ADVERTISEMENT

ಪ್ರವಾಹ: ಅವ್ಯವಹಾರಕ್ಕೆ ಅವಕಾಶ ಬೇಡ: ಸಚಿವ ಅಶೋಕ್ ಸೂಚನೆ

ಮನೆ, ಬೆಳೆ ಹಾನಿಯಾದವರಿಗೆ ಪರಿಹಾರ ವಿತರಿಸಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 16:59 IST
Last Updated 26 ಆಗಸ್ಟ್ 2020, 16:59 IST
ಯಾದಗಿರಿಯಲ್ಲಿ ನಡೆದ ನೆರೆ ಹಾನಿ ಪರಿಹಾರ ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಆರ್‌. ಅಶೋಕ್‌ ಮಾತನಾಡಿದರು. ಶಾಸಕ ರಾಜೂಗೌಡ ಇದ್ದರು
ಯಾದಗಿರಿಯಲ್ಲಿ ನಡೆದ ನೆರೆ ಹಾನಿ ಪರಿಹಾರ ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಆರ್‌. ಅಶೋಕ್‌ ಮಾತನಾಡಿದರು. ಶಾಸಕ ರಾಜೂಗೌಡ ಇದ್ದರು   

ಯಾದಗಿರಿ: ಕಳೆದ ಸಾಲಿಗಿಂತಲೂ ಈ ಬಾರಿ ಪ್ರವಾಹದ ಮಟ್ಟ ಕಡಿಮೆಯಾಗಿದೆ. ಆದರೆ ಮನೆ, ಬೆಳೆ ಹಾನಿಯಾದವರಿಗೆ ಪರಿಹಾರ ಕೊಡಲು ಕಂದಾಯ ಇಲಾಖೆ ಅಧಿಕಾರಿಗಳುಶ್ರಮವಹಿಸಬೇಕು. ಪರಿಹಾರ ನೀಡಿದ ಮೊತ್ತ ಅರ್ಹ ಫಲಾನುಭವಿಗಳಿಗೆ ದೊರೆಯಬೇಕು. ಅವ್ಯವಹಾರಕ್ಕೆ ಅವಕಾಶ ಕೊಡಬಾರದು ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಬುಧವಾರ ಹಮ್ಮಿಕೊಂಡಿದ್ದ ನೆರೆ ಹಾನಿ ಪರಿಹಾರ ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಧಿವೇಶನದೊಳಗೆ ವಿವರ ಸಲ್ಲಿಸಿ:ಹಾನಿಯಾದ ಮನೆಗಳ ಗುರುತಿಸುವಿಕೆಯಲ್ಲಿ ಬಡವ, ಶ್ರೀಮಂತನೆಂಬ ಬೇಧವಿರಬಾರದು.ಮುಂದಿನ ತಿಂಗಳು ನಡೆಯುವ ಅಧಿವೇಶನದೊಳಗೆ ಪ್ರವಾಹದಿಂದ ಹಾನಿಯಾದಮನೆಗಳಲ್ಲಿ ಎಷ್ಟು ಮನೆ ನಿರ್ಮಿಸಲಾಗಿದೆ. ಬಾಕಿ ಉಳಿದ ಮನೆಗಳೆಷ್ಟು ಎಂಬ ವಿವರ ಸಲ್ಲಿಸಬೇಕು ಎಂದು ಸೂಚಿಸಿದರು.

ADVERTISEMENT

ಖರೀದಿಯಲ್ಲಿ ಅವ್ಯವಹಾರ:ಕೋವಿಡ್-19 ಸೋಂಕಿನ ಮಧ್ಯೆಯೇ ಬದುಕುವ ಅನಿವಾರ್ಯತೆ ಎದುರಾಗಿದೆ. ಈ ರೀತಿಯ ಸನ್ನಿವೇಶದಲ್ಲಿಯೇ ಅಭಿವೃದ್ಧಿ ಪರ ಚಟುವಟಿಕೆ ಕೈಗೊಳ್ಳಬೇಕಿದೆ. ಕೋವಿಡ್–19 ಸೋಂಕಿನ ಸಂದರ್ಭದಲ್ಲಿ ಔಷಧ ಉಪಕರಣಗಳು, ವೈದ್ಯಕೀಯ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ ಕಂಡುಬರಬಾರದು, ಒಂದು ವೇಳೆ ಕಂಡುಬಂದಲ್ಲೀ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೋವಿಡ್ -19ಸೋಂಕು ಪತ್ತೆಯಾದಗಿನಿಂದಲೂ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಈ ಕರ್ತವ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಸಚಿವರು, ಪೊಲೀಸ್ ಹಾಗೂ ಆಶಾ ಕಾರ್ಯರ್ತೆಯರಿಗೂ ಅಭಿನಂದನೆ ಸಲ್ಲಿಸಿದರು.

ಆಧಾರ ಲಿಂಕ್ ಮಾಡಿಸಿ:ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಕೇವಲ ಅರ್ಹರಿಗೆ ಮಾತ್ರ ಸರ್ಕಾರದಿಂದ ನೀಡಲಾಗುವ ಪಿಂಚಣಿ ಸೌಲಭ್ಯ ದೊರೆಯಬೇಕು. ಅದಕ್ಕೆ ಎಲ್ಲಾ ಪಿಂಚಣಿದಾರರಿಗೆ ಆಧಾರ ಲಿಂಕ್ ಮಾಡಲೇಬೇಕು. ಜಿಲ್ಲೆಯಲ್ಲಿ ಆಧಾರ ಲಿಂಕ್ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವರು, ಇದರಿಂದಾಗಿ ಬೊಗಸ್ ಪ್ರಕರಣಗಳನ್ನು ಪತ್ತೆಹಚ್ಚಿ ಅವುಗಳನ್ನು ತಡೆಗಟ್ಟಬಹುದಾಗಿದೆ ಹಾಗೂ ಅರ್ಹ ಫಲಾನುಭವಿಗಳಿಗೆ ಸರ್ಕಾರದಸೌಲಭ್ಯದೊರೆಯುವಂತೆ ಮಾಡಲು ಸಾಧ್ಯವಾಗಲಿದೆ ಎಂದರು.

ಪಿಂಚಣಿ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕುಗಳಿಂದಲೇಪಿಂಚಣಿ ಮೊತ್ತ ಸಂದಾಯವಾಗಬೇಕು. ಈ ಹಿಂದೆ ವಿವಿಧ ರೀತಿಯ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು 60 ವರ್ಷ ಮೇಲ್ಪಟ್ಟವರು, ವಯೋವೃದ್ಧರು ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಬರುತ್ತಿದ್ದರು. ಇನ್ನೂ ಮುಂದೆ ಕಂದಾಯ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳೇ ಅರ್ಹ ಪಿಂಚಣಿದಾರರನ್ನು ಗುರುತಿಸಿ ಅವರಿಂದ ಅರ್ಜಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು.

ಶಾಸಕರಾದ ರಾಜೂಗೌಡ,ರಾಜಕುಮಾರ ಪಾಟೀಲ ತೇಲ್ಕೂರ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಡಿಯಾಪುರ, ಪ್ರಾದೇಶಿಕ ಆಯುಕ್ತ ಮಂಜುನಾಥ ಪ್ರಸಾದ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್‌ ಸೋನಾವಣೆ,ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಎಸ್. ಸೋಮನಾಳ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

***

ಇನ್ನೂ ಮಳೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಪ್ರವಾಹ ಉಂಟಾಗಿ ವಿವಿಧ ರೀತಿಯ ಹಾನಿಗೊಳಗಾದವರಿಗೆ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕು

- ಆರ್. ಅಶೋಕ್,ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.