ಯಾದಗಿರಿ: ತಾಲ್ಲೂಕಿನ ಕಾರ್ಮಿಕ ಇಲಾಖೆಯಲ್ಲಿ ಅರ್ಹರಿಗೆ ಕಾರ್ಮಿಕ ಕಾರ್ಡ್ ನೀಡದೇ ಅನರ್ಹರಿಗೆ, ಅನುಕೂಲಸ್ಕರಿಗೆ ನೀಡಿ ಅವ್ಯವಹಾರ ಎಸಗಿರುವ ತಾಲ್ಲೂಕು ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಂಜಯಕುಮಾರ ಕವಲಿ ಒತ್ತಾಯಿಸಿದ್ದಾರೆ.
ಈ ಕುರಿತು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿ ಮಾತನಾಡಿದ ಅವರು, ಯಾದಗಿರಿ ತಾಲ್ಲೂಕು ಕಾರ್ಮಿಕ ಇಲಾಖೆಯಲ್ಲಿ ಅರ್ಹರಿಗೆ ಕಾರ್ಡ್‌ಗಳು ನೀಡಿಲ್ಲ. ಮದುವೆ, ಹೆರಿಗೆ, ಸಹಾಯಧನ, ಅಂತ್ಯ ಸಂಸ್ಕಾರ, ಸ್ಕಾಲರಶೀಪ್‌ಗಾಗಿ ನಿಜವಾದ ಕಾರ್ಮಿಕರು ಅರ್ಜಿ ಸಲ್ಲಿಸಿದರೆ ಇಲ್ಲ-ಸಲ್ಲದ ನೆಪ ಹೇಳಿ, ಅವರ ಅರ್ಜಿಗಳನ್ನು ತಿರಸ್ಕರಿಸಿ, ಅನರ್ಹರಿಗೆ, ಅನುಕೂಲಸ್ಥರಿಗೆ, ಹಣ ಕೊಟ್ಟವರಿಗೆ ಕಾರ್ಮಿಕ ಕಾರ್ಡ್ ನೀಡಿ, ಬಡ ಜನರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಬ್ಲಾಕ್ ಯುವ ಉಪಾಧ್ಯಕ್ಷ ಬಸ್ಸಯ್ಯ ಸ್ವಾಮಿ, ಯುವ ಕಾಂಗ್ರೆಸ್ ಮುಖಂಡ ನಿಜಗುಣ ಪೂಜಾರಿ ದೋರನಹಳ್ಳಿ, ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಣಮಂತ ಆರ್. ಚವಾಣ್, ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.