ADVERTISEMENT

ಸುರಪುರ| ಚಲನಚಿತ್ರಗಳು ಮನೋಧರ್ಮ ಬದಲಿಸುತ್ತವೆ: ಸಿದ್ಧರಾಮ ಹೊನ್ಕಲ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:47 IST
Last Updated 15 ನವೆಂಬರ್ 2025, 6:47 IST
ಸುರಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಸಿದ್ಧರಾಮ ಹೊನ್ಕಲ್ ಮಾತನಾಡಿದರು
ಸುರಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಸಿದ್ಧರಾಮ ಹೊನ್ಕಲ್ ಮಾತನಾಡಿದರು   

ಸುರಪುರ: ‘ಚಲನಚಿತ್ರಗಳು ಮನೋರಂಜನೆ ಜೊತೆಗೆ ಸಮಾಜದ ಜನತೆಯ ಮನೋಧರ್ಮ ಸಹ ಪರಿಣಾಮಕಾರಿಯಾಗಿ ಬದಲಾಯಿಸಬಲ್ಲವು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಪ್ರತಿಪಾದಿಸಿದರು.

ಬರಗೂರ ರಾಮಚಂದ್ರಪ್ಪ ಅವರ ‘ಸ್ವಪ್ನಮಂಟಪ’ ಚಲನಚಿತ್ರದ ಸಮುದಾಯದತ್ತ ಸಿನಿಮಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಚಲನಚಿತ್ರ ಚಾರಿತ್ರಿಕ ಘಟನೆಯನ್ನು ವಾಸ್ತವದ ಹಿನ್ನೆಲೆಯಲ್ಲಿ ಸಮೀಕರಿಸಿ ಸುಂದರವಾಗಿ ಮತ್ತು ಮನೋಜ್ಞವಾಗಿ ನಿರ್ಮಿಸಿದ್ದಾರೆ. ಪ್ರೀತಿ, ಪ್ರೇಮದ ಸೌಹಾರ್ದತೆಯ ಮನಸು ಒಡೆಯುವ ದುಷ್ಟ ಶಕ್ತಿಗಳನ್ನು ಜನ ಸಂಘಟನೆಯ ಮೂಲಕ ಹಿಮ್ಮೆಟ್ಟಿಸುವ ನೈತಿಕ ಶಕ್ತಿ ನೀಡುವ ಸಾರಾಂಶ ಹೊಂದಿದೆ’ ಎಂದು ವಿವರಿಸಿದರು.

ADVERTISEMENT

‘ನಾಡು ನುಡಿ ಪ್ರೇಮದ ಜೊತೆಗೆ ಸಾಮಾಜಿಕ ಕಾಳಜಿ ಸಹ ಬರಗೂರ ಅವರು ಈ ಚಿತ್ರದಲ್ಲಿ ಅನನ್ಯವಾಗಿ ಅಳವಡಿಸಿದ್ದಾರೆ. ಈ ಚಿತ್ರ ವೀಕ್ಷಕರಿಗೆ ಹೊಸ ಸಂವೇದನೆ ನೀಡುತ್ತದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಈ ಚಲನಚಿತ್ರದ ಪ್ರದರ್ಶನ ನಡೆಸಲಾಗುವುದು’ ಎಂದರು.

‘ಈಗ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ನಗರ ಬಿಟ್ಟರೆ ಉಳೆದೆಡೆ ಚಿತ್ರಮಂದಿರಗಳು ಇಲ್ಲ. ಹೀಗಾಗಿ ಈ ಭಾಗದ ಜನರು ಉತ್ತಮ ಚಿತ್ರಗಳ ವೀಕ್ಷಣೆಯಿಂದ ವಂಚಿರಾಗುತ್ತಿದ್ದಾರೆ. ಇದನ್ನು ಗಮನಿಸಿ ಬರಗೂರ್ ಅವರು ಈ ಹೊಸ ಹೆಜ್ಜೆ ಇಟ್ಟಿದ್ದಾರೆ’ ಎಂದರು.

ಪ್ರಾಂಶುಪಾಲ ಬಲಭೀಮರಾಯ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಗುರುರಾಜ ನಾಗಲೀಕರ, ಎಂ.ಎಂ. ವಗ್ಗರ, ದೇವಿಂದ್ರಪ್ಪ ಪಾಟೀಲ, ದೇವು ಹೆಬ್ಬಾಳ ವೇದಿಕೆಯಲ್ಲಿದ್ದರು.
ಜಗದೀಶಕುಮಾರ ನಿರ್ವಹಿಸಿ ಚಲನಚಿತ್ರದ ಪ್ರದರ್ಶನದ ವ್ಯವಸ್ಥೆ ಮಾಡಿದ್ದರು. ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಚಲನಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.