೈವ ಸೌರಾಷ್ಟ್ರ ಸೋಮನಾಥ ದೇವಾಲಯ
ಕ್ಕಕೇರಾ ಪಟ್ಟಣದ ಆರಾಧ್ಯದೈವ ಸೌರಾಷ್ಟ್ರ ಸೋಮನಾಥ ದೇವಾಲಯ   

ಕಕ್ಕೇರಾ: ಪಟ್ಟಣದ ಸೋಮನಾಥ ದೇವಾಲಯ ನೋಡಿದ ತಕ್ಷಣ ಯಾವುದೋ ಒಂದು ಮಸೀದಿಯಂತೆ ಕಂಡರೂ, ಇಲ್ಲಿರುವ ದೇವರು ಸೋಮನಾಥ (ಕರಿಮಡ್ಡಿ) ಎಂದು ತಿಳಿದಾಗ ಅಚ್ಚರಿಯಾಗುತ್ತದೆ. ಈ ದೇವಸ್ಥಾನ ಈ ಮಾದರಿಯಲ್ಲಿರಲು ಹಿಂದಿನ ಹೈದರಬಾದ್‌ ನಿಜಾಮನ ಆಡಳಿತದ ಪ್ರಭಾವ ಇರಬಹುದು ಎಂದು ಹೇಳಲಾಗುತ್ತದೆ.

ಈ ಭಾಗದಲ್ಲಿ ಅನೇಕ ಹಿಂದೂ ದೇವಾಲಯಗಳು ಇದೇ ಮಾದರಿಯಲ್ಲಿದ್ದು, ಇವು ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿ ಎಲ್ಲವರ್ಗ ಹಾಗೂ ಧರ್ಮದವರಿಂದಲೂ ಪೂಜಿಸಲ್ಪಡುತ್ತವೆ.

ಪಟ್ಟಣದ ಆರಾದ್ಯ ದೈವ ಎಂದೇ ಕರೆಸಿಕೊಳ್ಳುವ ಕರಿಮಡ್ಡಿ ಸೋಮನಾಥ ದೇವರಿಗೆ ಪ್ರತಿ ದಿನ ಮೂರು ಬಾರಿ ಪೂಜೆ ನಡೆಯುತ್ತದೆ. ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ಸಲವೂ ಜನವರಿ 13ರಂದು ಆರಂಭವಾಗಿದ್ದು, 23ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ. ಜನವರಿ 13ರಂದು ಕಳಸಾರೋಹಣ ಜರುಗಿದ್ದು, 14ರಂದು ದೇವರ ಗಂಗಸ್ಥಳ,15ರಂದು ರಥೋತ್ಸವ ನಡೆಯಲಿದೆ.65 ಅಡಿ ಎತ್ತರದ ತೇರನ್ನು ನೋಡಲೆಂದೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ADVERTISEMENT

ಹಿನ್ನೆಲೆ: ಸುರಪುರ ಸಂಸ್ಥಾನದ ಸಂಸ್ಥಾಪಕ ಮತ್ತು ಮೂಲಪುರುಷ ಗಡ್ಡಿಪಿಡ್ಡ ನಾಯಕ. ಇವರು ಗೋಸಲ ವಂಶದವರು ಎಂದು ಪ್ರಸಿದ್ಧಿ ಇದೆ. ಈ ವಂಶದ ಮೂಲಪುರುಷ ನರಸಿಂಹನಾಯಕ. ಈತನ ವಂಶಜನೇ ಕಲ್ಲಪ್ಪನಾಯಕ. ಕಲ್ಲಪ್ಪನಾಯಕನಿಗೆ ಒಟ್ಟು ಏಳು ಮಕ್ಕಳಿದ್ದರು. ಅವರಲ್ಲಿ ಕೊನೆಯವರೇ ಚಿನ್ನಹನುಮ ನಾಯಕ. ಈತ ಹಾಗೂ ಈತನ ಮಕ್ಕಳು ಕಕ್ಕೇರಿಯಲ್ಲಿ ನೆಲೆಸುತ್ತಾರೆ. ಈ ಚಿನ್ನಹನುಮ ನಾಯಕನ ಕಾಲದಲ್ಲಿಯೇ ಕಕ್ಕೇರಿಯಲ್ಲಿ ಸೋಮನಾಥ ದೇವಾಲಯ ಕಟ್ಟಿಸಲಾಗಿದೆ ಎಂದು ಸುರಪುರ ರಾಜ ಚರಿತ್ರೆಯಿಂದ ತಿಳಿದುಬರುತ್ತದೆ.

ಅರ್ಚಕರು ಹೇಳುವ ಪ್ರಕಾರ, ಸೋಮನಾಥ ದೇವರನ್ನು ಅಗಾಧವಾಗಿ ಪೂಜಿಸುತ್ತಿದ್ದ ಹುಚ್ಚಮ್ಮ ಮನೆಯಲ್ಲಿ ಒಂದು ದಿನ ಮೊಸರು ಮಾಡುವ ಗಡಿಗೆಯಲ್ಲಿ ಮಿಣಿಗಲ್ಲು (ಮಿನುಗುವ ಕಲ್ಲು) ಕಾಣಿಸಿಕೊಂಡಿತು. ಇದು ದಿನಂಪ್ರತಿ ಕಾಣಿಸಿಕೊಳ್ಳುತ್ತಿದ್ದರಿಂದ ಬೇಸತ್ತ ಹುಚ್ಚಮ್ಮ,ಆ ಕಲ್ಲನ್ನು ಹುತ್ತಿನಲ್ಲಿ ಹಾಕಿ, ಅದರ ಮೇಲೆ ದೊಡ್ಡದಾದ ಕಲ್ಲನ್ನು ಜಡಿದಳು. ಆದರೆ ಮರು ದಿವಸ ಆ ಕಲ್ಲು ಮತ್ತೆ ಕಾಣಿಸಿಕೊಂಡಾಗ, ದೇವರ ಹೇಳಿಕೆ ಹೇಳುವವರನ್ನು ಕೇಳಿದಳು. ಅವರು ಇದು ಸಾಮಾನ್ಯವಾದ ಮಿನುಗುವ ಕಲ್ಲಲ್ಲ. ಇದು ಸಾಕ್ಷಾತ್ ಸೋಮನಾಥ ದೇವನದ್ದು. ಈ ಕಲ್ಲನ್ನು ಒಂದು ಪವಿತ್ರವಾದ ಮಡ್ಡಿಯಲ್ಲಿ (ಕರಿದಾದ ಗುಡ್ಡ) ಇಟ್ಟು, ಪ್ರತಿ ದಿನ ಪೂಜಿಸುವಂತೆ ಸಲಹೆ ನೀಡಿದರು. ಅದನ್ನೇ ಕ್ರಮೇಣವಾಗಿ ಕರಿಮಡ್ಡಿ ಸೋಮನಾಥ, ಸೋಮನಾಥ ಮಡ್ಡಿಯಂತಲೂ, ನಂತರ ಸೋಮನಾಥ ದೇವರೆಂದೂ ಕರೆಯತೊಡಗಿದರು. ಹುಚ್ಚಮ್ಮನವರ ವಂಶಸ್ಥರೇ ದೇವಾಲಯದ ಅರ್ಚಕರಾಗಿ ಇಂದಿಗೂ ಮುಂದುವರಿದಿದ್ದಾರೆ.

ಗುಜರಾತ್ ರಾಜ್ಯದ ಸೌರಾಷ್ಟ್ರದಲ್ಲಿ ಸೋಮನಾಥ ಲಿಂಗ ಭಗ್ನವಾದಾಗ ನೊಂದ ಅಲ್ಲಿನ ಜನರು ಲಿಂಗದ ತುಂಡೊಂದನ್ನು ಇಲ್ಲಿಗೆ ತಂದಿರುವ ಸಾಧ್ಯತೆ ಇದೆ ಎಂದುಇತಿಹಾಸಕಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.