ಸುರಪುರ: ಶಾಲಾ ಮಕ್ಕಳಿಗೆ, ನಾಗರಿಕರಿಗೆ, ಸ್ಪರ್ಧಾತ್ಮಕ ಪರೀಕ್ಷೆ ತಯಾರು ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರ್ಕಾರ ಗ್ರಂಥಾಲಯಗಳನ್ನು ಸ್ಥಾಪಿಸಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಗ್ರಂಥಾಲಯಗಳಿವೆ. ಸಾಕಷ್ಟು ಪುಸ್ತಕಗಳ ಸಂಗ್ರಹವೂ ಇದೆ. ಆದರೆ ಎಲ್ಲೆಡೆ ಓದುಗರೇ ಬರುತ್ತಿಲ್ಲ. ನಗರದ ಸರ್ಕಾರಿ ಸಾರ್ವಜನಿಕ ಗ್ರಂಥಾಲಯ ಹೃದಯಭಾಗ ಗಾಂಧಿವೃತ್ತದಿಂದ ಅನತಿ ದೂರದಲ್ಲಿದೆ.
ಶಾಲಾ– ಕಾಲೇಜುಗಳು, ಮನೆಗಳಿಗೆ ಸಮೀಪವಾಗುತ್ತದೆ. 1981ರಲ್ಲಿ ಆರಂಭವಾಗಿದ್ದು, 2023ರಲ್ಲಿ ಸುಸಜ್ಜಿತ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ಕುಡಿಯುವ ನೀರು, ಶೌಚಾಲಯ, ಪೀಠೋಪಕರಣಗಳು ಎಲ್ಲ ಸೌಕರ್ಯಗಳನ್ನು ಹೊಂದಿದೆ.
ಒಟ್ಟು 30,998 ಅಮೂಲ್ಯ ಪುಸ್ತಕಗಳಿವೆ. ಇವುಗಳಲ್ಲಿ ಅತಿ ಹೆಚ್ಚು ಬೆಲೆಯ ಸ್ಪರ್ಧಾತ್ಮಕ ಪುಸ್ತಕಗಳು, ಪಠ್ಯ ಪುಸ್ತಕಗಳು, ದೊಡ್ಡ ದೊಡ್ಡ ಕವಿಗಳ ಕಥೆ, ಕವನ ಸಂಕಲನಗಳು, ಕಾದಂಬರಿಗಳು, ರಸಪ್ರಶ್ನೆ ಪುಸ್ತಕಗಳು ಇತರ ಎಲ್ಲ ನಮೂನೆಯ ರಾಶಿ ರಾಶಿ ಪುಸ್ತಕಗಳ ಸಂಗ್ರಹವಿದೆ. ಎಲ್ಲ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ.
ಜೊತೆಗೆ ಎಲ್ಲ ಭಾಷೆಯ ನಿಯತಕಾಲಿಕೆಗಳು ನಿತ್ಯವೂ ಬರುತ್ತವೆ. ಬಾಲಕಿಯರಿಗೆ, ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯ ಸಹಾಯಕ ಮತ್ತು ಸಹಾಯಕ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಓದುಗರು ಮಾತ್ರ ಬರುತ್ತಿಲ್ಲ.
ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಗ್ರಂಥಾಲಯ ತೆರೆದಿರುತ್ತದೆ. ಎರಡನೇ ಮಂಗಳವಾರ, ನಾಲ್ಕನೇ ಶನಿವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಮಾತ್ರ ಬಂದ್ ಆಗಿರುತ್ತದೆ. ದಿನಾಲೂ 20ರಿಂದ 30 ಜನ ಮಾತ್ರ ಓದುಗರು ಬರುತ್ತಾರೆ. ಜೂನ್ ತಿಂಗಳಲ್ಲಿ ಕೇವಲ 812 ಓದುಗರು ಭೇಟಿ ನೀಡಿದ್ದಾರೆ. ಈ ಕುರಿತು ಓದುಗರು ಸಹಿ ಮಾಡುವ ರಜಿಸ್ಟರ್ ಗ್ರಂಥಾಲಯದಲ್ಲಿದೆ.
ನಗರ ವ್ಯಾಪ್ತಿಯ ಜನಸಂಖ್ಯೆ 75 ಸಾವಿರ. ಕನಿಷ್ಠ 15ರಿಂದ 20 ಸಾವಿರ ಆಜೀವ ಸದಸ್ಯರ ಗುರಿ ಹೊಂದಲಾಗಿತ್ತು. ಆದರೆ, 1,845 ಸದಸ್ಯರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಅವರೂ ನಿಯಮಿತವಾಗಿ ಪುಸ್ತಕ ತೆಗೆದುಕೊಳ್ಳಲು ಬರುತ್ತಿಲ್ಲ. ಆಜೀವ ಸದಸ್ಯತ್ವ ಶುಲ್ಕ ಕೇವಲ ₹200 ಇದೆ. ಪ್ರತಿ ಸದಸ್ಯರಿಗೆ ಒಂದು ಬಾರಿ 3 ಪುಸ್ತಕಗಳನ್ನು ಓದಲು ಮನೆಗೆ ತೆಗೆದುಕೊಂಡು ಹೋಗಬಹುದು. ಹಿಂತಿರುಗಿಸಿ ಬದಲಿಸಿಕೊಳ್ಳಲು 15 ದಿನದ ಕಾಲಾವಕಾಶ ಇರುತ್ತದೆ.
ಓದುಗರನ್ನು ಅಕರ್ಷಿಸಲು ಆಗಾಗ ಓದುಗರ ದಿನ, ವರ್ಷಕ್ಕೊಮ್ಮೆ ಗ್ರಂಥಾಲಯ ದಿನ ಆಚರಿಸಲಾಗುತ್ತಿದೆ. ಉತ್ತಮ ಓದುಗರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಆಗಮಿಸಿದ ಓದುಗರಿಗೆ ಸ್ನೇಹಿತರನ್ನು, ನೆರೆ ಹೊರೆಯವರನ್ನು ಕರೆ ತರಲು ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ.
ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿ ಓದಿನಿಂದ ವಂಚಿತರನ್ನಾಗಿಸುತ್ತಿದ್ದಾರೆ. ಓದುವುದರಿಂದ ಮಾತ್ರ ಜ್ಞಾನ ಪಡೆಯಲು ಸಾಧ್ಯ. ಮೊಬೈಲ್‌ನಲ್ಲಿ ಬರುವ ಮಾಹಿತಿಗಳಿಗೆ ಖಚಿತತೆ ಇರುವುದಿಲ್ಲಸಾಯಬಣ್ಣ ಮೇಲಗಲ್ ನಿವೃತ್ತ ನ್ಯಾಯಾಧೀಶ
ಓದುಗರ ಸಂಖ್ಯೆ ಹೆಚ್ಚಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಪಾಲಕರು ಶಾಲಾ ಕಾಲೇಜುಗಳ ಮುಖ್ಯಸ್ಥರು ತಮ್ಮ ಮಕ್ಕಳಿಗೆ ಗ್ರಂಥಾಲಯಕ್ಕೆ ಹೋಗುವಂತೆ ಪ್ರೇರಣೆ ನೀಡುವ ಅಗತ್ಯವಿದೆಹೊನಕೇರೆಪ್ಪ ಹಾದಿಮನಿ ಗ್ರಂಥಾಲಯ ಸಹಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.