ADVERTISEMENT

ಯಾದಗಿರಿ | ಸರ್ಕಾರಿ ಗೌರವಗಳೊಂದಿಗೆ ಡಾ.ಮುದ್ನಾಳ ಅಂತ್ಯಕ್ರಿಯೆ

ವೀರಶೈವ ಲಿಂಗಾಯತ ಸಾಂಪ್ರದಾಯದ ಧಾರ್ಮಿಕ ವಿಧಿ ವಿಧಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:25 IST
Last Updated 23 ಜುಲೈ 2024, 16:25 IST
ಅಂತಿಮ ದರ್ಶನ ಪಡೆದ ಡಾ.ಮುದ್ನಾಳ ಕುಟುಂಬಸ್ಥರು
ಅಂತಿಮ ದರ್ಶನ ಪಡೆದ ಡಾ.ಮುದ್ನಾಳ ಕುಟುಂಬಸ್ಥರು   

ಯಾದಗಿರಿ: ಜಿಲ್ಲೆಯ ಅಜಾತಶತ್ರು ರಾಜಕಾರಣಿ ಎನಿಸಿಕೊಂಡಿದ್ದ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಮಂಗಳವಾರ ಪಂಚಭೂತಗಳಲ್ಲಿ ಲೀನವಾದರು.

ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದರು. ಸ್ವಗ್ರಾಮ ಯಾದಗಿರಿ ತಾಲ್ಲೂಕಿನ ಮುದ್ನಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

ಸೋಮವಾರ ಸಂಜೆಯೇ ಯಾದಗಿರಿಯಿಂದ ಪಾರ್ಥಿವ ಶರೀರವನ್ನು ಮುದ್ನಾಳಕ್ಕೆ ಕೊಂಡೊಯ್ಯಲಾಗಿತ್ತು. ಬೆಳಿಗ್ಗೆಯಿಂದಲೂ ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ADVERTISEMENT

ಮುದ್ನಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಟ ಅಂತಿಮ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಮುಖಂಡರು, ಗ್ರಾಮಸ್ಥರು ಭಾಗಿಯಾಗಿ ತಮ್ಮ ನೆಚ್ಚಿನ ನಾಯಕರನ್ನು ಕಳೆದುಕೊಂಡು ಕಂಬಿನಿ ಮಿಡಿದರು. ಅಭಿಮಾನಿಗಳಲ್ಲಿ ದುಖಃ ಮಡುಗಟ್ಟಿತ್ತು. ಮುದ್ನಾಳ ಕುಟುಂಬದ ರಾಚಣಗೌಡ ಮುದ್ನಾಳ, ಮಹೇಶರೆಡ್ಡಿ ಮುದ್ನಾಳ, ಸೇರಿದಂತೆ ಸಮಸ್ತ ಕುಟುಂಬದ ಸದಸ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಅಂತಿಮ ದರ್ಶನಕ್ಕೆ ದಂಡು: ಅಂತ್ಯಕ್ರಿಯೆ ತೋಟದಲ್ಲಿ ಹಮ್ಮಿಕೊಂಡಿದ್ದರಿಂದ ಗ್ರಾಮಕ್ಕೆ ದಂಡು ದಂಡಾಗಿ ಅಭಿಮಾನಿಗಳು, ರಾಜಕೀಯ ಮುಖಂಡರು ಆಗಮಿಸಿ ಅಂತಿಮ ದರ್ಶನ ಪಡೆದರು.

ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಸೇರಿ ವಿವಿಧ ಮಠಗಳ ಮಠಾಧೀಶರು, ಪ್ರಮುಖವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಶರಣಗೌಡ ಕಂದಕೂರ, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರೆಡ್ಡಿ, ಅಮರೇಗೌಡ ಬಯ್ಯಾಪುರ, ರಾಜೂಗೌಡ, ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಬಿಜೆಪಿ ಮಾಜಿ‌ ಜಿಲ್ಲಾಧ್ಯಕ್ಷ ಶರಣಭೂಪಾಲರೆಡ್ಡಿ ನಾಯ್ಕಲ್‌, ಆರ್‌.ಮಹಾದೇವಪ್ಪ ಅಬ್ಬೆತುಮಕೂರು ಸೇರಿ ಹಲವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಜಿಲ್ಲಾಧಿಕಾರಿ ಸುಶೀಲಾ ಬಿ, ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟಪ್ಪಗೊಳ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್‌, ಯಾದಗಿರಿ ತಹಶೀಲ್ದಾರ್‌ ಅಂತಿಮ ದರ್ಶನ ಪಡೆದು, ಸರ್ಕಾರಿ ಗೌರವಗಳನ್ನು ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಣೆ ಮಾಡಲಾಯಿತು.

ವೀರಶೈವ ವಿಧಿವಿಧಾನದಂತೆ ಅಂತ್ಯಕ್ರಿಯೆ ಗ್ರಾಮದ ಮುಂಭಾಗದಲ್ಲಿರುವ ಸ್ವಂತ ಜಮೀನವರೆಗೆ ಅಪಾರ ಜನ ಸಮೂಹದೊಂದಿಗೆ ಅಂತಿಮ ಯಾತ್ರೆ ತಲುಪಿತು. ನಂತರ ವೀರಶೈವ ಲಿಂಗಾಯತ ಸಾಂಪ್ರದಾಯದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಜರುಗಿತು.

ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಣೆ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.